ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ 2024ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆಯನ್ನು ಆರಂಭಿಸಿದ್ದು, ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ದೇಶದಾದ್ಯಂತ 100 ದಿನಗಳ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಬಿಹಾರ ವಿಜಯದ ನಂತರ ವಿಶ್ರಾಂತಿ ಪಡೆಯದ ಜೆ.ಪಿ.ನಡ್ಡಾ ಶೀಘ್ರದಲ್ಲೇ 100 ದಿನಗಳ “ರಾಷ್ಟ್ರೀಯ ವಿಸ್ತ್ರಿತ್ ಪ್ರವಾಸ”ವನ್ನು ಕೈಗೊಳ್ಳಲಿದ್ದಾರೆ. 2024ರ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಪ್ರತಿ ರಾಜ್ಯಗಳಲ್ಲೂ ಪ್ರವಾಸ ಕೈಗೊಳ್ಳುವ ದಿನಗಳನ್ನು ವಿಂಗಡಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಫಲಿತಾಂಶ: ಜನ ಕೆಲವೊಮ್ಮೆ ಎರಡನೇ ಅವಕಾಶ ನೀಡುತ್ತಾರೆ- ಸೋನು ಸೂದ್
2019ರ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳ ಮೇಲೆ ಗಮನಹರಿಸಿ 2024ರಲ್ಲಿ ಅವುಗಳನ್ನು ಹೇಗೆ ಗೆಲ್ಲುವುದು ಎಂದು ಬಿಜೆಪಿ ಯೋಚಿಸುತ್ತಿರುವುದರ ಭಾಗವಾಗಿಯೇ ಜೆ.ಪಿ.ನಡ್ಡಾ ಈ ಪ್ರವಾಸವನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಹಾರ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರರಾದ ಜೆ.ಪಿ.ನಡ್ಡಾ, “ಪಕ್ಷದ ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿ ಮಾಡುವುದು, ಹೊಸ ಸಂಭಾವ್ಯ ಒಕ್ಕೂಟಗಳ ಬಗ್ಗೆ ಚರ್ಚಿಸುವುದು, ರಾಜ್ಯ ಸರ್ಕಾರಗಳ ಚಿತ್ರಣವನ್ನು ಸುಧಾರಿಸುವುದು, ವಿವಿಧ ಪ್ರಭಾವಿ ಗುಂಪುಗಳೊಂದಿಗೆ ಸಂವಹನ ನಡೆಸುವುದು, ಕೇಡರ್‌ನಲ್ಲಿ ಪಕ್ಷದ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ನೀಡುವುದು ಮತ್ತು ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ರಾಜ್ಯಗಳಲ್ಲಿನ ಸಮ್ಮಿಶ್ರ ಪಾಲುದಾರರೊಂದಿಗೆ ಸಂವಾದವನ್ನು ಪ್ರಾರಂಭಿಸುವುದು” ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ 3ನೇ ಅಲೆ ವ್ಯಾಪಕವಾಗಿದೆ- ಸತ್ಯೇಂದರ್ ಜೈನ್
“ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮತ್ತು ಅದರ ಗುರಿಗಳಲ್ಲಿ ತಂಡಗಳನ್ನು ಒಳಗೊಳ್ಳುವುದು, ಪಕ್ಷಕ್ಕೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ವಿವರವಾದ ವರದಿಯನ್ನು ನೀಡುವುದು ಮತ್ತು ವಿವಿಧ ಚಟುವಟಿಕೆಗಳಲ್ಲಿ ಏಕರೂಪತೆಯನ್ನು ತರುವುದು ಹಾಗೂ ದೇಶವನ್ನು ಸರ್ವೋಚ್ಚ ಮಾಡುವ ಉದ್ದೇಶದಿಂದ ಪಕ್ಷದ ಹೆಜ್ಜೆಗುರುತುಗಳನ್ನು ವಿಸ್ತರಿಸುವುದು ಈ ಪ್ರವಾಸದ ಉದ್ದೇಶ” ಎಂದು ಉನ್ನತ ಮೂಲದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಪ್ರವಾಸ ಕೈಗೊಳ್ಳಲಿರುವ ರಾಜ್ಯಗಳನ್ನು ಎ, ಬಿ, ಸಿ ಮತ್ತು ಡಿ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ವರ್ಗ ‘ಎ’ ಎಂದರೆ ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ಅಥವಾ ಸಮ್ಮಿಶ್ರ ಸರ್ಕಾರ ಇರುವ ರಾಜ್ಯಗಳನ್ನು ಒಳಗೊಂಡಿರುತ್ತದೆ. ಉದಾ: ನಾಗಾಲ್ಯಾಂಡ್, ಬಿಹಾರ, ಕರ್ನಾಟಕ, ತ್ರಿಪುರ ಮುಂತಾದ ಪ್ರಮುಖ ರಾಜ್ಯಗಳು.
ಇದನ್ನೂ ಓದಿ: ಹಸಿರು ಪಟಾಕಿ ಬಗ್ಗೆ ಗೊತ್ತಿಲ್ಲ ಎಂದ ಆರೋಗ್ಯ ಸಚಿವ ಸುಧಾಕರ್ !
‘ಸಿ’ ವರ್ಗವು ಲಕ್ಷದ್ವೀಪ, ಮೇಘಾಲಯ ಮತ್ತು ಮಿಜೋರಾಂನಂತಹ ಸಣ್ಣ ರಾಜ್ಯಗಳಿಗೆ ಸಂಬಂಧಿಸಿದ್ದು, ‘ಡಿ’ ವರ್ಗದಲ್ಲಿ ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಮತ್ತು ತಮಿಳುನಾಡಿನಂತಹ ಚುನಾವಣಾ ರಾಜ್ಯಗಳಿರುತ್ತವೆ.
ಉತ್ತರ ಪ್ರದೇಶವನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ 2-3 ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಟ್ರಂಪ್ ನಿರ್ಗಮನದ ದಿನ ಎಣಿಸಲೆಂದೇ ಒಂದು ವೆಬ್‌ಸೈಟ್!


