ಮಳೆಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷ ಭರ್ಜರಿ ತಯಾರಿ ಮಾಡಿಕೊಂಡಿದೆ. ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರವೂ ಸೇರಿದಂತೆ ಹಲವು ವಿಷಯಗಳನ್ನಿಟ್ಟುಕೊಂಡು ವಾಗ್ದಾಳಿ ನಡೆಸಲು ಸಿದ್ಧವಾಗುತ್ತಿದೆ. ಇತ್ತ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಬಿಜೆಪಿಯೂ ತಯಾರಾಗಿದೆ. ಹೀಗೆ ಸದನ ಸಮರಕ್ಕೆ ಸಿದ್ಧವಾಗುತ್ತಿರುವ ಬಿಜೆಪಿಗೆ ಸಣ್ಣ ಪ್ರಮಾಣದ ಕೋರಂ ಸಮಸ್ಯೆ ಎದುರಾಗಿದೆ.
ಆಡಳಿತ ಪಕ್ಷಕ್ಕೆ ಈ ಸಮಸ್ಯೆ ಎದುರಾಗಲು ಪ್ರಮುಖ ಕಾರಣ, ಇನ್ನೂ ಆಗದ ಸಂಪುಟ ವಿಸ್ತರಣೆ. ಇಂತದ್ದೊಂದು ವಿಚಾರವೀಗ ವಿಧಾನಸೌಧದ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಮಳೆಗಾಲದ ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಬಿಜೆಪಿಯ ಕೆಲ ಹಿರಿಯ ಹಾಗೂ ಸಚಿವಾಕಾಂಕ್ಷಿ ಶಾಸಕರು ಸದನದ ಕಡೆ ಮುಖ ಮಾಡದೆ ಕುಳಿತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮರಳಿ ಸಚಿವರಾಗುವ ಆಸೆ ಹೊತ್ತಿದ್ದ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ತಿಪ್ಪಾರೆಡ್ಡಿ, ಕರುಣಾಕರ ರೆಡ್ಡಿ, ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಾಮನಿ, ರಾಜುಗೌಡ ನಾಯಕ್, ಎ.ರಾಮದಾಸ್ ಸೇರಿದಂತೆ ಅನೇಕರು ಸದನದಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ: ಬಿಎಸ್‌ವೈ ಕುಟುಂಬದ ವಿರುದ್ಧ ಭ್ರಷ್ಟಾಚಾರ ಪ್ರಕರಣ| ತನಿಖೆ ನಡೆಸಿ ವರದಿ ಸಲ್ಲಿಸಲು ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ 40% ಕಮಿಷನ್ ಆರೋಪ ಮತ್ತು ಆ ಹಿನ್ನೆಲೆಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಕಾರಣ ವಿವಾದವುಂಟಾಗಿ ವಿಪಕ್ಷ ಮತ್ತು ಜನರ ಒತ್ತಡದ ಮೇಲೆ ರಾಜೀನಾಮೆ ನೀಡಿದ್ದರು. ಇದರ ಬಳಿಕ ತಮ್ಮ ಮೇಲಿನ ಆರೋಪ ತೊಳೆದುಕೊಂಡು ಮರಳಿ ಬಂದಿದ್ದು, ಅವರ ಆಗಮನದ ಹೊತ್ತಿನಲ್ಲೇ ಸಂಪುಟ ವಿಸ್ತರಣೆ ಮಾತು ಕೇಳಿ ಬಂದಿತ್ತು.
