ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದ ಮತಗಳ್ಳತನ ಕುರಿತ ರಾಹುಲ್ ಗಾಂಧಿಯ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ಇದಕ್ಕೆ ರಾಹುಲ್ ಗಾಂಧಿ ತಿರುಗೇಟು ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಇಂದು (ಸೆ.18) ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಡಿದ್ದ ಆರೋಪಗಳು ‘ತಪ್ಪು’ ಮತ್ತು ‘ಆಧಾರರಹಿತ’ ಎಂದು ಚುನಾವಣಾ ಆಯೋಗ ಹೇಳಿತ್ತು. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ಕಾನೂನು ಬದ್ಧವಾಗಿದ್ದು, ಸಂಬಂಧಿತ ವ್ಯಕ್ತಿಗೆ ಮಾಹಿತಿ ನೀಡದೆ ಯಾವುದೇ ಅಳಿಸುವಿಕೆ ಸಾಧ್ಯವಿಲ್ಲ ಎಂದಿತ್ತು.
ಅಲ್ಲದೆ, ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮತದಾರರ ಹೆಸರನ್ನು ಅಳಿಸಲು ವಿಫಲ ಪ್ರಯತ್ನಗಳು ನಡೆದಿತ್ತು. ಈ ಸಂಬಂಧ ತನಿಖೆಗಾಗಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಹೇಳಿತ್ತು.
ಚುನಾವಣಾ ಆಯೋಗದ ಪೋಸ್ಟ್‌ಗೆ ತಿರುಗೇಟು ಕೊಟ್ಟಿರುವ ರಾಹುಲ್ ಗಾಂಧಿ, ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ತನಿಖೆಗೆ ತಡೆಯೊಡ್ಡಿದ್ದಾರೆ ಎಂದಿದ್ದಾರೆ.
- ನಮ್ಮ ಅಳಂದ ಅಭ್ಯರ್ಥಿ ವಂಚನೆಯನ್ನು ಬಹಿರಂಗಪಡಿಸಿದ ನಂತರ, ಸ್ಥಳೀಯ ಚುನಾವಣಾ ಅಧಿಕಾರಿ ಎಫ್‌ಐಆರ್ ದಾಖಲಿಸಿದರು, ಆದರೆ ಸಿಐಡಿ ತನಿಖೆಗೆ ಸಿಇಸಿ ತಡೆಯೊಡ್ಡಿದ್ದಾರೆ.
- ಕರ್ನಾಟಕ ಸಿಐಡಿ 18 ತಿಂಗಳಲ್ಲಿ 18 ಪತ್ರಗಳನ್ನು ಬರೆದು ಎಲ್ಲಾ ಅಪರಾಧ ಸಾಕ್ಷ್ಯಗಳನ್ನು ಕೋರಿದೆ. ಆದರೆ ಸಿಇಸಿ ತಡೆಯೊಡ್ಡಿದ್ದಾರೆ.
- ತನಿಖೆಗೆ ಸಹಕರಿಸಲು ಕರ್ನಾಟಕ ಚುನಾವಣಾ ಆಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ಹಲವು ಬಾರಿ ವಿನಂತಿಸಿದೆ. ಆದರೆ, ಸಿಇಸಿ ತಡೆಯೊಡ್ಡಿದ್ದಾರೆ.
- ಡೆಸ್ಟಿನೇಶನ್ ಐಪಿ, ಡಿವೈಸ್ ಪೋರ್ಟ್ ಮತ್ತು ಒಟಿಪಿ ಟ್ರೇಲ್ ವಿವರಗಳನ್ನು ತಡೆಹಿಡಿಯಲಾಗಿದೆ- ಸಿಇಸಿ ತಡೆಯೊಡ್ಡಿದ್ದಾರೆ.
- ಈ ಮತಗಳ್ಳತನವನ್ನು ಬಯಲು ಮಾಡಿರದಿದ್ದರೆ, 6,018 ಮತಗಳನ್ನು ಅಳಿಸಿದ್ದರೆ, ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಸೋಲಬಹುದಿತ್ತು.
- ಸಿಇಸಿ ಜ್ಞಾನೇಶ್ ಕುಮಾರ್ – ನೆಪಗಳನ್ನು ಹೇಳುವುದನ್ನು ನಿಲ್ಲಿಸಿ. ಈಗಲೇ ಕರ್ನಾಟಕ ಸಿಐಡಿಗೆ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿ.
ಮುಖ್ಯ ಚುನಾವಣಾ ಆಯುಕ್ತ ‘ಮತಗಳ್ಳರ ರಕ್ಷಕ’ ಎಂದ ರಾಹುಲ್ ಗಾಂಧಿ: ಆಳಂದ ಮತಗಳ್ಳತನದ ದಾಖಲೆ ಬಿಡುಗಡೆ


