Homeರಂಜನೆಬ್ರೆಝಿಲ್‍ನ ಸುಂಟರಗಾಳಿ ಹೊಸೆ ಪಡಿಲ್ಯಾ

ಬ್ರೆಝಿಲ್‍ನ ಸುಂಟರಗಾಳಿ ಹೊಸೆ ಪಡಿಲ್ಯಾ

- Advertisement -
- Advertisement -

ರಾಜಶೇಖರ್ ಅಕ್ಕಿ |

ಥ್ರಿಲರ್ ಎನ್ನುವುದು ಸಿನೆಮಾದ ಒಂದು ಶೈಲಿ. ಅದರಲ್ಲೂ ಅನೇಕ ಉಪಶೈಲಿಗಳಿವೆ. ಮೂಲತಃ ಅಪರಾಧ, ಸಸ್ಪೆನ್ಸ್, ಪ್ರತೀಕಾರ ಇವುಗಳನ್ನು ಒಳಗೊಂಡು, ನೋಡುಗರು ಆಶ್ಚರ್ಯ, ಶಾಕ್, ಭಾವೋದ್ವೇಗ, ನಿರೀಕ್ಷೆ ಆತಂಕವನ್ನು ಹುಟ್ಟಿಸಿ, ತಮ್ಮ ಸೀಟಿನ ತುದಿಯಲ್ಲಿ ಕುಳಿತಿರುವಂತೆ ಮಾಡುತ್ತವೆ. ಹಾಲಿವುಡ್‍ನ ಅನೇಕರು ಸಿನೆಮಾದ ಈ ಪ್ರಕಾರದಲ್ಲಿ ನಿಷ್ಣಾತರು. ಆದರೆ, ಅನೇಕ ಸಲ ಹಾಲಿವುಡ್‍ನ ಈ ಥ್ರಿಲರ್‍ಗಳಲ್ಲಿ ಮಾನವೀಯ ಅಂಶ ಕಾಣೆಯಾಗುತ್ತದೆ. ಎಷ್ಟೇ ಅನಿರೀಕ್ಷಿತ ತಿರುವುಗಳನ್ನು ಚಿತ್ರ ಪಡೆದರೂ ಥ್ರಿಲರ್ ಸಿನೆಮಾದ ಮಿತಿಯೊಳಗೇ ಇದ್ದು, ಮಿಕ್ಕ ಅಂಶಗಳನ್ನು ಒತ್ತಾಯಪೂರ್ವಕವಾಗಿ ತುರುಕುವುದರಿಂದ ಬಹುತೇಕ ಥ್ರಿಲರ್‍ಗಳು ನೋಡುಗನನ್ನು ಹಿಡಿದಿಡಲು ವಿಫಲವಾಗುತ್ತವೆ.
2007ರಲ್ಲಿ ಬಂದಿದ್ದು ‘ಟ್ರೋಪಾ ದಿ ಎಲೀಟ್’. ಎನ್ನುವ ಪೋರ್ಚುಗೀಸ್ ಭಾಷೆಯ ಬ್ರೆಝಿಲಿನ ಸಿನೆಮಾ. ಈ ಸಿನೆಮಾ ಒಂದು ಥ್ರಿಲರ್‍ನಲ್ಲಿ ಇರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡು, ಬ್ರೆಝಿಲ್‍ನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ನೋಡುಗರೆದುರಿಗೆ ತೆರೆದಿಟ್ಟಿತ್ತಲ್ಲದೆ, ಚಿತ್ರದ ಮಾನವೀಯ ಅಂಶವೂ ಮನಮುಟ್ಟುವಂತಿತ್ತು, ಹಾಗೂ ಈ ಸಿನೆಮಾದ ತೀವ್ರತೆ ಮತ್ತು ಹೊಸತನವು ವಿಶ್ವದೆಲ್ಲೆಡೆ ನೋಡುಗರು ಬೆಚ್ಚಿಬೀಳುವಂತೆ ಮಾಡಿತು. ಈ ಸಿನೆಮಾದ ಕಚ್ಚಾತನವೂ(rawness) ಅದರ ಯಶಸ್ಸಿಗೆ ಕಾರಣವಾಗಿತ್ತು. ಇನ್ನೊಂದು ಕಾರಣ ಅದರ ನಾಯಕನಟ ವಾಗ್ನರ್ ಮೌರಾನ ತೀವ್ರತೆಯಿಂದ ಕೂಡಿದ ಅಭಿನಯ.

