Homeಮುಖಪುಟಬಂಗಾಳದಲ್ಲಿ ಟಿಎಂಸಿ ಕಡೆಗೆ ಬಿಜೆಪಿ ಕಾರ್ಯಕರ್ತರ ಮಹಾ ವಲಸೆ: ತಬ್ಬಿಬ್ಬಾದ ಬಿಜೆಪಿ ಹಿರಿಯ ಮುಖಂಡರು

ಬಂಗಾಳದಲ್ಲಿ ಟಿಎಂಸಿ ಕಡೆಗೆ ಬಿಜೆಪಿ ಕಾರ್ಯಕರ್ತರ ಮಹಾ ವಲಸೆ: ತಬ್ಬಿಬ್ಬಾದ ಬಿಜೆಪಿ ಹಿರಿಯ ಮುಖಂಡರು

ಮುಕುಲ್ ರಾಯ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮತ್ತು ಕೆಲ ಶಾಸಕರು ಸಹ ಬಿಜೆಪಿ ತ್ಯಜಿಸಿ ಟಿಎಂಸಿ ಕಡೆಗೆ ಹೆಜ್ಜೆಯಿಟ್ಟಿದ್ದಾರೆ ಎಂದು ಈ ವರದಿ ಹೇಳುತ್ತದೆ.

- Advertisement -
- Advertisement -

ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ ಬಿಜೆಪಿ ಸೇರಿದ ಸುದ್ದಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಬಹುಪಾಲು ನಾಯಕರೆಲ್ಲ ಮರಳಿ ಮನೆಗೆ ಹೋಗಲು ಕಾತುರರಾಗಿದ್ದಾರೆ. ಇದಕ್ಕೆ ಮಮತಾ ದೀದಿ ಇನ್ನೂ ಗ್ರೀನ್‍ ಸಿಗ್ನಲ್‍ ನೀಡಿಲ್ಲ, ಈ ನಾಯಕರ ಹಿಂದೆ ಬಿಜೆಪಿ ಸೇರಿದ್ದ ಕಾರ್ಯಕರ್ತರು ಈಗ ಬಿಜೆಪಿ ತೊರೆಯುತ್ತಿದ್ದು ಟಿಎಂಸಿ ಸೇರುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿರುವ ಈ ಮಹಾ ವಲಸೆ  ಅಮಿತ್‍ ಶಾ ಮತ್ತು ಬಿಜೆಪಿ ಹಿರಿಯ ನಾಯಕರನ್ನು ತಬ್ಬಿಬ್ಬು ಮಾಡಿದೆ ಎಂದು ದಿ ವೈರ್ ವರದಿ ಮಾಡಿದೆ.

ಕಳೆದ ತಿಂಗಳು ಬಿಜೆಪಿ ಬಂಗಾಳ ಚುನಾವಣೆಯಲ್ಲಿ ಮುಗ್ಗರಿಸಿದ ನಂತರ, ರಾಜ್ಯ ಮತ್ತು ಕೇಂದ್ರ ನಾಯಕತ್ವವು ದೃಶ್ಯದಿಂದಲೇ ಕಣ್ಮರೆಯಾಗಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಕರೆದ ತುರ್ತು ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಮುಖಂಡ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಸೋಮವಾರ ರಾತ್ರಿ ದೆಹಲಿಗೆ ಹಾರಿದರು. ಜೂನ್ 9 ರ ಬುಧವಾರ ಸುವೇಂದು ಅಧಿಕಾರಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೋ ಇಲ್ಲವೋ ಗೊತ್ತಾಗಿಲ್ಲ.

