Homeಅಂಕಣಗಳುಶ್ರೀಕೃಷ್ಣ ತಂದ ಬಿಟ್‌ಕಾಯಿನ್ ಬಿರುಗಾಳಿ! ಬ್ಲಾಕ್ ಚೈನ್ ಮತ್ತು ಬಿಟ್‌ಕಾಯಿನ್ ಬಗ್ಗೆ ಒಂದಿಷ್ಟು..

ಶ್ರೀಕೃಷ್ಣ ತಂದ ಬಿಟ್‌ಕಾಯಿನ್ ಬಿರುಗಾಳಿ! ಬ್ಲಾಕ್ ಚೈನ್ ಮತ್ತು ಬಿಟ್‌ಕಾಯಿನ್ ಬಗ್ಗೆ ಒಂದಿಷ್ಟು..

- Advertisement -
- Advertisement -

ಬಾಲ್ಯದಿಂದ ಪ್ರಾರಂಭಿಸಿ ಕೌರವರು ಮತ್ತು ಪಾಂಡವರ ನಡುವಿನ ಯುದ್ಧದಲ್ಲಿ ನಿರ್ಣಾಯಕವಾಗುವವರೆಗೆ ಎಷ್ಟು ಬುದ್ಧಿವಂತನಾಗಿದ್ದ ಎಂಬ ಪುರಾಣದ ಶ್ರೀಕೃಷ್ಣನ ಲೀಲೆಯ ಕಥೆಗಳು ಜನಜನಿತವಾಗಿರುವಷ್ಟೇ 21ನೇ ಶತಮಾನದ ಮಿಲೇನಿಯಲ್ ಹ್ಯಾಕರ್ ಶ್ರೀಕೃಷ್ಣನ ಚಾಣಾಕ್ಷತನದ ಕಥೆಗಳನ್ನು ನೀವು ಇತ್ತೀಚಿಗೆ ಪತ್ರಿಕೆಗಳಲ್ಲಿ ಓದಿರಬಹುದು. ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಬಂಧನಗೊಂಡು, ಹ್ಯಾಕಿಂಗ್ ನಡೆಸಿದ ಮಾಹಿತಿ ಬಯಲುಗೊಂಡು ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಹೋಟೆಲ್ ಒಂದರಲ್ಲಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧನವಾಗುವವರೆಗೆ ಈ ಆಧುನಿಕ ಶ್ರೀಕೃಷ್ಣನ ಚಾಲಾಕಿತನದ ಬಗೆಗೆ ಬೆಂಗಳೂರಿನ ಸಿಸಿಬಿ ಪೊಲೀಸರೇ ದಂಗಾಗಿದ್ದಾರೆ ಎಂಬುದು ಈ ಪ್ರಕರಣವನ್ನು ಫಾಲೋ ಮಾಡುತ್ತಿರುವ ಪತ್ರಕರ್ತರ ಜೊತೆಗಿನ ಮಾತುಕತೆಯಿಂದ ತಿಳಿಯುತ್ತದೆ. ಇರಲಿ, ಈ ಪ್ರಕರಣಕ್ಕೆ ಬರುವುದಕ್ಕೂ ಮುಂಚಿತವಾಗಿ, ಕ್ರಿಪ್ಟಿಕ್ ಪದಬಂಧಕ್ಕಿಂತಲೂ ಕ್ಲಿಷ್ಟವಾಗಿರುವ ಕ್ರಿಪ್ಟೋಕರೆನ್ಸಿ ಬಗ್ಗೆ ಒಂದು ಮುಷ್ಟಿಯಾದರೂ ತಿಳಿದುಕೊಳ್ಳಲು ಪ್ರಯತ್ನಿಸೋಣ.

