ಇರಾನ್‌ನ ಆಗ್ನೆಯ ನಗರ ಕೆರ್ಮನ್‌ನಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಟೋಟ ಪ್ರಕರಣಗಳಲ್ಲಿ ನೂರಕ್ಕೂ ಅಧಿಕ (103) ಜನರು ಮೃತಪಟ್ಟಿದ್ದಾರೆ. ಅವಘಡದಲ್ಲಿ ನೂರಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
2020ರಲ್ಲಿ ಯುಎಸ್ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಕಮಾಂಡರ್ ಖಾಸಿಮ್ ಸುಲೈಮಾನಿಯ ಪುಣ್ಯಸ್ಮರಣೆ ಕಾರ್ಯಕ್ರಮದ ವೇಳೆ ಸ್ಪೋಟ ನಡೆದಿದೆ. ಭಯೋತ್ಪಾದಕರು ಅಥವಾ ಇಸ್ರೇಲ್ ಸೇನೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ಹೇಳಿವೆ. ಇದುವರೆಗೆ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಖಾಸಿಮ್ ಸುಲೈಮಾನಿ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಜನ ಸೇರಿದ್ದ ವೇಳೆ ಸ್ಪೋಟ ಸಂಭವಿಸಿದೆ. ಮೊದಲ ಸ್ಪೋಟದ 20 ನಿಮಿಷದ ಬಳಿಕ ಮತ್ತೊಂದು ಸ್ಪೋಟ ನಡೆದಿದೆ ಎಂದು ಇರಾನಿನ ಟಿವಿ ಮಾಧ್ಯಮವೊಂದು ವರದಿ ಮಾಡಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಘಟನೆಯನ್ನು ‘ಘೋರ ಮತ್ತು ಅಮಾನವೀಯ ಅಪರಾಧ’ ಎಂದು ಕರೆದಿದ್ದು, ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಉನ್ನತ ಅಧಿಕಾರದ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ರಕ್ತಸಿಕ್ತ ಅವಳಿ ಬಾಂಬ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ರಷ್ಯಾ, ಟರ್ಕಿ ಸೇರಿದಂತೆ ಹಲವಾರು ದೇಶಗಳು ದಾಳಿಯನ್ನು ಖಂಡಿಸಿವೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಇರಾನ್ ಆರೋಗ್ಯ ಸಚಿವ ಬಹ್ರಾಮ್ ಐನೊಲ್ಲಾಹಿ ರಾಜ್ಯ ಟಿವಿಗೆ ನೀಡಿದ ಹೇಳಿಕೆಯಲ್ಲಿ, ಸಾವಿನ ಸಂಖ್ಯೆ 103ಕ್ಕೇರಿದೆ ಮತ್ತು 211 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದು ಇರಾನ್ ಇಸ್ಲಾಮಿಕ್ ಗಣರಾಜ್ಯದ ಇತಿಹಾಸದಲ್ಲಿ ಅತ್ಯಂತ ಭೀಕರ ದಾಳಿಯಾಗಿದೆ. ಇದರ ಹಿಂದೆ ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ವಿವಿಧ ಗುಂಪುಗಳಿವೆ ಎಂದಿದ್ದಾರೆ.
ಇದನ್ನೂ ಓದಿ : BRICS ರಾಷ್ಟ್ರಗಳ ಒಕ್ಕೂಟಕ್ಕೆ ಸೌದಿ ಅರೇಬಿಯಾ ಸೇರಿ ಐದು ರಾಷ್ಟ್ರಗಳ ಸೇರ್ಪಡೆ