ಈ ಎಲ್ಲ ಲೆಕ್ಕಾಚಾರಗಳಿಂದ ಈಶ್ವರಪ್ಪ ಮರಳಿ ಸಂಪುಟ ಸೇರಬಹುದೆಂಬ ನಿರೀಕ್ಷೆ ಇತ್ತು. ಆದರೆ ಮಳೆಗಾಲ ಅಧಿವೇಶನ ಸೋಮವಾರ ಆರಂಭವಾದರೂ ಸಂಪುಟದ ವಿಚಾರ ಮುಂದಕ್ಕೆ ಹೋಗದೆ ಇರುವುದು ಈಶ್ವರಪ್ಪನವರಿಗೆ ಬೇಸರ ತರಿಸಿದ್ದು, ಈ ಕಾರಣದಿಂದ ಅವರು ಸದನದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಮತ್ತೋರ್ವ ಸಚಿವಾಕಾಂಕ್ಷಿ, ಆಪರೇಷನ್ ಕಮಲದ ರೂವಾರಿ ರಮೇಶ್ ಜಾರಕಿಹೊಳಿ, ಸದನದ ಕಡೆ ಮುಖಮಾಡಿದ್ದರ ಬಗ್ಗೆ ನೆನಪೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರದ ಭಾಗವಾಗಿದ್ದ ವೇಳೆ ‘ಸಿಡಿ’ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ ಬಳಿಕವಂತೂ ಅವರು ವಿಧಾನಸೌಧದವನ್ನೇ ಮರೆತಂತೆ ಕಾಣುತ್ತಿದೆ ಎನ್ನುವುದು ಕೆಲವರ ಮಾತು.
ಇದನ್ನೂ ಓದಿ:ಉಡುಪಿ: ಹೆದ್ದಾರಿಯ ಅವ್ಯವಸ್ಥೆಯತ್ತ ಗಮನ ಸೆಳೆಯಲು ರಸ್ತೆ ಗುಂಡಿಯಲ್ಲೇ ಉರುಳುಸೇವೆ!
ಇವರೆಲ್ಲರ ನಡುವಲ್ಲಿ ಎಂ.ಪಿ. ರೇಣುಕಾಚಾರ್ಯ, ಲೆಕ್ಕಕ್ಕಿರಲಿ ಎನ್ನುವಂತೆ ಒಂದು ಬಾರಿ ಸದನಕ್ಕೆ ಬಂದು ಸಹಿಹಾಕಿ ಮತ್ತೆ ಕ್ಷೇತ್ರ ಸೇರಿಕೊಂಡಿದ್ದಾರೆ. ಇನ್ನುಳಿದಂತೆ ರಾಜೂಗೌಡ, ಆನಂದ್ ಮಾಮನಿ, ತಿಪ್ಪಾರೆಡ್ಡಿ, ಕರುಣಾಕರ ರೆಡ್ಡಿ, ಎ. ರಾಮದಾಸ್ ಅವರು ಬೇರೆ ಬೇರೆ ಕಾರಣಗಳನ್ನು ನೀಡಿ ಸದನದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿಗಳ ಹದಿಮೂರನೇ ದೆಹಲಿ ಪ್ರವಾಸದ ಬಳಿಕ, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ತಿಂಗಳ ಆರಂಭದಲ್ಲಿ ಸಂಪುಟ ವಿಸ್ತರಣೆಯಾಗಬೇಕಿತ್ತು. ಆದರೆ ಆ ಕಾಲ ಕೂಡಿಬಾರದ ಹಿನ್ನೆಲೆಯಲ್ಲಿ ಪದೇ ಪದೇ ಈ ವಿಚಾರ ಮುಂದೂಡಿಕೆ ಆಗುತ್ತಲೇ ಬಂದಿದೆ. 2023ರ ಚುನಾವಣೆ ಗಮನದಲ್ಲಿಟ್ಟುಕೊಂಡ ಆಡಳಿತ ಪಕ್ಷ, ಕೆಲ ಹಿರಿಯರನ್ನು ಸಂಪುಟದಿಂದ ಕೈಬಿಟ್ಟು, ಸಂಘಟನೆ ಮತ್ತು ಪಕ್ಷ ಸಿದ್ದಾಂತ ಹಿನ್ನೆಲೆ ಹೊಂದಿದವರಿಗೆ ಅವಕಾಶ ಕೊಡಲು ನಿರ್ಧರಿಸಿತ್ತು.