ಬ್ಲಾಕ್‌ಚೈನ್ ತಂತ್ರಜ್ಞಾನ ಮತ್ತು ಕ್ರಿಪ್ಟೋಕರೆನ್ಸಿ

ಇಂದು ನಾವು ಬಳಸುವ ಬಹುತೇಕ ಸೇವೆಗಳಲ್ಲಿ ಬಳಕೆಯಾಗುವುದು ಕೇಂದ್ರೀಕೃತ ಲೆಡ್ಜರ್, ಕೇಂದ್ರೀಕೃತ ಡೇಟಾಬೇಸ್ ತಂತ್ರಜ್ಞಾನ. ಉದಾಹರಣೆಗೆ ಬ್ಯಾಂಕಿಂಗ್ ಸೇವೆಯನ್ನೇ ತೆಗೆದುಕೊಂಡರೆ, ಆ ಸೇವೆಗೆ ಬೇಕಾಗುವ ಮತ್ತು ಬಳಕೆಯಾಗುವ ಎಲ್ಲಾ ಮಾಹಿತಿಯನ್ನು ಕೇಂದ್ರೀಕೃತ ಸರ್ವರ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅದನ್ನು ಕಾಪಾಡಲು ಅಥವಾ ಅದನ್ನು ಹೇಗೆ ಬಳಸಬೇಕು ಎಂದು ನಿರ್ಧರಿಸಲು ಒಂದು ಕೇಂದ್ರೀಕೃತ ಏಜೆನ್ಸಿ ಇರುತ್ತದೆ. ಭಾರತೀಯ ಬ್ಯಾಂಕಿಂಗ್ ಸೇವೆಗೆ ಆ ನಿಯಂತ್ರಣ ಏಜೆನ್ಸಿಯನ್ನು ಭಾರತ ಸರ್ಕಾರ ಎಂದು ಇಲ್ಲಿ ವಿಶಾಲ ಅರ್ಥದಲ್ಲಿ ಅಥವಾ ನಿರ್ದಿಷ್ಟವಾಗಿ ಭಾರತ ಪ್ರಭುತ್ವದ ಸಂಸ್ಥೆಯಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಕಲ್ಪಿಸಿಕೊಳ್ಳಬಹುದು. ಇದಕ್ಕೆ ತನ್ನದೇ ಆದ ಉಪಯೋಗಗಳು ಮತ್ತು ಅಪಾಯಗಳು ಇದ್ದೇ ಇವೆ. ಎಲ್ಲಾ ಮಾಹಿತಿಯನ್ನು ಯಾವುದೋ ಒಂದು ಸಂಸ್ಥೆ ಒಂದು ಕಡೆ ನಿರ್ವಹಿಸುವುದಾದರೆ, ಆ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಹಿಡಿದು, ಯಾವುದೋ ತಾಂತ್ರಿಕ ಸಮಸ್ಯೆಯಿಂದ ಆ ಎಲ್ಲಾ ಡೇಟಾ, ಸಂಬಂಧಿಸಿದವರಿಗೆ ತಿಳಿಯದಂತೆಯೇ ಅಳಿಸಿಹೋಗುವ ಅಥವಾ ಬೇಕಂತಲೇ ಮ್ಯಾನಿಪುಲೇಟ್ ಮಾಡುವ ಅಪಾಯಗಳನ್ನು ಅದು ಎದುರಿಸುತ್ತದೆ.

ಬ್ಯಾಂಕಿಂಗ್ ಕ್ಷೇತ್ರದ ಉದಾಹರಣೆ ತೆಗೆದುಕೊಂಡರೆ, ಚಲಾವಣೆಯಲ್ಲಿರುವ ಕರೆನ್ಸಿಯ ಮೌಲ್ಯವನ್ನು ತೀವ್ರ ಏರುಪೇರಾಗದಂತೆ, ಆ ನಿಟ್ಟಿನಲ್ಲಿ ಆರ್ಥಿಕ ವ್ಯವಸ್ಥೆ ಕುಸಿಯದಂತೆ ನಿಯಂತ್ರಣ ಸಂಸ್ಥೆ ಕಾಪಾಡುತ್ತದೆ ಎಂಬುದು ಅದರ ಪರವಾಗಿರುವ ವಾದ. ಇದು ಬ್ಯಾಂಕಿಂಗ್ ಕ್ಷೇತ್ರದ ಒಂದು ಉದಾಹರಣೆಯಾದರೆ, ಸಾಮಾಜಿಕ ಮಾಧ್ಯಮಗಳು ಕೂಡ ಇಂತಹ ಕೇಂದ್ರೀಕೃತ ಡೇಟಾಬೇಸ್ ಆಧಾರದ ಮೇಲೆಯೇ ಕೆಲಸ ಮಾಡುತ್ತವೆ. ಮೂರನೇ ಮಧ್ಯವರ್ತಿ ಜನರ ನಡುವಿನ ಕೊಡುಕೊಳ್ಳುವಿಕೆಯನ್ನು ನಿಯಂತ್ರಿಸುತ್ತಿರುತ್ತಾನೆ. ಜನರನ್ನು ಮ್ಯಾನಿಪುಲೇಟ್ ಮಾಡುವಲ್ಲಿ ಆ ಮಧ್ಯವರ್ತಿಯ ಕೈವಾಡ ಇದ್ದೇ ಇರುತ್ತದೆ.

ಈ ಕೇಂದ್ರೀಕೃತ ಸಂಗ್ರಹಣೆ, ನಿಯಂತ್ರಣದ ತತ್ವಕ್ಕೆ ವಿರುದ್ಧವಾಗಿ ಹುಟ್ಟಿದ್ದೇ ಈ ಬ್ಲಾಕ್‌ಚೈನ್ ತಂತ್ರಜ್ಞಾನ. ಇದರ ಮೂಲ ಪರಿಕಲ್ಪನೆಯಲ್ಲಿ ಯಾರೋ ಇಬ್ಬರ ನಡುವಿನ ಯಾವುದೇ ಕೊಡುಕೊಳ್ಳುವಿಕೆಗೆ ಮೂರನೇ ಮಧ್ಯವರ್ತಿಯ ಅವಶ್ಯಕತೆ ಇಲ್ಲ. ಕೇಂದ್ರೀಕೃತ ಸಂಗ್ರಹದ ಅವಶ್ಯಕತೆ ಇಲ್ಲ. ಸರ್ಕಾರದ ನಿಯಂತ್ರಣ ಬೇಕಿಲ್ಲ. ಬ್ಲಾಕ್‌ಗಳಂತೆ ಪ್ರತಿ ಟ್ರಾನ್ಸಾಕ್ಷನ್‌ಗಳನ್ನು ಕೊಂಡಿಗಳಂತೆ ಜೋಡಿಸಿಕೊಂಡು, ಸಂಬಂಧಿಸಿದ ಎಲ್ಲರಿಗೂ ಅದು ಲಭ್ಯವಾಗುವಂತೆ ವಿವಿಧ ನೋಡ್‌ಗಳಲ್ಲಿ ಶೇಖರವಾಗುವಂತೆ ನೋಡಿಕೊಳ್ಳುವ ತಂತ್ರಜ್ಞಾನ, ಬಳಕೆದಾರನ ಅಜ್ಞಾತತನವನ್ನು ಉಳಿಸಿಕೊಳ್ಳುವ ಸೆಕ್ಯುರಿಟಿ ಫೀಚರ್‌ಗಳನ್ನೂ ಒಳಗೊಂಡಿರುತ್ತದೆ. ಇದನ್ನು ಟ್ರಸ್ಟ್ (ನಂಬಿಕೆಯ) ತಳಹದಿಯ ಪ್ರೊಟೋಕಾಲ್ ಎನ್ನುವುದೂ ಉಂಟು. 1991ರ ಸಮಯದಲ್ಲಿ ಪರಿಚಿತಗೊಂಡ ಈ ತಂತ್ರಜ್ಞಾನ ಹೆಚ್ಚು ಚಾಲ್ತಿಗೆ ಬಂದದ್ದು 2009ರಲ್ಲಿ. ಆ ವರ್ಷದ ಜನವರಿಯಲ್ಲಿ ಸಾಫ್ಟ್ವೇರ್ ಪ್ರೋಗ್ರಾಮರ್ ಸಟೋಶಿ ನಕಮಾಟೊ ಎಂಬ ಅಡ್ಡ/ಅಜ್ಞಾತ ಹೆಸರಿನ ವ್ಯಕ್ತಿ ಈ ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದಲ್ಲಿ ಪರಿಚಯಿಸಿದ ಕ್ರಿಪ್ಟೋಕರೆನ್ಸಿ ಇಷ್ಟು ಹೆಮ್ಮರವಾಗಿ ಬೆಳೆಯುತ್ತದೆ ಎಂದು ಎಷ್ಟು ಜನ ಊಹಿಸಿದ್ದರೋ ತಿಳಿದಿಲ್ಲ.

ಹೀಗೆ ಪ್ರಾರಂಭವಾದ, ಒಂದು ಸಣ್ಣ ಸಮುದಾಯದಲ್ಲಿ ಬಳಕೆಯಾಗುವಂತೆ ಸಿದ್ಧಪಡಿಸಿದ ಬಿಟ್‌ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿ ಇಂದು ಅಗಾಧಮಟ್ಟಕ್ಕೆ ಬೆಳೆದಿದೆ. ಈ ಹಿಂದೆ ’ಮೈನಿಂಗ್’ ಮಾಡುವ ಮೂಲಕ ಬಿಟ್‌ಕಾಯಿನ್‌ಗಳನ್ನು ಕೆಲವೇ ಕೆಲವರು ಸಂಪಾದಿಸುತ್ತಿದ್ದರು. ಒಂದು ರೀತಿಯ ಗಣಿತದ ಪ್ರಮೇಯಗಳನ್ನು ಕಂಪ್ಯೂಟಿಂಗ್ ಮೂಲಕ ಬಿಡಿಸುವುದರಿಂದ ಈ ಬಿಟ್‌ಕಾಯಿನ್‌ಗಳನ್ನು ಮೈನ್ ಮಾಡಬಹುದು. ಒಂದು ವರದಿಯ ಪ್ರಕಾರ 2013ರಲ್ಲಿ ವಿಶ್ವದಲ್ಲಿ ಕೇವಲ ಸುಮಾರು 900 ಜನ ಬಿಟ್‌ಕಾಯಿನ್‌ಗಳನ್ನು ಹೊಂದಿದ್ದರು ಎನ್ನಲಾಗುತ್ತದೆ. ಆದರೆ ಇವತ್ತಿಗೆ ಇದನ್ನು ಮಾರಾಟ ಮಾಡುವ-ಕೊಂಡುಕೊಳ್ಳುವ ಹಲವು ಪ್ಲಾಟ್‌ಫಾರ್ಮ್‌ಗಳು ಹೊರಹೊಮ್ಮಿವೆ. ಅವುಗಳು ತಮ್ಮ ಅಂತರ್ಜಾಲ ತಾಣಗಳಲ್ಲಿ, ಆಪ್‌ಗಳಲ್ಲಿ ಈ ಕ್ರಿಪ್ಟೋಕರೆನ್ಸಿಗಳ ದಿನನಿತ್ಯದ ಬೆಲೆಯನ್ನು ಕೂಡ ಪ್ರಕಟ ಮಾಡುತ್ತವೆ. ಇಂತಹ ಒಂದು ಟ್ರೇಡಿಂಗ್ ವೇದಿಕೆ ‘https://www.coinbase.com/price’ ಬಿಟ್‌ಕಾಯಿನ್ ಬೆಲೆಯನ್ನು ನವೆಂಬರ 9ಕ್ಕೆ 50,26,000 ರೂ ಎಂದು ಪ್ರಕಟಿಸಿದೆ. ಅಂದರೆ ಒಂದು ’ಕಲ್ಟ್’ ಸಮುದಾಯದ ನಡುವೆ ಚಲಾವಣೆಗೆ ಸೃಷ್ಟಿಸಿಕೊಂಡಿದ್ದ ಈ ರೀತಿಯ ಡಿಜಿಟಲ್ ನೋಟು ಇಂದು ’ಕಮಾಡಿಟಿ’ಯಾಗಿ ಬದಲಾಗಿರುವುದೂ ಅಲ್ಲದೆ, ವ್ಯಾಪಕವಾಗಿ ಒಪ್ಪಿಗೆಯನ್ನು ಪಡೆದಿದೆ. ಇದೇ ಕಾರಣಕ್ಕೆ ಅದು ಸರ್ಕಾರಗಳ ನಿಯಂತ್ರಣಕ್ಕೆ ಬಂದರೆ, ಅದರ ಮೂಲ ತತ್ವಕ್ಕೇ ಕೊಡಲಿ ಏಟು ಬಿದ್ದಂತೆ. ಅದು ಅತ್ತ ಇರಲಿ.