ಕೆಲವು ದಿನಗಳ ಹಿಂದೆ, ಬಿಜೆಪಿಯ ರಾಜ್ಯ ಅಧ್ಯಕ್ಷ ಮತ್ತು ಖರಗ್‌ಪುರದ ಸಂಸದ ದಿಲೀಪ್ ಘೋಷ್ ಅವರನ್ನು ಪಕ್ಷದ ಕಾರ್ಯಕರ್ತರು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಜೂನ್ 4ರಂದು ಘೋಷ್ ಅವರು ಪಕ್ಷದ ಸಾಂಸ್ಥಿಕ ಸಭೆಯಲ್ಲಿ ಪಾಲ್ಗೊಳ್ಳಲು ಹೂಗ್ಲಿ ಜಿಲ್ಲೆಯ ಚುಂಚುರಾಕ್ಕೆ ಹೋಗಿದ್ದರು. ಸಭೆ ನಡೆಯುತ್ತಿರುವಾಗ, ಸ್ಥಳೀಯ ಕಾರ್ಯಕರ್ತರು ಪಕ್ಷದ ಕಚೇರಿಯ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು, ದಿಲೀಪ್ ಘೋಷ್ ಮತ್ತು ಪಕ್ಷದ ನಾಯಕತ್ವದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಘೋಷ್ ಕಚೇರಿಯಿಂದ ಹೊರಡುವಾಗ, ಕಾರ್ಯಕರ್ತರು ಅವರ ಬಳಿಗೆ ಹೋಗಿ, “ನಮ್ಮನ್ನು ಥಳಿಸಲಾಯಿತು. ಜಿಲ್ಲಾಧ್ಯಕ್ಷ ಮತ್ತು ನಾಯಕತ್ವ ನಮ್ಮ ಮಾತನ್ನು ಆಲಿಸುತ್ತಿಲ್ಲ” ಎಂದು ಆಕ್ರೋಶ  ವ್ಯಕ್ತಪಡಿಸಿದರು. ಘೋಷ್, “ಬಿಜೆಪಿಯಲ್ಲಿ ಇರುವಾಗ ನಿಮಗೆ ಹೊಡೆತ ಬೀಳುವುದನ್ನು ಎದುರಿಸಲು ಸಾಧ್ಯವಾಗದಿದ್ದರೆ, ನೀವು ಟಿಎಂಸಿಗೆ ಸೇರಬಹುದು” ಎಂದು ಉತ್ತರಿಸಿದರು!

18 ವಿಧಾನಸಭಾ ಸ್ಥಾನಗಳಲ್ಲಿ ನಾಲ್ಕನ್ನು ಮಾತ್ರ ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾದ ಈ ಜಿಲ್ಲೆಯಲ್ಲಿ ಪಕ್ಷದ ನಷ್ಟಕ್ಕೆ ಜಿಲ್ಲಾಧ್ಯಕ್ಷ ಗೌತಮ್ ಚಟರ್ಜಿ ಮತ್ತು ರಾಜ್ಯ ಕಾರ್ಯದರ್ಶಿ ದೀಪಂಜನ್ ಗುಹಾ ಮಾತ್ರ ಕಾರಣ ಎಂದು ಸ್ಥಳೀಯ ಕಾರ್ಯಕರ್ತರು ನಂಬಿದ್ದಾರೆ. ಚುಂಚುರಾದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಸಂಸದ ಲಾಕೆಟ್ ಚಟರ್ಜಿ 18,417 ಮತಗಳ ಅಂತರದಿಂದ ಸೋತರು.

ಜೂನ್ 7 ರಂದು, ಪಶ್ಚಿಮ ಬರ್ದಾಮನ್‍ ಜಿಲ್ಲೆಯ ಅಸನ್ಸೋಲ್‍ನಲ್ಲಿ ದಿಲೀಪ್‍ ಘೋಷ್ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು. ಪಕ್ಷದ ಸಭೆಗೆ ಘೋಷ್ ಬಂದಾಗ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಚುನಾವಣೆಯ ನಂತರ ರಾಜಕೀಯ ಹಿಂಸಾಚಾರದ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ ನಂತರ, ಘೋಷ್ ಬಂಡಾಯ ಕಾರ್ಯಕರ್ತರನ್ನು ಸಭೆಯಿಂದ ಹೊರಹೋಗುವಂತೆ ಕೇಳಿಕೊಂಡರು. ಪಕ್ಷದ ಕಾರ್ಯಕರ್ತರು ಸ್ವಲ್ಪ ಸಮಯದವರೆಗೆ ಘೋಷ್‍ ಸೇರಿದಂತೆ ಇತರ ನಾಯಕರನ್ನು ಆಫೀಸಿಗೆ ಬೀಗ ಜಡಿಯುವ ಮೂಲಕ ಲಾಕ್‍ ಮಾಡಿದ್ದರು.

