ಧ್ವಜಾರೋಹಣ ಸಮಾರಂಭದಲ್ಲಿ ರಾಷ್ಟ್ರಗೀತೆಯ ಸಾಲುಗಳನ್ನು ಹೇಳಲು ಹೆಣಗಾಡುತ್ತಿರುವ ಬಿಹಾರದ ನೂತನ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಅವರ ವಿಡಿಯೋವನ್ನು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಈಗಾಗಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮೇವಲಾಲ್ ಚೌಧರಿಯನ್ನು ತಮ್ಮ ಸಂಪುಟದಲ್ಲಿ ಸಚಿವರನ್ನಾಗಿ ನೇಮಿಸಿದ್ದಕ್ಕಾಗಿ ಜೆಡಿಯು ಹಲವಾರು ಟೀಕೆಗಳನ್ನು ಎದುರಿಸುತ್ತಿದೆ. ಇದರ ಜೊತೆಗೆ ಈ ವಿಡಿಯೋ ಕೂಡ ಅವರ ಅರ್ಹತೆಯನ್ನು ಪ್ರಶ್ನಿಸುತ್ತಿದೆ ಎಂದು ಹಲವರು ಟೀಕಿಸಿದ್ದಾರೆ.
ಈ ಘಟನೆಯನ್ನು ಇಟ್ಟುಕೊಂಡು ಬಿಹಾರದ ಪ್ರಮುಖ ವಿರೋಧ ಪಕ್ಷವಾದ ಆರ್‌ಜೆಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ವಾಗ್ದಾಳಿ ನಡೆಸಿದೆ.
भ्रष्टाचार के अनेक मामलों के आरोपी बिहार के शिक्षा मंत्री मेवालाल चौधरी को राष्ट्रगान भी नहीं आता।
नीतीश कुमार जी शर्म बची है क्या? अंतरात्मा कहाँ डुबा दी? pic.twitter.com/vHYZ8oRUVZ
— Rashtriya Janata Dal (@RJDforIndia) November 18, 2020
ಇದನ್ನೂ ಓದಿ: ಬಿಹಾರ: ಕೇವಲ 40 ಸ್ಥಾನ ಪಡೆದ ಜನಾದೇಶವಿಲ್ಲದವರು ಹೇಗೆ ಸಿಎಂ ಆಗುತ್ತಾರೆ?- RJD ಪ್ರಶ್ನೆ
ಆರ್‌ಜೆಡಿ ಹಂಚಿಕೊಂಡಿರುವ ವೀಡಿಯೋದಲ್ಲಿ, ಧ್ವಜಾರೋಹಣ ಸಮಾರಂಭದಲ್ಲಿ ನೂತನ ಶಿಕ್ಷಣ ಸಚಿವರು ರಾಷ್ಟ್ರಗೀತೆಯ ಸಾಲುಗಳನ್ನು ಮರೆಯುತ್ತಿರುವುದು ಮತ್ತು ತಪ್ಪಾದ ಸಾಲುಗಳನ್ನು ಹಾಡುತ್ತಿರುವುದನ್ನು ನೋಡಬಹುದು.
“ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಿಹಾರ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಅವರಿಗೆ ರಾಷ್ಟ್ರಗೀತೆ ಕೂಡ ತಿಳಿದಿಲ್ಲ. ನಿತೀಶ್ ಕುಮಾರ್ ಜೀ, ಸ್ವಲ್ಪವಾದರೂ ಮಾರ್ಯಾದೆ ಉಳಿದಿದೆಯೇ? ಆತ್ಮಸಾಕ್ಷಿಯು ಎಲ್ಲಿ ಹೋಯಿತು?” ಎಂದು ಆರ್‌ಜೆಡಿ ಹಿಂದಿಯಲ್ಲಿ ಟ್ವೀಟ್ ಮಾಡಿದೆ.
38 ಸೆಕೆಂಡುಗಳ ಈ ವಿಡಿಯೋದ ಕೊನೆಯಲ್ಲಿ, ಅವರು “ಭಾರತ್ ಮಾತಾ ಕಿ ಜೈ” ಮತ್ತು “ವಂದೆ” ಎಂದರೇ ಮಕ್ಕಳು “ಮಾತರಂ” ಎಂದು ಹೇಳುತ್ತಿದ್ದಾರೆ. ಆದರೆ, ಭಾರತದ ಜನಗಣಮನ ರಾಷ್ಟ್ರಗೀತೆಯನ್ನು 52 ಸೆಕೆಂಡುಗಳಲ್ಲಿ ಹಾಡಬೇಕಾಗಿದೆ.
ಭಾಗಲ್ಪುರ್ ಜಿಲ್ಲೆಯ ಬಿಹಾರ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಅವಧಿಯಲ್ಲಿ ನೇಮಕಾತಿಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ 67 ವರ್ಷದ ಮೇವಾಲಾಲ್ ಚೌಧರಿ ಅವರನ್ನು 2017 ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ಅಮಾನತುಗೊಳಿಸಲಾಗಿತ್ತು.
ಆದರೂ, ಮೇವಾಲಾಲ್ ಚೌಧರಿ ಅವರು ಪ್ರಾಧ್ಯಾಪಕ ಮತ್ತು ಕಿರಿಯ ವಿಜ್ಞಾನಿಗಳ ಹುದ್ದೆಗಳ ನೇಮಕಾತಿಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿದ್ದಾರೆ.
ಬಿಹಾರ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ನಿತೀಶ್ ಕುಮಾರ್ “ಅಪರಾಧಿಗಳನ್ನು” ನೇಮಕ ಮಾಡಿದ್ದಾರೆ ಎಂದು ಸರಣಿ ಟ್ವೀಟ್‌ಗಳಲ್ಲಿ ರಾಷ್ಟ್ರೀಯ ಜನತಾದಳದ ತೇಜಶ್ವಿ ಯಾದವ್ ಆರೋಪಿಸಿದ್ದಾರೆ.