ಬಿಟ್‌ಕಾಯಿನ್ ಮಾತ್ರ ಕ್ರಿಪ್ಟೋಕರೆನ್ಸಿಯೇ?

ಇವತ್ತಿನ ದಿನಕ್ಕೆ ನೂರಾರು ಕ್ರಿಪ್ಟೋಕರೆನ್ಸಿಗಳು ಚಾಲ್ತಿಯಲ್ಲಿವೆ. ಅವುಗಳ ಮೌಲ್ಯಗಳಲ್ಲಿ ಆಗುವ ಏರುಪೇರು ಕೂಡ ಯಾವುದೇ ಸಾಮಾನ್ಯ ತರ್ಕಕ್ಕೆ ನಿಲುಕುವಂತದಲ್ಲ. ಇದೇ ರೀತಿ ಮತ್ತೊಂದು ಜನಪ್ರಿಯ ಕ್ರಿಪ್ಟೋಕರೆನ್ಸಿ ’ಇಥೀರಿಯಂ’. ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್ ಎಂಬ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಕೊರಿಯನ್ ವೆಬ್ ಸೀರೀಸ್ ’ಸ್ಕ್ವಿಡ್ ಗೇಮ್ಸ್’ ನಂತರ ಸ್ಕ್ವಿಡ್ ಎಂಬ ಕ್ರಿಪ್ಟೋಕರೆನ್ಸಿಯೊಂದು ಜನಪ್ರಿಯವಾಗಿ, ಟ್ರೇಡ್ ಆಗಿ ನೆಲಕಚ್ಚಿದ ವರದಿಯಾಗಿತ್ತು. ಈ ಕ್ರಿಪ್ಟೋಕರೆನ್ಸಿಯನ್ನು ಮೈನ್ ಮಾಡಲು ಬೇರೆ ಇತರ ಕ್ರಿಪ್ಟೋಕರೆನ್ಸಿಗಳನ್ನು ಬಳಸಬೇಕಿತ್ತು ಎನ್ನುತ್ತದೆ ಒಂದು ವರದಿ. ಒಂದು ದಿನ ಈ ಸ್ಕ್ವಿಡ್ ಟೋಕನ್‌ನ ಮೌಲ್ಯ 628.33 ಡಾಲರ್‌ನಿಂದ 2,856.65 ಡಾಲರ್‌ಗೆ ಏರಿ, ಐದೇ ನಿಮಿಷಗಳ ನಂತರ 0.0007 ಡಾಲರ್‌ಗೆ ಕುಸಿದಿದ್ದರಿಂದ ಲಕ್ಷಾಂತರ ಡಾಲರ್‌ಗಳು ನೀರಿನಲ್ಲಿ ಹುಣಸೆ ತೊಳೆದಂತೆ ಕೊಚ್ಚಿಹೋಗಿದೆ. ಇದಕ್ಕೆ ಕಾರಣಗಳು ಏನು ಎಂದು ಕೇಳಿದರೆ ತಿಳಿದವರಿಲ್ಲ. ಇನ್ನೂ ಈ ಕ್ರಿಪ್ಟೋಕರೆನ್ಸಿಯನ್ನು ಅಭಿವೃದ್ಧಿಪಡಿಸಿದ ಡೆವಲಪರ್ ಮೊದಲೇ ಅಜ್ಞಾತನಾಗಿರುತ್ತಾನೆ, ಆತ ಈಮೇಲ್‌ಗೂ ಉತ್ತರಿಸುತ್ತಿಲ್ಲ ಎನ್ನುತ್ತವೆ ವರದಿಗಳು. ಹೀಗೆ ಕ್ರಿಪ್ಟೋಕರೆನ್ಸಿಯ ಲೋಕ ಬಗೆದಷ್ಟೂ ನಿಗೂಢ.