ಪಕ್ಷದ ಮುಖ್ಯಸ್ಥ ಪರೇಶ್ ಸರ್ನಾಡಾ, “ದಿಲೀಪ್ ಘೋಷ್ ಚುನಾವಣೆಗೆ ಮುನ್ನ ದೊಡ್ಡ ಭರವಸೆಗಳನ್ನು ನೀಡಿದರು. ಚುನಾವಣೆಯ ನಂತರ, ಪಕ್ಷದ ಕಾರ್ಯಕರ್ತರ ಮೇಲೆ ಟಿಎಂಸಿ ಹಲ್ಲೆ ಮಾಡಿದಾಗ, ಒಬ್ಬ ನಾಯಕ ಕೂಡ ನಮ್ಮನ್ನು ನೋಡಲು ಬಂದಿಲ್ಲ. ಈ ಎಲ್ಲಾ ರಾಜ್ಯ ನಾಯಕರು ಚುನಾವಣೆ ನಂತರ ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ಅಥವಾ ನಮ್ಮ ಕರೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ. ಟಿಎಂಸಿ ಜನರು ಕಳ್ಳರಾಗಿದ್ದರೆ, ಈ ಬಿಜೆಪಿ ಜನರು ಮಾಫಿಯಾ, ಅದಕ್ಕಾಗಿಯೇ ಪಕ್ಷವು ಚುನಾವಣೆಯಲ್ಲಿ ಸೋತಿದೆ” ಎಂದರು

ಬಂಗಾಳದಲ್ಲಿ ಪಕ್ಷದ ಚುನಾವಣೆ ಫಲಿತಾಂಶದ ನಂತರದ ಹಿಂಸಾಚಾರದ ಸಮಯದಲ್ಲಿ ಬಿಜೆಪಿ ನಾಯಕರು ಕಾರ್ಯಕರ್ತರಿಂದ ದೂರ ಉಳಿದಿದ್ದಾರೆಂದು ವರದಿಯಾಗಿದೆ, ಚುನಾವಣೆ ನಂತರದ ಗಲಾಟೆಯಲ್ಲಿ ಕನಿಷ್ಠ 10 ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದರು ಮತ್ತು ಅನೇಕರು ಸ್ಥಳೀಯ ಟಿಎಂಸಿ ಕಾರ್ಯಕರ್ತರಿಂದ ಹಿಂಸೆ ಮತ್ತು ದೌರ್ಜನ್ಯಕ್ಕೆ  ಒಳಗಾಗಿದ್ದರು ಎಂದು ಬಿಜೆಪಿ ಹೇಳುತ್ತಿದೆ.

ಹಿರಿಯ ಬಿಜೆಪಿ ನಾಯಕ ಮತ್ತು ತ್ರಿಪುರದ ಮಾಜಿ ರಾಜ್ಯಪಾಲ ತಥಾಗತ ರಾಯ್ ಅವರು ಆ ಸಮಯದಲ್ಲಿ ಪಕ್ಷದ ರಾಜ್ಯ ನಾಯಕತ್ವವನ್ನು ಕೆಣಕಿದರು. “ಕೈಲಾಶ್, ದಿಲೀಪ್ ಘೋಷ್, ಶಿವ್ ಪ್ರಕಾಶ್ ಮತ್ತು ಅರವಿಂದ್ ಮೆನನ್ ಈ ನಾಲ್ವರು ನಮ್ಮ ಗೌರವಾನ್ವಿತ ಪ್ರಧಾನಿ ಮತ್ತು ಗೃಹ ಸಚಿವರ ಹೆಸರುಗಳನ್ನು ಮಣ್ಣಿನಲ್ಲಿ ಹೂತರು. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷದ ಹೆಸರನ್ನು ಕೆಡಿಸಿದರು. ಹೇಸ್ಟಿಂಗ್ಸ್‌ನ ಅಗರ್‌ವಾಲ್ ಭವನ (ಪಶ್ಚಿಮ ಬಂಗಾಳ ಬಿಜೆಪಿಯ ಚುನಾವಣಾ ಕೇಂದ್ರ) ಮತ್ತು 7-ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತು, ತೃಣಮೂಲದಿಂದ ಒಳಬರುವ ಕಸಕ್ಕೆ ಟಿಕೆಟ್ ವಿತರಿಸಿದ್ದಾರೆ” ಎಂದು ಟ್ವೀಟ್‍ ಮಾಡಿದರು.

ಅಸಮಾಧಾನ ಎಲ್ಲೆಲ್ಲೂ

ಅಸಮಾಧಾನವು ಕೆಲವು ನಿರ್ದಿಷ್ಟ ಪ್ರದೇಶ ಅಥವಾ ಜಿಲ್ಲೆಗೆ ಸೀಮಿತವಾಗಿಲ್ಲ; ರಾಜ್ಯಾದ್ಯಂತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ದಂಗೆ ಏಳುತ್ತಿದ್ದಾರೆ.

ರಾಜ್ಯ ಚುನಾವಣೆಗೆ ತಿಂಗಳ ಮೊದಲು ಬಿಜೆಪಿಗೆ ಸೇರಿದ ಶಾಸಕರಾದ (ಈಗ ಮಾಜಿ) ಅಮಲ್ ಆಚಾರ್ಯಜಿ, ದೀಪೇಂದು ಬಿಸ್ವಾಸ್, ಸೋನಾಲಿ ಗುಹಾ ಅವರು ಟಿಎಂಸಿಗೆ ಮರಳಲು ಬಯಸುತ್ತೇವೆ ಎಂದು ಈಗಾಗಲೇ ಬಹಿರಂಗವಾಗಿ ಹೇಳಿದ್ದಾರೆ. “ನಾವು ತಪ್ಪು ಮಾಡಿದ್ದೇವೆ ಮತ್ತು ದೀದಿ ನಮ್ಮನ್ನು ಕ್ಷಮಿಸಬೇಕು’ ಎಂದು ಹೇಳಿದ್ದಾರೆ.

ನಾಲ್ಕು ಬಾರಿ ಶಾಸಕರಾದ ಸತ್ಗಾಚಿಯಾದ ಗುಹಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ, “ಒಂದು ಮೀನು ನೀರಿನಿಂದ ಹೊರಗುಳಿಯಲು ಸಾಧ್ಯವಿಲ್ಲ, ನೀವಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ, ದೀದಿ, ನಾನು ನಿಮ್ಮ ಕ್ಷಮೆ ಕೋರುತ್ತೇನೆ ಮತ್ತು ನೀವು ನನ್ನನ್ನು ಕ್ಷಮಿಸದಿದ್ದರೆ, ನನಗೆ ಬದುಕಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನನಗೆ ಹಿಂತಿರುಗಲು ಅವಕಾಶ ನೀಡಿ ಮತ್ತು ನಿಮ್ಮ ಆಶೀರ್ವಾದದೊಂದಿಗೆ ನನ್ನ ಉಳಿದ ಜೀವನವನ್ನು ಕಳೆಯುವೆ’ ಎಂದು ಅಂಗಲಾಚಿದ್ದಾರೆ.

