“ಜೂನ್ 10ನ್ನು ಮರೆತುಬಿಡಿ, ಮುಂದಿನ 10 ವರ್ಷಗಳಲ್ಲಿ ಒಡಿಶಾವನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, “ವಿಧಾನಸಭಾ ಚುನಾವಣೆಯ ನಂತರ ತಮ್ಮ ಬಿಜೆಡಿ ಸತತ ಆರನೇ ಬಾರಿಗೆ ಅಧಿಕಾರಕ್ಕೆ ಮರಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೂನ್ 10 ರಂದು ಭುವನೇಶ್ವರದಲ್ಲಿ “ಬಿಜೆಪಿ ಮುಖ್ಯಮಂತ್ರಿ” ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹಿಂದಿನ ದಿನ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಕ್ಕೆ ಪಟ್ನಾಯಕ್ ತಿರುಗೇಟು ಕೊಟ್ಟಿದ್ದಾರೆ.
“ಜೂನ್ 10 ರಂದು ಏನೂ ಆಗುವುದಿಲ್ಲ; ಮುಂದಿನ 10 ವರ್ಷಗಳಲ್ಲಿ ಬಿಜೆಪಿ ಜನರ ಹೃದಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ, ಜೂನ್ 10 ಅನ್ನು ಮರೆತುಬಿಡಿ. ಒಡಿಶಾದಲ್ಲಿ ಬಿಜೆಡಿ ಸತತ ಆರನೇ ಬಾರಿಗೆ ಸರ್ಕಾರ ರಚಿಸುತ್ತದೆ” ಎಂದು ಹೇಳಿದ್ದಾರೆ.
“ಬಿಜು ಪಟ್ನಾಯಕ್ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಏಕೆ ಪರಿಗಣಿಸುತ್ತಿಲ್ಲ” ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದರು.
“ಒಡಿಶಾದ ಅನೇಕ ವೀರ ಪುತ್ರರಿದ್ದಾರೆ, ಅವರಲ್ಲಿ ಕೆಲವರ ಬಗ್ಗೆ ನೀವು ಇಂದು ಮಾತನಾಡಿದ್ದೀರಿ. ಬಿಜು ಪಟ್ನಾಯಕ್ ಸೇರಿದಂತೆ ಅವರಲ್ಲಿ ಯಾರೂ ಭಾರತ ರತ್ನಕ್ಕೆ ಅರ್ಹರಲ್ಲವೇ?” ಎಂದರು.
2014 ಮತ್ತು 2019ರಲ್ಲಿ ಮೋದಿ-ಬಿಜೆಪಿ ಜನರಿಗೆ ನೀಡಿದ ಭರವಸೆಗಳನ್ನು ಒಡಿಶಾದ ಜನರು ನೆನಪಿಸಿಕೊಳ್ಳುತ್ತಾರೆ. ಅವರು ಕಳೆದ 24 ವರ್ಷಗಳಿಂದ ಬಿಜೆಡಿ ಸರ್ಕಾರವನ್ನು ಸಹ ನೋಡಿದ್ದಾರೆ ಎಂದು ಅವರು ಹೇಳಿದರು.
“2014 ಮತ್ತು 2019 ರಲ್ಲಿ ನೀವು ನೀಡಿದ ಭರವಸೆಗಳು ನಿಮಗೆ ನೆನಪಿದೆಯೇ? ಒಡಿಶಾದ ಜನರು ನಿಮ್ಮ ಭರವಸೆಯನ್ನು ನೆನಪಿಸಿಕೊಳ್ಳುತ್ತಾರೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ, 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದು, ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡುವುದು ಮತ್ತು ದೂರದ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಒದಗಿಸುವುದು” ಎಂದು ಅವರು ಹೇಳಿದರು.
“ನೀವು ಒಡಿಶಾವನ್ನು ಚುನಾವಣೆ ಸಮಯದಲ್ಲಿ ಮಾತ್ರ ನೆನಪಿಸಿಕೊಳ್ಳುತ್ತೀರಿ ಮತ್ತು ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ” ಎಂದು ಅವರು ಹೇಳಿದರು.
ಸಂಸ್ಕೃತವನ್ನು ಉತ್ತೇಜಿಸಲು ಕೇಂದ್ರದಿಂದ 1,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಆದರೆ ಒಡಿಯಾ ಶಾಸ್ತ್ರೀಯ ಭಾಷೆಯಾದಾಗಲೂ ಹಣ ನೀಡಲಿಲ್ಲ ಎಂದು ಪಟ್ನಾಯಕ್ ಹೇಳಿದರು.
“ನಾನು ಶಾಸ್ತ್ರೀಯ ಒಡಿಸ್ಸಿ ಸಂಗೀತಕ್ಕೆ ಮಾನ್ಯತೆ ನೀಡುವಂತೆ ಪ್ರಸ್ತಾವನೆಗಳನ್ನು ಕಳುಹಿಸಿದ್ದೆ ಮತ್ತು ನೀವು ಅವುಗಳನ್ನು ಎರಡು ಬಾರಿ ತಿರಸ್ಕರಿಸಿದ್ದೀರಿ. ರಾಜ್ಯದ ರೈತರನ್ನು ಮತ್ತು ಎಂಎಸ್‌ಪಿ ದ್ವಿಗುಣಗೊಳಿಸುವ ಭರವಸೆಯನ್ನೂ ಪ್ರಧಾನಿ ಮರೆತಿದ್ದಾರೆ. ಒಡಿಶಾದ ಜನರನ್ನು ಗಮನದಲ್ಲಿಟ್ಟುಕೊಂಡು ಕರಾವಳಿ ಹೆದ್ದಾರಿ ನಿರ್ಮಿಸಬೇಕಿದ್ದ ನೀವು ಮತ್ತೆ ಈ ಯೋಜನೆಯನ್ನು ಮರೆತಿದ್ದೀರಿ” ಎಂದರು.
ಕಲ್ಲಿದ್ದಲು ಒಡಿಶಾದ ನೈಸರ್ಗಿಕ ಸಂಪತ್ತು ಎಂದು ಹೇಳಿದ ಪಟ್ನಾಯಕ್, “ಪ್ರಧಾನಿ ಅವರು 10 ವರ್ಷಗಳ ರಾಯಧನವನ್ನು ಪರಿಷ್ಕರಿಸಲು ಸಹ ಮರೆತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ನನ್ನ ಬಂಧನದ ನಂತರ ಎಎಪಿ ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಯ ಯೋಜನೆಯಾಗಿತ್ತು: ಕೇಜ್ರಿವಾಲ್