ಇದರ ಜೊತೆಗೆ ನಾನ್ ಫಂಗೈಯೇಬಲ್ ಟೋಕನ್ಸ್ (ಎನ್‌ಎಫ್‌ಟಿ) ಎಂಬ ಒಂದು ಬಗೆ ಕೂಡ ಸದ್ದು ಮಾಡುತ್ತಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾಯಿಸಲಾಗದ ಟೋಕನ್ ರೀತಿಯಲ್ಲಿ ಕೆಲಸ ನಿರ್ವಹಿಸುವುದರಿಂದ ಇದು ಉಳಿದ ಕ್ರಿಪ್ಟೋಕರೆನ್ಸಿಗಳಿಗಿಂತ ಭಿನ್ನವಾಗಿದೆ. ಡಿಜಿಟಲ್ ಮಾದರಿಯ ಪೇಂಟಿಂಗ್‌ಗಳ ಮಾರಾಟ ಈ ವೇದಿಕೆಗಳಲ್ಲಿ ಅತಿ ಹೆಚ್ಚು ವೇಗ ಪಡೆದಿದೆ, ಮತ್ತು ಸಾವಿರಾರು ಡಾಲರ್‌ಗಳ ಮೌಲ್ಯದ ವಹಿವಾಟು ಇಲ್ಲಿ ನಡೆಯುತ್ತದೆ ಎನ್ನಲಾಗುತ್ತಿದೆ.

ಹೀಗೆ ಕೇಂದ್ರೀಕೃತ ಮತ್ತು ನಿಯಂತ್ರಿತ ಅರ್ಥ ವ್ಯವಸ್ಥೆಯ ಹೊರಗೆ ಕಾರ್ಯನಿರ್ವಹಿಸುತ್ತಿರುವ ಈ ಕ್ರಿಪ್ಟೋಕರೆನ್ಸಿಗಳ ಬಗ್ಗೆ ವಿವಿಧ ದೇಶಗಳ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ನಿಲುವೇನು?

ಎಲ್ ಸೆಲ್ವಡಾರ್‌ನಲ್ಲಿ ಅಧಿಕೃತ ಚಲಾವಣೆಗೆ ಬಿಟ್‌ಕಾಯಿನ್

ಈ ಕ್ರಿಪ್ಟೋಕರೆನ್ಸಿಯ ತತ್ವವನ್ನು ಉಟೋಪಿಯದ ರೀತಿಯಲ್ಲಿ ಎತ್ತಿಹಿಡಿಯುವ ಸಮುದಾಯ ಪ್ರತಿಪಾದಿಸುವ ಮತ್ತೊಂದು ಉದಾತ್ತ ವಾದವೆಂದರೆ, ಎಷ್ಟೋ ದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿರುವ ವಲಸಿಗರು ಹಾಗೂ ಮುಂತಾದ ಸವಲತ್ತುಗಳಿಲ್ಲದ ಜನರ ದಿನನಿತ್ಯದ ವಹಿವಾಟಿಗೆ ಬದಲಿ ವ್ಯವಸ್ಥೆಯ ಅವಕಾಶಗಳನ್ನು ಕ್ರಿಪ್ಟೋಕರೆನ್ಸಿ ಒದಗಿಸಿಕೊಡುತ್ತದೆ ಎಂಬುದು. ಆದರೆ ಇದೇ ಕ್ರಿಪ್ಟೋಕರೆನ್ಸಿ, ಡಾರ್ಕ್ ವೆಬ್‌ಗಳ ಮೂಲಕ ಕಾನೂನುಬಾಹಿರ ಚಟುವಟಿಕೆಗಳ ಡಾರ್ಲಿಂಗ್ ಆಗಿ ಬಳಕೆಯಾಗುತ್ತಿರುವುದು ಹಲವು ದೇಶಗಳಲ್ಲಿ ತಲೆನೋವಾಗಿ ಪರಿಣಮಿಸಿದೆ. ಮುಖ್ಯವಾಗಿ ಕ್ರಿಪ್ಟೋಕರೆನ್ಸಿ ಬಳಕೆದಾರರನ್ನು ಟ್ರೇಸ್ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಇದು ಡಾರ್ಕ್ ವೆಬ್‌ನಲ್ಲಿ ಜನಪ್ರಿಯವಾಗಿದೆ. ಚೈನಾ, ಟರ್ಕಿಯಂತಹ ದೇಶಗಳಲ್ಲಿ ಒಂದೋ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಲಾಗಿದೆ ಇಲ್ಲ ತೀವ್ರ ನಿರ್ಬಂಧಕ್ಕೆ ಒಳಪಡಿಸಲಾಗಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಟ್ರೇಡ್‌ಗೆ ಅವಕಾಶವಿದ್ದರೂ ಅದನ್ನು ’ಲೀಗಲ್’ ಟೆಂಡರ್ ಆಗಿ ಇನ್ನೂ ಪರಿಗಣಿಸಿಲ್ಲ. ಈಗ ಕ್ರಿಪ್ಟೋಕರೆನ್ಸಿಯನ್ನು ಕಾನೂನುಬದ್ಧಗೊಳಿಸಿರುವುದು ಎಲ್ ಸೆಲ್ವಡಾರ್ ಎಂಬ ಪುಟ್ಟ ಲ್ಯಾಟಿನ್ ಅಮೆರಿಕ ದೇಶ.