ಮಮತಾ ಅವರ ಹಿಂದಿನ ಸಂಪುಟದಲ್ಲಿ ನೀರಾವರಿ ಮತ್ತು ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ ರಾಜೀಬ್ ಬ್ಯಾನರ್ಜಿಯಂತಹ ಉನ್ನತ ಮಟ್ಟದ ಪಕ್ಷಾಂತರಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಮಂಗಳವಾರ ಸಂಜೆ, ರಾಜೀಬ್ ಅವರು, “ಭಾರಿ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಹೊಸ ಸಿಎಂ ಅವರನ್ನು ಟೀಕಿಸುವ ಪ್ರಯತ್ನದಲ್ಲಿ, ಜನರು ದೆಹಲಿಗೆ ಧಾವಿಸುತ್ತಿದ್ದಾರೆ ಮತ್ತು ಆರ್ಟಿಕಲ್‍ 356 (ಅಧ್ಯಕ್ಷರ ನಿಯಮ) ಬಳಸಿ ನಮ್ಮನ್ನು ಹೆದರಿಸುತ್ತಿದ್ದಾರೆ. ಆದರೆ ಬಂಗಾಳದ ಜನರು ಇದನ್ನು ಸ್ವೀಕರಿಸುವುದಿಲ್ಲ”  ಎಂದಿದ್ದಾರೆ. ಅವರು 43 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರ ಪುತ್ರ ಮತ್ತು ಮಾಜಿ ಟಿಎಂಸಿ ಶಾಸಕ ಸುಬ್ರಂಗು ರಾಯ್ ಅವರು ಮೇ 30 ರಂದು ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಂದೇಶವನ್ನು ಹಾಕಿದ್ದಾರೆ. “ಜನರ ಆದೇಶದೊಂದಿಗೆ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಟೀಕಿಸುವ ಮೊದಲು ಸ್ವಯಂ ಆತ್ಮಾವಲೋಕನ ಅಗತ್ಯವಿದೆ” ಎಂದು ಬರೆದಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸುಬ್ರಂಗು ರಾಯ್ ಅವರ ತಾಯಿಯನ್ನು (ಮುಕುಲ್‍ ರಾಯ್‍ ಪತ್ನಿ) ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರನ್ನು ಜೂನ್ 3ರಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಭೇಟಿ ಮಾಡಿದರು. ಅಭಿಷೇಕ್ ಭೇಟಿಯ ನಂತರ ನೀಡಿದ ಸಂದರ್ಶನದಲ್ಲಿ ಸುಬ್ರಂಗು ರಾಯ್‍ ಅವರು, ‘ಅಭಿಷೇಕ್‍ ಅವರ ಸೌಜನ್ಯದ ಭೇಟಿ ನನ್ನ ಮನವನ್ನು ಕಲಕಿದೆ. ಫಲಿತಾಂಶದ ನಂತರ ಅಭಿಷೇಕ್‍ ರಾಷ್ಟ್ರೀಯ ನಾಯಕರಾಗಿದ್ದಾರೆ. ನನ್ನ ನಿಜವಾದ ಮಿತ್ರ ಯಾರೆಂದು ನನಗೀಗ ಅರ್ಥವಾಗಿದೆ. ನಾನು ಮಾಡಿದ ತಪ್ಪಿನಿಂದಾಗಿ ಈಗ ನನ್ನ ತಾಯಿ ಅನಾರೋಗ್ಯಕ್ಕೆ ಈಡಾಗಿದ್ದಾರೆ’ ಎಂದು ಪಶ್ಚಾತಾಪ ಪಟ್ಟಿದ್ದಾರೆ.

ಅಭಿಷೇಕ್‍ ಭೇಟಿಯ ನಂತರ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಸುಬ್ರಂಗು ರಾಯ್ ಅವರ ತಾಯಿಯನ್ನು ನೋಡಲು ಅವಸರದಿಂದ ಹೋದರು. ಮರುದಿನ ಬೆಳಿಗ್ಗೆ ಪಿಎಂ ಮೋದಿ ವೈಯಕ್ತಿಕವಾಗಿ ಮುಕುಲ್ ರಾಯ್ ಅವರಿಗೆ ಫೋನ್‍ ಮಾಡಿ ಅವರ ಪತ್ನಿಯ ಆರೋಗ್ಯ ವಿಚಾರಿಸಿದರು.

