Homeಮುಖಪುಟಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಾದಿದೆ ಭೂಕಂಪ! – ಇದು ಡಾಟಾ ಅನಲಿಟಿಕಲ್ ಸಮೀಕ್ಷೆ ಬಿಚ್ಚಿಟ್ಟ ಸತ್ಯ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಾದಿದೆ ಭೂಕಂಪ! – ಇದು ಡಾಟಾ ಅನಲಿಟಿಕಲ್ ಸಮೀಕ್ಷೆ ಬಿಚ್ಚಿಟ್ಟ ಸತ್ಯ

ಆಂಥ್ರೋ.ಎಐ ಸಮೀಕ್ಷೆಯ ಪ್ರಕಾರ, ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಹೆಣಗಾಡುತ್ತಿರುವ ಬಿಜೆಪಿಗೆ ಉತ್ತರ ಪ್ರದೇಶವೊಂದರಲ್ಲೆ 40-45 ಸ್ಥಾನಗಳು ಕೈಬಿಟ್ಟು ಹೋಗಲಿವೆ ಎಂದಂತಾಯಿತು

- Advertisement -
- Advertisement -

ಲೋಕಸಭಾ ಚುನಾವಣೆಯ ಆರು ಹಂತಗಳು ಮುಗಿದಿವೆ. ದೇಶ ಈಗ ಕೊನೇ ಹಂತದ ಕ್ಷಣಗಣನೆಯಲ್ಲಿದೆ. ಈ ಹಂತದಲ್ಲಿ ಆಂಥ್ರೋ.ಎಐ ಎಂಬ ಆನ್ಲೈನ್ ಪೋರ್ಟಲ್, ಬಿಜೆಪಿ ಬೆಚ್ಚಿಬೀಳುವಂತ ಡಾಟಾ ಅನಾಲಿಟಿಕಲ್ ಸಮೀಕ್ಷಾ ವರದಿಯೊಂದನ್ನು ಪ್ರಕಟಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಉತ್ತರ ಪ್ರದೇಶ ನಿರ್ಣಾಯಕ ಪಾತ್ರ ವಹಿಸಿತ್ತು. ಆ ಸಲ 41% ಮತಗಳಿಕೆಯೊಂದಿಗೆ ಎನ್.ಡಿ.ಎ 80 ಸ್ಥಾನಗಳ ಪೈಕಿ 73ರಲ್ಲಿ ಗೆದ್ದಿತ್ತು. ತನ್ನ ರಾಜಕೀಯ ಇತಿಹಾಸದಲ್ಲೇ ಆ ಪ್ರಮಾಣದ ಇಳುವರಿ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಲಭಿಸಿರಲಿಲ್ಲ.

ಆದರೆ ಆಂಥ್ರೋ.ಎಐ ಸಂಸ್ಥೆ, ಉತ್ತರ ಪ್ರದೇಶದ ರಾಜಕಾರಣವನ್ನೇ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಸಮೀಕ್ಷೆಯೊಂದನ್ನು ಮುಂದಿಟ್ಟಿದ್ದು ಅದರ ಪ್ರಕಾರ ಬಿಜೆಪಿ ಈ ಸಲ 15 ರಿಂದ 25 ಸೀಟು ಗೆದ್ದರೆ ದೊಡ್ಡ ಮಾತು ಎಂದು ಹೇಳಿದೆ. ತೀರಾ ಅನಿರೀಕ್ಷಿತ ಅಲೆಗಳೇನಾದರು ಈ ಹಂತದಲ್ಲಿ ಸೃಷ್ಟಿಯಾದರೂ, ಬಿಜೆಪಿಯ ಸೀಟು ಗಳಿಕೆ ಕಷ್ಟಪಟ್ಟು 30 ತಲುಪಬಹುದೇ ವಿನಾಃ ಅದಕ್ಕಿಂತ ಹೆಚ್ಚಾಗುವ ಸಂಭವವೇ ಇಲ್ಲ ಎನ್ನುತ್ತಿದೆ ಆ ಸಮೀಕ್ಷೆ. ಇದಕ್ಕೆ ಪ್ರತಿಯಾಗಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮಹಾಘಟಬಂಧನಕ್ಕೆ ಅಭೂತಪೂರ್ವ ಜನಬೆಂಬಲ ಸಿಗಲಿದ್ದು ಈ ಮೈತ್ರಿ ಕೂಟಕ್ಕೆ 40 ರಿಂದ 55 ಸ್ಥಾನಗಳು ಸಿಗಲಿವೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ಗೆ 5-9 ಸ್ಥಾನಗಳನ್ನು ನಿರೀಕ್ಷಿಸಲಾಗಿದೆ.

