ದಕ್ಷಿಣ ಭಾರತವನ್ನು ಬಿಟ್ಟರೆ, ದೇಶದಲ್ಲಿ ಎಲ್ಲಿಯಾದರೂ ಮೋದಿ ವಿರೋಧಿ ಭಾವನೆ ಜನರಲ್ಲಿ ಬೆಳೆಯುತ್ತಿದ್ದರೆ ಅದು ಗುಜರಾತ್‍ನಲ್ಲಿ ಮಾತ್ರ ಎಂದು ಭಾವಿಸಲು ಕಾರಣಗಳಿವೆ. ಅಲ್ಲಿನ ಜನರು ಖುದ್ದು ಮೋದಿಯ ಆಡಳಿತವನ್ನೇ ನೋಡಿದ್ದಾರೆ. ಹಾಗಾಗಿ ಆಡಳಿತ ವಿರೋಧಿ ಅಲೆ ಕೇಂದ್ರ ಸರ್ಕಾರದ ವಿರುದ್ಧ ಬಲಿಯಲು ಮಿಕ್ಕ ಭಾಗಗಳಲ್ಲಿ ಸಮಯ ಬೇಕಾಗಬಹುದಾದರೂ, ಗುಜರಾತ್‍ನಲ್ಲಿ ಹಾಗಿಲ್ಲ. ಇದರ ಸೂಚನೆಯು ಕಳೆದ ವಿಧಾನಸಭಾ ಚುನಾವಣೆಯಲ್ಲೇ ಸಿಕ್ಕಿತ್ತು. ಈಗ ಲೋಕಸಭಾ ಚುನಾವಣೆಯಲ್ಲಂತೂ ಬಿಜೆಪಿ ಹೆದರಿ ಕೊಂಡಿರುವುದು ಸ್ಪಷ್ಟವಾಗಿದೆ.
ಗುಜರಾತಿ ನಲ್ಲಿ ಎಲ್ಲಿ ನೋಡಿದರೂ ಭಾರತೀಯ ಜನತಾ ಪಾರ್ಟಿಯ ಬಿಲ್‍ಬೋರ್ಡ್ ಗಳೇ ಕಾಣುತ್ತಿವೆ. ಅದರೊಂದಿಗೆ ರಾಜ್ಯದಲ್ಲಿ ಟಿವಿ ಮತ್ತು ಸಾಮಾಜಿಕ ಜಾಲತಾಣ ಗಳಲ್ಲೂ ಬಿಜೆಪಿಯೇ ಕಾಣಿಸಿಕೊಳ್ಳುತ್ತಿದೆ. ಗುಜರಾತಿನ ಮುಖ್ಯ ಚುನಾವಣಾಧಿಕಾರಿಯ ಪ್ರಕಾರ, ಟಿವಿಯಲ್ಲಿ, ರೇಡಿಯೋದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 88% ರಷ್ಟು ರಾಜಕೀಯ ಜಾಹೀರಾತುಗಳು ಬಿಜೆಪಿಯದ್ದೇ ಆಗಿವೆ.
ಮುಖ್ಯ ಚುನಾವಣಾಧಿಕಾರಿಯ ಮೀಡಿಯಾ ಸರ್ಟಿಫಿಕೇಷನ್ ಆ್ಯಂಡ್ ಮಾನಿಟರಿಂಗ್ ಕಮಿಟಿಯು ಯಾವುದೇ ಡಿಜಿಟಲ್ ಮಾಧ್ಯಮದಲ್ಲಿ ಬರುವ ರಾಜಕೀಯ ವಿಷಯಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದೆ. 22 ಏಪ್ರಿಲ್‍ವರೆಗೆ ಅವರ ಹತ್ತಿರ ಬಂದ 200 ಅರ್ಜಿಗಳಲ್ಲಿ 173 ಬಿಜೆಪಿಯಿಂದ ಬಂದಿದ್ದರೆ 27 ಕಾಂಗ್ರೆಸ್ಸಿನಿಂದ ಬಂದಿದ್ದವು. ಅದರಲ್ಲಿ ಬಿಜೆಪಿಯ 112 ಮತ್ತು ಕಾಂಗ್ರೆಸ್ಸಿನ 15 ವಿಷಯಗಳಿಗೆ ಅನುಮತಿ ನೀಡಲಾಯಿತು.
