ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಅನುಸಾರ, 12ನೇ ದಾಖಲೆಯಾಗಿ ಆಧಾರ್ ಕಾರ್ಡ್ ಪರಿಗಣಿಸಲು ಬಿಹಾರ ಚುನಾವಣಾ ಅಧಿಕಾರಿಗೆ ಕೇಂದ್ರ ಚುನಾವಣಾ ಆಯೋಗ (ಇಸಿಐ) ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಆಧಾರ್ ಕಾರ್ಡನ್ನು ಗುರುತಿನ ಪುರಾವೆಯಾಗಿ ಮಾತ್ರ ಸ್ವೀಕರಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ. ಆಧಾರ್ ಕಾಯ್ದೆಯ ಸೆಕ್ಷನ್ 9 ರ ಪ್ರಕಾರ ಅದು ಪೌರತ್ವದ ಪುರಾವೆ ಅಲ್ಲ ಎಂಬುವುದನ್ನು ಇಸಿಐ ಇದೇ ವೇಳೆ ಸ್ಪಷ್ಟಪಡಿಸಿದೆ.
“ಜನತಾ ಪ್ರಾತಿನಿಧ್ಯ ಕಾಯ್ದೆ 1950ರ ಸೆಕ್ಷನ್ 23(4) ಈಗಾಗಲೇ ವ್ಯಕ್ತಿಯ ಗುರುತನ್ನು ರುಜುವಾತು ಮಾಡಲು ಪರಿಗಣಿಸಲಾಗದ ದಾಖಲೆಗಳಲ್ಲಿ ಆಧಾರ್ ಕಾರ್ಡನ್ನೂ ಪಟ್ಟಿ ಮಾಡಿದೆ” ಎಂದು ಅದು ಇಸಿಐ ಹೇಳಿದೆ.
ತನ್ನ ಸೂಚನೆಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳು ಸೇರಿದಂತೆ ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರಿಗೆ ಇಸಿಐ ತಿಳಿಸಿದೆ.
“ಈ ನಿರ್ದೇಶನಕ್ಕೆ ಅನುಗುಣವಾಗಿ ಆಧಾರ್ ಅನ್ನು ಅನುಸರಿಸದಿರುವುದು ಅಥವಾ ಸ್ವೀಕರಿಸಲು ನಿರಾಕರಿಸುವ ಯಾವುದೇ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಇಸಿಐ ಎಚ್ಚರಿಸಿದೆ.
ಸುದೀರ್ಘ ಕಾನೂನು ಸಮರದ ಬಳಿಕ ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ದಾಖಲೆಯಾಗಿ ಆಧಾರ್ ಕಾರ್ಡನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 8ರಂದು ಆದೇಶ ನೀಡಿದೆ. ಇದು ಬಿಹಾರದ ಮತದಾರರಿಗೆ ಸಿಕ್ಕ ದೊಡ್ಡ ಗೆಲುವು ಎಂದೇ ಪರಿಗಣಿಸಲಾಗಿದೆ.
ಮತದಾರರ ಪಟ್ಟಿಯ ಪರಿಷ್ಕರಣೆಗೆ ಈ ಹಿಂದೆ 11 ದಾಖಲೆಗಳನ್ನು ಚುನಾವಣಾ ಆಯೋಗ ಪಟ್ಟಿ ಮಾಡಿತ್ತು. ಈಗ 12ನೇ ದಾಖಲೆಯಾಗಿ ಆಧಾರ್ ಕಾರ್ಡ್ ಪರಿಗಣಿಸಲು ಸೂಚಿಸಿದೆ.