ಅಂದರೆ ಆಂಥ್ರೋ.ಎಐ ಸಮೀಕ್ಷೆಯ ಪ್ರಕಾರ, ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಹೆಣಗಾಡುತ್ತಿರುವ ಬಿಜೆಪಿಗೆ ಉತ್ತರ ಪ್ರದೇಶವೊಂದರಲ್ಲೆ 40-45 ಸ್ಥಾನಗಳು ಕೈಬಿಟ್ಟು ಹೋಗಲಿವೆ ಎಂದಂತಾಯಿತು. ಹೀಗೇನಾದರು ಆದಲ್ಲಿ, ಅದು ಬಿಜೆಪಿಯನ್ನು ಅಧಿಕಾರದಿಂದ ಬಹಳಷ್ಟು ದೂರಕ್ಕೆ ತಳ್ಳಲಿದೆ.

ಪ್ರತಿ ಕ್ಷೇತ್ರದ, ಆಯಾ ಪ್ರಾದೇಶಿಕ ಪ್ರಭಾವಗಳು, ಅಭ್ಯರ್ಥಿಗಳ ಸಾಮರ್ಥ್ಯ, ಸಾಮಾಜಿಕ ಸಂರಚನೆ, ಜಾತಿ ಸಮೀಕರಣ, ಹಿಂದಿನ ಚುನಾವಣೆಗಳ ಮತಗಳಿಕೆ ಏರಿಳಿತವನ್ನು ಕೂಲಕಂಷವಾಗಿ ಅಧ್ಯಯನ ಮಾಡಿದ್ದು, ಆ ಕ್ಷೇತ್ರವಾರು ಸಮೀಕ್ಷೆಯನ್ನು ಏಪ್ರಿಲ್ 19ರ ನಂತರ, 23ಕ್ಕು ಮುನ್ನ ಬಿಡುಗಡೆ ಮಾಡುವುದಾಗಿ ಪೋರ್ಟಲ್ ಹೇಳಿಕೊಂಡಿದೆ. ನುರಿತ ಸಂವಹನ ತಜ್ಞರು, ದತ್ತಾಂಶ ತಜ್ಞರು, ಚುನಾವಣಾ ಸಮೀಕ್ಷಾ ತಜ್ಞರು, ಗಣಿತಜ್ಞರ ಜೊತೆಗೆ ಮಾನವ ಮನಶಾಸ್ತ್ರ ಪರಿಣಿತರ ತಂಡ ಈ ಸಮೀಕ್ಷೆಗಾಗಿ ಸುದೀರ್ಘ ಕೆಲಸ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಸಮೀಕ್ಷೆಯಲ್ಲಿ ಡಾಟಾ ಅನಾಲಿಟಿಕ್ಸ್ ತುಂಬಾ ಪರಿಣಾಮಕಾರಿಯಾದ ಟೂಲ್ ಆಗಿ ಬಳಕೆಯಾಗುತ್ತಿದ್ದು, ಜನರ ಮೂಡ್ ನ ಜೊತೆಗೆ ಸದ್ಯೋತಿಹಾಸದ ಚುನಾವಣಾ ಅಂಕಿಅಂಶಗಳನ್ನು, ಸ್ವಿಂಗ್ ಪರ್ಸೇಂಟೇಜ್ ಅನ್ನು, ವೋಟಿಂಗ್ ಪರ್ಸೆಂಟೇಜ್ ಮತ್ತು ವೋಟಿಂಗ್ ಟ್ರೆಂಡ್ ನಡುವೆ ಇರುವ ಸಂಬಂಧವನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿ ಅದರ ಆಧಾರದಲ್ಲಿ ಫಲಿತಾಂಶವನ್ನು ಅಸೆಸ್ ಮಾಡುವ ಈ ವಿಧಾನ ಹೆಚ್ಚು ಮಾನ್ಯತೆ ಪಡೆದಿದೆ. ಈಗ ಹೆಚ್ಚೂಕಮ್ಮಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಆದ ಡಾಟಾ ಅನಾಲಿಟಿಕ್ಸ್ ವಿಭಾಗಗಳನ್ನು ಒಳಗೊಂಡಿರುತ್ತವೆ. ಕಳೆದ ಚುನಾವಣೆಗಳಲ್ಲಿ ಇದೇ ಆಂಥ್ರೋ.ಎಐ ಸಂಸ್ಥೆ ಈ ಡಾಟಾ ಅನಾಲಿಟಿಕ್ಸ್ ವಿಧಾನ ಬಳಸಿ ಫಲಿತಾಂಶಕ್ಕೆ ನಿಖರವಾದ ಸಮೀಕ್ಷೆಗಳನ್ನು ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಒಂದು ನಿರ್ದಿಷ್ಟ ಸಿದ್ಧಾಂತದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬಿಕೊಂಡ ಒಂದು ಗುಂಪು ಹಾಗೂ ನರೇಂದ್ರ ಮೋದಿ ಅತ್ಯುತ್ತಮ ನಾಯಕ, ಅವರು ಮಾತ್ರ ಈ ದೇಶಕ್ಕೆ ಸೂಕ್ತ ಎಂದು ಗ್ರಹಿಸಿದ ಮತ್ತೊಂದು ಗುಂಪು, ಈ ಎರಡು ಗುಂಪುಗಳೇ ಬಿಜೆಪಿಯ ಪ್ರಮುಖ ಮತದಾರರು ಎಂದು ಅಂದಾಜಿಸಿರುವ ಸಮೀಕ್ಷೆ ಕಳೆದ ಸಾರಿಯಂತೆ ಈ ಸಲವೂ ಈ ಗುಂಪುಗಳು ಬಿಜೆಪಿಗೆ ಮತಹಾಕಿವೆ ಮತ್ತು ಹೊಸ ಮತದಾರರೂ ಬಿಜೆಪಿಯತ್ತ ಒಲವು ಹೊಂದಿದ್ದಾರೆ ಎಂದು ಒಪ್ಪಿಕೊಳ್ಳುತ್ತದೆ. ಆದರೆ ಬಿಜೆಪಿ ಈ ಸಲ ಕಳೆದುಕೊಳ್ಳುತ್ತಿರುವ ಮತಸಮೂಹಕ್ಕೆ ಹೋಲಿಸಿದರೆ  ಇವು ತುಂಬಾ ನಗಣ್ಯ ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.

