ಇಂದು ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚಾದೂರ ಗ್ರಾಮದ ತಹಸೀಲ್ದಾರ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಎಂಬುವವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇಬ್ಬರು ಭಯೋತ್ಪಾದಕರು ಸರ್ಕಾರಿ ಕಚೇರಿಗೆ ನುಗ್ಗಿ ಅಲ್ಲಿನ ಉದ್ಯೋಗಿ ರಾಹುಲ್ ಭಟ್ ಅವರ ಹಣೆಗೆ ಗುಂಡಿಟ್ಟು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಭಯೋತ್ಪಾದಕರು ಅಲ್ಪಸಂಖ್ಯಾತ ಸಮುದಾಯದ ರಾಹುಲ್ ಭಟ್ ಎಂಬ ನೌಕರನ ಮೇಲೆ ಬುಡ್ಗಾಮ್‌ನ ಚಾದೂರ ತಹಸೀಲ್ದಾರ್ ಕಚೇರಿಯಲ್ಲಿ ಗುಂಡು ಹಾರಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ” ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
#Terrorists fired upon one employee namely Shri Rahul Bhat from #minority community in Tehsildar office Chadoora, #Budgam. He has been shifted to hospital.@JmuKmrPolice
— Kashmir Zone Police (@KashmirPolice) May 12, 2022
ವಲಸೆ ಕಾರ್ಮಿಕರು ಮತ್ತು ಸ್ಥಳೀಯ ಅಲ್ಪಸಂಖ್ಯಾತರ ಮೇಲೆ ಕಳೆದ ಎಂಟು ತಿಂಗಳಿನಿಂದ ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉದ್ದೇಶಿತ ದಾಳಿಗೆ ಇದು ಮತ್ತೊಂದು ಸೇರ್ಪಡೆಯಾಗಿದೆ. ಅಕ್ಟೋಬರ್ ತಿಂಗಳಿನಿಂದ ಹೆಚ್ಚಾಗಿ ಹೊರಗಿನಿಂದ ಉದ್ಯೋಗ ಅರಸಿ ಬಂದ ವಲಸಿಗರು ಮತ್ತು ಸ್ಥಳೀಯ ಕಾಶ್ಮೀರಿ ಪಂಡಿತರ ಮೇಲೆ ದಾಳಿಗಳಾಗುತ್ತಿವೆ ಎಂದು ವರದಿಯಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಕೊಲೆಯನ್ನು ಖಂಡಿಸಿದ್ದಾರೆ.
This young man had his entire life ahead of him & to know that his life was so cruelly extinguished today is tragic. Rest in peace Rahul Bhatt. pic.twitter.com/3OiM1UIRO7
— Omar Abdullah (@OmarAbdullah) May 12, 2022
ಅಕ್ಟೋಬರ್ ತಿಂಗಳ ಐದು ದಿನಗಳಲ್ಲಿ ಏಳು ನಾಗರಿಕರು ಕೊಲ್ಲಲ್ಪಟ್ಟಿದ್ದರು. ಅವರಲ್ಲಿ ಒಬ್ಬ ಕಾಶ್ಮೀರಿ ಪಂಡಿತ, ಒಬ್ಬ ಸಿಖ್ ಮತ್ತು ಇಬ್ಬರು ವಲಸೆ ಬಂದ ಹಿಂದೂಗಳಾಗಿದ್ದರು ಎಂದು ಎನ್‌ಡಿಟಿವಿ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ಥಳೀಯರನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ. ಕಾಶ್ಮೀರ ಪಂಡಿತರ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಪಂಡಿತರು ಬೀದಿಯಲ್ಲಿ ಕೊಲೆಯಾಗುತ್ತಿರುವಾಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದೆ.