ಚುನಾವಣೆ ನಡೆಯುವ ರಾಜ್ಯಗಳಲ್ಲಿ ಬಿಜೆಪಿಯು ಯಾವಾಗಲೂ ತನ್ನ ಗೆಲುವಿನ ಕಾರ್ಯತಂತ್ರವನ್ನು ಅನಾವರಣಗೊಳಿಸುತ್ತದೆ. ಅದೆಂದರೆ, ಕೋಮುಗಲಭೆಗಳು. ಚುನಾವಣಾ ಗೆಲುವನ್ನು ಖಾತರಿಪಡಿಸಲು ಕೋಮು ಹಿಂಸಾಚಾರವನ್ನು ಒಂದು ಪರಿಣಾಮಕಾರಿ ಸಾಧನವಾಗಿ ಬಳಸಬಹುದೇ ಎಂಬ ಸಂಶಯ ಇದ್ದರೆ, ಕಳೆದ ಎರಡು ತಿಂಗಳಿಂದ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ನಡೆಯುತ್ತಿರುವ ಹಿಂಸಾಚಾರವನ್ನು ನೋಡಿದರೆ ಈ ಸಂಶಯ ನಿವಾರಣೆಯಾಗಬಹುದು.
ಕಳೆದ ಎರಡು ದಶಕಗಳಿಂದ ಬಿಜೆಪಿಯು ಅಲ್ಪಸಂಖ್ಯಾತರ ವಿರುದ್ಧ ಹಿಂದೂಗಳ ದೊಡ್ಡ ಜನವಿಭಾಗಗಳನ್ನು ಧ್ರುವೀಕರಣಗೊಳಿಸಲು ಚಿಕ್ಕಪ್ರಮಾಣದ ಕೋಮು ಹಿಂಸಾಚಾರವನ್ನು ಭಾರತದ ವಿವಿಧ ಭಾಗಗಳಲ್ಲಿ ಬಳಸುತ್ತಾಬಂದಿದೆ. ಗುಜರಾತಿನಲ್ಲಿ 2002ರಲ್ಲಿ ನಡೆದಿದ್ದು ಮತ್ತು 2013ರಲ್ಲಿ ಮುಜಾಫರ್ ನಗರದಲ್ಲಿ ಹಲವರು ಸತ್ತು, ನೂರಾರು ಕುಟುಂಬಗಳು ನಾಶವಾದ ಗಲಭೆಗಳಿಗೆ ಹೋಲಿಸಿದಾಗ ಈ ಚಿಕ್ಕ ಪ್ರಮಾಣದ ಗಲಭೆಗಳು ಬೇಗನೇ ಸಾರ್ವಜನಿಕ ನೆನಪಿನಿಂದ ಮಾಯವಾಗುತ್ತವೆ. ಮಾಧ್ಯಮಗಳು ಮತ್ತು ಸಾರ್ವಜನಿಕರು ಇಂತಹ ಗಲಭೆಗಳನ್ನು ಸತ್ತವರ ಸಂಖ್ಯೆ, ಗಂಭೀರವಾಗಿ ಗಾಯಗೊಂಡವರು ಮತ್ತು ಆದ ನಷ್ಟದಿಂದ ತೂಗಿ ನೋಡುತ್ತಾರೆ.
ಯಾವತ್ತೂ ಮುಚ್ಚಿಹೋಗುವ ವಿಷಯವೆಂದರೆ, ಪ್ರತೀ ಸಲ ಇಂತಹ ಕಡಿಮೆ ಪ್ರಮಾಣದ ಕೋಮುಗಲಭೆಗಳ ಸಂದರ್ಭಗಳಲ್ಲಿ ಬಹುಸಂಖ್ಯಾತವಾದಿಗಳ ಆಕ್ರಮಣಕಾರಿ ಪರಿಸರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ತಾತ್ಕಾಲಿಕವಾಗಿಯಾದರೂ ಸ್ಥಳಾಂತರಗೊಳ್ಳುವುದು.
