ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ. ಟಿಎಂಸಿಯಿಂದ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಲ್ಲಿ ಸ್ಪರ್ಧಿಸುತ್ತಿರುವುದರಿಂದ ಕ್ಷೇತ್ರವು ದೇಶದ ಗಮನ ಸೆಳೆದಿದೆ. ಚುನಾವಣೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಲು ಬಿಜೆಪಿ ಪಕ್ಷದ ನಾಯಕಿ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಕಣಕ್ಕಿಳಿಸಿದೆ.
ಪ್ರತಿಷ್ಠಿತ ಕಣವಾಗಿರುವ ಭವಾನಿಪುರ ಉಪಚುಣಾವಣೆಯಲ್ಲಿ, ಮಮತಾ ಬ್ಯಾನರ್ಜಿ ವಿರುದ್ದ ಅಭ್ಯರ್ಥಿಯನ್ನು ನಿಲ್ಲಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಮಮತಾ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲು ನವೆಂಬರ್ 5 ರ ಒಳಗೆ ಶಾಸಕಿಯಾಗಿ ಆಯ್ಕೆಯಾಗಲೆ ಬೇಕಾಗಿದೆ.
ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲದೆ ಇರುವುದರಿಂದ, ವಿಧಾನ ಪರಿಷತ್ ಸದಸ್ಯೆಯಾಗಿ ನಾಮನಿರ್ದೇಶನ ಮಾಡಿ ಅವರನ್ನು ಶಾಸಕಿಯಾಗಿ ಆಯ್ಕೆ ಮಾಡುವ ಹಾಗೆ ಕೂಡಾ ಇಲ್ಲ. ಹಾಗಾಗಿ ಅವರು ಪ್ರಸ್ತುತ ನಡೆಯಲಿರುವ ಭವಾನಿಪುರ ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕಾಗಿದೆ.
ಇದನ್ನೂ ಓದಿ: ಬಂಗಾಳ ಉಪಚುನಾವಣೆ: ಮಮತಾ ಬ್ಯಾನರ್ಜಿ ಎದುರು ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧಾರ
ಮುಖ್ಯಮಂತ್ರಿ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸಿರುವ ಟಿಬ್ರೆವಾಲ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿಯ ಪ್ರಮುಖ ನಾಯಕಿಯಾಗಿರುವ ಟಿಬ್ರೆವಾಲ್ ಅವರು, ವಿಧಾನಸಭಾ ಚುನಾವಣೆಯ ನಂತರ ನಡೆದಿದೆ ಎನ್ನಲಾಗಿರುವ ಹಿಂಸಾಚಾರದ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಿದ ಅರ್ಜಿದಾರರಲ್ಲಿ ಒಬ್ಬರಾಗಿದ್ದಾರೆ.
ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ವಿರುದ್ಧ ಸೋತಿದ್ದರು. ಹೀಗಾಗಿ ಸೋವಂದೇಬ್ ಚಟ್ಟೋಪಾಧ್ಯಾಯ ಅವರಿಂದ ತೆರವಾದ ಕ್ಷೇತ್ರವಾದ ಭವಾನಿಪುರದಿಂದ ಉಪಚುನಾವಣೆಯ ಮೂಲಕ ಮಮತಾ ಅವರು ಮತ್ತೆ ಸ್ಪರ್ಧಿಸಲಿದ್ದಾರೆ.
ಮಮತಾ ಬ್ಯಾನರ್ಜಿ ಅವರು 2011 ಮತ್ತು 2016 ರಲ್ಲಿ ಭವಾನಿಪುರದಿಂದ ಎರಡು ಬಾರಿ ಆಯ್ಕೆಯಾಗಿದ್ದರು. ಪ್ರಸ್ತುತ ನಿರ್ಣಾಯಕ ಉಪಚುನಾವಣೆಯಾಗಿರುವ ಇಲ್ಲಿ ಭಾರೀ ಪ್ರಚಾರ ನಡೆಸಿದ್ದಾರೆ. ಸೆಪ್ಟೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಫಲಿತಾಂಶಗಳನ್ನು ಅಕ್ಟೋಬರ್ 3 ರಂದು ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ: ಸ್ವಕ್ಷೇತ್ರಕ್ಕೆ ಮರಳಿದ ಮಮತಾ ಬ್ಯಾನರ್ಜಿ: ಸೆ.30ಕ್ಕೆ ಪಶ್ಚಿಮ ಬಂಗಾಳ ಉಪಚುನಾವಣೆ


