Homeಅಂಕಣಗಳುಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

ಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

- Advertisement -
- Advertisement -

1984ರಲ್ಲಿ ಇಂದಿರಾ ಹತ್ಯೆ ಜರುಗಿದ ನಂತರ ಸಿಖ್ಖರ ಸಾಮೂಹಿಕ ಮಾರಣಹೋಮದ ರಣಭೂಮಿ ಆದದ್ದು ಪೂರ್ವೀ ದೆಹಲಿಯ ತ್ರಿಲೋಕಪುರಿ ಮತ್ತು ನೆರೆಹೊರೆಯ ಕಲ್ಯಾಣಪುರಿ. ಕಾಂಗ್ರೆಸ್ಸಿನ ತಲೆಯಾಳುಗಳೇ ಈ ಮಾರಣಹೋಮದ ನೇತೃತ್ವ ವಹಿಸಿದ್ದರು.

ನೆಹರೂ ಮತ್ತು ಇಂದಿರಾ ಕಾಲದಲ್ಲಿ ದೆಹಲಿಯ ಕೊಳೆಗೇರಿಗಳನ್ನು ಕೆಡವಿದ ನಂತರ ನಿರಾಶ್ರಿತರಾದ ದೀನದಲಿತರಿಗೆ ಪುನರ್ವಸತಿ ಕಲ್ಪಿಸಿದ್ದು ತ್ರಿಲೋಕಪುರಿ ಮತ್ತು ಪಕ್ಕದ ಕಲ್ಯಾಣಪುರಿಯಲ್ಲಿ. ಸಂಜಯಗಾಂಧೀ ಬುಲ್ಡೋಜರ್ ನೆಲಸಮ ಮಾಡಿದ ತುರ್ಕಮಾನ ಗೇಟಿನ ಕೊಳೆಗೇರಿಗಳ ಬಡ ಮುಸಲ್ಮಾನರನ್ನೂ ಇದೇ ತ್ರಿಲೋಕಪುರಿಗೆ ತಂದು ಒಗೆಯಲಾಗಿತ್ತು.

ಆ ಕಾಲಕ್ಕೆ ನೀರು, ಬೆಳಕು, ನೆರಳಿನ ಯಾವುದೇ ನಾಗರಿಕ ಸೌಲಭ್ಯಗಳ ಸುಳಿವೂ ಇಲ್ಲದ ಈ ಬರಡು ಬಂಜರು ನೆಲದಲ್ಲಿ ದಲಿತರು, ಹಿಂದುಳಿದವರು, ಮುಸಲ್ಮಾನರು ಕಾಲಕ್ರಮೇಣ ತಮ್ಮ ಬಡಬದುಕುಗಳನ್ನು ಕಟ್ಟಿಕೊಂಡರು.

ಪೂರ್ವ ದೆಹಲಿಯ ತ್ರಿಲೋಕಪುರಿ, ಕಲ್ಯಾಣಪುರಿ ಹಾಗೂ ವಾಯುವ್ಯ ದೆಹಲಿಯ ಮಂಗೋಲ್ ಪುರಿಯಲ್ಲಿ ಐದಾರೂ ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ನೆಲೆಸಿದ್ದಾರೆ. ಇವರೆಲ್ಲ ತಮಿಳುನಾಡಿನಿಂದ ವಲಸೆ ಬಂದವರು. ತಮಿಳರ ಪಾಲಿಗೆ ಇವರು ’ಕನ್ನಡಕಾರ’ರು. ಆದರೆ ಕರ್ನಾಟಕದ ಕನ್ನಡಿಗರಿರಲಿ, ಕರ್ನಾಟಕದ ಕನ್ನಡಿಗರು ಕೂಡ ಈ ’ಕನ್ನಡಕಾರರ’ ಇರವನ್ನೇ ಅರಿಯರು. ಹೊರನಾಡ ಕನ್ನಡಿಗರು ಎಂಬ ಸ್ಥಾನಮಾನವಾಗಲಿ, ಅದರ ವ್ಯಾಖ್ಯೆಯಾಗಲಿ ಇವರ ಬಳಿ ಸುಳಿದೇ ಇಲ್ಲ. 1948ರಷ್ಟು ಹಿಂದೆಯೇ ಹುಟ್ಟಿದ ಹೆಸರಾಂತ ಸಂಸ್ಥೆ ದೆಹಲಿ ಕರ್ನಾಟಕ ಸಂಘ. ಕೊಳೆಗೇರಿಯ ಈ ಬಡ ದೆಹಲಿ ’ಕನ್ನಡಕಾರ’ರ ಸಂಗತಿ ಸಂಘದ ಗಮನಕ್ಕೆ ಬಂದು ಐದಾರು ವರ್ಷಗಳೇ ಉರುಳಿವೆ. ಸಂಘ ಅವರ ಕುರಿತು ಕನಿಷ್ಠ ಕುತೂಹಲವನ್ನೂ ತೋರಿಲ್ಲ. ಅವರೂ ನಾವು ಕನ್ನಡಿಗರೆಂದು ಹೇಳಿಕೊಂಡು ಸಂಘದ ಬಳಿ ಸಾರುವ ಸಾಹಸ ಮಾಡಿಲ್ಲ.