2014ರಲ್ಲಿ ಉತ್ತರ ಪ್ರದೇಶದ ಚುನಾವಣಾ ಅಖಾಡಕ್ಕಿಳಿದ ಅಮಿತ್ ಶಾ ಪ್ರಮುಖವಾಗಿ ಎರಡು ವರ್ಗಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಮೊದಲನೆಯದ್ದು ಯಾದವ್ ಜನಾಂಗವನ್ನು (ಸಾಂಪ್ರದಾಯಿಕ ಎಸ್ಪಿ ಮತದಾರರು) ಹೊರತುಪಡಿಸಿದ ಒಬಿಸಿ ಜಾತಿಗಳು. ಎರಡನೆಯದ್ದು ಜಾಟವ್ ರನ್ನು (ಬಿಎಸ್ಪಿ ಮತಸಮೂಹ) ಹೊರತುಪಡಿಸಿದ ದಲಿತರು. ವಾಸ್ತವದಲ್ಲಿ ಉತ್ತರ ಪ್ರದೇಶದ ಬಿಜೆಪಿ ಘಟಕ ಕಳೆದು ಹಲವು ವರ್ಷಗಳಿಂದಲೇ ಈ ಜಾತಿ ಸಮೀಕರಣದ ಮೇಲೆ ಕಾರ್ಯಗತವಾಗುತ್ತಾ ಬಂದಿತ್ತು. ಯಾದವ್ ಜಾತಿ ರಾಜಕಾರಣದಿಂದ (ಎಸ್ಪಿ) ಬೇಸತ್ತಿದ್ದ ಇತರೆ ಹಿಂದುಳಿದ ಜಾತಿಗಳು ಮತ್ತು ಜಾಟ್ ಸಮುದಾಯದ (ಮಾಯಾವತಿಯವರ) ರಾಜಕಾರಣದಿಂದ ಅಸಮಾಧಾನಗೊಂಡಿದ್ದ ಇತರೆ ದಲಿತ ಜಾತಿಗಳು ಬಿಜೆಪಿಯಲ್ಲಿ ತಮ್ಮ ರಾಜಕೀಯ ಅಧಿಕಾರದ ಅವಕಾಶವನ್ನು ಹುಡುಕುವ ಯತ್ನ ಮಾಡಿದ್ದರು. ಅದಕ್ಕೆ ಪೂರಕವಾಗಿ ಆ ಜಾತಿಗಳ ನಾಯಕರಿಗೆ ಪಕ್ಷದೊಳಗೆ ಹುದ್ದೆಗಳನ್ನು ನೀಡಿದ್ದಲ್ಲದೆ, ಅದೇ ಸಮುದಾಯದವರನ್ನು ಹೆಚ್ಚೆಚ್ಚು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದ ಅಮಿತ್ ಶಾ ತಂತ್ರಗಾರಿಕೆ ಬಿಜೆಪಿಗೆ ಅದ್ಭುತ ಫಸಲು ತಂದುಕೊಟ್ಟಿತ್ತು. ಇನ್ನು ಬ್ರಾಹ್ಮಣ, ಠಾಕೂರ್ರಂತಹ ಮೇಲ್ಜಾತಿಗಳು ಬಿಜೆಪಿಗೆ ಸಾಂಪ್ರದಾಯಿಕ ಮತಗಳಾಗಿ ನಿಂತಿದ್ದರಿಂದ 73 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.

