Homeಕರ್ನಾಟಕಮೈಸೂರು ಸೀಮೆಗೆ ಬಿಜೆಪಿ ಲಗ್ಗೆ

ಮೈಸೂರು ಸೀಮೆಗೆ ಬಿಜೆಪಿ ಲಗ್ಗೆ

- Advertisement -
- Advertisement -

’ಮೆಗಾ ಡೈರಿ’ಯ ಹೆಸರಿನಲ್ಲಿ ಮಂಡ್ಯದಲ್ಲಿ ಅಮಿತ್ ಶಾ ಮೆಗಾ ರಾಜಕೀಯ ಶೋ ನಡೆಸಿ 2023ರ ಮೆಗಾ ರಾಜಕೀಯ ಕಸರತ್ತಿಗೆ ನಾಂದಿ ಹಾಡಿದ್ದಾರೆ. ಮೆಗಾ ಡೈರಿ ಹೆಸರಿನ ಈ ಶೋನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೂ ಸೂಕ್ತ ಸ್ಥಾನಮಾನ ಕಲ್ಪಿಸಲಾಗಿತ್ತು. ಆ ಮೂಲಕ ಒಕ್ಕಲಿಗ ಮತದಾರರನ್ನು ಸೆಳೆಯುವ ತಂತ್ರವೂ ಇಲ್ಲಿ ಕೆಲಸ ಮಾಡಿದೆ. ಅಮಿತ್ ಶಾ ಅವರನ್ನು ಸ್ವಾಗತಿಸಿ ಬಿಜೆಪಿಯವರು ಹಾಕಿದ ಫ್ಲೆಕ್ಸ್‌ಗಳಲ್ಲಿ ಮಂಡ್ಯದ ಹಾಲಿ ಸಂಸದೆ ಸುಮಲತಾ ಅವರೂ ಕೂಡ ರಾರಾಜಿಸಿದ್ದು ಒಂದಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಲವು ಊಹಾಪೋಹಗಳಿಗೆ ಇಂಬು ನೀಡುವಂತೆ ಮಾನ್ಯ ದೇವೇಗೌಡರು ಅಮಿತ್ ಶಾರನ್ನು ಕಂಠಪೂರ್ತಿ ಹೊಗಳಿದರು. “ಸಹಕಾರ ಕ್ಷೇತ್ರದ ಅಕ್ರಮಗಳ ಬಗ್ಗೆ ಗಮನಹರಿಸಲು ಅಮಿತ್ ಶಾ ಬಂದಿದ್ದಾರೆ. ಅವರದು ಬಹಳ ದೊಡ್ಡ ವ್ಯಕ್ತಿತ್ವ. ಅವರ ಬಗ್ಗೆ ನನಗೆ ಬಹಳ ಗೌರವವಿದೆ”, ಇವು ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳ ಅಣಿಮುತ್ತುಗಳು.

ಈ ಮೆಗಾ ಶೋ ನಡೆಸಿದ್ದರ ಹಿಂದೆ ಬಿಜೆಪಿಗೆ ಹಲವು ಉದ್ದೇಶಗಳಿದ್ದಂತೆ ಕಾಣುತ್ತದೆ. ಕರ್ನಾಟಕದ ರೈತರಿಗೆ ಬಹಳ ದೊಡ್ಡದಾದ ಕೊಡುಗೆ ಕೊಡುತ್ತಿದ್ದೇವೆ ಎಂಬಂತೆ ಪ್ರಚಾರ ಗಿಟ್ಟಿಸುವುದು ಒಂದಾದರೆ, ದೀರ್ಘಕಾಲೀನ ದೃಷ್ಟಿಯಿಂದ ತಮ್ಮ ದುರ್ಬಲ ನೆಲೆಯಾದ ಹಳೇ ಮೈಸೂರು ಪ್ರಾಂತ್ಯವನ್ನು ರಾಜಕೀಯವಾಗಿ ಗಟ್ಟಿಗೊಳಿಸಿಕೊಳ್ಳುವುದು ಮತ್ತೊಂದು.