ಸಂಪುಟ ವಿಸ್ತರಣೆ ಆಗಲೇಬೇಕೆನ್ನುವುದು ಬೊಮ್ಮಾಯಿಯವರ ಮಹದಾಸೆ. ತಮ್ಮ ಅವಧಿ ಪೂರ್ಣಗೊಳ್ಳುವುದರೊಳಗಾಗಿ ಪೂರ್ಣ ಸಂಪುಟದೊಂದಿಗೆ ಕರ್ತವ್ಯ ನಿರ್ವಹಿಸಬೆಕೆನ್ನುವುದು ಅವರ ಆಸೆ. ಆದರೆ ಇಲ್ಲಿಯವರೆಗೂ ದೆಹಲಿ ಪ್ರಮುಖರು ಇದಕ್ಕೆ ‘ಅಸ್ತು’ ಎನ್ನದಿರುವುದು ಸಚಿವಾಕಾಂಕ್ಷಿಗಳನ್ನು ಕಂಗೆಡುವಂತೆ ಮಾಡಿದೆ. ಇದಕ್ಕೆ ಮತ್ತೊಂದು ಮೂಲ ಕಾರಣವೂ ಇದೆ.
ಇದನ್ನೂ ಓದಿ: ಬೆಂಗಳೂರು: ಅಕ್ರಮ ಕಟ್ಟಡದ ಪಟ್ಟಿಯಲ್ಲಿ ವಿಪ್ರೊ, ಕೊಲಂಬಿಯಾ ಆಸ್ಪತ್ರೆ, ಪ್ರೆಸ್ಟೀಜ್ ಕಂಪೆನಿಗಳು; ಈ ವರೆಗೆ ಮುಟ್ಟದ ಬಿಬಿಎಂಪಿ
ಸದ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನೂ ಒಳಗೊಂಡಂತೆ ಹಲವು ಸಚಿವರು ಹೆಚ್ಚುವರಿ ಖಾತೆಗಳನ್ನು ಹೊಂದಿದ್ದಾರೆ. ಮುಖ್ಯಮಂತ್ರಿಗಳ ಬಳಿಯೇ 8 ಖಾತೆ ಇದ್ದರೆ, ಡಾ ಸುಧಾಕರ್, ಅಶ್ವತ್ ನಾರಾಯಣ ಸೇರಿದಂತೆ ಇನ್ನು ಅನೇಕರಿಗೆ ಹೆಚ್ಚುವರಿ ಖಾತೆಗಳನ್ನು ನೀಡಲಾಗಿದೆ. ಇವೆಲ್ಲವೂ ಸಂಪುಟ ಸೇರಲು ಕಾದು ನಿಂತವರ ನಿದ್ದೆಗೆಡಿಸುವಂತೆ ಮಾಡಿದೆ.
ಇವೆಲ್ಲದರ ಜೊತೆಗೆ ಅಕಾಲಿಕವಾಗಿ ನಿಧನ ಹೊಂದಿದ ಸಚಿವ ಉಮೇಶ್ ಕತ್ತಿಯವರ ಖಾತೆಯನ್ನೂ ಒಳಗೊಂಡಂತೆ ಒಟ್ಟು 6 ಸ್ಥಾನಗಳು ಖಾಲಿ ಇವೆ. ಹೀಗಾಗಿ ಇಷ್ಟೆಲ್ಲ ಸ್ಥಾಗಳನ್ನು ಭರ್ತಿ ಮಾಡದೆ ಇಟ್ಟುಕೊಂಡು ಕಾಲಹರಣ ಮಾಡುತ್ತಿರುವುದೇಕೆ ಎನ್ನುವುದು ಮುನಿಸಿಕೊಂಡವರ ಅನಿಸಿಕೆಯಾಗಿರಬಹುದೆನ್ನುವ ಮಾತು ವಿಧಾನಸೌಧದಲ್ಲಿ ಕೇಳಿ ಬರುತ್ತಿದೆ. ಈ ಎಲ್ಲ ವಿಚಾರಗಳಿಂದ ಮನನೊಂದಿರುವ ಬಿಜೆಪಿಯ ಹಿರಿಯ ಹಾಗೂ ಸಚಿವಾಕಾಂಕ್ಷಿ ಶಾಸಕರು ಸದನಕ್ಕೆ ಬರುವ ಮನಸ್ಸು ಮಾಡುತ್ತಿಲ್ಲ ಎನ್ನಲಾಗುತ್ತಿದೆ.


