ಕೊರೊನಾ, ಲಾಕ್‌ಡೌನ್, ಬೆಲೆ ಏರಿಕೆ, ಉದ್ಯೋಗ ನಷ್ಟ, ಖಾಲಿ ಜೇಬು, ಹಸಿದ ಹೊಟ್ಟೆ- ಇಂದಿನ ದುಬಾರಿ ದುನಿಯಾದಲ್ಲಿ ಸಾಮಾನ್ಯ ಜನರನ್ನು ಕಾಡುತ್ತಿರುವ ಸಮಸ್ಯೆಗಳಿವು. ಮಾಧ್ಯಮಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸುದ್ದಿ ಕಾಣಿಸದ ದಿನವಿಲ್ಲ. ಇದೇ ಸಂದರ್ಭದಲ್ಲಿ ಹೇಗೋ ಆದಷ್ಟು ಕೊಂಡು ತಿನ್ನುವ ಎಂದುಕೊಳ್ಳಲು ಉದ್ಯೋಗವೂ ಇಲ್ಲ. ಕೆಲಸ ಇರುವವರ ಸಂಬಳಕ್ಕೂ ಉದ್ಯೋಗದಾತರು ಕತ್ತರಿ ಹಾಕುತ್ತಿದ್ದಾರೆ. ಕಳೆದ ವರ್ಷ ದೇಶಾದ್ಯಂತ ಲಾಕ್‌ಡೌನ್ ಹೇರಿದ ಬಳಿಕ ನಿರುದ್ಯೋಗ ಪ್ರಮಾಣ ದಿನದಿಂದ ದಿನಕ್ಕೆ, ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ. ಲಾಕ್‌ಡೌನ್ ಮುಗಿದರೂ ಉದ್ಯೋಗ ಕ್ಷೇತ್ರದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಇಂದಿಗೂ ದೇಶದ ಯುವಜನರು ನಿರುದ್ಯೋಗದಿಂದಾಗಿ ಬಳಲುತ್ತಿದ್ದಾರೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಅಂಕಿಅಂಶಗಳ ಪ್ರಕಾರ, 2021ರ ಆಗಸ್ಟ್‌ನಲ್ಲಿ ನಿರುದ್ಯೋಗ ದರವು 8.3%ಗೆ ಏರಿಕೆಯಾಗಿದೆ. ಜುಲೈನಲ್ಲಿ 37.4% ಇದ್ದ ಉದ್ಯೋಗ ದರವು ಆಗಸ್ಟ್‌ನಲ್ಲಿ 37.2% ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ಜುಲೈನಲ್ಲಿ 399.7 ಮಿಲಿಯನ್ (39.9 ಕೋಟಿ) ಇದ್ದ ಉದ್ಯೋಗಗಳು ಆಗಸ್ಟ್‌ನಲ್ಲಿ 397.8 ಮಿಲಿಯನ್‌ಗೆ (39.7 ಕೋಟಿ) ಕುಗ್ಗಿದೆ. ಅಂದರೆ, ಒಂದೇ ತಿಂಗಳಲ್ಲಿ 1.9 ಮಿಲಿಯನ್ (19 ಲಕ್ಷ) ಉದ್ಯೋಗಗಳು ನಷ್ಟವಾಗಿವೆ.

ಇದನ್ನು ಕ್ಷೇತ್ರವಾರು ನೋಡುವುದಾದರೆ, ಕೃಷಿ ಕ್ಷೇತ್ರದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ 8.7 ಮಿಲಿಯನ್ ಉದ್ಯೋಗಗಳು ಕಡಿತಗೊಂಡಿವೆ. ಅಂದರೆ, ಜುಲೈ ತಿಂಗಳಲ್ಲಿ ಖಾರಿಫ್ ಬೆಳೆ ಬಿತ್ತನೆಯ ಸಮಯದಲ್ಲಿ ಸರಾಸರಿ 124 ಮಿಲಿಯನ್ ಇದ್ದ ಕೃಷಿ ಕ್ಷೇತ್ರದ ಉದ್ಯೋಗಗಳು ಆಗಸ್ಟ್‌ನಲ್ಲಿ 116 ಮಿಲಿಯನ್‌ಗೆ ಕುಸಿದಿವೆ.