ಡೆಲ್ಲಿ ಕನ್ನಡಸಂಘ ನಮ್ಮನ್ನು ಕರೆದಿಲ್ಲ, ನಾವು ಅವರ ಬಳಿ ಹೋಗಿಲ್ಲ. ತಮಿಳು ಸಂಘಂಗೆ ಹೋಗಿದ್ದೇವೆ. ಸದಸ್ಯರೂ ಆಗಿದ್ದೇವೆ. ಮಕ್ಕಳು ಡೆಲ್ಲಿಯ ತಮಿಳು ಶಾಲೆಗಳಿಗೆ ಹೋಗಿ ಕಲೀತಾರೆ. ತಮಿಳುನಾಡಿನಲ್ಲಿ ನಮ್ಮ ಸಂಖ್ಯೆ ಹತ್ತಿಪ್ಪತ್ತು ಲಕ್ಷವಾದರೂ ಇದ್ದೀತು ಎನ್ನುತ್ತಾರವರು.

ಬಹುತೇಕ ಮನೆಗೆಲಸದ ಪಾತ್ರೆ ತಿಕ್ಕುವವರಾಗಿ, ಅಡುಗೆ ಮಾಡುವವರಾಗಿ, ಡ್ರೈವರುಗಳಾಗಿ, ನೆರೆಯ ನೋಯ್ಡಾದ ಫ್ಯಾಕ್ಟರಿಗಳಲ್ಲಿ ಕೂಲಿಕಾರರಾಗಿ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಹೂವು ಮಾರುವವರಾಗಿ, ಸಣ್ಣಪುಟ್ಟ ವ್ಯಾಪಾರ ಮಾಡುವವರಾಗಿ ಹೊಟ್ಟೆ ಹೊರೆಯುತ್ತಿದ್ದಾರೆ ಈ ಕನ್ನಡಿಗರು. ಉತ್ತಮ ಉದ್ಯೋಗಗಳಲ್ಲಿ ನೆಮ್ಮದಿ ಕಂಡುಕೊಂಡಿರುವವರ ಸಂಖ್ಯೆ ಬೆರಳೆಣಿಕೆಯದು.

ಇವರ ಮನೆಮಾತು ಕನ್ನಡ. ನೂರಕ್ಕೆ ಅರವತ್ತು ಎಪ್ಪತ್ತು ಪದಗಳು ಕನ್ನಡ. ಉಳಿದವು ತಮಿಳು. ತಮ್ಮ ಮಾತೃಭಾಷೆ ಕನ್ನಡವೆಂದೇ ಸಾರಿ ಹೇಳುತ್ತಾರೆ. ತಮಿಳುನಾಡಿನಲ್ಲಿ ಇವರನ್ನು ’ಕನ್ನಡ ದೇವಾಂಗ ಚೆಟ್ಟಿಯಾರ್’ ಎಂದೇ ಕರೆಯಲಾಗುತ್ತದೆ. ನೇಯುವುದು ಇವರ ಮೂಲ ಕಸುಬು. 1967ರ ಆಸುಪಾಸಿನಲ್ಲಿ ದಿಲ್ಲಿಗೆ ವಲಸೆ ಬಂದವರಿವರು. ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿದ ಡಿ.ಎಂ.ಕೆ. ವಿದ್ಯುತ್ ಚಾಲಿತ ಮಗ್ಗಗಳ ಆರಂಭಕ್ಕೆ ಅನುಮತಿ ನೀಡಿದ ನಂತರ ನಿರ್ಗತಿಕರಾದ ಕೈಮಗ್ಗದ ನೇಕಾರರು ಇವರು. ವಿದ್ಯುತ್ ಮಗ್ಗಗಳು ತಮ್ಮ ಕಸುಬಿಗೆ ನೀಡಿದ ಕೊಡಲಿಯೇಟನ್ನು ಭರಿಸಲಾರದೆ ಹೊಟ್ಟೆ ಹೊರೆಯಲು ದಿಲ್ಲಿ, ಮುಂಬಯಿ, ಬೆಂಗಳೂರು ನಗರಗಳ ರೈಲುಗಳನ್ನು ಹತ್ತಿದ್ದವರು.