ಈ ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇದ್ದು ಈ ಬಾರಿ ಕಾಂಗ್ರೆಸ್ ಒಂದಿಷ್ಟು ಹೆಚ್ಚಿನ ಸ್ಥಾನಗಳನ್ನು ಗಳಿಸುವ ಅವಕಾಶಗಳಿವೆ. ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದಷ್ಟೂ ಬಿಜೆಪಿ ಗದ್ದುಗೆಯ ಕನಸು ಇನ್ನಷ್ಟು ದೂರದೂರ. ಚುನಾವಣಾ ಪೂರ್ವ ತೆರೆಮರೆಯ ಹೊಂದಾಣಿಕೆ ಅಥವಾ ಚುನಾವಣೋತ್ತರ ಮೈತ್ರಿಯ ಸಾಧ್ಯತೆ ಇರುವುದೂ ಕೂಡ ಕೇವಲ ಜೆಡಿಎಸ್‌ನೊಂದಿಗೆ ಮಾತ್ರ. ತ್ರಿಕೋನ ಸ್ಪರ್ಧೆ ಏರ್ಪಡುವ ಮೂಲಕ ಸಾಧ್ಯವಾದಷ್ಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವುದು ತಕ್ಷಣದ ಗುರಿಯಾಗಿದ್ದಂತೆ ಕಾಣುತ್ತದೆ.

ದೇಶಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ, ’ಹಿಂದುತ್ವ’ ಎಂಬ ಹೆಸರಿನ ರಾಜಕಾರಣವು, 85% ಮತದಾರರನ್ನು ಟಾರ್ಗೆಟ್ ಮಾಡಲು ಇರುವ ಒಂದು ಪ್ರಮುಖ ರಾಜಕೀಯ ವ್ಯೂಹತಂತ್ರ ಎಂಬುದು ತಿಳಿದ ಸಂಗತಿ. ಆದರೆ ತಳಮಟ್ಟದಲ್ಲಿ ಅದರ ಅಸಲಿ ರಾಜಕಾರಣ ನಿಂತಿರುವುದು ಸೋಷಿಯಲ್ ಇಂಜನಿಯರಿಂಗ್ ಎಂಬ ಜಾತಿ ಸಮೀಕರಣದ ಮೇಲೆ. ಮೇಲ್ಜಾತಿಗಳು ಎನಿಸಿಕೊಂಡಿರುವ ಬ್ರಾಹ್ಮಣ, ಬನಿಯಾ ಮತ್ತು ಕ್ಷತ್ರಿಯ ಜಾತಿಗಳು ಅನಾದಿಯಿಂದಲೂ ಬಿಜೆಪಿಯ ಭದ್ರವಾದ ವೋಟ್ ಬ್ಯಾಂಕ್. ಈ ನಿಗದಿತ ವೋಟ್ ಬ್ಯಾಂಕ್ ಜೊತೆಗೆ ಆಯಾ ರಾಜ್ಯಗಳಲ್ಲಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯವಾಗಿರುವ ಜಾತಿಗಳನ್ನು ತನ್ನತ್ತ ಸೆಳೆದುಕೊಂಡು ತನ್ನ ರಾಜಕೀಯಕ್ಕೆ ಭದ್ರ ಬುನಾದಿ ಏರ್ಪಡಿಸಿಕೊಳ್ಳುವುದು ಅದರ ಯಶಸ್ವಿ ಕಾರ್ಯತಂತ್ರ. ಅಸಲಿಗೆ ಆರೆಸ್ಸೆಸ್ ಮೆಚ್ಚುವ ಮನುಧರ್ಮಶಾಸ್ತ್ರದ ಶ್ರೇಣೀಕರಣ ನೀತಿಗೂ ಈ ತಂತ್ರ ಸರಿಹೊಂದುತ್ತದೆ.