2013ರ ಮುಜಾಫರ್‌ಪುರ ಗಲಭೆಗಳ ನಂತರ ಪಶ್ಚಿಮ ಉತ್ತರ ಪ್ರದೇಶದಲ್ಲಿ ಕನಿಷ್ಟ 60,000 ಮುಸ್ಲಿಮರು ಸ್ಥಳಾಂತರಗೊಂಡರು. ಈ ಗಲಭೆಗಳಲ್ಲಿ ನಿರ್ವಸಿತಗೊಂಡ ಜನರಿಂದಾಗಿ ಆ ಪ್ರದೇಶ ಜನಸಂರಚನೆಯಲ್ಲಿ ಗಮನಾರ್ಹವಾದ ಬದಲಾವಣೆಗಳಾದವು. ಮೊದಲೇ ಪ್ರತ್ಯೇಕೀಕರಣಗೊಂಡು ಬದುಕುತ್ತಿದ್ದ ಅಲ್ಪಸಂಖ್ಯಾತರು ಇನ್ನಷ್ಟು ಪ್ರತ್ಯೇಕವಾಗಿ, ಗೆಟ್ಟೋಗಳಂತ ಕೊಳಚೆ ಪ್ರದೇಶಗಳಲ್ಲಿ ಬದುಕಬೇಕಾದರೆ, ಬಹುಸಂಖ್ಯಾತ ಹಿಂದೂಗಳು ಜಾತಿಗೀತಿ ಭೇದವಿಲ್ಲದೆ, ಮೂಲತಃ ನಮ್ಮದಲ್ಲದ ಜಮೀನುಗಳ ಮೇಲೆ ತಮ್ಮ ಹಕ್ಕು ಸ್ದಾಪನೆ ಮಾಡಿದರು. ಈ ಗಲಭೆಗಳು ಸಮುದಾಯಗಳ ನಡುವೆ ದ್ವೇಷ ಬಿತ್ತಿ ಬೆಳೆ ತೆಗೆಯಲು ಬಯಸುವವರು ಬಿತ್ತಿದ ಮೊದಲ ಬೀಜಗಳಾದವು.
ಅಲ್ಪಸಂಖ್ಯಾತ ಸಮುದಾಯದ ಕೆಲವು ರಾಜಕೀಯ ಜನವಿಭಾಗಗಳು ಇಂತಹ ಆಕ್ರಮಣಗಳ ಎದುರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಕಾದಾಡಿದಂತೆಲ್ಲಾ, ಗಲಭೆಗ್ರಸ್ತ ನಗರಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಸ್ಲಿಮರನ್ನು ಮುಖ್ಯ ವಾಹಿನಿಯಿಂದ ಇನ್ನಷ್ಟು ದೂರಮಾಡಲು ಹಿಂದೂತ್ವದ ಗುಂಪುಗಳು ಕಳೆದ ದಶಕದಿಂದ ಅಪಪ್ರಚಾರ ಅಭಿಯಾನದಲ್ಲಿ ತೊಡಗಿಕೊಂಡಿವೆ. ಈ ಅರೆಬೆಂದ ಹಿಂದೂತ್ವದ ಗುಂಪುಗಳು- ಬಿಜೆಪಿ ನಾಯಕರು, ಶಾಸಕರು, ಸಂಸತ್ ಸದಸ್ಯರಿಂದ ಪ್ರತ್ಯಕ್ಷ, ಪರೋಕ್ಷ ಬೆಂಬಲ ಪಡೆಯುತ್ತಾ ಬಂದಿವೆ.
ಇಂತಹ ಕೋಮುಗಲಭೆಗಳು ನಡೆದ ತಕ್ಷಣದಲ್ಲಿ ಕೆಲವು ಬಿಜೆಪಿ ನಾಯಕರು ಕೋಪವನ್ನು ಶಮನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಕೋಮುಭಾವನೆಗಳನ್ನು ಇನ್ನಷ್ಟು ಉದ್ರೇಕಿಸುವ ಕೆಲಸ ಮಾಡುವುದನ್ನು ಕಾಣಬಹುದು. ಇದೇ ಹೊತ್ತಿನಲ್ಲಿ ಬಾಲಂಗೋಚಿ ಮಾಧ್ಯಮಗಳು ನಾವು ತಿಳಿದುಕೊಂಡಿರುವ “ಜಾತ್ಯತೀತ ಸಾಮಾನ್ಯ ವಿವೇಕ”ಕ್ಕೆ ಹಾನಿ ಮಾಡುವುದರಲ್ಲಿ ನಿರತವಾಗಿರುತ್ತವೆ. ಬಿಜೆಪಿ ನಾಯಕರು ಮತ್ತು ಇತರ ಹಿಂದೂತ್ವದ ಪುಡಾರಿಗಳು ಮಾಡುವ ಇಂತಹ ದುಷ್ಕೃತ್ಯಗಳು ಯಾವುದೇ ಶಿಕ್ಷೆ ಇಲ್ಲದೆ, ಕೇಸರಿ ಪಕ್ಷದ ಉನ್ನತ ಮಟ್ಟದ ಬೆಂಬಲದೊಂದಿಗೇ ಸಾಮಾನ್ಯ ಎಂಬಂತೆ ನಡೆಯುತ್ತಿವೆ ಎಂಬುದನ್ನು ಎಲ್ಲರೂ ಒಪ್ಪಬಹುದು. ಅವರು ತಮ್ಮ ಚುನಾವಣಾ ಪ್ರಚಾರಗಳಲ್ಲೂ, ಪ್ರಣಾಳಿಕೆಗಳಲ್ಲೂ ತಮ್ಮ ಮುಸ್ಲಿಂ ದ್ವೇಷದ ಪ್ರದರ್ಶನ ಮಾಡುವುದಕ್ಕೆ ಯಾವತ್ತೂ ಹಿಂಜರಿಯುವುದಿಲ್ಲ.