ಚುನಾವಣಾ ಫಲಿತಾಂಶಗಳನ್ನು ಘೋಷಿಸಿದಾಗಿನಿಂದ ಮುಕುಲ್‍ ರಾಯ್ ಸಂಪೂರ್ಣ ಮೌನ ವಹಿಸಿದ್ದಾರೆ. ಇದೀಗ, ಒಂದು ಕಾಲದಲ್ಲಿ ಮಮತಾ ಅವರ ಬಲಗೈಯಾಗಿದ್ದ ಈ ವ್ಯಕ್ತಿಯ ಮುಂದಿನ ನಡೆಯ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿವೆ.

ಮಂಗಳವಾರ, ಈ  ಭಿನ್ನಮತೀಯ ನಾಯಕರು ಯಾರೂ ಕೋಲ್ಕತ್ತಾದ ಹೇಸ್ಟಿಂಗ್ಸ್‌ನಲ್ಲಿ ನಡೆದ ಬಿಜೆಪಿಯ ಸಾಂಸ್ಥಿಕ ಸಭೆಯಲ್ಲಿ ಭಾಗವಹಿಸಲಿಲ್ಲ. ಸಭೆ ಮತ್ತು ಅವರ ಭಾಗವಹಿಸುವಿಕೆಯ ಬಗ್ಗೆ ಮುಕುಲ್ ರಾಯ್ ಅವರನ್ನು ಕೇಳಿದಾಗ, “ಇಂದಿನ ಬಿಜೆಪಿ ಸಭೆಯ ಬಗ್ಗೆ ಯಾರೂ ತಿಳಿಸಿಲ್ಲ ಮತ್ತು ನನ್ನನ್ನು ಆಹ್ವಾನಿಸಿಲ್ಲ. ಅಲ್ಲದೆ, ನನಗೆ ಇನ್ನು ಅದರಲ್ಲಿ ಆಸಕ್ತಿ ಇಲ್ಲ” ಎಂದಿದ್ದಾರೆ.

ರಾಯ್‌ಗೆ ಹತ್ತಿರವಿರುವ ಮೂಲವೊಂದು ದಿ ವೈರ್‌ಗೆ, “ಮುಕುಲ್ ರಾಯ್ ವಿವಿಧ ಜಿಲ್ಲೆಗಳಲ್ಲಿ ಹರಡಿರುವ ತಮ್ಮ ಸಹಚರರನ್ನು, ಟಿಎಂಸಿಯಿಂದ ಬಿಜೆಪಿಗೆ ಸೇರಿದವರನ್ನು ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ” ಎಂದು ಹೇಳಿದರು. 2019ರ ಲೋಕಸಭಾ ಚುನಾವಣೆಯ ನಂತರ ಟಿಎಂಸಿಯಿಂದ ಬಿಜೆಪಿಗೆ ಬದಲಾದ ಮತ್ತು ರಾಯ್ ಅವರ ಬೆಂಬಲಿಗರಾಗಿರುವ ಬಸರ್ಹತ್‍ ಉತ್ತರ ಕ್ಷೇತ್ರದ ಸ್ಥಳೀಯ ಮುಖಂಡರು, “ಯಾವುದೇ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಮಗೆ ದಾದಾ (ಮುಕುಲ್ ರಾಯ್) ಆದೇಶ ಬಂದಿದೆ. ಅವರು ಮತ್ತು ಇತರ ಅನೇಕ ಹಿರಿಯ ನಾಯಕರೊಂದಿಗೆ ಮತ್ತೆ ಟಿಎಂಸಿಗೆ ತೆರಳುವ ಸಾಧ್ಯತೆಯಿದೆ” ಎಂದಿದ್ದಾರೆ.

ಸಾಮೂಹಿಕ ನಿರ್ಗಮನ

ಹೆಚ್ಚಿನ ಮಾಧ್ಯಮ ವರದಿಗಳು ದೊಡ್ಡ ಹೆಸರುಗಳನ್ನು ಎತ್ತಿ ತೋರಿಸುವುದರ ಮೇಲೆ ಮಾತ್ರ ಕೇಂದ್ರೀಕರಿಸಿವೆ. ಆದರೆ ಬಿಜೆಪಿಯ ಕೆಳ ಹಂತಗಳಲ್ಲಿ ಬಿಜೆಪಿಯಿಂದ ಮಹಾ ನಿರ್ಗಮನ ಆರಂಭವಾಗಿದೆ.