ಕರ್ನಾಟಕದ ಹಾಲಿ ರಾಜಕೀಯ ಸಮೀಕರಣವನ್ನು ನೋಡೋಣ. ಬೆರಳೆಣಿಕೆಯ ಸೀಟುಗಳಿಗೆ ಸೀಮಿತವಾಗಿದ್ದ ಬಿಜೆಪಿ ಉತ್ತರ ಕರ್ನಾಟಕ ಭಾಗದ ಬಲಾಢ್ಯ ಜಾತಿಯಾದ ಲಿಂಗಾಯತರನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಕರ್ನಾಟಕದ ರಾಜಕೀಯ ಚಿತ್ರಣವೇ ಬದಲಾಗಿದೆ. ಲಿಂಗಾಯತರ ಪ್ರಶ್ನಾತೀತ ನಾಯಕರಂತಿದ್ದ ಯಡಿಯೂರಪ್ಪನವರ ಪ್ರಯತ್ನ ಮತ್ತು ಪರಿಶ್ರಮದಿಂದಾಗಿ ಲಿಂಗಾಯತ ಪ್ರಾಬಲ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ಬಿಜೆಪಿ ನೂರರ ಗಡಿ ದಾಟುತ್ತಿದ್ದರೂ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗಲೇ ಇಲ್ಲ. ಆಪರೇಷನ್ ಕಮಲ ಹೆಸರಿನ ಅನೈತಿಕ ಕಾರ್ಯಾಚರಣೆಯ ಮೂಲಕವಷ್ಟೇ ಬಿಜೆಪಿ ಗದ್ದುಗೆ ವಶಪಡಿಸಿಕೊಂಡಿದ್ದು.

ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಪ್ರಬಲವಾಗಿರುವ ಎರಡು ಜಾತಿಗಳೆಂದರೆ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳು. ಹೀಗಾಗಿ ಲಿಂಗಾಯತರ ನಂತರ ಬಿಜೆಪಿಯ ಟಾರ್ಗೆಟ್ ಒಕ್ಕಲಿಗರು. ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರದೇಶದಲ್ಲಿ ಇಂದಿಗೂ ಬಿಜೆಪಿಗೆ ಹೇಳಿಕೊಳ್ಳುವಂಥ ಯಾವ ನೆಲೆಯೂ ಇಲ್ಲ. ಉತ್ತರ ಕರ್ನಾಟಕ ಹಾಗೂ ಕರಾವಳಿ ಪ್ರದೇಶಗಳಲ್ಲಿ ನೇರ ಹಣಾಹಣಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್‌ಗಳ ನಡುವೆ. ಆದರೆ ಮೈಸೂರು ಪ್ರಾಂತ್ಯದಲ್ಲಿ ನೇರ ಹಣಾಹಣಿ ಇಂದಿಗೂ ಜೆಡಿಎಸ್ ಮತ್ತು ಕಾಂಗ್ರೆಸ್‌ಗಳ ನಡುವೆ. ಈ ಭಾಗದಲ್ಲಿ ಬಿಜೆಪಿಯ ಪ್ರದರ್ಶನ ತೀರಾ ಕಳಪೆ. ಇಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದ್ದರೂ ಮತಗಳಿಕೆ ಕೇವಲ 1500ರಿಂದ 10,000ದವರೆಗೆ ಮಾತ್ರ. ಇತರೆ ಪಕ್ಷಗಳಲ್ಲಿದ್ದು ಸ್ವಂತ ವರ್ಚಸ್ಸಿನಿಂದ ನಾಯಕರಾಗಿರುವ ಸಿ.ಪಿ.ಯೋಗೇಶ್ವರ್ ತರದ ಒಬ್ಬಿಬ್ಬರು ಒಂದಷ್ಟು ಹೆಚ್ಚಿನ ಮತ ಗಳಿಸಿರುವುದು ಮತ್ತು ಗೆದ್ದಿರುವುದು ಅಪವಾದವಷ್ಟೆ.

ಇದನ್ನೂ ಓದಿ: ನಂದಿನಿ ತಂಟೆಗೆ ಬಂದರೆ ಬಿಜೆಪಿ ಭಸ್ಮವಾಗುತ್ತೆ: ಕೆಎಂಎಫ್‌-ಅಮುಲ್ ವಿಲೀನ ಪ್ರಸ್ತಾಪಕ್ಕೆ ಎಚ್‌ಡಿಕೆ ಆಕ್ರೋಶ

