ಲೋಕಸಭೆಯ ಸ್ಪೀಕರ್ ಹುದ್ದೆಯ ಬಗ್ಗೆ ನಿರ್ಮಾಣವಾಗಿರುವ ಕುತೂಹಲಕ್ಕೆ ಇನ್ನೂ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ, ಸಂಸತ್ತಿನ ಕೆಳಮನೆಯ ಉನ್ನತ ಸ್ಥಾನವು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಹೋಗುವ ಸಾಧ್ಯತೆಯಿದೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.
ಸ್ಪೀಕರ್ ಹುದ್ದೆ ಉಳಿಸಿಕೊಳ್ಳುವ ಬಿಜೆಪಿಯು, ಉಪ ಸ್ಪೀಕರ್ ಸ್ಥಾನವನ್ನು ಎನ್‌ಡಿಎ ಮಿತ್ರ ಪಕ್ಷಗಳಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ‘ಐಎನ್‌ಡಿಐಎ’ ಬಣವು ಉಪಸಭಾಪತಿ ಹುದ್ದೆಗೆ ಬೇಡಿಕೆ ಇಟ್ಟಿದ್ದು, ಇದು ಸಾಂಪ್ರದಾಯಿಕವಾಗಿ ಯಾವಾಗಲೂ ಪ್ರತಿಪಕ್ಷಗಳಿಗೆ ಹೋಗಿದೆ. ಆದರೆ, 17 ನೇ ಲೋಕಸಭೆಯು ಈ ಹುದ್ದೆಯನ್ನು ಯಾರಿಗೂ ಹಂಚಿಕೆ ಮಾಡಿರಲಿಲ್ಲ.
ದೆಹಲಿಯಲ್ಲಿ ಎನ್‌ಡಿಎ ನಾಯಕರ ಸಭೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಎನ್‌ಡಿಎ ನಾಯಕರ ಸಭೆಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಭೂಪೇಂದರ್ ಯಾದವ್, ಮನೋಹರ್ ಲಾಲ್, ಧರ್ಮೇಂದ್ರ ಪ್ರಧಾನ್, ಕಿರಣ್ ರಿಜಿಜು, ಎಸ್ ಜೈಶಂಕರ್, ವೀರೇಂದ್ರ ಕುಮಾರ್ ಮತ್ತು ಅನ್ನಪೂರ್ಣ ದೇವಿ ಉಪಸ್ಥಿತರಿದ್ದರು. ಹೆಚ್ಚುವರಿಯಾಗಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಕೆಲವು ನಾಯಕರು, ಜನತಾ ದಳ (ಯುನೈಟೆಡ್) ನ ರಾಜೀವ್ ರಂಜನ್ ಸಿಂಗ್ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಚಿರಾಗ್ ಪಾಸ್ವಾನ್ ಸಹ ಉಪಸ್ಥಿತರಿದ್ದರು. ಲಾಲನ್ ಸಿಂಗ್ ಮತ್ತು ಚಿರಾಗ್ ಪಾಸ್ವಾನ್ ಇಬ್ಬರೂ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಂದು ಆರಂಭವಾಗಲಿದ್ದು, ಈ ಅಧಿವೇಶನದಲ್ಲಿ ಕೆಳಮನೆಯ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದು, ಲೋಕಸಭೆ ಸ್ಪೀಕರ್ ಆಯ್ಕೆ ಜೂನ್ 26ರಂದು ನಡೆಯಲಿದೆ.
ಇದನ್ನೂ ಓದಿ; ನಕಲಿ ದಾಖಲೆ ಸಲ್ಲಿಸಿದ ನೀಟ್ ಆಕಾಂಕ್ಷಿಗಳ ವಿರುದ್ಧ ಕಾನೂನು ಕ್ರಮಕ್ಕೆ ಎನ್‌ಟಿಎ ಮುಕ್ತವಾಗಿದೆ: ಅಲಹಾಬಾದ್ ಹೈಕೋರ್ಟ್