ತಿಂಗಳುಗಳು, ವರ್ಷದೊಪ್ಪತ್ತಿನ ಅಂತರದಲ್ಲಿ ಅಂದಿನ ದಿನಗಳಲ್ಲಿ ದಿಲ್ಲಿಗೆ ಬಂದಿಳಿದ ಕುಟುಂಬಗಳು ಹತ್ತಿರಹತ್ತಿರ ಸಾವಿರ ಎನ್ನುತ್ತಾರೆ ನಾಗಲಿಂಗಂ ಕನ್ನಡ ದೇವಾಂಗ ಚೆಟ್ಟಿಯಾರ್. ಒಂಬತ್ತು ವರ್ಷದ ಹುಡುಗನಾಗಿ ಪಂಜಾಬಿ ಚಹಾದ ಅಂಗಡಿಯಲ್ಲಿ ಕೆಲಸ ಮಾಡಿ ದಿಲ್ಲಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಅವರು.

ನಾಗಲಿಂಗಂ ಅವರನ್ನು ಎದುರಿಗೆ ಕೂರಿಸಿಕೊಂಡು ಮಾತನಾಡಿದರೆ ಅವರ ಕನ್ನಡದಲ್ಲಿ ನೂರಕ್ಕೆ ಅರವತ್ತು ಪದಗಳು ಮಾತ್ರವೇ ನಮಗೆ ತಿಳಿದಾವು. ಬೇರೆ ಕಸುಬೇ ಗೊತ್ತಿಲ್ಲದ ಈ ’ಕನ್ನಡಕಾರ’ರು, ದಿಲ್ಲಿಗೆ ಬಂದ ಆರಂಭದ ದಿನಗಳಲ್ಲಿ ನೆರೆಹೊರೆಯ ಪಾಣಿಪತ್, ಸೋನೆಪತ್, ಘಾಜಿಯಾಬಾದುಗಳ ಕೈಮಗ್ಗಗಳಲ್ಲಿ ಕೂಲಿ ಮಾಡುತ್ತಾರೆ. ತಮಿಳುನಾಡಿನಲ್ಲಿ ತಾವು ನೇಯುತ್ತಿದ್ದ ಸೀರೆಗಳ ಬದಲಿಗೆ ಇಲ್ಲಿ, ದುಪ್ಪಟಿ, ಕಂಬಳಿ ನೇಯ್ದರಂತೆ. ಈ ಮಗ್ಗಗಳೂ ಅಳಿದ ನಂತರ ಬಾಣಲೆಯಿಂದ ಬೆಂಕಿಗೆ ಬಿದ್ದು ಬೇರೆ ಅನ್ನದ ದಾರಿಗಳನ್ನು ಹುಡುಕಿಕೊಳ್ಳುತ್ತಾರೆ.

ಕರೋಲ್ ಬಾಗಿನ ಝುಗ್ಗಿ ಝೋಪಡಿಗಳಿಂದ ತೆರವು ಮಾಡಿಸುವ ಸರ್ಕಾರ ತ್ರಿಲೋಕಪುರಿ, ಮಂಗೋಲ್‌ಪುರಿ, ಇಂದ್ರಾಪುರಿಯಲ್ಲಿ ಪುಟ್ಟ ನಿವೇಶನ ನೀಡಿ ಸಾಗಹಾಕುತ್ತದೆ. ಇಂದಿನ ತ್ರಿಲೋಕಪುರಿಯಲ್ಲಿ ನೆಲೆಸಿರುವ ’ಕನ್ನಡಕಾರರ’ ಕುಟುಂಬಗಳ ಸಂಖ್ಯೆ ನಾನೂರಕ್ಕೂ ಹೆಚ್ಚು. ಕನ್ನಡ ದೇವಾಂಗ ಚೆಟ್ಟಿಯಾರರ ಕುಲದೈವ ಚೌಡೇಶ್ವರಿ. ಆಕೆಗೊಂದು ದೊಡ್ಡದೇ ಆದ ಗುಡಿ ಕಟ್ಟಿದ್ದಾರೆ.