ವಾಗ್ನರ್ ಮೌರಾ ವಿಶೇಷ ಅಪರಾಧ ನಿಗ್ರಹ ಪಡೆಯ ಮುಖ್ಯಸ್ಥ ನಸಿಮೆಂಟೋನ ಪಾತ್ರವನ್ನು ನಿರ್ವಹಿಸಿದ್ದಾರೆ. ಸದ್ಯದಲ್ಲೇ ತಂದೆಯಾಗಲಿರುವ ನಸಿಮೆಂಟೊ ತನ್ನ ಕೆಲಸವನ್ನು ತ್ಯಜಿಸಬೇಕಾದರೆ ಇನ್ನೊಬ್ಬ ಸಶಕ್ತ ಅಧಿಕಾರಿಯನ್ನು ಹುಡುಕಿ, ತರಬೇತಿ ನೀಡಬೇಕಿದೆ. ಹಾಗಾಗಿ ತನ್ನ ಕೊನೆಯ ಕಾರ್ಯಾಚರಣೆಯೊಂದಕ್ಕೆ ಕೈ ಹಾಕಬೇಕಾಗುತ್ತದೆ. ಅದು ಅವನ ಕೊನೆಯ ಕಾರ್ಯಾಚರಣೆಯಾಗುತ್ತದೆಯೇ, ತನ್ನ ಹುದ್ದೆಗೆ ಸರಿಯಾದ ಅಭ್ಯರ್ಥಿ ಸಿಗುತ್ತಾನೆಯೇ ಎನ್ನುವುದು ಈ ಚಿತ್ರದ ಸಾರಾಂಶ. ಬ್ರೆಝಿಲ್‍ನಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿದ ಈ ಚಿತ್ರ, ಆ ದೇಶದ ಅತ್ಯಂತ ಹೆಚ್ಚು ಜನರು ನೋಡಿದ ಸಿನೆಮಾ ಆಯಿತು.

ಹೊಸೆ ಪಡಿಲ್ಯಾ ಬರೀ ಥ್ರಿಲರ್ ಚಿತ್ರಗಳನ್ನೇ ಮಾಡಲಿಲ್ಲ. ಟ್ರೋಪಾ ದಿ ಎಲೀಟ್ ಮಾಡಿದ ಮೇಲೆ ಬ್ರೇಝಿಲ್‍ನ ಒಂದು ಪ್ರದೇಶದಲ್ಲಿ ವ್ಯಾಪಕವಾಗಿರುವ ಬಡತನವನ್ನು ಸೆರೆಹಿಡಿಯುವ ಗರಪಾ ಎನ್ನುವ ಸಾಕ್ಷ್ಯ ಚಿತ್ರವನ್ನು 2009ರಲ್ಲಿ ನಿರ್ದೇಶಿಸಿದರು. ಬಡತನದ ಬೇಗೆಯಲ್ಲಿ ಬಳಲುತ್ತಿರುವ ಮೂರು ಕುಟುಂಬಗಳನ್ನು ಹಲವು ತಿಂಗಳವರೆಗೆ ಚಿತ್ರೀಕರಿಸುತ್ತಾರೆ. ಅಲ್ಲಿ ಯಾವುದೇ ತಜ್ಞರು, ಅಧಿಕಾರಿಗಳು ಅಥವಾ ರಾಜಕಾರಣಿಗಳು ಕಂಡುಬರುವುದಿಲ್ಲ. ಬಡತನದ ಮೂಲಕಾರಣವನ್ನು ಹುಡುಕಲೂ ಪ್ರಯತ್ನಿಸುವುದಲ್ಲ. ಆ ಮೂರೂ ಕುಟುಂಬಗಳ ಮಹಿಳೆಯರು ತಮ್ಮ ಮಕ್ಕಳ ಹೊಟ್ಟೆ ತುಂಬಿಸಲು ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ಮಾತ್ರ ತೋರಿಸಲಾಗಿದೆ. ಆ ಚಿತ್ರ ನೋಡಿದಾಗ ಬಡತನ ಎನ್ನುವುದು ಎಲ್ಲೆಲ್ಲಿಯೂ ಒಂದೇ ತೆರನಾಗಿರುತ್ತದೆ ಅನಿಸುತ್ತದೆ. ಮನೆಯ ಗಂಡಸರ ನಿರುದ್ಯೋಗ, ಕುಡಿತ, ಅಂತಹ ಬಡತನದಲ್ಲಿಯೂ ಮಕ್ಕಳನ್ನು ಹೆರುತ್ತಲೇ ಹೋಗುವುದು, ಹುಟ್ಟಿದ ಮಕ್ಕಳನ್ನು ದೇವರೇ ಬೆಳೆಸುವನು ಎನ್ನುವ ನಂಬಿಕೆ. ಆದರೆ ಆ ಚಿತ್ರವನ್ನು ನೋಡುವಾಗ ನೋಡುಗ ಏನು ಫೀಲ್ ಮಾಡಬೇಕು ಎನ್ನುವುದು ಸ್ಪಷ್ಟವಾಗುವುದಿಲ್ಲ. ಈ ಬಡವರ ಬಗ್ಗೆ ಕರುಣೆ ಪಡಬೇಕೇ? ವ್ಯವಸ್ಥೆಯ ಬಗ್ಗೆ ಸಿಟ್ಟಿಗೇಳಬೇಕೇ? ಬಡತನವನ್ನು ಈ ರೀತಿ ತೋರಿಸುವುದರಿಂದ ಏನಾಗುವುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.