ಮೇ 2 ರಂದು ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ನಂತರ, 30 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ಟಿಎಂಸಿಯು ಬಿಜೆಪಿ ಭದ್ರಕೋಟೆಗಳಲ್ಲಿ ಎರಡು ಗ್ರಾಮ ಪಂಚಾಯಿತಿಗಳನ್ನು ವಶಪಡಿಸಿಕೊಂಡಿದೆ. ಗ್ರಾಮ ಪಂಚಾಯಿತಿ, ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಮಟ್ಟದ ನಾಯಕರ ಸರಣಿಯೂ ಟಿಎಂಸಿಗೆ ಸೇರಿಸಿಕೊಳ್ಳಲು ಮನವಿ ಮಾಡುತ್ತಿವೆ.

ಕೇಸರಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿ, ಕೂಚ್ ಬೆಹಾರ್‌ನ ದಿನ್ಹಾಟಾ ಬ್ಲಾಕ್‌ನಲ್ಲಿರುವ ಭೆತಗುರಿ ಗ್ರಾಮ ಪಂಚಾಯಿತಿಯನ್ನೂ ಟಿಎಂಸಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಅಲ್ಲಿ ಬಿಜೆಪಿ ಒಂಬತ್ತು ವಿಧಾನಸಭಾ ಸ್ಥಾನಗಳಲ್ಲಿ ಏಳು ಸ್ಥಾನಗಳನ್ನು ಗೆದ್ದಿದೆ. ಆದರೆ ಗ್ರಾಪಂ ಈಗ ಟಿಎಂಸಿ ಕೈಗೆ ಬಂದಿದೆ!

ವಿಧಾನಸಭಾ ಚುನಾವಣೆಗೆ ಮುನ್ನ, ಕೇಸರಿ ಬ್ರಿಗೇಡ್‌ನೊಂದಿಗಿದ್ದ ಪಂಚಾಯಿತಿಯ ಹತ್ತು ಸದಸ್ಯರಲ್ಲಿ ಒಂಬತ್ತು ಮಂದಿಯನ್ನು ಬಿಜೆಪಿ ನಿಯಂತ್ರಿಸುತ್ತಿತ್ತು. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯ ಭರ್ಜರಿ ವಿಜಯದ ನಂತರ, ಎಂಟು ಸದಸ್ಯರು ಟಿಎಂಸಿಗೆ ಮರಳಿದರು. 10 ಸದಸ್ಯರ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿಯ ಏಕೈಕ ಸದಸ್ಯ ಕೂಚ್ ಬೆಹಾರ್ನ ಬಿಜಿಪಿ ಸಂಸದ ನಿಸಿತ್ ಪ್ರಮಾಣಿಕ್ ಅವರ ಮಾವ ಅಷ್ಟೇ.

ಸ್ಥಳೀಯ ಬಿಜೆಪಿ ಮುಖಂಡರು ದಿ ವೈರ್‌ಗೆ, “ಇದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ನಿಸಿತ್ ಪ್ರಮಾಣಿಕ್ ಬೆಂಬಲವಿಲ್ಲದೇ ಇದನ್ನು ಮಾಡಲಾಗುವುದಿಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ. ಅವರು ಟಿಎಂಸಿಯ ಕೆಲವು ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ನಮ್ಮಲ್ಲಿದೆ” ಎಂದಿದ್ದಾರೆ