ಕರ್ನಾಟಕದ ಹಂಪಿಯ ದಯಾನಂದ ಸ್ವಾಮಿ ಸರಸ್ವತಿ ಅವರ ಮಠವೇ ಇವರ ಮುಖ್ಯ ಮಠ. ತಮಿಳುನಾಡಿನಲ್ಲಿ ಕನ್ನಡ ದೇವಾಂಗ ಚೆಟ್ಟಿಯಾರರ ಗುಡಿಗಳ ಉದ್ಘಾಟನೆಗೆ ದಯಾನಂದ ಸ್ವಾಮಿ ಹೋಗುತ್ತಾರೆ. ತಮಿಳುನಾಡಿನಲ್ಲಿ ಇವರ ಸಂಸ್ಕೃತಿಯೇ ಬೇರೆ, ತಮಿಳು ಸಂಸ್ಕೃತಿಯೇ ಬೇರೆ. ಉಗಾದಿ ಕನ್ನಡದವರ ಹಬ್ಬವೆಂದು ಇವರಿಗೆ ಗೊತ್ತು. ಆದರೆ ಆಚರಿಸುವುದಿಲ್ಲ. ಯಾಕೆ ಅಂತ ಗೊತ್ತಿಲ್ಲ.

ತಮಿಳುನಾಡಿನಲ್ಲಿ ಕನ್ನಡಿಗ ದೇವಾಂಗ ಚೆಟ್ಟಿಯಾರರು ತಾವು ವಾಸಿಸುವ ಪ್ರದೇಶಗಳನ್ನು ಎರಡು ಸೀಮೆಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಅರವತ್ತೂರು, ಮೂವತ್ತೂರು ಎಂಬ ಎರಡು ಸೀಮೆಗಳಲ್ಲಿ ಅರವತ್ತು ಮತ್ತು ಮೂವತ್ತು ಒಟ್ಟು ತೊಂಬತ್ತು ನಾನಾ ಊರುಗಳಲ್ಲಿ ಇವರ ವಾಸ.

ನೂರಾರು ವರ್ಷಗಳಿಂದ ತಮಿಳುನಾಡಿನಲ್ಲಿ ಬದುಕಿರುವ ಈ ಜನಾಂಗಕ್ಕೆ ತಮ್ಮ ಬೇರುಗಳ ಕುರಿತ ಅರಿವಿಲ್ಲ. ತಾವು ತಮಿಳುನಾಡಿನ ಮೂಲನಿವಾಸಿಗಳೇ ಅಥವಾ ವಲಸೆ ಬಂದವರೇ ಎಂಬುದು ಗೊತ್ತಿಲ್ಲ. ಮನೆಮನೆಗಳ ಹೊಸ್ತಿಲುಗಳ ಒಳಗೆ ಕನ್ನಡವನ್ನೂ, ಹೊರಗೆ ತಮಿಳನ್ನೂ ಮಾತಾಡುವ, ಶಾಲೆಗಳಲ್ಲಿ ಕನ್ನಡ ಕಲಿಯುವ ಅವಕಾಶವೇ ಇಲ್ಲದ, ಪತ್ರವ್ಯವಹಾರಗಳಲ್ಲಿ ಕನ್ನಡವನ್ನು ಬಳಸುತ್ತಿರುವ, ಆದರೆ ಅಂತಹ ಕನ್ನಡವನ್ನು ತಮಿಳು ಲಿಪಿಯಲ್ಲೇ ಬರೆಯುವ ಅನಿವಾರ್ಯ ಈ ’ಕನ್ನಡಕಾರ’ರದು.

ದಿಂಡಿಗಲ್, ಮಧುರೈ, ವಿರುಧನಗರ, ಶಿವಕಾಶಿ, ಸೇಲಂ, ಕೊಯಮತ್ತೂರು, ಈರೋಡು, ಕಾರೈಕುಡಿ, ಪ್ರದೇಶಗಳಲ್ಲಿ ನೆಲೆಸಿರುವ ಇವರಿಗೆ ವಿರುಧನಗರ ಜಿಲ್ಲೆಯ ಅರಪ್ಪುಕೋಟೈ ಎಂಬಲ್ಲಿ ತಮ್ಮದೇ ಜನಾಂಗ ನಡೆಸುವ ಶಿಕ್ಷಣ ಸಂಸ್ಥೆಗಳಿವೆ. ಆದರೆ ಅಲ್ಲಿ ಕನ್ನಡ ಕಲಿಸುವ ವ್ಯವಸ್ಥೆ ಇಲ್ಲ. ಅಲ್ಲಿ ಕನ್ನಡ ಅನ್ನ ಸಂಪಾದಿಸುವ ದಾರಿಯಲ್ಲ.


ಇದನ್ನೂ ಓದಿ: ರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...