ಇಂತಹ ಆಕ್ರಮಣಕಾರಿ ಅಭಿಯಾನಗಳು ಇಂತಹ ಕೋಮುಗಲಭೆಗಳ ಸಾಮಾನ್ಯ ಸೂತ್ರದಾರರಾದ ಬಜರಂಗದಳ, ಶ್ರೀರಾಮ ಸೇನೆ ಇತ್ಯಾದಿ ಗುಂಪುಗಳನ್ನು ರಕ್ಷಿಸಲು ಬಿಜೆಪಿ ನಾಯಕರಿಗೆ ನೆರವಾಗುತ್ತವೆ. ಈ ಹಿಂದೂತ್ವದ ಅಭಿಯಾನಗಳನ್ನು ಬೇರಾವುದೇ ಸಂದರ್ಭದಲ್ಲಿ ಕೋಮು ನೆಲೆಯಲ್ಲಿ ಯೋಚನೆ ಮಾಡದ ಹಿಂದೂಗಳಲ್ಲಿಯೂ ಇವು ಒಂದು ರೀತಿಯ ಮುಸ್ಲಿಂ ವಿರೋಧಿ ಸಹಮತವನ್ನು ತಾತ್ಕಾಲಿಕವಾಗಿಯಾದರೂ ಹುಟ್ಟಿಸುವ ಉದ್ದೇಶ ಹೊಂದಿವೆ.
ಚಿಕ್ಕ ಪ್ರಮಾಣದ ಕೋಮುಗಲಭೆಗಳನ್ನು ಎಬ್ಬಿಸುವುದು ಮತ್ತು ನಂತರದಲ್ಲಿ ಅಪಪ್ರಚಾರ ಅಭಿಯಾನ ನಡೆಸುವುದು, ಎಲ್ಲರ ವಿಕಾಸದ ಪುಂಗಿಯೂದುವ ಮೋದಿ ನೇತೃತ್ವದ ಬಿಜೆಪಿಗೆ ಚುನಾವಣೆ ಗೆಲ್ಲಲು ಒಂದು ಅನುಕೂಲಕರ ಸುಲಭ ಸಾಧನವಾಗಿದೆ.