ಅದೇ ರೀತಿ, ಎರಡು ವಾರಗಳ ಹಿಂದೆ, 2018ರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದ ಮಾಲ್ಡಾ ಜಿಲ್ಲೆಯ ಗಜೋಲ್ ಬ್ಲಾಕ್‌ನಲ್ಲಿ ರಾಣಿಗಂಜ್ ಗ್ರಾಮ ಪಂಚಾಯಿತಿಯನ್ನು ಟಿಎಂಸಿ ವಶಪಡಿಸಿಕೊಂಡಿದೆ. 13 ಸದಸ್ಯರ ರಾಣಿಗಂಜ್ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿಗೆ ಏಳು ಸದಸ್ಯರಿದ್ದರೆ, ಟಿಎಂಸಿಗೆ ಆರು ಸದಸ್ಯರಿದ್ದರು. ವಿಧಾನಸಭೆ ಫಲಿತಾಂಶ ಪ್ರಕಟವಾದ ಕೂಡಲೇ ಪಂಚಾಯತ್ ಪ್ರಧಾನ್ ಸೇರಿದಂತೆ ಮೂವರು ಸದಸ್ಯರು ಟಿಎಂಸಿಗೆ ಸೇರಿದರು. ಗಜೋಲ್ ವಿಧಾನಸಭಾ ಸ್ಥಾನವನ್ನು ಬಿಜೆಪಿ 1,798 ಮತಗಳ ಅಂತರದಿಂದ ಗೆದ್ದುಕೊಂಡಿತ್ತು.

ಕೇಸರಿ ಪಕ್ಷವು ರಾಜ್ಯದಲ್ಲಿ ಹೊಂದಿರುವ ಏಕೈಕ ಜಿಲ್ಲಾ ಪರಿಷತ್‌ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಈಗ ಪರದಾಡುತ್ತಿದೆ. 29 ಟಿಎಂಸಿ ಸದಸ್ಯರಲ್ಲಿ 14 ಮಂದಿ ಚುನಾವಣೆಗೆ ಕೆಲವು ದಿನಗಳ ಮೊದಲು ಬಿಜೆಪಿಗೆ ಹೋದ ನಂತರ, 37 ಸದಸ್ಯರ ಮಾಲ್ಡಾ ಜಿಲ್ಲಾ ಪರಿಷತ್ ಅನ್ನು ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಈಗ, ಕೆಲವು ಸದಸ್ಯರು ಟಿಎಂಸಿ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು ಟಿಎಂಸಿಗೆ ವಾಪಸ್‍ ಬರುವುದಾಗಿ ಹೇಳಿದ್ದಾರೆ. ಇನ್ನೂ ಅನೇಕರು ಇದನ್ನು ಅನುಸರಿಸುವ ಸಾಧ್ಯತೆಯಿದೆ.

ಟಿಎಂಸಿ ಸಂಸದ ಅಭಿಷೇಕ್‍ ಬ್ಯಾನರ್ಜಿ, ‘ನಾಯಕರು, ಕಾರ್ಯಕರ್ತರಷ್ಟೇ  ಅಲ್ಲ, ಕೆಲವು ಬಿಜೆಪಿ ಶಾಸಕರು ಕೂಡ ಟಿಎಂಸಿಗೆ ಸೇರಲು ಸಿದ್ಧರಿದ್ದಾರೆ. ಮಮತಾ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.

ಒಟ್ಟಿನಲ್ಲಿ ಬಿಜೆಪಿಯಿಂದ ಟಿಎಂಸಿ ಕಡೆಗೆ ಒಂದು ಮಹಾ ವಲಸೆ ಶುರುವಾಗಿದೆ. ಇದರಿಂದ ಬಿಜೆಪಿ ಹೈಕಮಾಂಡ್‍ ತಬ್ಬಿಬ್ಬಾಗಿ ಡ್ಯಾಮೇಜ್‍ ಕಂಟ್ರೋಲ್‍ ಮಾಡಲು ಪರದಾಡುತ್ತಿದೆ.

ಕೃಪೆ: ದಿ ವೈರ್


ಇದನ್ನೂ ಓದಿ: ಉತ್ತರಪ್ರದೇಶ : ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆ ಮತ್ತು ಬಿಜೆಪಿಯ ರಾಜಕೀಯ ಲೆಕ್ಕಾಚಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...