ಗರಪಾ ನಂತರ ಹೊಸೆ ಮತ್ತೆ ಥ್ರಿಲರ್‍ಗೆ ಮರಳಿದರು. ಟ್ರೋಪಾ ದಿ ಎಲೀಟ್‍ನ ಯಶಸ್ಸಿನ ನಂತರ ಅದರ ಮುಂದುವರಿಕೆಯ ಇನ್ನೊಂದು ಚಿತ್ರ ಮಾಡುತ್ತಾರೆ. ಟ್ರೊಪಾ ದಿ ಎಲೀಟ್ 2, ದಿ ಎನೆಮಿ ವಿದಿನ್ (ತನ್ನೊಳಗಿನ ವೈರಿ). ಇದೂ ಅದ್ಭುತ ಯಶಸ್ಸನ್ನು ಕಂಡಿತು. ಮೊದಲ ಚಿತ್ರ ಒಂದು ಮಾದಕ ವಸ್ತುವಿನ ಅಪರಾಧ ಜಗತ್ತಿಗೆ ಸೀಮಿತವಾಗಿದ್ದರೆ, ಎರಡನೇ ಚಿತ್ರ ಬ್ರೇಝಿಲ್‍ನ ರಾಜಕೀಯದ ಬಗ್ಗೆ ಮಾತನಾಡಿತು. ರಾಜಕಾರಣಿ, ಪೊಲೀಸ್ ವ್ಯವಸ್ಥೆ ಮತ್ತು ಮಾಧ್ಯಮಗಳು ಸೇರಿ ದೇಶವನ್ನು ಹೇಗೆ ಕೊಳ್ಳೆಹೊಡಯುತ್ತಿವೆ ಎನ್ನುವುದನ್ನು ಕಣ್ಣುಮುಂದಿಟ್ಟಿತು. ಟಿವಿ ಪರದೆಯ ಮುಂದೆ ಕಿರುಚಾಡುವ, ದೇಶಭಕ್ತಿಯ ಬಗ್ಗೆ ಭಾವೋದ್ರೇಕದಿಂದ ಭಾಷಣ ಬಿಗಿಯುವ ಸುದ್ದಿ ನಿರೂಪಕನನ್ನು ನೋಡಿದರೆ ನಮ್ಮಲ್ಲಿ ಇಂದು ಆಗುತ್ತಿರುವುದು ಆ ದೇಶದಲ್ಲಿ ಮುಂಚೆಯೇ ಆಗಿತ್ತು ಎನ್ನುವುದು ತಿಳಿಯುತ್ತದೆ. ಇದರೊಂದಿಗೆ ಕ್ಯಾಪ್ಟನ್ ನಸಿಮೆಂಟೋನ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲೂ ಅನೇಕ ಬದಲಾವಣೆಗಳಾಗಿವೆ. ಮೊದಲ ಸಿನೆಮಾದಲ್ಲಿ ಮಾದಕವಸ್ತುಗಳ ವ್ಯಾಪಾರ ಮಾಡುವವರೇ ಶತ್ರುಗಳಾಗಿದ್ದರು ಆದರೆ ಇಲ್ಲಿ ಶತ್ರುಗಳು ಇನ್ನಷ್ಟು ಬಲಶಾಲಿಯಾಗಿದ್ದಾರೆ; ವ್ಯವಸ್ಥೆಯೇ ಶತ್ರುವಾಗಿದೆ. ಇವರನ್ನು ಗುರುತಿಸಿ ಸದೆಬಡಿಯಬೇಕಿದೆ. ಥ್ರಿಲರ್ ಅಂಶಗಳನ್ನು ಇಟ್ಟುಕೊಂಡೇ, ಒಂದು ನೈಜ ಕಥೆಯನ್ನು ಹೆಣೆದು ನೋಡುಗರನ್ನು ದಂಗುಬಡಿಸುವಲ್ಲಿ ಹೊಸೆ ಪಡಿಲ್ಯಾ ಯಶಸ್ವಿಯಾದರು.