ಆದರೆ, ಇಂದಿರಾಗಾಂಧಿಯ ನಂತರ ಮೋದಿ ಯಾವ ಪ್ರಮಾಣದಲ್ಲಿ ಅಧಿಕಾರ ಕೇಂದ್ರೀಕರಣ ಮಾಡಿಕೊಂಡಿದ್ದಾರೆಂದರೆ, ಸಂಸದರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಆದಿತ್ಯನಾಥರ ಸರ್ಕಾರ ಬಂದನಂತರವಂತೂ ಸಂಸದರ ಅಧಿಕಾರ ಇನ್ನಷ್ಟು ಮೊಟಕುಗೊಂಡಿದೆ. ತಮ್ಮತಮ್ಮ ಜಾತಿಯ ನಾಯಕರಿಗೆ ಟಿಕೇಟು ಸಿಕ್ಕು, ಅವರು ಸಂಸದರಾಗಿ ಆಯ್ಕೆಯಾದ ನಂತರ ಯಾದವರಂತೆ, ಜಾಟರಂತೆ ತಾವು ಅಧಿಕಾರ ಪ್ರತಿಷ್ಠೆ ಗಳಿಸಿಕೊಳ್ಳುತ್ತೇವೆ ಎಂಬ ಗ್ರಹಿಕೆಯಲ್ಲಿದ್ದ ಈ ಸಮುದಾಯಗಳು ದೊಡ್ಡ ಭ್ರಮಾನಿರಸನಕ್ಕೆ ತುತ್ತಾಗಿವೆ ಎಂಬುದು ಈ ಸಮೀಕ್ಷೆಯ ಸಾರಾಂಶ. ವಿಪರ್ಯಾಸವೆಂದರೆ, ಯಾದವ್ ಮತ್ತು ಜಾಟ್ ವಿರುದ್ಧ ಈ ತಳ ಸಮುದಾಯಗಳು ಒಗ್ಗೂಡಿ ಬಿಜೆಪಿಯತ್ತ ಮುಖ ಮಾಡಿದ್ದ ಒಬಿಸಿ ಮತ್ತು ದಲಿತರಲ್ಲಿ, ಯಾದವ್ ಮತ್ತು ಜಾಟರೆಡೆಗಿಂತ ಹೆಚ್ಚಾಗಿ ಠಾಕೂರ್ (ಬಿಜೆಪಿ ಬೆಂಬಲಿಸುವ ಮೇಲ್ಜಾತಿ) ಸಮುದಾಯದ ವಿರುದ್ಧ ಅಸಮಾಧಾನ ಹೆಚ್ಚಾಗಿರುವುದನ್ನು ತನ್ನ ಸಮೀಕ್ಷೆಯುದ್ದಕ್ಕೂ ಕಂಡಿರುವುದಾಗಿ ಆಂಥ್ರೋ.ಎಐ ಉಲ್ಲೇಖಿಸಿದೆ. ಠಾಕೂರ್ ಸಮುದಾಯದ ಮೇಲೆ ಆಕ್ರೋಶವೆಂದರೆ ಅದು ಪರೋಕ್ಷವಾಗಿ ಬಿಜೆಪಿ ಮೇಲಿನ ಆಕ್ರೋಶವೇ ಆಗಿರುತ್ತದೆ.

ಕಳೆದ ಸಲ ಬಿಜೆಪಿಗೆ ಮತ ಹಾಕಿದ್ದ ಕುರ್ಮಿ ಮತ್ತು ಕುಶ್ವಾಹ್ ಸಮುದಾಯಗಳು ಈ ಬಾರಿ ಎಸ್ಪಿ-ಬಿಎಸ್ಪಿ ಮೈತ್ರಿಯತ್ತ ಮುಖ ಮಾಡಿವೆ ಎನ್ನುವ ಸಮೀಕ್ಷೆ ನಿಶಾದ್ ಸಮುದಾಯದಲ್ಲೂ ಬಿಜೆಪಿ ವಿರುದ್ಧ ಸಣ್ಣ ಬಂಡಾಯವನ್ನು ಗುರುತಿಸಿರುವುದಾಗಿ ಹೇಳಿಕೊಂಡಿದೆ. ಮುಖ್ಯವಾಗಿ ಇಲ್ಲಿನ ಜನ ಅಯೋಧ್ಯೆಯ ರಾಮಮಂದಿರ ವಿಷಯವನ್ನು ಚರ್ಚಿಸುತ್ತಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಕೇಂದ್ರದಲ್ಲಿ ಪೂರ್ಣ ಐದು ವರ್ಷ ಮತ್ತು ರಾಜ್ಯದಲ್ಲಿ ಎರಡು ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದರು ಮಂದಿರ ನಿರ್ಮಾಣ ಯಾಕೆ ಮುಂದಕ್ಕೆ ಕದಲಲಿಲ್ಲ ಎನ್ನುವ ಪ್ರಶ್ನೆ ಜಾತಿ ಸಮೀಕರಣದ ಹೊರತಾಗಿಯೂ ಬಿಜೆಪಿಯನ್ನು ಇಲ್ಲಿ ಮೆತ್ತಗಾಗಿಸಿದೆ ಎಂಬುದು ಸಮೀಕ್ಷೆಯ ವಾದ.