ಕೈಗಾರಿಕಾ ವಲಯದಲ್ಲಿ ಜುಲೈನಲ್ಲಿ 2.5 ಮಿಲಿಯನ್ ಉದ್ಯೋಗ ನಷ್ಟವಾದರೆ, ಆಗಸ್ಟ್‌ನಲ್ಲಿ 0.94 ಮಿಲಿಯನ್ ಉದ್ಯೋಗಗಳು ಕಡಿತವಾಗಿವೆ. ಇನ್ನು, ಕೊರೊನಾ ಪ್ರೇರಿತ ಲಾಕ್‌ಡೌನ್‌ಗಳಲ್ಲಿ ಸುಮಾರು 10 ಮಿಲಿಯನ್ ಕಾರ್ಮಿಕರು ಶಾಶ್ವತವಾಗಿ ಉದ್ಯೋಗ ಕಳೆದುಕೊಂಡಿದ್ದಾರೆ.

ಕೋವಿಡ್-19 ಬಿಕ್ಕಟ್ಟಿನ (ಮಾರ್ಚ್ 2020) ಮೊದಲು, ಉತ್ಪಾದನಾ ವಲಯವು ಸುಮಾರು 40 ಮಿಲಿಯನ್ ಉದ್ಯೋಗಿಗಳನ್ನು ಹೊಂದಿತ್ತು. ಇದು ಏಪ್ರಿಲ್ 2020ರಲ್ಲಿ 21 ಮಿಲಿಯನ್‌ಗೆ ಕುಸಿಯಿತು. ಜುಲೈ 2020ರ ವೇಳೆಗೆ 30 ಮಿಲಿಯನ್ ಸಮೀಪಕ್ಕೆ ಉದ್ಯೋಗ ಕ್ಷೇತ್ರ ಸುಧಾರಿಸಿತು. ನಂತರ, ಫೆಬ್ರವರಿ 2021ರವರೆಗೆ 30 ಮಿಲಿಯನ್ ಗಡಿಯಲ್ಲಿತ್ತು. ಆದರೆ, ಕೊರೊನಾ 2ನೇ ಅಲೆಯ ವೇಳೆ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣವು 26 ಮಿಲಿಯನ್‌ಗೆ ಕುಸಿಯಿತು. ಜುಲೈ ವೇಳೆಗೆ ಇದು ಸುಮಾರು 29 ಮಿಲಿಯನ್‌ಗೆ ಏರಿಕೆಯಾಗಿ ಚೇತರಿಸಿಕೊಂಡಿತು. ಆದರೆ, ಆಗಸ್ಟ್‌ನಲ್ಲಿ ಮತ್ತೆ 28 ಮಿಲಿಯನ್‌ಗೆ ಕುಸಿದುಹೋಗಿದೆ. 2ನೇ ಅಲೆಯ ಲಾಕ್‌ಡೌನ್ ನಂತರವೂ ಆಗಸ್ಟ್‌ನಲ್ಲಿ ಸರಾಸರಿ ಒಂದು ಮಿಲಿಯನ್ ಉದ್ಯೋಗ ನಷ್ಟವು ನಿರಾಶಾದಾಯಕ ಪರಿಸ್ಥಿತಿಯನ್ನು ಚಿತ್ರಿಸುತ್ತಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ, ಕೊರೊನಾ ಪೂರ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿದ್ದ 40 ಮಿಲಿಯನ್ ಉದ್ಯೊಗ ಎಂಬುದು ಈಗ ತುಂಬಾ ದೂರದ ಮಾತಿನಂತೆ ಕಾಣುತ್ತದೆ.