ಉದಾಹರಣೆಗೆ 2018ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳಕ್ಕೆ ಏಳೂ ಸ್ಥಾನಗಳನ್ನು ಜೆಡಿಎಸ್ ಗೆದ್ದುಕೊಂಡಿತ್ತು. ಅನೈತಿಕ ಕಾರ್ಯಾಚರಣೆಯ ಮೂಲಕ ಕೆಆರ್‌ಪೇಟೆ ಶಾಸಕ ನಾರಾಯಣ ಗೌಡರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಿಜೆಪಿ ಜಿಲ್ಲೆಯಲ್ಲಿ ಖಾತೆ ತೆರೆದಿದೆ. ಇನ್ನು ಹಾಸನ ಜಿಲ್ಲೆಯಲ್ಲೂ ಕೂಡ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿರುವ ಪ್ರೀತಂ ಗೌಡ ಒಬ್ಬರನ್ನು ಬಿಟ್ಟರೆ ಉಳಿದ ಆರು ಕ್ಷೇತ್ರಗಳು ಜೆಡಿಎಸ್ ಕೈಯ್ಯಲ್ಲಿವೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಜೆಡಿಎಸ್ ಮತ್ತೊಂದು ಕಾಂಗ್ರೆಸ್ ಜತೆಗಿದೆ. ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿರುವುದು ಕೇವಲ ಮೂರು ಮಾತ್ರ. ಉಳಿದ ಕ್ಷೇತ್ರಗಳನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಹಂಚಿಕೊಂಡಿವೆ. ಚಾಮರಾಜನಗರದಲ್ಲಿ ಬಿಜೆಪಿ ಗೆದ್ದದ್ದು ಒಂದೇ ಕ್ಷೇತ್ರದಲ್ಲಿ. ಬಿಎಸ್‌ಪಿಯಿಂದ ಗೆದ್ದ ಕೊಳ್ಳೇಗಾಲ ಶಾಸಕ ಮಹೇಶ್‌ರನ್ನು ಸೆಳೆದುಕೊಂಡಿದ್ದರಿಂದಾಗಿ ಈಗ 2 ಸ್ಥಾನಗಳಿಗೆ ಏರಿದೆ.

ನಾರಾಯಣ ಗೌಡ

ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ದಶಕಗಟ್ಟಲೆ ನಡೆಸಿರುವ ಕಸರತ್ತು ಅಷ್ಟಾಗಿ ಫಲ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಇಲ್ಲಿ ’ವಿಶೇಷ’ ಕ್ರಮ ಕೈಗೊಳ್ಳುವ ಪ್ರಯತ್ನದಲ್ಲಿದೆ.

ಇಲ್ಲಿ ಬಿಜೆಪಿ ಸ್ಟ್ರಾಟೆಜಿ ಏನು?

ಈ ಪ್ರದೇಶದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಜಾತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳದೆ ಬಿಜೆಪಿ ಈ ಭಾಗದಲ್ಲಿ ಭದ್ರವಾಗಿ ನೆಲೆಯೂರುವುದು ಅಸಾಧ್ಯ ಎಂಬುದು ನಿಚ್ಚಳವಾಗಿದೆ. ಓಬಿಸಿ ಮತ್ತು ದಲಿತ ಜಾತಿಗಳು ಕಾಂಗ್ರೆಸ್‌ನ ಪಾರಂಪರಿಕ ಮತಬ್ಯಾಂಕ್ ಎನಿಸಿಕೊಂಡಿವೆ. ಒಕ್ಕಲಿಗರು ಜೆಡಿಎಸ್‌ನ ಅಭೇದ್ಯ ಕೋಟೆಯಂತಿದ್ದಾರೆ. ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಪ್ರಧಾನಿ ಕೈಯ್ಯಿಂದಲೇ ಉದ್ಘಾಟನೆ ಮಾಡಿಸುವುದು, ಒಕ್ಕಲಿಗರ ಸ್ವಾಮೀಜಿಯ ಸಖ್ಯ ಬೆಳೆಸಿ ಒಕ್ಕಲಿಗರನ್ನು ಓಲೈಸುವ ತಂತ್ರಗಳು ನಿರಂತರ ನಡೆಯುತ್ತಲೇ ಇವೆ. ಕಳೆದ ಜೂನ್‌ನಲ್ಲಿ ಪ್ರಧಾನಿ ಮೋದಿ ಯೋಗ ದಿನಾಚರಣೆಯ ಹೆಸರಿನಲ್ಲಿ ಶೋ ನಡೆಸಲು ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದು ಕೂಡ ಈ ತಂತ್ರದ ಭಾಗವೇ. ಆರ್.ಅಶೋಕ್, ಅಶ್ವತ್ಥನಾರಾಯಣ, ಸಿಟಿ ರವಿ, ಎಸ್.ಟಿ ಸೋಮಶೇಖರ್, ಗೋಪಾಲಯ್ಯ ಮುಂತಾದವರನ್ನು ಒಕ್ಕಲಿಗ ನಾಯಕರೆಂಬಂತೆ ಬಿಂಬಿಸುವ ಕಸರತ್ತು ಕೂಡ ನಡೆದಿದೆ.

ಆದರೂ ಇವೆಲ್ಲ ಹೆಚ್ಚಿನ ಫಲ ಕೊಡಲಾರವು. ಹೀಗಾಗಿ ಬೆಜೆಪಿ ಬೆಳೆಯಬೇಕೆಂದರೆ ಈ ಪ್ರದೇಶದಲ್ಲಿ ಹಿಂದು-ಮುಸ್ಲಿಂ ರಾಜಕಾರಣವನ್ನು ಮುನ್ನೆಲೆಗೆ ತರಲೇಬೇಕೆಂಬುದು ಅವರ ದೀರ್ಘಕಾಲಿಕ ಯೋಜನೆ. ಇದರ ಭಾಗವಾಗಿ ಆರೆಸ್ಸೆಸ್ ಕೂಟದ ಹತ್ತಾರು ಸಂಘಟನೆಗಳು ಚಾಪೆಯ ಕೆಳಗಿನ ನೀರಿನಂತೆ ಈ ಪ್ರದೇಶದಲ್ಲಿ ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿವೆ. ಕ್ರಮೇಣ ಅವರ ಪ್ರಭಾವ ವಿಸ್ತರಿಸುತ್ತಿದೆ. ಇಲ್ಲಿ ಒಂದು ವಿಷಯವನ್ನು ನೆನಪಿಸುವುದು ಒಳ್ಳೆಯದು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಬಂಧಿತನಾಗಿ ಈಗ ಐದು ವರ್ಷದಿಂದ ಜೈಲಿನಲ್ಲಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತ ಇದೇ ಮಂಡ್ಯ ಜಿಲ್ಲೆಯ ಒಕ್ಕಲಿಗರ ಹುಡುಗ.

ಇಲ್ಲಿ ಹಿಂದು-ಮುಸ್ಲಿಂ ರಾಜಕಾರಣ ಅಂದರೆ ಬೇರೇನಲ್ಲ; ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವುದು. ಹಾಗಾಗಿ ನಿರಂತರವಾಗಿ ಟಿಪ್ಪು ಸುಲ್ತಾನ್ ವಿರುದ್ಧ ಸಲ್ಲದ ಅಪಪ್ರಚಾರಗಳನ್ನು ನಡೆಲಾಗುತ್ತಿದೆ. ಟಿಪ್ಪು ಒಕ್ಕಲಿಗರಿಗೆ ಕಿರುಕುಳ ನೀಡಿದನೆಂದೂ, ಟಿಪ್ಪುವನ್ನು ಕೊಂದಿದ್ದು ಉರಿಗೌಡ ಮತ್ತು ನಂಜೇಗೌಡ ಎಂಬ ಇಬ್ಬರು ಒಕ್ಕಲಿಗ ಯೋಧರೆಂದೂ ಕಲ್ಪಿತ ಕತೆಗಳನ್ನು ಸೃಷ್ಟಿಸಿ ಒಕ್ಕಲಿಗರ ಮನಸ್ಸಿನಲ್ಲಿ ವಿಷ ಬಿತ್ತುವ ಕೆಲಸ ದಶಕಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಶ್ರೀರಂಗಪಟ್ಟಣದ ಸುತ್ತಲೂ ಅಗ್ನಿಕುಂಡವೊಂದನ್ನು ಸೃಷ್ಟಿಸಲು ಸಕಲ ಸಿದ್ಧತೆಗಳೂ ನಡೆದಿವೆ. ಅದರಲ್ಲಿ ಬಲಿಯಾಗುವುದು ಮಾತ್ರ ಅಮಾಯಕ ಮುಸ್ಲಿಮರು ಹಾಗೂ ಒಕ್ಕಲಿಗ ಹುಡುಗರು. ಹೀಗೆ ಮೈಸೂರು ಪ್ರದೇಶ ಹೆಚ್ಚೆಚ್ಚು ಕೋಮು ಧ್ರುವೀಕರಣ ಆದಂತೆಲ್ಲಾ ಬಿಜೆಪಿಯ ಸೀಟುಗಳ ಸಂಖ್ಯೆ ಹೆಚ್ಚುತ್ತದೆ. ಅಲ್ಲದೆ, ರಾಮನಗರದ ರಾಮದೇವರಬೆಟ್ಟದಲ್ಲಿ ದಕ್ಷಿಣದ ಅಯೋಧ್ಯೆಯನ್ನು ನಿರ್ಮಿಸುತ್ತೇವೆ ಎಂದು ಬಾಯಿಬಡಿದುಕೊಳ್ಳುತ್ತಿದ್ದಾರೆ. ಇದಕ್ಕೆ ಯುಪಿಯಿಂದ ಯೋಗಿ ಆದಿತ್ಯನಾಥರನ್ನೂ ಕರೆಸುವುದಾಗಿ ಅಶ್ವಥ್ ನಾರಾಯಣ ಹೇಳಿದ್ದಾರೆ.

ಸಚ್ಚಿದಾನಂದ ಶೆಟ್ಟಿ

ಕೋಮು ಧ್ರುವೀಕರಣದ ಜೊತೆಜೊತೆಗೆ ಇತರೆ ಪಕ್ಷಗಳ (ಮುಖ್ಯವಾಗಿ ಒಕ್ಕಲಿಗ ಜಾತಿಯ) ನಾಯಕರನ್ನು, ವಿವಿಧ ಹಂತದ ಕಾರ್ಯಕರ್ತರನ್ನು ನಾನಾ ಆಮಿಷ, ಬೆದರಿಕೆಗಳ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡು ತನ್ನ ತಳಹದಿಯನ್ನು ವಿಸ್ತರಿಸಿಕೊಳ್ಳುವುದು ಮಾಮೂಲಿಯಂತೆ ನಡೆಯುತ್ತಿದೆ. ಇತ್ತೀಚೆಗೆ ಕಾಂಗ್ರೆಸ್‌ನ ಪ್ರಭಾವಿ ಯುವ ನಾಯಕ ಸಚ್ಚಿದಾನಂದ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರು ಶ್ರೀರಂಗಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಮಂಡ್ಯ ನಗರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿ ಚಂದಗಾಲು ಶಿವಣ್ಣ ಎಂಬುವವರು ಬಿಜೆಪಿ ಸೇರಿ 33 ಸಾವಿರಕ್ಕೂ ಹೆಚ್ಚಿನ ಮತ ಗಳಿಸಿ ಅಚ್ಚರಿ ಮೂಡಿಸಿದ್ದರು. ಇದರಲ್ಲಿ ಅಭ್ಯರ್ಥಿಯ ವರ್ಚಸ್ಸು ಮಾತ್ರ ಕೆಲಸ ಮಾಡಿದ್ದು ಬಿಜೆಪಿಯ ಹೆಗ್ಗಳಿಕೆ ಏನೂ ಇಲ್ಲದಿದ್ದರೂ ಕ್ರಮೇಣವಾಗಿ ಇವು ಬಿಜೆಪಿ ಮತಗಳಾಗಿ ಸಧೃಡಗೊಳ್ಳುವುದು ಖಚಿತ. ಫೈಟರ್ ರವಿ ಎಂಬ ರೌಡಿ ಹಿನ್ನೆಲೆಯ ವ್ಯಕ್ತಿಯನ್ನು ನಾಗಮಂಗಲದಿಂದ ಕಣಕ್ಕಿಳಿಸುವ ತಯಾರಿ ನಡೆದಿದೆ. “ಪಕ್ಷೇತರ ಸಂಸದೆ ಸುಮಲತಾ ತಮ್ಮ ವರಿಷ್ಠರೊಂದಿಗೆ ಮಾತುಕತೆಯಲ್ಲಿದ್ದಾರೆ, ಸದ್ಯದಲ್ಲೇ ನಮ್ಮ ಪಕ್ಷ ಸೇರಲಿದ್ದಾರೆ” ಎಂದು ಸಿಪಿ ಯೋಗೇಶ್ವರ್ ಬಹಿರಂಗಪಡಿಸಿದ್ದಾರೆ. ಮೈಸೂರಿನಲ್ಲಿ ಜಿಟಿ ದೇವೇಗೌಡರನ್ನು ಸೆಳೆಯುವ ಪ್ರಯತ್ನಗಳೂ ನಡೆದಿವೆ.

ಹೀಗೆ ಒಂದೆಡೆ ಕೋಮು ಧ್ರುವೀಕರಣ ಮತ್ತೊಂದೆಡೆ ಸಾಲುಸಾಲು ಒಕ್ಕಲಿಗ ನಾಯಕರನ್ನು, ಕಾರ್ಯಕರ್ತರನ್ನು ಕಬಳಿಸಿಕೊಂಡು ಬಿಜೆಪಿ ಶಕ್ತಿ ಸಂಚಯ ಮಾಡಿಕೊಳ್ಳುತ್ತಿರುವುದು ನಿಚ್ಚಳವಾಗಿ ಕಾಣುತ್ತಿದೆ. ಬಿಜೆಪಿ ಪ್ರಾಬಲ್ಯ ಹೆಚ್ಚಾದಷ್ಟೂ ಅದರ ನೇರ ಮತ್ತು ಅಂತಿಮ ರಾಜಕೀಯ ಪರಿಣಾಮ ಉಂಟಾಗುವುದು ಇದೇ ಪ್ರದೇಶದಲ್ಲಿ ನೆಲೆ ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಮೇಲೆ. ಕಾಂಗ್ರೆಸ್ ಪಕ್ಷ ತನ್ನದೇ ಆದ ರಾಜಕೀಯ ನೆಲೆ ಮತ್ತು ನಿಷ್ಠಾವಂತ ಸಮುದಾಯಗಳ ಮತಗಳನ್ನು ಹೊಂದಿರುವುದರಿಂದ ಅದರ ಅಸ್ತಿತ್ವಕ್ಕೆ ಅಂಥಾ ಅಪಾಯವೇನಿಲ್ಲ.

ಇದನ್ನೂ ಓದಿ: ಅಮುಲ್‌ ಜೊತೆ ಕೆಎಂಎಫ್‌ ವಿಲೀನ ಮಾಡುವುದಿಲ್ಲ: ಬೊಮ್ಮಾಯಿ ಸ್ಪಷ್ಟನೆ

ಕೊನೆಯಲ್ಲಿ ಒಂದು ಮಾತು. ಬಿಜೆಪಿಯೊಂದಿಗೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಲೇ ಇದೆ. ಕೆಲವು ಕಾಂಗ್ರೆಸ್ ಮುಖಂಡರು ಈ ಬಗ್ಗೆ ನೇರವಾಗಿ ಆರೋಪಿಸಿರುವುದೂ ಆಗಿದೆ. ಆದರೆ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿರುವ ಕುಮಾರಣ್ಣನವರು ಬಿಜೆಪಿ ವಿರುದ್ಧ, ಅಮಿತಾ ಶಾ ವಿರುದ್ಧ ಕೆಂಡದಂತ ಟೀಕೆಗಳನ್ನು ಹರಿಸುತ್ತಿದ್ದಾರೆ. ಈ ಟೀಕಾ ಪ್ರಹಾರದಾಚೆಗೆ ಸತ್ಯಾಸತ್ಯತೆ ಹೊರಬರಬೇಕೆಂದರೆ ಇನ್ನೂ ಒಂದೆರಡು ತಿಂಗಳುಗಳು ಕಾಯಬೇಕಾಗುತ್ತದೆ. ಟಿಕೆಟ್ ಹಂಚಿಕೆಯ ಕಸರತ್ತು ಆರಂಭವಾದಂತೆಲ್ಲಾ ಎಲ್ಲವೂ ನಿಚ್ಚಳವಾಗುತ್ತದೆ. ಅಲ್ಲಿಯವರೆಗೂ ಇಂತಹ ಪ್ರಹಸನಗಳು ಮುಂದುವರಿದಿರುತ್ತವೆ.

ಇದೆಲ್ಲಾ ಏನೇ ಇರಲಿ, ಕೋಮು ಧ್ರುವೀಕರಣವೆಂಬ ರಾಕ್ಷಸ ರಾಜಕಾರಣದ ಅಪಾಯವನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಅದರ ನಾಯಕರು ಎಷ್ಟು ಬೇಗ ಅರ್ಥ ಮಾಡಿಕೊಂಡರೆ ಅಷ್ಟೇ ಅವರಿಗೆ ಒಳ್ಳೆಯದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...