ಬಿಜೆಪಿ ಪಾಲಿಗೆ ಈ ಸಲ ಉತ್ತರ ಪ್ರದೇಶದಲ್ಲಿ ಗಣನೀಯ ಪ್ರತಿಕೂಲವಾಗಲಿದೆ ಎಂದು ಸಮೀಕ್ಷೆ ಗುರುತಿಸಿರುವ ಮತ್ತೊಂದು ವರ್ಗವೆಂದರೆ ಅದು ಮಹಿಳೆಯರು!

ಆದರೆ ಆ ಮಹಿಳೆಯರಿಗೆ ಸಿಕ್ಕಿದ್ದು ನೋಟುರದ್ಧತಿಯ ದೊಡ್ಡ ಶಾಕ್! ಆಂಥ್ರೋ.ಎಐ ಸಮೀಕ್ಷೆಯಿಂದ ತಿಳಿದುಬಂದಂತೆ, ಸಣ್ಣ ಪ್ರಮಾಣದಲ್ಲಿ ಗಂಡಸರು ಈಗಲೂ `ನೋಟು ರದ್ಧತಿಯಿಂದ ಶ್ರೀಮಂತರಿಗೆ ಹೊಡೆತ ಬಿದ್ದಿದೆ’ ಎಂಬ ತರ್ಕದಲ್ಲೇ ತೇಲಾಡುತ್ತಿದ್ದರೂ; ತಮ್ಮ ಸಣ್ಣ ಉಳಿತಾಯಗಳು ಕೈಬಿಟ್ಟುಹೋಗಿ, ಸಣ್ಣಪುಟ್ಟ ಜೀವನಾಧಾರ ಗುಡಿಕೈಗಾರಿಕೆಗಳು, ಕಸುಬುಗಳು ನಷ್ಟಕ್ಕೆ ತುತ್ತಾದ ಪ್ರಾಯೋಗಿಕ ಸಂಕಟವನ್ನು ಅನುಭವಿಸಿರುವ ಮಹಿಳೆಯರು ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನು ಗೋರಕ್ಷಕರಿಂದಾಗಿ ಉಲ್ಬಣಗೊಂಡಿರುವ ಬೀಡಾಡಿ ದನಗಳ ಸಮಸ್ಯೆಗಳು, ಅತಿಹೆಚ್ಚು ಪ್ರಚಾರಕ್ಕಷ್ಟೇ ಸೀಮಿತಗೊಂಡು ತಮ್ಮ ಪ್ರಯೋಜನಕ್ಕೆ ಬಾರದ ಸರ್ಕಾರಿ ಯೋಜನೆಗಳೂ ಈ ಮಹಿಳೆಯರ ಸಿಟ್ಟನ್ನು ಹೆಚ್ಚಿಸಿವೆ ಎನ್ನುತ್ತಿದೆ ಸಮೀಕ್ಷೆ.

ಬಿಜೆಪಿ ವಿರುದ್ಧ ಉತ್ತರ ಪ್ರದೇಶದ ಉದ್ದಗಲಕ್ಕೂ ಹರಿದಾಡುತ್ತಿರುವ ಇಂತಹ ಅಂಡರ್ ಕರೆಂಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಬರುತ್ತಿದ್ದು, ಸೀಟು ಗಳಿಕೆಯ ದೃಷ್ಟಿಯಿಂದ ಬಿಜೆಪಿಗೆ ಇಲ್ಲಿ ದೊಡ್ಡ ಭೂಕಂಪನವೇ ಕಾದಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಆಧಾರ: Anthro.Ai.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...