ಹಲವು ಸಮಸ್ಯೆಗಳುಳ್ಳ ಈ ದೇಶದ ಎನ್‌ಜಿಒ ಒಂದಕ್ಕೆ ಸಾಮಾಜಿಕ ಕೆಲಸಗಳಿಗಾಗಿ ಬಳಸಲು ಅನುವಾಗುವಂತೆ ಅಮೆರಿಕದ ಅಜ್ಞಾತನೊಬ್ಬ ಒಂದು ಲಕ್ಷ ಡಾಲರ್ ಮೌಲ್ಯದ ಬಿಟ್ ಕಾಯಿನ್‌ಗಳನ್ನು ವರ್ಗಾಯಿಸಿದ್ದರಿಂದ ಅಲ್ಲಿ ಹಲವು ವ್ಯವಹಾರ ವಹಿವಾಟುಗಳಿಗೆ ಬಾಗಿಲು ತೆರೆಯಿತು ಎನ್ನುತ್ತದೆ ’ಟೈಮ್’ ಪತ್ರಿಕೆಯ ವರದಿಯೊಂದು.

ಅಲ್ಲಿ ಕೂಡಲೇ ವಿದೇಶಗಳಿಂದ ಹಲವು ವ್ಯವಹಾರ ಉದ್ಯಮಗಳು ತಲೆಎತ್ತುತ್ತವೆ. ಆರ್ಥಿಕ ಚಟುವಟಿಕೆಗಳು ಪುನಶ್ಚೇತನಗೊಳ್ಳುತ್ತವೆ.ಎಲ್ ಸೆಲ್ವಡಾರ್‌ನ ಜನಪ್ರಿಯ ಅಧ್ಯಕ್ಷ ನಯೀಬ್ ಬುಕೆಲೆ, ಬಿಟ್‌ಕಾಯಿನ್ ಆರ್ಥಿಕ ವ್ಯವಸ್ಥೆಗೆ ಚಾಲನೆ ನೀಡುತ್ತಾರೆ.

ಸೆಪ್ಟಂಬರ್ 7ರಂದು ಅಮೆರಿಕದ ಡಾಲರ್ ಜೊತೆಗೆ ಬಿಟ್‌ಕಾಯಿನ್‌ಅನ್ನು ಅಧಿಕೃತ ಲೀಗಲ್ ಟೆಂಡರ್ ಆಗಿ ಅಳವಡಿಸಿಕೊಳ್ಳಲಾಗುತ್ತದೆ. ಬಿಟ್‌ಕಾಯಿನ್ ಕಾನೂನನ್ನು ಜಾರಿ ಮಾಡಿ ತಾಂತ್ರಿಕವಾಗಿ ಸಾಧ್ಯ ಇರುವ ಎಲ್ಲ ವ್ಯವಹಾರಗಳು ಬಿಟ್‌ಕಾಯಿನ್ ಮೂಲಕ ವಹಿವಾಟು ನಡೆಸಬೇಕು ಎಂದು ಕಾನೂನು ಮಾಡಲಾಗುತ್ತದೆ. ಸರ್ಕಾರದ ಸಬ್ಸಿಡಿಗಳನ್ನು ಬಿಟ್‌ಕಾಯಿನ್‌ಗಳ ಮೂಲಕ ನೀಡುವುದನ್ನು ಪ್ರಾರಂಭಿಸಲಾಗುತ್ತದೆ.

ಅಧ್ಯಕ್ಷ ಬುಕೆಲೆ, ಬಿಟ್‌ಕಾಯಿನ್ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಎಷ್ಟು ಪ್ರತಿಪಾದಿಸಿದರೂ, ಅದು ಕಾರ್ಯಗತವಾಗುವುದರ ಬಗ್ಗೆ ಹಲವರು ಸಂದೇಹ ಮತ್ತು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಬಿಟ್‌ಕಾಯಿನ್ ಪರವಾದ ಲಾಬಿ ಇದು ಎಂದು ವಿರೋಧಿಸಿರುವವರಿದ್ದಾರೆ. ರಸ್ತೆಗಳಲ್ಲಿ ಪ್ರತಿಭಟನೆಗಳಾಗಿವೆ. ಬಿಟ್‌ಕಾಯಿನ್ ಪರವಾದ ಲಾಬಿಗಳಿಂದ ಅಲ್ಲಿನ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರ ಬದಲಾವಣೆಗಳಾಗಿದ್ದು, ಸಂವಿಧಾನವನ್ನು ಅಧ್ಯಕ್ಷರಿಗೆ ಬೇಕಾದಂತೆ ಅರ್ಥೈಸಿ ತೀರ್ಪು ನೀಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಇತ್ತೀಚೆಗೆ ಆಸ್ಟ್ರೇಲಿಯಾದ ಕಾಮನ್‌ವೆಲ್ತ್ ಬ್ಯಾಂಕ್ ತನ್ನ ಬಳಕೆದಾರರು ಪ್ರಾಯೋಗಿಕವಾಗಿ ಬಿಟ್‌ಕಾಯಿನ್ ಟ್ರೇಡ್ ಮಾಡಲು ತನ್ನ ಆಪ್‌ನಲ್ಲಿ ಅವಕಾಶ ಕಲ್ಪಿಸಿತ್ತು. ಈಗಾಗಲೇ ಕ್ರಿಪ್ಟೋಕರೆನ್ಸಿಯನ್ನು ತನ್ನ ಬಳಕೆದಾರರು ಬಳಸುತ್ತಿದ್ದು, ತಾನೂ ಕೂಡ ಆ ಮಾರುಕಟ್ಟೆಗೆ ತೆರೆದುಕೊಳ್ಳುವುದು ಅನಿವಾರ್ಯ ಎಂಬುದು ಬ್ಯಾಂಕ್ ನೀಡುತ್ತಿರುವ ಸ್ಪಷ್ಟನೆ.