ಸ್ಪಷ್ಟ ವಿನ್ಯಾಸ
ಕಳೆದ ಎರಡು ತಿಂಗಳುಗಳಲ್ಲಿ ನಡೆದ ಕೋಮುಗಲಭೆಗಳನ್ನು ನೋಡಿದಲ್ಲಿ ಒಂದು ವಿನ್ಯಾಸ ಇರುವುದನ್ನು ನಾವು ಸ್ಪಷ್ಟವಾಗಿ ಗಮನಿಸಬಹುದು. ಮೊದಲನೆಯದಾಗಿ, ಹಿಂದೂತ್ವದ ಏಜೆಂಟರು ಮೊದಲ ಪ್ರಚೋದಕರಾಗಿರುತ್ತಾರೆ. ಇದರ ವಿಧಾನ- ಮಸೀದಿಗಳ ಎದುರು ಆಕ್ರಮಣಕಾರಿ ಮನೋಭಾವದ ಮೆರವಣಿಗೆ, ಯಾವನೋ ತಲೆಕೆಟ್ಟವನಂತೆ ಬಿಂಬಿಸಲಾಗುವ ಕಾರ್ಯಕರ್ತನ ಸಾಮಾಜಿಕ ಜಾಲತಾಣಗಳ ಅವಹೇಳನಕಾರಿ ಪೋಸ್ಟು, ಎರಡು ಸಮುದಾಯಗಳ ನಡುವಿನ ವೈಯಕ್ತಿಕ ಕಚ್ಚಾಟಗಳಿಗೆ ಕೋಮು ಬಣ್ಣ ಹಚ್ಚುವುದು, ಅವುಗಳು ಎಬ್ಬಿಸುವ ಚಿಕ್ಕ ಪ್ರಮಾಣದ ಕೋಮುಗಲಭೆಗಳಲ್ಲಿ ಕದಡಿದ ವಾತಾವರಣವನ್ನು ಬಳಸಿಕೊಂಡು ಸಮುದಾಯಗಳ ನಡುವೆ ದ್ವೇಷವನ್ನು ಹರಡುವುದು- ಇವೆಲ್ಲವೂ ಕೋಮುಗಲಭೆಗಳನ್ನು ಎಬ್ಬಿಸುವ ವ್ಯವಸ್ಥಿತವಾದ ಕುತಂತ್ರಗಳು ಎಂಬುದು ಸ್ಪಷ್ಟವಾಗಿವೆ.
ಎರಡನೆಯದಾಗಿ, ಈ ಕೋಮುಗಲಭೆಗಳು ನಡೆಯುವ ದಿನಗಳೂ ಸ್ಪಷ್ಟವಾಗಿವೆ. ರಾಮನವಮಿ, ಹನುಮಾನ್ ಜಯಂತಿ, ಈದ್ ಇತ್ಯಾದಿಗಳು ಈ ಆಕ್ರಮಣಕೋರರಿಗೆ ಸೂಕ್ತವಾದ ಸಂದರ್ಭಗಳಾಗಿವೆ.
ಮೂರನೆಯದಾಗಿ, ಈ ಚಿಕ್ಕ ಪ್ರಮಾಣದ ಕೋಮುಗಲಭೆಗಳು ಕಂಡುಬಂದ ಸ್ಥಳಗಳೆಲ್ಲವೂ, ಈ ವರ್ಷ ಅಥವಾ ಮುಂದಿನ ವರ್ಷ ವಿಧಾನಸಭಾ ಅಥವಾ ಮುನಿಸಿಪಲ್ ಚುನಾವಣೆಗಳು ನಡೆಯಲಿರುವ ರಾಜ್ಯಗಳಲ್ಲಿವೆ. ಚುನಾವಣೆ ನಡೆಯಲಿರುವ ಗುಜರಾತಿನ ಮೂರು ನಗರಗಳು ಕೋಮುಗಲಭೆಗಳನ್ನು ಕಂಡವು. ಮುನಿಸಿಪಲ್ ಚುನಾವಣೆಗೆ ಮೊದಲು ದಿಲ್ಲಿಯ ಜಹಾಂಗೀರ್ ಪುರಿಯಲ್ಲಿ ಕೋಮುಗಲಭೆ ನಡೆಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗಮನಾರ್ಹ ಗೆಲುವು ಸಾಧಿಸಿದ ಬಳಿಕ ಬಿಜೆಪಿಯು ವ್ಯವಸ್ಥಿತವಾಗಿ ನಡೆಸಿದ ಕೋಮು ಅಪಪ್ರಚಾರದ ಕಾರಣದಿಂದ ಈಶಾನ್ಯ ದಿಲ್ಲಿಯಲ್ಲಿ ಅತ್ಯಂತ ತೀವ್ರ ಕೋಮುಗಲಭೆಗಳು ನಡೆದವು. 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾಂಗ್ರೆಸ್ ಆಡಳಿತದ ರಾಜಸ್ಥಾನದ ಅಲ್ವಾರ್ ಮತ್ತು ಕರೌಲಿಯಲ್ಲಿ, ಮತ್ತು ತೀರಾ ಇತ್ತೀಚೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಜೋಧ್‌ಪುರ ಕ್ಷೇತ್ರದಲ್ಲಿಯೇ ಕೋಮು ಗಲಭೆಗಳು ನಡೆದವು. 2023ರಲ್ಲಿಯೇ ಚುನಾವಣೆ ನಡೆಯಲಿರುವ ಕರ್ನಾಟಕದ ಹುಬ್ಬಳ್ಳಿಯಲ್ಲಿ ವಾಟ್ಸಾಪ್ ಪೋಸ್ಟ್ ಒಂದರ ಕಾರಣದಿಂದ ಮತ್ತು ಬೆಂಗಳೂರಿನಲ್ಲೂ ಅಪಪ್ರಚಾರದ ಕಾರಣದಿಂದ ಇದೇ ಆಯಿತು. ಮುಂದಿನ ವರ್ಷವೇ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲೂ ಇದೇ ಕತೆ.