ಪ್ರಧಾನಮಂತ್ರಿಯವರ ರಾಜ್ಯದಲ್ಲಿಯೇ ಈ ಪ್ರಮಾಣದ ಜಾಹೀರಾತುಗಳನ್ನು ನೋಡಿ, ಬಿಜೆಪಿ ಈ ಚುನಾವಣೆಗಳಲ್ಲಿ ಯಾಕೋ ತುಂಬಾ ನರ್ವಸ್ ಆಗಿದೆ ಎನ್ನುವ ಆಲೋಚನೆ ತೇಲಿಬರುತ್ತಿದೆ.
ಗುಜರಾತಿನ ಕಾಂಗ್ರೆಸ್ ವಕ್ತಾರ ಮನೀಷ್ ದೋಷಿ ಹೇಳಿದ್ದೇನೆಂದರೆ, “ಬಿಜೆಪಿ ಎನ್ನುವ ಪಕ್ಷ ಒಂದು ಪ್ರಚಾರದ ಪಕ್ಷ, ಪ್ರಧಾನಿ ಮೋದಿಯವರು ಪ್ರಚಾರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಮೋದಿ ಸರಕಾರ ಏನಾದರೂ ಕೆಲಸ ಮಾಡಿದ್ದಲ್ಲಿ, ಜಾಹಿರಾತುಗಳಿಗಾಗಿ ಇಷ್ಟೊಂದು ಹಣ ಪೋಲು ಮಾಡುತ್ತಿರಲಿಲ್ಲ”.
“ಕಾಂಗ್ರೆಸ್ ನಕಾರಾತ್ಮಕ ಪ್ರಚಾರ ಮಾಡುತ್ತಿದೆ, ಆ ಕಾರಣದಿಂದಾಗಿಯೇ ಅಧಿಕೃತ ಅನುಮತಿ ಸಿಗುವುದಿಲ್ಲ. ಅವರು ನೆಗೆಟಿವ್ ಪ್ರಚಾರದ ಮೇಲೆಯೇ ಗಮನಹರಿಸುತ್ತಿರುವುದರಿಂದ ಅವರ ಜಾಹಿರಾತುಗಳ ಸಂಖ್ಯೆ ಕಡಿಮೆ. ನಾವು ಸಕಾರಾತ್ಮಕ ಪ್ರಚಾರ ಮಾಡುತ್ತೇವೆ” ಇದು ಗುಜರಾತಿನ ಬಿಜೆಪಿ ವಕ್ತಾರ ಭರತ್ ಪಾಂಡ್ಯಾ ಹೇಳಿದ್ದು.
ಎಲ್ಲೆಲ್ಲೂ ಮೋದಿ
ಗುಜರಾತಿನಾದ್ಯಂತ ಎಲ್ಲಾ ಭಿತ್ತಿಪತ್ರಗಳು ಮತ್ತು ಇತರೆ ಪ್ರಚಾರ ಸಾಮಗ್ರಿಗಳಲ್ಲಿ ಕಂಡುಬರುವುದು ಮೋದಿಯ ಚಿತ್ರ ಮಾತ್ರ. ಅವರ ಚಿತ್ರದೊಂದಿಗೆ, ‘ಈ ಸಲವೂ ಮೋದಿ ಸರಕಾರ’ ಎನ್ನುವ ಸಂದೇಶವಿರುತ್ತದೆ. ಮುಖ್ಯಮಂತ್ರಿ ವಿಜಯ್ ರೂಪಾನಿಯವರ ಸರಕಾರದ ವಿರುದ್ಧ ಹುಟ್ಟಿಕೊಂಡಿರುವ ವ್ಯಾಪಾರಿಗಳ ಮತ್ತು ರೈತರ ಸಿಟ್ಟನ್ನು ಶಮನಗೊಳಿಸುವುದಕ್ಕಾಗಿಯೇ ಬಿಜೆಪಿಯ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಕಂಡುಬರುತ್ತಿದೆ.
2017ರ ವಿಧಾನಸಭೆ ಚುನಾವಣೆಗಳ ನೆನಪು ಇನ್ನು ಹಸಿಯಾಗಿಯೇ ಇದೆ. ಆಗ ಕಾಂಗ್ರೆಸ್ ಬಲವಾದ ಪೈಪೋಟಿಯನ್ನು ನೀಡಿತ್ತು. ಮೋದಿ ಅಲೆಯ ಹೊರತಾಗಿಯೂ ಬಿಜೆಪಿಯ ಸಂಖ್ಯೆ 100ಕ್ಕಿಂತ ಕೆಳಗಿಳಿಯಿತು ಮತ್ತು ಕಾಂಗ್ರೆಸ್ ಪಡೆದ ಸೀಟುಗಳು ಕಳೆದ ಎರಡು ದಶಕಗಳಲ್ಲಿಯೇ ಅತ್ಯಂತ ಹೆಚ್ಚು.