ಶ್ರೀಕೃಷ್ಣ ಬಂದನೋ ಬೆಂಗಳೂರಿಗೆ

ಭಾರತದಲ್ಲಿಯೂ ಕ್ರಿಪ್ಟೋಕರೆನ್ಸಿ ವಹಿವಾಟು ಒಂದು ಮಟ್ಟದಲ್ಲಿ ನಡೆಯುತ್ತಿರುವುದು ಆಗಾಗ ಕೇಳುತ್ತಲೇ ಇದ್ದೇವೆ. ಆದರೆ ಅದರ ಆಳ ಅಗಲಗಳ ಬಗ್ಗೆ ಅಷ್ಟು ಗಂಭೀರ ಅಧ್ಯಯನಗಳು ಲಭ್ಯವಿಲ್ಲ.

ಇತ್ತೀಚೆಗೆ ನಡೆದ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಗಳ ಸಮಯದಲ್ಲಿ ಬಿಟ್‌ಕಾಯಿನ್ ಭಾರಿ ಮಟ್ಟದಲ್ಲಿ ಪ್ರತಿಧ್ವನಿಸಿತ್ತು. ಬಿಟ್‌ಕಾಯಿನ್ ಹಗರಣದಲ್ಲಿ ಹಾಲಿ ಬಿಜೆಪಿ ಸರ್ಕಾರದ ಹಲವರು ಮತ್ತು ಹಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು.

ಕಳೆದ ವರ್ಷ ಡಾರ್ಕ್ ವೆಬ್‌ನಲ್ಲಿ ಡ್ರಗ್ ವಹಿವಾಟು ನಡೆಸುತ್ತಿದ್ದ ಪ್ರಕರಣವೊಂದರ ಸಂಬಂಧವಾಗಿ ಬಂಧಿತನಾಗಿದ್ದ ಬೆಂಗಳೂರು ಮೂಲದ 26 ವರ್ಷದ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ, ಫೆಬ್ರವರಿ 2018ರಲ್ಲಿ ಶಾಸಕರೊಬ್ಬರ ಮಗನ ಮೇಲೆ ಆರೋಪಿಸಲಾಗಿರುವ ಕೊಲೆ ಪ್ರಯತ್ನದ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂಬುದು ಕೂಡ ಇತ್ತೀಚೆಗೆ ತಿಳಿದುಬಂದಿದೆ. ಈ ಎಲ್ಲಾ ವಿವರಗಳು ಈಗ ಲಭ್ಯವಾಗುತ್ತಿರುವುದು ಪೊಲೀಸರು ಡ್ರಗ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ 800 ಪುಟಗಳ ದೋಷಾರೋಪದ ಪಟ್ಟಿಯಿಂದ.

ಈ ದೋಷಾರೋಪ ಪಟ್ಟಿಯಲ್ಲಿ ಈ ಶ್ರೀಕಿ ಎಂಬುವ ಆರೋಪಿ, ವಿಶ್ವದ ಹಲವು ವೆಬ್‌ಸೈಟ್‌ಗಳ ಮೇಲೆ ರ್‍ಯಾನ್ಸಮ್‌ವೇರ್ ದಾಳಿ ನಡೆಸಿ, ಅಲ್ಲಿನ ಮಾಹಿತಿಯನ್ನು ಕದ್ದು, ಬೆದರಿಕೆ ಹಾಕಿ ಬಿಟ್‌ಕಾಯಿನ್‌ಗಳ ಮೂಲಕ ಹಣ ದೋಚುತ್ತಿದ್ದುದಲ್ಲದೆ, ಬಿಟ್‌ಕಾಯಿನ್‌ಗಳನ್ನೂ ಹ್ಯಾಕ್ ಮಾಡಿ ತನ್ನ ವ್ಯಾಲೆಟ್‌ಗೆ ವರ್ಗಾಯಿಸಿಕೊಳ್ಳುತ್ತಿದ್ದ ಎಂಬುದು ದಾಖಲಾಗಿದೆ. ಇದೇ ವಿಚಾರಣೆ ವೇಳೆಯಲ್ಲಿ ಆತನ ಬಳಿಯಿದ್ದ 31 ಬಿಟ್‌ಕಾಯಿನ್‌ಗಳನ್ನು ಕ್ರೈಂ ಬ್ರಾಂಚ್ ಪೊಲೀಸರು ವಶಪಡಿಸಿಕೊಂಡಿದ್ದರು, ಅಂದರೆ ಸರ್ಕಾರದ ಪರವಾನಗಿ ಪಡೆದು ಸೃಷ್ಟಿಸಿಕೊಂಡಿದ್ದ ವ್ಯಾಲೆಟ್‌ಗೆ ವರ್ಗಾಯಿಸಿಕೊಂಡಿದ್ದರು ಎಂಬ ವರದಿಗಳು ಕೂಡ ಲಭ್ಯವಿದ್ದು ಆ ಬಿಟ್‌ಕಾಯಿನ್‌ಗಳು ಏನಾದವು ಎಂಬ ಪ್ರಶ್ನೆ ಕೂಡ ಎದ್ದಿದೆ. ಸುಮಾರು 5000 ಬಿಟ್ ಕಾಯಿನ್‌ಗಳನ್ನು (ಅಂದಾಜು ಸುಮಾರು 2500 ಕೋಟಿ ಮೌಲ್ಯ) ಈತ ಹ್ಯಾಕ್ ಮಾಡಿದ್ದ ಎಂಬುದು ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿದ್ದರೆ, ಅದು 5000 ಅಷ್ಟೇ ಅಲ್ಲ, ಅದರ ಎರಡುಮೂರು ಪಟ್ಟು ಬಿಟ್‌ಕಾಯಿನ್‌ಗಳನ್ನು ಆತ ಹ್ಯಾಕ್ ಮಾಡಿದ್ದ ಎಂದು ಕೂಡ ಗಾಳಿಸುದ್ದಿ ಹರಿದಾಡುತ್ತಿದೆ. ಇದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಆ ಐದು ಸಾವಿರ ಬಿಟ್‌ಕಾಯಿನ್‌ಗಳನ್ನು ಟ್ರೇಸ್ ಮಾಡಲು ಆಗಲಿಲ್ಲವೇ? ಅಥವಾ ಟ್ರೇಸ್ ಮಾಡಿದ ಮೇಲೆ ಏನಾದರೂ ಆಯಿತೇ? ಎಂಬುದು ಮುಖ್ಯವಾದದ್ದು. ಇದು ಡ್ರಗ್ ಜಾಲಕ್ಕೆ ಕೂಡ ಬೆಸೆದುಕೊಂಡಿರುವುದು ಸಮಸ್ಯೆಯನ್ನು ಇನ್ನೂ ಜಟಿಲಗೊಳಿಸಿದೆ. ಅಲ್ಲದೆ ಅಮೆರಿಕದ ತನಿಖಾ ಏಜೆನ್ಸಿಯ ತನಿಖೆ ಕೂಡ ಈ ಪ್ರಕರಣದ ಕಡೆಗೆ ಬೊಟ್ಟುಮಾಡಿದೆ ಎನ್ನುವ ಆರೋಪಗಳು ಕೂಡ ಕೇಳಿಬಂದಿವೆ.

ಅಲ್ಲದೆ ಶ್ರೀಕಿ, ಹಲವು ಸರ್ಕಾರಿ ವೆಬ್‌ಸೈಟ್‌ಗಳನ್ನು ಕೂಡ ಹ್ಯಾಕ್ ಮಾಡಿದ್ದ ಎಂಬುದು ಇತ್ತೀಚೆಗೆ ತಿಳಿದುಬಂದಿರುವ ಸಂಗತಿಯಾಗಿದೆ. ಈತನ ವಿರುದ್ಧ ಸರಿಯಾದ ಪ್ರಕರಣ ದಾಖಲಿಸದೆ ಜಾಮೀನಿನ ಮೇಲೆ ಹೊರಹೋಗಲು ಬಿಟ್ಟದ್ದು ಏಕೆ? ಈಗ ಏಕಾಏಕಿ ಹೋಟೆಲ್ ಒಂದರಲ್ಲಿ ಹಲ್ಲೆ ನಡೆಸಿದ ಎಂಬ ಕಾರಣಕ್ಕೆ ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದರ ಹಿಂದೆ ಬೇರೆ ಏನಾದರೂ ಷಡ್ಯಂತ್ರ ಅಡಗಿದೆಯೇ ಎಂಬಿತ್ಯಾದಿ ಚರ್ಚೆಗಳು ಈಗ ಕಾಣಿಸಿಕೊಂಡಿವೆ.

ಒಟ್ಟಿನಲ್ಲಿ ಬಿಟ್‌ಕಾಯಿನ್ ಬಳಕೆಯ ಕಲ್ಟ್ ಸಮುದಾಯ ಆರಂಭದಲ್ಲಿ ಪ್ರತಿಪಾದಿಸುತ್ತಿದ್ದ ತತ್ವಗಳ ಎಲ್ಲೆ ಮೀರಿ, ಅದು ಕರಾಳ ಕೆಲಸಗಳಿಗೆ ಬಳಕೆಯಾಗುತ್ತಿರುವುದು ಬೆಂಗಳೂರಿನಲ್ಲಿ ಮಿಲೇನಿಯಲ್ ಹ್ಯಾಕರ್ ಶ್ರೀಕೃಷ್ಣನ ಅಪರಾವತಾರಗಳಿಂದ ಬಟಾಬಯಲಾಗಿದೆ. ಇದರ ಹಿಂದೆ ರಾಜಕೀಯ ನಾಯಕರ ಕೈವಾಡಗಳು ಇವೆಯೇ? ಇದು ರಾಜಕೀಯ ನಾಯಕರ ತಲೆದಂಡಕ್ಕೆ ಕಾರಣವಾಗಬಹುದೇ ಇತ್ಯಾದಿ ಚರ್ಚೆಗಳು ಬಿರುಸಿನಿಂದ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ನಾನುಗೌರಿ ಈ ಪ್ರಕರಣದ ಇನ್ನಷ್ಟು ವಿವರಗಳನ್ನು ನಿಷ್ಪಕ್ಷಪಾತವಾಗಿ ಓದುಗರಿಗೆ ನೀಡಲಿದೆ.


ಇದನ್ನೂ ಓದಿ: ಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...