ಇದೇ ಹೊತ್ತಿನಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ಣಾಯಕ ಕ್ರಮ ಕೈಗೊಳ್ಳುತ್ತಿರುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಅಲ್ಲಿಯೂ ಈ ವರ್ಷದ ಮೊದಲಿಗೆ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಹಲವಾರು ಸಣ್ಣ ಪ್ರಮಾಣದ ಕೋಮು ಘರ್ಷಣೆಗಳು ನಡೆದಿದ್ದವು. ಎಡನೇ ಬಾರಿಗೆ ಗೆದ್ದ ಆದಿತ್ಯನಾಥ ಎಲ್ಲಾ ರೀತಿಯ ತೊಂದರೆ ಎಬ್ಬಿಸುವವರ ವಿರುದ್ಧ ಕಠಿಣ ಕ್ರಮದ ಸಂದೇಶ ನೀಡಿರುವುದು, ಚುನಾವಣೆಯ ವೇಳೆ ನೀಡಿದ್ದ ಕಾನೂನು ಮತ್ತು ಶಿಸ್ತಿನ ಭರವಸೆಯನ್ನು ಉಳಿಸಿಕೊಳ್ಳುವಂತೆ ತೋರಿಸಿಕೊಳ್ಳಲು ಮತ್ತು ಗಲಭೆಗಳಿಗೆ ಇತರ ಪಕ್ಷಗಳು ಮುಸ್ಲಿಮರಲ್ಲಿನ ಕಿಡಿಗೇಡಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದು ಕಾರಣ ಎಂಬಂತೆ ಪ್ರಚಾರ ಮಾಡಲು ಇದನ್ನು ಮಾಡಲಾಗಿದೆ.
ನಾಲ್ಕನೆಯದಾಗಿ, ಕೋಮುಗಲಭೆಗಳು ನಡೆದಿರುವುದು ಮುಖ್ಯವಾಗಿ ಪ್ರತಿಪಕ್ಷಗಳು ಸಾಕಷ್ಟು ಪ್ರಬಲವಾಗಿರುವ ಕಡೆಗಳಲ್ಲಿ. ಉದಾಹರಣೆಗೆ, ಗುಜರಾತಿನ ಹಿಮ್ಮತ್‌ನಗರ, ಆನಂದ್ ಮತ್ತು ಖಂಬಾತ್‌ನಲ್ಲಿ ಹಿಂದೂ-ಮುಸ್ಲಿಂ ಘರ್ಷಣೆಗಳು ನಡೆದವು. ಈ ಮೂರೂ ಕಡೆಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಲ್ಪ ಅಂತರದಿಂದ ಬಿಜೆಪಿಯ ಎದುರು ಸೋತಿತ್ತು. ಅದೇ ರೀತಿ ಮಧ್ಯಪ್ರದೇಶದಲ್ಲಿ ಹೆಚ್ಚಿನ ಗಲಭೆಗಳು ನಿಮಾದ್ ಪ್ರದೇಶದಲ್ಲಿ ನಡೆದವು. ಅಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನಿರೀಕ್ಷಿತವಾಗಿ ಉತ್ತಮ ಸಾಧನೆ ತೋರಿತ್ತು. ಖಾರ್ಗೋನ್ ಪ್ರದೇಶದ ಗಲಭೆಗಳು ಇಡೀ ರಾಜ್ಯದಲ್ಲಿ ಹಿಂದೂತ್ವ ಪ್ರಚಾರಾಭಿಯಾನದ ಆರಂಭ ಬಿಂದುವಾಗಿತ್ತು. ಒಟ್ಟಿನಲ್ಲಿ ಈ ವಿನ್ಯಾಸವನ್ನು ಗಮನಿಸಿದರೆ, ಮೂಲ ಉದ್ದೇಶ ಕೋಮು ಭಾವನೆಯ ಮಡಕೆಯು ಸದಾ ಕುದಿಯುತ್ತಲೇ ಇರುವಂತೆ ನೋಡಿಕೊಳ್ಳುವುದು.
ಅಶೋಕ್ ಗೆಹ್ಲೋಟ್ ಸರಕಾರದ ವಿರುದ್ಧ ಬಿಜೆಪಿಯ ಸೀಮಿತ ಅಭಿಯಾನವು ಜಾಗರೂಕತೆಯಿಂದ ಯೋಜಿಸಿದಂತೆ ಕಾಣುತ್ತದೆ. ಸ್ವತಃ ಗಲಭೆ ಎಬ್ಬಿಸಿದ ಬಹುತೇಕ ಬಿಜೆಪಿ ನಾಯಕರು ಗಲಭೆ ನಿಯಂತ್ರಿಸಲು ಸರಕಾರ ವಿಫಲವಾಗಿದೆ ಎಂದೂ, ಅದು ಮುಸ್ಲಿಮರನ್ನು ಓಲೈಸುತ್ತಿದೆ ಎಂದೂ ಆರೋಪಿಸಿದ್ದಾರೆ. ಅವರು ಇದನ್ನು ಟಿವಿ ಚರ್ಚೆಗಳಲ್ಲಿ ಮತ್ತು ಬೇರೆ ವೇದಿಕೆಗಳಲ್ಲಿ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಇದು 2013ರಲ್ಲಿ ಉತ್ತರಪ್ರದೇಶದ ಮುಜಾಫರ್ ಪುರ್‌ನ ಮುಸ್ಲಿಂ ವಿರೋಧಿ ಗಲಭೆಗಳನ್ನು ಹಿಂದೂತ್ವ ಶಕ್ತಿಗಳು ಜಾಗರೂಕತೆಯಿಂದ, ಸೂಕ್ಷ್ಮವಾಗಿ ಯೋಜಿಸಿದ್ದವು ಎಂದು ಹೇಳಲು ಸಾಕಷ್ಟು ಪುರಾವೆಗಳಿದ್ದರೂ, ಬಿಜೆಪಿಯು ಮುಲಾಯಂ ಸಿಂಗ್ ಯಾದವ್ ಸರಕಾರವನ್ನು ದೂರಿತ್ತು. ಮುಲಾಯಂ ಸಿಂಗ್ ಸರಕಾರವು ಹಿಂದೂಗಳನ್ನು ಕಡೆಗಣಿಸಿ, ಮುಸ್ಲಿಂ ಪರ ಧೋರಣೆಗಳನ್ನು ಅನುಸರಿಸುತ್ತಿದೆ ಎಂದು ಅಪಪ್ರಚಾರ ಮಾಡಲು ಕೇಸರಿ ಪಕ್ಷವು ಈ ಗಲಭೆಗಳನ್ನು ವ್ಯಾಪಕವಾಗಿ ಬಳಸಿಕೊಂಡಿತ್ತು. 2022ರ ಚುನಾವಣೆಯಲ್ಲೂ ಪಕ್ಷವು ಈ ಅಪಪ್ರಚಾರದ ಮೇಲೆ ಬಹುವಾಗಿ ಅವಲಂಬಿಸಿತ್ತು.
ಬಿಜೆಪಿ ಆಡಳಿತವಿರುವ ಕರ್ನಾಟಕ, ಮಧ್ಯಪ್ರದೇಶ ಮತ್ತು ಗುಜರಾತ್‌ನಂತಹ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾದಾಗ ಅಲ್ಲಿನ ಮುಖ್ಯಮಂತ್ರಿಗಳ ವಿರುದ್ಧ ಒಂದು ಶಬ್ಧವನ್ನೂ ಆಡದ ಬಿಜೆಪಿ ನಾಯಕತ್ವವು, ಈ ಗಲಭೆಗಳಿಗಾಗಿ ಮುಸ್ಲಿಮರನ್ನು ಏಕಪಕ್ಷೀಯವಾಗಿ ದೂರುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಗುಜರಾತ್ 2002ರಿಂದ ಒಂದೇ ಒಂದು ಕೋಮುಗಲಭೆಯನ್ನೂ ಕಂಡಿಲ್ಲವೆಂದೂ, ಇಂತಹ ಶಾಂತಿಯ ಪರಿಸ್ಥಿತಿ ಕಾಯ್ದುಕೊಳ್ಳಲು ಬಿಜೆಪಿ ಆಡಳಿತಕ್ಕೆ ಮಾತ್ರ ಸಾಧ್ಯ ಎಂಬ ವಾದವನ್ನೂ ಗುಜರಾತಿನ ಹೆಚ್ಚಿನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇಲ್ಲಿ ಮುಸ್ಲಿಮರನ್ನು ಸಂಪೂರ್ಣವಾಗಿ ದಮನಿಸಿ ಬಾಯಿಮುಚ್ಚಿಸಲಾಗಿದೆ ಎಂಬುದು ಇಂತವರಿಗೆ ಗಂಭೀರ ವಿಷಯವಾಗಿ ಕಾಣುವುದಿಲ್ಲ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪವೇ ಅಂತರದಲ್ಲಿ ಸೋಲಿನಿಂದ ಪಾರಾದ ಬಳಿಕ ಮತ್ತೆ ತನ್ನ ಕಾಲದ ಪರೀಕ್ಷೆಗೆ ಒಳಪಟ್ಟ ಬಿಜೆಪಿ ಮತ್ತೆ ದ್ವೇಷದ ತಂತ್ರವನ್ನು ಅನುಸರಿಸುತ್ತಿದೆ. ಗುಜರಾತಿನಲ್ಲಿ ಕೋಮುಗಲಭೆಗಳು ನಡೆಯುವುದಿಲ್ಲ ಎಂದು ಹೇಳುತ್ತಾ ಬಂದಿರುವ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಒಂದೇ ತಿಂಗಳಲ್ಲಿ ಅಲ್ಲಿ ಮೂರು ಕೋಮುಗಲಭೆಗಳು ನಡೆದಿರುವುದನ್ನು ಹೇಗೆ ಸಮರ್ಥಿಸುತ್ತಾರೋ?!
ಇದನ್ನೂ ಓದಿ: ಕೋಮು ಗಲಭೆಗಳಿಂದ ಭಾರತದಲ್ಲಿ ಸ್ಥಳಾಂತರಗೊಂಡವರ ಕೆಲವು ಫೈಲ್ಸ್
ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯವು ಸಂಸತ್ತಿಗೆ ತಿಳಿಸಿದಂತೆ, 2016 ಮತ್ತು 2020ರ ನಡುವೆ ದೇಶದಾದ್ಯಂತ 3,399 ಕೋಮು ಅಥವಾ ಧರ್ಮಸಂಬಂಧಿ ಗಂಭೀರ ಗಲಭೆಗಳು ನಡೆದಿವೆ. ಇದೇ ಹೊತ್ತಿನಲ್ಲಿ ಒಟ್ಟು 2.76 ಲಕ್ಷ ಗಲಭೆಗಳು ನಡೆದಿವೆ. ಇದೊಂದು ಚಿಂತಾಜನಕ ಅಂಕಿಅಂಶ. ಇವುಗಳಲ್ಲಿ ಹೆಚ್ಚಿನವು ಚಿಕ್ಕ ಪ್ರಮಾಣದ ಯೋಜಿತ ಗಲಭೆಗಳು ಎಂದು ನಾವೀಗ ತಿಳಿದುಕೊಂಡಿದ್ದೇವೆ.
ಮೋದಿ ಪ್ರತಿಪಾದಿಸುವ “ಚತುರ ಆಡಳಿತ”ದ ಅರ್ಥವೆಂದರೆ, ಅವರು ನಾಯಕತ್ವ ವಹಿಸಿರುವ ಪಕ್ಷವು ಕೋಮು ಕುದುರೆಗಳನ್ನು ಏರಿ ಚುನಾವಣಾ ಜಯ ಗಳಿಸುವ ಇನ್ನಷ್ಟು ಚತುರ ವಿಧಾನವನ್ನು ಅನುಸರಿಸುತ್ತಿದೆ ಎಂದು.
-ಅಜೊಯ್ ಆಶೀರ್ವಾದ್ ಮಹಾಪ್ರಶಸ್ತ (ದಿ ವೈರ್)
ಕನ್ನಡಕ್ಕೆ: ನಿಖಿಲ್ ಕೋಲ್ಪೆ



Sent the Current News