ರಾಜ್ಯದಲ್ಲಿ 26 ಸೀಟುಗಳಲ್ಲಿ 20 ಆದರೂ ಗೆಲ್ಲಲು ಬಿಜೆಪಿ ಮತ್ತೆ ಮೋದಿ ಬ್ರ್ಯಾಂಡ್ ಮೇಲೆಯೇ ನೆಚ್ಚಿಕೊಂಡಿದೆ. ನೆನಪಿಡಿ, 2014ರಲ್ಲಿ ಬಿಜೆಪಿ ಎಲ್ಲ 26 ಸೀಟುಗಳನ್ನು ಗೆದ್ದುಕೊಂಡಿತ್ತು. ಇಂದು, ಎಪ್ರಿಲ್ 23ರಂದು ಗುಜರಾತಿನ ಎಲ್ಲ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಲೋಕಸಭಾ ಕ್ಷೇತ್ರಗಳಿಗೆ ಅನ್ವಯಿಸಿ ನೋಡುವುದಾದರೆ, ಕಾಂಗ್ರೆಸ್ ಐದಾರು ಸೀಟುಗಳಲ್ಲಿ ಗೆಲ್ಲಬೇಕು.
ಅದನ್ನು ದಾಟಿ ಅಲ್ಲಿನ ರೈತರ, ಗೋಪಾಲಕರ, ಪಾಟೀದಾರರ ಹಾಗೂ ಸಣ್ಣ ವ್ಯಾಪಾರಸ್ಥರ ಅಸಮಾಧಾನವು ಬಿಜೆಪಿ ವಿರುದ್ಧದ ಮತಗಳಾಗಿ ಧ್ರುವೀಕರಣಗೊಳ್ಳುತ್ತದಾ ಎಂಬುದು ಬಿಜೆಪಿಯ ದೌರ್ಬಲ್ಯದ ಮೇಲಷ್ಟೇ ಅವಲಂಬಿಸಿಲ್ಲ. ಅದು ಕಾಂಗ್ರೆಸ್ಸಿನ ಸಾಮಥ್ರ್ಯದ ಮೇಲೆ ನಿಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‍ನ ನೇರ ಪಾಲ್ಗೊಳ್ಳುವಿಕೆಯಿಂದ ಚುರುಕಾಗಿದ್ದ ಸ್ಥಳೀಯ ಕಾಂಗ್ರೆಸ್ ದೇಶವ್ಯಾಪಿ ಚುನಾವಣೆ ನಡೆಯುತ್ತಿರುವಾಗ ಅಷ್ಟೇ ಸಮರ್ಥವಾಗಿಲ್ಲ. ಹೀಗಾಗಿ ಮೋದಿ ವಿರುದ್ಧದ ಭಾವನೆ ಬೆಳೆಯುತ್ತಿರುವ ರಾಜ್ಯವಾದ ಗುಜರಾತ್‍ನಲ್ಲಿ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಶಕ್ತವಾಗಿಲ್ಲ.
ಒಂದೇ ಸುತ್ತಿನ ಚುನಾವಣೆ ನಡೆಯುತ್ತಿರುವ ಅಲ್ಲಿ ಜನರೇ ಮನಸ್ಸು ಮಾಡಿ ಕಾಂಗ್ರೆಸ್‍ಗೆ ಮತ ಹಾಕಿದಲ್ಲಿ, 2009ರ ಸಾಧನೆಯನ್ನು (15 ಬಿಜೆಪಿ-11 ಕಾಂಗ್ರೆಸ್) ಅದು ಮಾಡಬಹುದು.
ಅಮುಲ್ ನಾಡಿನಲ್ಲಿ ಗೋಪಾಲಕರ ಸಿಟ್ಟು
ಭಾರತದ ಮೊಟ್ಟಮೊದಲ ಬೃಹತ್ ಸಹಕಾರೀ ಹಾಲು ಉದ್ದಿಮೆಯ ಯಶಸ್ವಿ ಪ್ರಯೋಗ ಗುಜರಾತಿನದ್ದೇ. ಅಮುಲ್‍ನಿಂದ ಆರಂಭವಾದದ್ದು ಇತರ ರಾಜ್ಯಗಳಿಗೂ ಹಬ್ಬಿತು. ಆದರೆ ರಾಜ್ಯದ ಮೂಲೆಮೂಲೆಗಳಿಗೂ ಹಬ್ಬಿರುವ ಅಮುಲ್‍ನ ಕಾರ್ಯಕ್ಷೇತ್ರವು ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸಿದೆ. ಇದು ಕೇವಲ ಗುಜರಾತಿನ ಸಮಸ್ಯೆಯಲ್ಲ. ಕೃಷಿ ಬಿಕ್ಕಟ್ಟಿನ ಕಾರಣಕ್ಕೆ ಹೈನುಗಾರಿಕೆಗೆ ಹೆಚ್ಚೆಚ್ಚು ರೈತರು ಮುಂದಾಗುತ್ತಿರುವುದು ಇಡೀ ದೇಶದಲ್ಲಿದೆ. ಹಾಗಾಗಿ ಮಾರುಕಟ್ಟೆಯನ್ನು ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳುವುದು ಸುಲಭವಿಲ್ಲ.
ಜೊತೆಗೆ ಗುಜರಾತಿನಲ್ಲಿ ಹಾಲಿನ ದರವನ್ನು ಹೆಚ್ಚಿಸುವುದೂ ಕಷ್ಟ. ಏಕೆಂದರೆ ಪ್ರತೀ ಮನೆಯಲ್ಲೂ ಹಾಲಿನ ಬಳಕೆ ವಿಪರೀತ. ಇಂತಹ ಸಮಸ್ಯೆ ಇರುವಾಗ ಗುಜರಾತಿನಲ್ಲಿ ಬರ ತೀವ್ರವಾಗಿದೆ. ಹುಲ್ಲಿಗೆ ಸಬ್ಸಿಡಿ ನೀಡಿದ್ದೇವೆ ಎಂದು ಬಿಜೆಪಿ ಸರ್ಕಾರವು ಹೇಳಿಕೊಳ್ಳುತ್ತಿದೆಯಾದರೂ ಬರ ಹೆಚ್ಚಾಗಿ, ಹುಲ್ಲು ಸಿಗುತ್ತಿಲ್ಲ. ಇನ್ನೂ ಹೆಚ್ಚು ಹಸುಗಳನ್ನು ಸಾಕಲು ಸಾಲ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರಿಗೆ ಸಮಸ್ಯೆಯ ಮೂಲವೇ ಅರ್ಥವಾದಂತಿಲ್ಲ.
ಅದೇ ಸಂದರ್ಭದಲ್ಲಿ ಕಾಂಗ್ರೆಸ್‍ನ ಪ್ರಣಾಳಿಕೆಯಲ್ಲಿ ಪ್ರತ್ಯೇಕ ರೈತ ಬಜೆಟ್ ಮತ್ತು ಹಾಲಿಗೆ ಪ್ರೋತ್ಸಾಹಧನ ನೀಡುವ ಭರವಸೆಯಿದೆ. ಈಗಾಗಲೇ ಕರ್ನಾಟಕದಲ್ಲಿ ಆ ವ್ಯವಸ್ಥೆ ಇದೆ. ಇದು ಗುಜರಾತ್‍ನ ಹಾಲು ಉತ್ಪಾದಕರಿಗೂ ಗೊತ್ತಿರುವ ವಿಚಾರವಾಗಿದೆ. ಗೋಪಾಲಕ ಸಮುದಾಯವಾದ ಮಾಲ್ಧಾರಿಗಳು ನರೇಂದ್ರ ಮೋದಿಯ ಸ್ವಂತ ಜಿಲ್ಲೆ ಮೆಹ್ಸಾನಾದಲ್ಲೂ ಸಾಕಷ್ಟಿದ್ದಾರೆ. ಈ ಸರ್ಕಾರವು ತಮಗೇನೂ ಮಾಡುತ್ತಿಲ್ಲ ಎಂಬ ಭಾವನೆ ದಟ್ಟವಾಗಿದ್ದು, ಇದನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಆಧಾರ: ಪ್ರಿಂಟ್ ಮತ್ತು ಗುಜರಾತಿನ
ವಿವಿಧ ಜನಪರ ಚಿಂತಕರು