ಇದೇ ವೇಳೆ ಉತ್ಪಾದನಾ ಕ್ಷೇತ್ರದಿಂದ ಹೊರನೂಕಲ್ಪಟ್ಟವರನ್ನು ಸೇವಾ ಕ್ಷೇತ್ರ ಸೆಳೆದಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನವು ಆರ್ಥಿಕ ಭದ್ರತೆಯನ್ನು ಒದಗಿಸದಿದ್ದರೂ ತಾತ್ಕಾಲಿಕ ನಿಟ್ಟುಸಿರು ಬಿಡಲು ನೆರವಾಗಿವೆ. ಆಗಸ್ಟ್‌ನಲ್ಲಿ ಸೇವಾ ವಲಯವು 8.5 ಮಿಲಿಯನ್ ಹೆಚ್ಚುವರಿ ಉದ್ಯೋಗಗಳನ್ನು ಒದಗಿಸಿದೆ. ವೈಯಕ್ತಿಕ ವೃತ್ತಿಪರೇತರ ಸೇವೆಗಳು ಮತ್ತು ಚಿಲ್ಲರೆ ವ್ಯಾಪಾರ, ಮನೆಕೆಲಸದವರು, ಮನೆ ಅಡುಗೆಯವರು, ಬ್ಯೂಟಿಷಿಯನ್‌ಗಳು, ಮಸಾಜ್ ಮಾಡುವವರು, ಜಿಮ್ನಾಷಿಯಂ ತರಬೇತುದಾರರು, ಕ್ಷೌರಿಕರು, ಕೊಳಾಯಿಗಾರರು, ತೋಟಗಾರರು, ಭದ್ರತಾ ಸಿಬ್ಬಂದಿ, ಕ್ಯಾಬ್ ಚಾಲಕರು ಮುಂತಾದವರು ಈ ವಲಯದಲ್ಲಿ ಸೇರಿದ್ದಾರೆ. ಆಗಸ್ಟ್‌ನಲ್ಲಿ ಅಂತಹ ಉದ್ಯೋಗಗಳು 4.7 ಮಿಲಿಯನ್ ಹೆಚ್ಚಳವಾಗಿದೆ. ಈ ವರ್ಗದಲ್ಲಿನ ಒಟ್ಟು ಉದ್ಯೋಗ ಸುಮಾರು 30 ಮಿಲಿಯನ್‌ನಷ್ಟಿದೆ. ಜೂನ್ ಮತ್ತು ಜುಲೈನಲ್ಲಿ 23.9 ಮಿಲಿಯನ್‌ಗೆ ಕುಸಿದಿದ್ದ ಈ ರೀತಿಯ ಉದ್ಯೋಗಗಳು 28.6 ಮಿಲಿಯನ್‌ಗೆ ಏರಿದ ಕಾರಣ ಆಗಸ್ಟ್ ಭಾಗಶಃ ಚೇತರಿಕೆ ಕಂಡಿದೆ.

ಇನ್ನು, ಆಗಸ್ಟ್‌ನಲ್ಲಿ ಉದ್ಯೋಗದಲ್ಲಿ ಹೆಚ್ಚಳವನ್ನು ಕಂಡ ಸೇವಾ ವಲಯ ಎಂದರೆ ಚಿಲ್ಲರೆ ವ್ಯಾಪಾರವಾಗಿದೆ. ಈ ಉದ್ಯಮದಲ್ಲಿ ಉದ್ಯೋಗವು ದಾಖಲೆಯ 64.4 ಮಿಲಿಯನ್ ತಲುಪಿದೆ. ಜುಲೈನಲ್ಲಿ ಇದು 59.9 ಮಿಲಿಯನ್ ಆಗಿತ್ತು. ಆದರೆ, ಈ ಕ್ಷೇತ್ರದಲ್ಲಿ ನಿಯತವಾಗಿ ವೇತನ ನೀಡುವ ಉದ್ಯೋಗಗಳು ಕೇವಲ 0.94 ಮಿಲಿಯನ್‌ಗಳಷ್ಟು ಮಾತ್ರ ಹೆಚ್ಚಾಗಿವೆ.

2020ರ ಸೆಪ್ಟೆಂಬರ್‌ನಲ್ಲಿ 6.68% ಇದ್ದ ನಿರುದ್ಯೋಗ ದರವು, 2021ರ ಆಗಸ್ಟ್‌ನಲ್ಲಿ 8.23%ಗೆ ಏರಿಕೆಯಾಗಿದೆ. ಇದರ ಅರ್ಥ ಏನು? ಪ್ರತಿದಿನ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಪ್ರತಿ ವರ್ಷ ಸುಮಾರು 12 ಕೋಟಿ ಜನರು ಹೊಸದಾಗಿ ಉದ್ಯೋಗಾಕಾಂಕ್ಷಿಗಳಾಗಿ (ವಿದ್ಯಾಭ್ಯಾಸ ಮುಗಿಸಿದರು) ಈ ಸಮೂಹವನ್ನು ಸೇರುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಇವರಲ್ಲಿ ಎಲ್ಲರೂ ಉದ್ಯೋಗಗಳನ್ನು ಹುಡುಕುತ್ತಿಲ್ಲ. ಕೆಲವರು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ, ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಮದುವೆಯಾಗಲು ಹೇಳಲಾಗುತ್ತದೆ. ಹೀಗಾಗಿ ಕೆಲಸ ಮಾಡಲು ಸಿದ್ಧರಿರುವ ಜನಸಂಖ್ಯೆಯ ಪಾಲು – ಲಾಕ್‌ಡೌನ್‌ಗೆ ಮೊದಲು ಸುಮಾರು ಶೇ.42ರಷ್ಟಿತ್ತು. ಅಂದರೆ, ಪ್ರತಿವರ್ಷ ಸುಮಾರು ಐದು ಕೋಟಿ ಜನ ಈ ಉದ್ಯೋಗಾಕಾಂಕ್ಷಿಗಳ ಗುಂಪಿಗೆ ಸೇರುತ್ತಾರೆ. ಆದರೂ, ಈ ಎರಡು ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆ ಒಂದೇ ಆಗಿದೆ. ಅದರಲ್ಲಿ ಏರಿಕೆಯಾಗಿಲ್ಲ. ನಿರುದ್ಯೋಗಿಗಳ ಸಮೂಹ ವಿಸ್ತಾರಗೊಳ್ಳುತ್ತಿದೆ. ಅವರೆಲ್ಲರೂ ಉದ್ಯೋಗ ಸಿಗದೆ ನಿರುತ್ಸಾಹಗೊಂಡಿದ್ದಾರೆ. ಇವರಲ್ಲಿ ಬಹುಸಂಖ್ಯಾತರು ಮನೆಯಲ್ಲಿಯೇ ಇದ್ದಾರೆ. ಕಡಿಮೆ ಸಮಯಕ್ಕೆ ಸಿಗುವ ತುಂಡು ಕೆಲಸಗಳನ್ನು, ಕೃಷಿ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

“ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್‌ನಿಂದ ಕೆಲಸ ಹೋಯ್ತು. ಕೃಷಿ ಮಾಡೋಣ ಎಂದರೆ ಸರಿಯಾದ ಮಳೆಯಿಲ್ಲ. ಹಲವೆಡೆ ಪ್ರವಾಹ ಎಬ್ಬಿಸಿರುವ ಮಳೆ ನಮ್ಮ ಮೇಲೆ ಮುನಿಸಿಕೊಂಡಿದೆ. ಹೀಗಾಗಿ ಹೊಟ್ಟೆಪಾಡಿಗಾಗಿ ಪರಿತಪಿಸುವ ಸ್ಥಿತಿ ಕುಟುಂಬದಲ್ಲಿದೆ. ಹೀಗಾಗಿ ಊರಲ್ಲಿದ್ದ ಬೈಕ್ ತಂದು ಬೆಂಗಳೂರಿನಲ್ಲಿ ರ್‍ಯಾಪಿಡೋ ಓಡಿಸುತ್ತಿದ್ದೇನೆ. ಪೆಟ್ರೋಲ್ ಬೆಲೆ ಏರಿಕೆ ಅದಕ್ಕೂ ಹೊಡೆತ ಕೊಟ್ಟಿದೆ. ಬೇರೆ ದಾರಿಯಿಲ್ಲದ ಕಾರಣ ಇದನ್ನೇ ನಂಬಿ ನಾನು-ನನ್ನ ಕುಟುಂಬ ಬದುಕುತ್ತಿದ್ದೇವೆ.” – ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗಿಯಾಗಿದ್ದು ಉದ್ಯೋಗ ಕಳೆದುಕೊಂಡ ನವೀನ್ (ರ್‍ಯಾಪಿಡೋ ಚಾಲಕ).

ಇದನ್ನೂ ಓದಿ:ಬೆಲೆ ಏರಿಕೆ- ಬಸವಳಿದ ಸಾಮಾನ್ಯ; ತಾಲಿಬಾನಿನ ಗುಮ್ಮ ತೋರಿಸಿದ ಶಾಸಕ!


ಇದನ್ನೂ ಓದಿ: ಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರ ಉದ್ಯೋಗ ನಷ್ಟ; ಶೇ. 8.32ಕ್ಕೇರಿದ ನಿರುದ್ಯೋಗ ಪ್ರಮಾಣ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಸೋಮಶೇಖರ್‌ ಚಲ್ಯ
+ posts

LEAVE A REPLY

Please enter your comment!
Please enter your name here