ಈ ಎರಡು ಚಿತ್ರಗಳ ಯಶಸ್ಸಿನ ನಂತರ ಹಾಲಿವುಡ್ ಅವರನ್ನು ಕರೆಯಿತು. ಸೋನಿ ಪಿಕ್ಚರ್ಸ್ ಅವರಿಗೆ ನಿರ್ದೇಶಿಸಲು ಹಲವಾರು ಆಯ್ಕೆಗಳನ್ನು ನೀಡಿತಾದರೂ, ಅವರ ಆಯ್ಕೆ ಮಾಡಿದ್ದು ರೋಬೋಕಾಪ್ ಎನ್ನುವ 1987 ರಲ್ಲಿ ನಿರ್ಮಿಸಲಾದ ಸೈನ್ಸ್ ಫಿಕ್ಷನ್ ಚಿತ್ರದ ರಿಮೇಕ್ ಮಾಡುವುದನ್ನು. ಇವರ ರೋಬೋಕಾಪ್ 2014ರಲ್ಲಿ ಬಿಡುಗಡೆಯಾಯಿತು. ಮೂಲ ಚಿತ್ರಕ್ಕೆ ಹೋಲಿಸಿ ಕೆಲವರು ಹೊಗಳಿದರೆ ಕೆಲವರು ತೆಗಳಿದರು. ಹೊಸೆ ಪಡಿಲ್ಯಾ ತಮ್ಮೆಲ್ಲ ಕೌಶಲ್ಯವನ್ನು ಬಳಸಿ ಒಂದು ಅದ್ಭುತ ಚಿತ್ರವನ್ನು ನಿರ್ದೇಶಿಸಿದರಾದರೂ ರೋಬೋಕಾಪ್ ಒಂದು ಹಾಲಿವುಡ್ ಚಿತ್ರವಾಗಿಯೇ ಉಳಿಯುತ್ತದೆ. ಹಾಲಿವುಡ್ ಚಿತ್ರಗಳ ಚೌಕಟ್ಟನ್ನು ಹೊಸೆ ಪಡಿಲ್ಯಾ ಮೀರಲಾಗಲಿಲ್ಲ. ನಂತರ ಹಾಲಿವುಡ್‍ನಲ್ಲಿಯೇ ‘ಎಂಟೆಬ್ಬೆ’ ಎನ್ನುವ ಚಿತ್ರವನ್ನು ನಿರ್ದೇಶಿಸಿದರು. 1976ರಲ್ಲಿ ಫ್ರಾನ್ಸ್‍ನ ವಿಮಾನವನ್ನು ಪ್ಯಾಲೆಸ್ಟೇನಿನ ಮತ್ತು ಜರ್ಮನಿಯ ಕ್ರಾಂತಿಕಾರಿಗಳು (ಭಯೋತ್ಪಾದಕರು) ಹೈಜಾಕ್ ಮಾಡಿದ್ದು ಹಾಗೂ ಬಂಧಿತರನ್ನು ಬಿಡುಗಡೆಗೊಳಿಸಲು ಇಸ್ರೇಲೀ ಸೈನಿಕರು ಮಾಡಿದ ಕಾರ್ಯಾಚರಣೆಯ ವಾಸ್ತವದ ಸಂಗತಿಗಳ ಆಧಾರದ ಮೇಲೆ ಮಾಡಿದ ಚಿತ್ರ. ಇಸ್ರೇಲಿನ ರಾಜಕೀಯ ಮತ್ತು ಆಗಿನ ನಾಯಕರು ಹಾಸ್ಟೇಜ್, ಸ್ಥಿತಿಯನ್ನು ಹೇಗೆ ನಿಭಾಯಿಸಿದರು ಎನ್ನುವುದನ್ನು ಈ ಚಿತ್ರ ತೋರಿಸುತ್ತದೆ. ಅನೇಕರಿಗೆ ಇದು ಇಸ್ರೇಲ್ ವಿರೋಧಿ ಚಿತ್ರ ಎಂದೂ ಅನಿಸಿದೆ. ಹೈಜಾಕ್ ಮಾಡುವವರ ಮನಸ್ಥಿತಿ, ರಕ್ಷಣಾ ಕಾರ್ಯಾಚರಣೆ ಮಾಡುವವರ ಮನಸ್ಥಿತಿ ಮತ್ತು ವಿಶ್ವ ರಾಜಕೀಯ ಹೇಗೆ ಕೆಲಸ ಮಾಡುತ್ತೆ ಎಂದು ಸೂಚ್ಯವಾಗಿ ತೋರಿಸುವ ಈ ಚಿತ್ರ ಖಂಡಿತವಾಗಿಯೂ ಉತ್ತಮ ಚಿತ್ರವೇ. ಆದರೂ ಈ ಚಿತ್ರದ ಮೂಲಕ ಹೊಸದೇನು ಹೇಳುತ್ತಿದ್ದಾರೆ ಹೊಸೆ ಪಡಿಲ್ಯಾ ಎನ್ನುವ ಪ್ರಶ್ನೆ ಎದುರಾಗುತ್ತದೆ. ಹಾಲಿವುಡ್‍ನಲ್ಲಿ ನಿರ್ಮಿಸಿದ ಈ ಎರಡೂ ಚಿತ್ರಗಳು ಉತ್ತಮವಾಗಿದ್ದರೂ, ಬ್ರೆಝಿಲ್‍ನಲ್ಲಿ ನಿರ್ದೇಶಿಸಿದ ಚಿತ್ರಗಳಲ್ಲಿ ಕಂಡುಬಂದ ಕಚ್ಚಾತನ, ಆ ಎನರ್ಜಿ ಕಂಡುಬರುವುದಿಲ್ಲ. ಹಾಲಿವುಡ್‍ಗೆ ಹೋಗಿ ಹೋಸೆ ತನ್ನತನವನ್ನು ಕಳೆದುಕೊಂಡರೇ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಇವುಗಳೊಂದಿಗೆ ಕೊಲಂಬಿಯಾದ ಮಾದಕವಸ್ತುಗಳ ಸರದಾರ ಪಾಬ್ಲೊ ಎಸ್ಕೋಬಾರ್ ಅವನ ಜೀವನಾಧಾರಿತ ‘ನಾರ್ಕೋಸ್’ ಎನ್ನುವ ಯಶಸ್ವೀ ಟಿವಿ ಸೀರಿಸ್ ಅನ್ನು ನಿರ್ದೇಶಿಸಿದರು. ಈಗ ಮಾರ್ಷಿಯಲ್ ಆರ್ಟ್ ಜ್ಯು-ಜಿಟ್ಸು ಬಗ್ಗೆ ಚಿತ್ರ ನಿರ್ದೇಶಿಸಲಿದ್ದಾರೆಂದು ಸುದ್ದಿ ಬಂದಿದೆ. ನಾನಂತೂ ಕಾಯುತ್ತಿರುವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ ಜನರ ಮನಸ್ಸಿನಲ್ಲಿ ಅಪನಂಬಿಕೆ ಸೃಷ್ಟಿಸಿದೆ: ಅಖಿಲೇಶ್ ಯಾದವ್

0
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಆಗ್ರಹಿಸಿದ್ದು, ಇವಿಎಂಗಳನ್ನು ನೇರವಾಗಿ ಉಲ್ಲೇಖಿಸದೆ ಈ ಯಂತ್ರಗಳು ಮತ್ತು ಮತದಾನದ ಫಲಿತಾಂಶಗಳು ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಮೂಡಿಸಿವೆ...