Homeಕರ್ನಾಟಕದಲಿತ ಚಳವಳಿಯ ನೆಲ ಕೋಲಾರದಲ್ಲಿ ’ಅಮಾನವೀಯ ಕೃತ್ಯ'

ದಲಿತ ಚಳವಳಿಯ ನೆಲ ಕೋಲಾರದಲ್ಲಿ ’ಅಮಾನವೀಯ ಕೃತ್ಯ’

- Advertisement -
- Advertisement -

ಸ್ವಾತಂತ್ರ್ಯಪೂರ್ವದಲ್ಲಿ ನೇರವಾಗಿ ಚಾಲ್ತಿಯಲ್ಲಿದ್ದ ಅಸ್ಪೃಶ್ಯತೆಯ ಆಚರಣೆ, ಸ್ವಾತಂತ್ರ್ಯಾನಂತರದ ದಿನಗಳಲ್ಲಿ, ನಮ್ಮ ಸಂವಿಧಾನ ಅಸ್ಪೃಶ್ಯತೆಯನ್ನು ತೊಲಗಿಸಲು ಕ್ರಮಗಳನ್ನು ಕೈಗೊಂಡ ಮೇಲೂ, ಅದು ಬೇರೆಬೇರೆ ಸ್ವರೂಪಗಳಲ್ಲಿ ತನ್ನ ವೇಷ ಬದಲಿಸಿಕೊಂಡು ಕ್ರೌರ್ಯವನ್ನು ಮೆರೆಯುತ್ತಲೇ ಇದೆ. ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿವಿಧ ಸ್ವರೂಪದ ಅಸ್ಪೃಶ್ಯತೆ ಆಚರಣೆಗಳು ಇನ್ನೂ ಚಾಲ್ತಿಯಲ್ಲಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ’ಗುಟ್ಟು’. ಇನ್ನು, ಹಳ್ಳಿಗಳಲ್ಲಿನ ಸಾಮಾಜಿಕ ವ್ಯವಸ್ಥೆಯಂತೂ ಜಾತಿ ಆಧಾರಿತವಾಗಿಯೇ ರೂಪುಗೊಂಡು ಇನ್ನೂ ಹಾಗೆಯೇ ಉಳಿದಿದೆ. ಸ್ವಾತಂತ್ರ್ಯಾನಂತರ ದಲಿತರಿಗೆ ಹಾಗೂ ಆದಿವಾಸಿಗಳಿಗೆ ಸಂವಿಧಾನ ನೀಡಿದ ಹಕ್ಕಿನಿಂದಾಗಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಅವಕಾಶಗಳು ಲಭಿಸುತ್ತಿವೆಯಾದರೂ, ಕಷ್ಟಪಟ್ಟು ಇಲ್ಲಿ ಅವಕಾಶಗಳನ್ನು ಪಡೆದುಕೊಂಡವರ ಮೇಲೆ ಜಾತಿ ಕಾರಣಕ್ಕಾಗುವ ದೌರ್ಜನ್ಯಗಳು, ಅಪಮಾನಗಳು ಮಾತ್ರ ಇನ್ನೂ ತಪ್ಪಿಲ್ಲ; ಜಾತಿ ವಿಚಾರದಲ್ಲಿ ತಮ್ಮನ್ನು ತಾವು ’ಮೇಲ್ಜಾತಿ’ ಎಂದುಕೊಂಡವರ ಮನಸ್ಥಿತಿಗಳು ಈಗಲೂ ಹಿಮ್ಮುಖವಾಗಿಯೇ ಚಲಿಸುತ್ತಿವೆ.

’ಪ್ರಬಲ’ ಜಾತಿಗಳ ಜನರ ಮನಸ್ಥಿತಿಗಳು ಹಿಮ್ಮುಖವಾಗಿ ಚಲಿಸುತ್ತಿವೆ ಎನ್ನುವುದಕ್ಕೆ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ನಡೆದಿರುವ ಅಮಾನವೀಯ ಘಟನೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ವಿವಿಧ ಸಮುದಾಯಗಳ 250 ಜನ ಓದುತ್ತಿರುವ ಆ ವಸತಿಶಾಲೆಯಲ್ಲಿ, ದಲಿತ ಸಮುದಾಯಕ್ಕೆ ಸೇರಿದ ಐವರು ಬಾಲಕರನ್ನು ಮಾತ್ರ ಮಲದ ಗುಂಡಿ ಸ್ವಚ್ಛತೆಗೆ ಬಳಸಿಕೊಳ್ಳಲಾಗಿದೆ. ಇದೇ ರೀತಿಯ ಹಲವಾರು ಘಟನೆಗಳು ಬೇರೆಬೇರೆ ವಸತಿಶಾಲೆಗಳಲ್ಲಿ ನಡೆದಿರಬಹುದಾದರೂ, ಇಲ್ಲಿನ ಶಿಕ್ಷಕರ ಒಳ ಜಗಳದ ಕಾರಣಕ್ಕೆ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ತಲೆಮಾರುಗಳಿಂದ ಪೌರಕಾರ್ಮಿಕರಾಗಿ, ಮ್ಯಾನ್‌ಹೋಲ್ ಸ್ವಚ್ಛತಾ ಕಾರ್ಮಿಕರಾಗಿ ದುಡಿಯುತ್ತಿರುವ ದಲಿತ ಸಮುದಾಯದ ಹಲವಾರು ಪೋಷಕರು, ’ತಮ್ಮ ಮಕ್ಕಳು ನಮ್ಮಂತಾಗದಿರಲಿ’ ಎನ್ನುವ ಕಾರಣಕ್ಕೆ ಶಾಲೆಗೆ ಕಳಿಸುತ್ತಿದ್ದಾರೆ. ಈ ರೀತಿಯ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳದ ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯ ಸಿಬ್ಬಂದಿ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳನ್ನು ಮಾತ್ರ ಮಲದ ಗುಂಡಿಗೆ ಇಳಿಸಿ ನೀಚತನ ಮೆರೆದಿದ್ದಾರೆ. ಮಕ್ಕಳಿಗೆ ಇಂಥ ಕೆಲಸ ಮಾಡಬಾರದು ಎಂದು ಹೇಳಿಕೊಡಬೇಕಾದವರೆ ’ಹಣ ಉಳಿಸಿಕೊಳ್ಳುವ’ ಏಕೈಕ ದುರುದ್ದೇಶದಿಂದ ದಲಿತ ಮಕ್ಕಳನ್ನು ಶೋಷಿಸಿದ್ದಾರೆ.

ಅಷ್ಟಕ್ಕೂ ವಸತಿಶಾಲೆಯಲ್ಲಿ ನಡೆದಿದ್ದೇನು?

ಕೋಲಾರದ ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ. ಗುಂಡಿಗೆ ಇಳಿದ ಎಲ್ಲ ಮಕ್ಕಳು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂಬುದು ಮಾತ್ರ ಶಿಕ್ಷಕರೊಳಗಿನ ಜಾತಿಕ್ರೌರ್ಯಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಡಿಸೆಂಬರ್ 1ರಂದು ಈ ಘಟನೆ ನಡೆದಿದ್ದು, ಡಿ.17ರಂದು ಪ್ರಕರಣ ಬೆಳಕಿದೆ ಬಂದಿದೆ. ಇದೇ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ, ಮಕ್ಕಳು ಮಲದ ಗುಂಡಿ ಸ್ವಚ್ಛಗೊಳಿಸುತ್ತಿರುವುದನ್ನು ವಿಡಿಯೋ ಮಾಡಿದ್ದು, ಅದನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಕಳಿಸಿದ್ದಾರೆ.

ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ನಂತರವೂ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ವಿಡಿಯೋ ಮಾಡಿಕೊಂಡಿದ್ದ ಮುನಿಯಪ್ಪ ಅದನ್ನು ಸುದ್ದಿ ಮಾಧ್ಯಮಗಳಿಗೆ ನೀಡಿದ ನಂತರ ಈ ವಿವಾದ ತೀವ್ರತೆ ಪಡೆದುಕೊಂಡಿದೆ.

ವಿಡಿಯೋ ವೈರಲ್ ಆದನಂತರವೂ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಅಲ್ಲಿನ ಶಿಕ್ಷಕರು, ’ಅದು ಮಲದ ಗುಂಡಿ ಅಲ್ಲ; ಸ್ವಚ್ಛತಾ ಆಂದೋಲನ ಅಂಗವಾಗಿ ಚೇಂಬರ್ ಒಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದ್ದಾರೆ. ಯಾವುದೇ ರೀತಿಯ ಮ್ಯಾನ್‌ಹೋಲ್ ಹಾಗೂ ಚೇಂಬರ್ ಒಳಗೆ ಮನುಷ್ಯರನ್ನು ಇಳಿಸಬಾರದು ಎಂಬ ಅರಿವು ಅಲ್ಲಿನ ಶಿಕ್ಷಕರಿಗೆ ಇಲ್ಲದೇ ಇರುವುದು ದುರಂತ; ಅದರಲ್ಲೂ ಮಕ್ಕಳನ್ನು ಇಳಿಸಿ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ಹೇಯಕೃತ್ಯ. ಮೇಲ್ನೋಟಕ್ಕೆ ಮಕ್ಕಳನ್ನು ಬಲವಂತವಾಗಿ ಈ ಕೆಲಸಕ್ಕೆ ಇಳಿಸಲಾಗಿದೆ ಎನ್ನಲಾಗಿದ್ದು, ಮಕ್ಕಳು ಅನುಭವಿಸಿರಬಹುದಾದ ಮಾನಸಿಕ ಹಿಂಸೆಯನ್ನು ಊಹಿಸುವುದು ಕಷ್ಟಸಾಧ್ಯ. ಇನ್ನು, ’ಅದು ಚೇಂಬರ್ ಅಲ್ಲ, ಮಲದ ಗುಂಡಿ’ ಎಂದು ಅಲ್ಲಿನ ಕೆಲ ಶಿಕ್ಷಕರೇ ಖಚಿತಪಡಿಸಿದ್ದಾರೆ. ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರಿಂದ ಪೂರ್ಣ ಸತ್ಯ ಹೊರಬಂದಿದೆ.

ಪ್ರಾಂಶುಪಾಲರು ಹಾಗೂ ಶಿಕ್ಷಕರೊಬ್ಬರ ಸಮ್ಮುಖದಲ್ಲೇ ವಸತಿಶಾಲೆಯ ಹೈಸ್ಕೂಲ್ ಓದುತ್ತಿರುವ ಐದು ಜನ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಲಾಗಿದೆ. ಅಲ್ಲಿ ಸ್ವಚ್ಛತೆಗೆಂದು ಕೇವಲ ಒಬ್ಬರನ್ನು ಮಾತ್ರ ಕರೆಸಿರುವುದು ಸಹ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಮಲದ ಗುಂಡಿಯನ್ನು ಯಂತ್ರದ ಸಹಾಯದಿಂದ ಮಾತ್ರ ಸ್ವಚ್ಛಗೊಳಿಸಬೇಕೆಂಬ ನಿಯಮವಿದೆ. ಅದರ ನಿರ್ವಹಣೆಗಾಗಿಯೇ ಜಿಲ್ಲಾ ಪಂಚಾಯಿತಿ ಸಿಇಓ ಅವರು ಶಾಲೆಗೆ 25 ಸಾವಿರ ರೂಪಾಯಿ ಬಿಡುಗಡೆ ಮಾಡಿದ್ದರು ಎಂದು ಖುದ್ದು ಜಿಲ್ಲಾ ಉಸ್ತುವಾರಿ ಸಚಿವರೇ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ. ಸರ್ಕಾರದಿಂದ ಬಂದ ಹಣವನ್ನು ಬಳಸಿಕೊಂಡು ಮಲದ ಗುಂಡಿ ಸ್ವಚ್ಛ ಮಾಡಿಸದ ಪ್ರಾಂಶುಪಾಲರಾದ ಭಾರತಮ್ಮ ಹಾಗೂ ಶಿಕ್ಷಕರು ಮಕ್ಕಳನ್ನು ಬಳಸಿಕೊಂಡು ಹೀನಕೃತ್ಯವೆಸಗಿದ್ದಾರೆ.

ಪ್ರಾಂಶುಪಾಲರ ಸೂಚನೆ ಮೇರೆಗೆ ಸ್ವಚ್ಛತೆ

ಘಟನೆ ನಡೆದ ನಂತರ ಅಲ್ಲಿನ ಶಿಕ್ಷಕರೊಬ್ಬರು ಮಕ್ಕಳನ್ನು ಮಾತನಾಡಿಸಿರುವ ವಿಡಿಯೋ ವೈರಲ್ ಆಗಿದ್ದು, ಮಲದ ಗುಂಡಿಗೆ ಇಳಿದಿದ್ದ ವಿದ್ಯಾರ್ಥಿಗಳು ನೇರವಾಗಿ ಪ್ರಾಂಶುಪಾಲರತ್ತ ಬೊಟ್ಟುಮಾಡಿದ್ದಾರೆ. ’ಮಲದ ಗುಂಡಿಗೆ ಇಳಿಯುವಂತೆ ಪ್ರಾಂಶುಪಾಲರೆ ನಮಗೆ ಹೇಳಿದ್ದರು’ ಎಂದು ಅವರು ಹೇಳಿಕೆ ನೀಡಿದ್ದಾರೆ.

’ಮಲದ ಗುಂಡಿಗೆ ಇಳಿಯಬಾರದು ಎಂದು ನಮಗೆ ಗೊತ್ತಿರಲಿಲ್ಲ. ನಾವು ಎಸ್ಸಿ ಜನ ಎಂಬ ಕಾರಣಕ್ಕೆ ನಮ್ಮನ್ನು ಒಳಗೆ ಇಳಿಸಿದ್ದಾರೆ. ಒಟ್ಟು ಐದು ಜನ ನಾವು ಕೆಲಸ ಮಾಡಿದ್ದೇವೆ. ನಾವು ಸ್ವಚ್ಛ ಮಾಡುವಾಗ ಪ್ರಿನ್ಸಿಪಲ್ ಮೇಡಂ ಸ್ವಲ್ಪ ಹೊತ್ತು ಸ್ಥಳದಲ್ಲೇ ಇದ್ದರು’ ಎಂದಿದ್ದಾರೆ.

ಪ್ರಾಂಶುಪಾಲೆ ಭಾರತಮ್ಮ

’ನಮ್ಮನ್ನು ಪಿಟ್‌ನ ಒಳಗಡೆ ಇಳಿಸಿ ಕಸ ತೆಗೆಸಿದರು, ನಾವು ಒಳಗಿದ್ದ ಕಸವನ್ನು ಬಕೆಟ್‌ನಲ್ಲಿ ತುಂಬಿ ಮೇಲೆ ಕೊಟ್ಟೆವು. ಕೆಲವರು ಮೇಲಿಂದ ನೀರು ಹಾಕಿದರು. ನಮಗೆ ಶಿಕ್ಷಕರು ವಿಪರೀತ ಹಿಂಸೆ ಕೊಡುತ್ತಾರೆ. ಇಲ್ಲಿ ಇರುವುದೇ ಬೇಡ ಅನಿಸುತ್ತಿದೆ’ ಎಂದು ಮಕ್ಕಳು ನೋವು ತೋಡಿಕೊಂಡಿದ್ದಾರೆ. ಮಕ್ಕಳು ಗುಂಡಿಯೊಳಗಿರುವ ವಿಡಿಯೋವನ್ನು ಶಾಲೆಯ ಶಿಕ್ಷಕರೊಬ್ಬರು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಲ್ಲದೆ, ಮಕ್ಕಳನ್ನು ಮಾತನಾಡಿಸಿರುವ ವೀಡಿಯೊ ಕೂಡಾ ಇದೀಗ ವೈರಲ್ ಆಗಿದೆ.

ಇಷ್ಟೇ ಅಲ್ಲದೇ ವಸತಿಶಾಲೆಯ ಮಕ್ಕಳು ಅನುಭವಿಸುವ ಚಿತ್ರಹಿಂಸೆಯೂ ಕೂಡಾ ಬಯಲಾಗಿದೆ. ಶಿಕ್ಷಕರಿಂದ ತಾವು ಅನುಭವಿಸುವ ನೋವಿನ ಕುರಿತು ತಿಳಿಸಿರುವ ಮಕ್ಕಳು ’ರಾತ್ರಿ ಲೈಟ್ ಆಫ್ ಮಾಡಿ ಬ್ಯಾಗ್ ಸಮೇತ ಹಾಸ್ಟೆಲ್ ಹೊರಗಡೆ ಮಂಡಿಯೂರಿ ಕೂರಿಸಿ ಶಿಕ್ಷೆ ಕೊಡುತ್ತಾರೆ. ಸುಸ್ತಾಗುತ್ತಿದೆ ಎಂದರೂ ಕೇಳಲ್ಲ’ ಎಂದು ದೂರು ನೀಡಿದ್ದಾರೆ. ಮಕ್ಕಳಿಗೆ ತರಗತಿಯಲ್ಲಿ ಹೊಡೆಯುತ್ತಿರುವ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಕ್ಕಳಿಗೆ ಚಿತ್ರ ಹಿಂಸೆ

ಇನ್ನು ಇದೇ ವಸತಿಶಾಲೆಯಲ್ಲಿ 6 ರಿಂದ 10ನೇ ತರಗತಿಯ ಸುಮಾರು 250 ಬಾಲಕ-ಬಾಲಕಿಯರು ಓದುತ್ತಿದ್ದಾರೆ. ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಾರ್ಡನ್‌ಗಳಿಗೆ ಇಲ್ಲಿಯೇ ವಸತಿ ವ್ಯವಸ್ಥೆ ಇದೆ. ಸಹಶಿಕ್ಷಕ ಅಭಿಶೇಕ್ ಹಾಗೂ ಇತರೆ ಶಿಕ್ಷಕರು ನಮಗೆ ಮನಬಂದಂತೆ ಥಳಿಸಿ ಶಿಕ್ಷೆ ಕೊಡುತ್ತಿದ್ದರು ಎಂದು ಅಲ್ಲಿನ ವಿದ್ಯಾರ್ಥಿಗಳು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ.

ಮಕ್ಕಳು ಸರಿಯಾಗಿ ಓದುತ್ತಿಲ್ಲ ಎಂಬ ಕಾರಣಕ್ಕೆ ರಾತ್ರಿ ಹೊತ್ತು ಅವರಿಗೆ ಶಿಕ್ಷೆ ನೀಡಿರುವ ಅಭಿಶೇಕ್, ಶಾಲಾ ಆವರಣದಲ್ಲಿ ಲೈಟ್ ಆಫ್ ಮಾಡಿಸಿ, ಮಕ್ಕಳ ಹೆಗಲಿನಲ್ಲಿ ಬ್ಯಾಗ್ ಇರುವಾಗಲೆ ಮಂಡಿಯೂರಿ, ಕೈ ಮೇಲೆತ್ತಿಸಿ ಗಂಟೆಗಟ್ಟಲೆ ಕೂರಿಸಿರುವ ವಿಡಿಯೋ ವೈರಲ್ ಆಗಿದೆ. ಹಾಗೆ ಕುಳಿತಿದ್ದಾಗಲೇ ವಿದ್ಯಾರ್ಥಿಯೊಬ್ಬನ ಬೆನ್ನು ಹಿಡಿದುಕೊಂಡಿದ್ದು, ಆತನ ಸಹಪಾಠಿಗಳು ನೀರು ಕುಡಿಸಿ ಸಂತೈಸಿದ್ದಾರೆ. ಈ ಎಲ್ಲ ಘಟನೆಗಳನ್ನು ಚಿತ್ರಕಲೆ ಶಿಕ್ಷಕ ಮುನಿಯಪ್ಪ ವಿಡಿಯೋ ಮಾಡಿಕೊಂಡಿದ್ದಾರೆ.

ಅಂದು ರಾತ್ರಿ ಅಸ್ವಸ್ಥನಾಗಿದ್ದ ಆ ಹುಡುಗನೆ ಮಾಧ್ಯಮಗಳ ಮುಂದೆ ತಾನು ಅನುಭವಿಸಿದ ಹಿಂಸೆ ಕುರಿತು ಮಾಹಿತಿ ನೀಡಿದ್ದಾನೆ, ’ಕೈ ಮೇಲೆತ್ತಿ ಕೂರಿಸಿದ್ದರಿಂದ ನನಗೆ ಬೆನ್ನು ಹಿಡಿದುಕೊಂಡಿತ್ತು. ಹೀಗೆ ಕುಳಿತಿರುವಾಗ ಯಾರಾದರು ಕೈ ಇಳಿಸಿದರೆ ಮತ್ತೆ ಮೊದಲಿನಿಂದ ಎಲ್ಲರೂ ಕೈ ಮೇಲೆತ್ತಿ ಕೂರಬೇಕಿತ್ತು. ಇವರ ಹಿಂಸೆ ತಾಳಲಾರದೆ ಒಬ್ಬ ಕಾಂಪೌಂಡ್ ಹಾರಿ ತಪ್ಪಿಸಿಕೊಂಡು ಮನೆಗೆ ಹೋಗಿದ್ದಾನೆ’ ಎಂದು ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ’ತರಗತಿಯಲ್ಲಿ ನಮಗೆ ಹೊಡೆಯುತ್ತಾರೆ, ಆಗ ನಾವು ಸರಿಯಾಗಿ ಕೈ ನೀಡಿಲ್ಲ ಎಂದರೆ ಸಿಕ್ಕಸಿಕ್ಕ ಕಡೆಗೆಲ್ಲಾ ಹೊಡೆಯುತ್ತಾರೆ. ನಿಮ್ಮ ತಲೆಯಲ್ಲಿ ಜೇಡಿಮಣ್ಣು ತುಂಬಿದೆ. ಊಟಕ್ಕಾಗಿ ಇಲ್ಲಿಗೆ ಬರ್ತೀರಾ ಬಿಕಾರಿಗಳಾ’ ಎಂದು ಬೈಯುತ್ತಾರೆ ಎಂದು ಮತ್ತೋರ್ವ ವಿದ್ಯಾರ್ಥಿ ಸುದ್ದಿಗಾರರಿಗೆ ತಿಳಿಸಿದ್ದಾನೆ.

ಶಿಕ್ಷಕರ ಒಳಜಗಳದಿಂದ ಕೃತ್ಯ ಬೆಳಕಿಗೆ

ಇಷ್ಟೂ ಕಾಲ ಸದ್ದಿಲ್ಲದೇ ನಡೆಯುತ್ತಿದ್ದ ಈ ಕ್ರೌರ್ಯ ಬೆಳಕಿಗೆ ಬಂದದ್ದರ ಹಿಂದೆ ಮತ್ತೊಂದು ವಂಚನೆ ಇದೆ. ಅದೇನೆಂದರೇ ಮಕ್ಕಳು ಮಲದ ಗುಂಡಿಗೆ ಇಳಿದಿದ್ದು ಹಾಗೂ ಅವರಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಮಾಡಿದ್ದು ಇದೇ ಶಾಲೆಯ ಚಿತ್ರಕಲೆ ಶಿಕ್ಷಕ ಮುನಿಯಪ್ಪ. ಇಲ್ಲಿನ ಪ್ರಾಂಶುಪಾಲರಾದ ಭಾರತಮ್ಮ ಮತ್ತು ನಿಲಯಪಾಲಕ ಮಂಜುನಾಥ್ ಅವರದ್ದು ಒಂದು ಗುಂಪಾದರೆ, ಮುನಿಯಪ್ಪ ಈ ಶಾಲೆಗೆ ಬಂದ ನಂತರ ಮತ್ತೊಂದು ಗುಂಪಿನಲ್ಲಿದ್ದರು ಎನ್ನಲಾಗಿದೆ. ಭಾರತಮ್ಮ ಶಾಲೆಗೆ ಬರುವ ಅನುದಾನದಲ್ಲಿ ಹಣ ಹೊಡೆಯುತ್ತಿದ್ದರು ಎಂಬ ಆರೋಪವನ್ನು ಕೆಲವರು ಮಾತಾಡುತ್ತಿದ್ದಾರೆ.

ಪ್ರಾಂಶುಪಾಲರಾದ ಭಾರತಮ್ಮ ಶಾಲಾ ಆವರಣದಲ್ಲಿ ದೇವಸ್ಥಾನ ನಿರ್ಮಿಸಲು ಪ್ರತಿ ಮಕ್ಕಳಿಂದ 250 ರೂಪಾಯಿಯಂತೆ ರೂ.12.5 ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂಬ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, 10×10 ಅಡಿ ಅಳತೆಯ ದೇವಸ್ಥಾನ ಕಟ್ಟಿಸಿ, ಅಲ್ಲಿ ದೇವರ ಮೂರ್ತಿಯನ್ನೆ ಪ್ರತಿಷ್ಟಾಪನೆ ಮಾಡಿಲ್ಲ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಇದೇ ಕಾರಣಕ್ಕೆ ಕೋಪಗೊಂಡಿದ್ದ ಶಿಕ್ಷಕ ಮುನಿಯಪ್ಪ, ಡಿ.1ರಂದು ಪ್ರಾಂಶುಪಾಲೆ ಭಾರತಮ್ಮ ಅವರೇ ಮುಂದೆ ನಿಂತು ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸುವುದನ್ನು ತಮ್ಮ ಮೊಬೈಲ್‌ನಿಂದ ಚಿತ್ರೀಕರಣ ಮಾಡಿದ್ದಾರೆ. ಅದನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಕಳುಹಿಸಿದ್ದು, ಡಿಸೆಂಬರ್ 16ರಂದು ಶಾಲೆಗೆ ಬಂದಿದ್ದ ಅಧಿಕಾರಿಗಳು ಏನೂ ಆಗಿಲ್ಲ ಎಂದು ತಿಪ್ಪೆ ಸಾರಿಸಿ ಹೋಗಿದ್ದಾರೆ. ಆ ನಂತರ, ಮುನಿಯಪ್ಪ ವಿಡಿಯೋಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಕೊಟ್ಟಿದ್ದಾರೆ. ಈ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಅನಿವಾರ್ಯವಾಗಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಒಂದುವೇಳೆ ಶಿಕ್ಷಕ ಮುನಿಯಪ್ಪ ಸಹ ಪ್ರಾಂಶುಪಾಲರೊಂದಿಗೆ ಒಳ್ಳೆಯ ಒಡನಾಟವಿಟ್ಟುಕೊಂಡಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಲೇ ಇರಲಿಲ್ಲ. ಆ ಅಮಾಯಕ ಮಕ್ಕಳು ಸಮಾನತೆ ಕಲಿಯಬೇಕಾದ ಶಾಲೆಯಲ್ಲೇ ಅನ್ಯಾಯ-ಅಸಮಾನತೆಯನ್ನ ಇನ್ನೆಷ್ಟು ಕಾಲ ಅನುಭವಿಸುತ್ತಿದ್ದರೋ ಯೋಚಿಸಬೇಕು.

ಘಟನೆಗೆ ಮುನಿಯಪ್ಪ ಕಾರಣ ಎಂದ ಪ್ರಾಂಶುಪಾಲೆ

ಪ್ರಕರಣದ ಕುರಿತು ತಮ್ಮ ಮೇಲಿನ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲೆ ಭಾರತಮ್ಮ ಇದೀಗ ಹೊಸ ವರಸೆ ಶುರುವಿಟ್ಟಿದ್ದಾರೆ. ’ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ್ದು ನಾನಲ್ಲ, ಚಿತ್ರಕಲೆ ಶಿಕ್ಷಕ ಮುನಿಯಪ್ಪ’ ಎಂದು ಘಟನೆಯನ್ನು ವಿಡಿಯೋ ಮಾಡಿ ಪ್ರಕರಣ ಬೆಳಕಿಗೆ ತಂದ ಶಿಕ್ಷಕ ಮುನಿಯಪ್ಪನ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ.

ದೂರು ದಾಖಲಾದ ನಂತರ ಮಾಧ್ಯಮಗಳ ಮುಂದೆ ಮಾತನಾಡಿರುವ ಅವರು, ’ನಾನು ಈ ಶಾಲೆಗೆ 11 ವರ್ಷದ ಹಿಂದೆ ಶಿಕ್ಷಕಿಯಾಗಿ ಬಂದು ಈಗ ಪ್ರಾಂಶುಪಾಲೆ ಆಗಿದ್ದೇನೆ. ಇಲ್ಲಿಯವರೆಗೆ ಶಾಲಾ ವಾತಾವರಣ ಚೆನ್ನಾಗಿತ್ತು. ಕಳೆದ ಐದು ತಿಂಗಳ ಹಿಂದೆ ಮುನಿಯಪ್ಪ ಬಂದಮೇಲೆ ಇಲ್ಲಿನ ವಾತಾವರಣ ಹಾಳಾಗಿದೆ; ಇದಕ್ಕೆಲ್ಲಾ ಅವರೇ ನೇರ ಕಾರಣ’ ಎಂದು ಮುನಿಯಪ್ಪನ ಮೇಲೆ ತಪ್ಪು ಹೊರಿಸಿದ್ದಾರೆ.

ಶಿಕ್ಷಕ ಮುನಿಯಪ್ಪ

’ನಮ್ಮ ಸಹಶಿಕ್ಷಕರ ಮಕ್ಕಳಿಗೆ ಹೊಡೆದಿರುವುದು ನಿಜ; ಈ ಬಗ್ಗೆ ನೋಟಿಸ್ ಕೊಟ್ಟು ಕಾರಣ ಕೇಳಿದ್ದೆವು. ಆ ನಂತರ ಮಕ್ಕಳಿಗೆ ಹೊಡೆಯುವ ಘಟನೆ ನಡೆದಿಲ್ಲ. ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸುವ ಕೆಲಸ ಮಾಡಿಸಬಾರದು ಎಂದು ನಾನು ಹೇಳುತ್ತಿರುವ ಸಮಯದಲ್ಲಿ ಮುನಿಯಪ್ಪ ಹಿಂದಿನಿಂದ ವಿಡಿಯೋ ಮಾಡಿಕೊಂಡು ಮಾಧ್ಯಮಗಳಿಗೆ ನೀಡಿದ್ದಾರೆ. ಮುನಿಯಪ್ಪ ರಾತ್ರಿ ಹೊತ್ತು ಗಂಡುಮಕ್ಕಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ್ದಾರೆ. ಅವರು ಇಲ್ಲಿಗೆ ಬಂದ ಐದು ತಿಂಗಳಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ನನ್ನ ವಿರುದ್ಧ ಶಿಕ್ಷಕರನ್ನು ಎತ್ತಿ ಕಟ್ಟುವುದು ಹಾಗೂ ಮಕ್ಕಳ ವಿಡಿಯೋ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ. ’ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ್ದೆ ಮುನಿಯಪ್ಪ ಹಾಗೂ ಉಳಿದ ಶಿಕ್ಷಕರು. ನಾನು ಅಲ್ಲಿದ್ದಾಗ ವಿಡಿಯೋ ಮಾಡಿದ್ದಾರೆ’ ಎಂದಿದ್ದಾರೆ.

ಮುನಿಯಪ್ಪ ಬಂಧನ ಖಂಡಿಸಿದ ಮಕ್ಕಳು

ಪ್ರಕರಣದ ನಾಲ್ಕನೇ ಆರೋಪಿಯಾಗಿ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಅವರನ್ನು ಸಹ ಬಂಧಿಸಿದ್ದು, ಈ ಬಂಧನ ಖಂಡಿಸಿ ಮೊರಾರ್ಜಿ ದೇಸಾಯಿ ವಸತಿಶಾಲೆ ಮಕ್ಕಳು ಆಕ್ರೋಶ ಹೊರಹಾಕಿದ್ದಾರೆ. ’ಪ್ರಾಂಶುಪಾಲರನ್ನು ಬೇಕಿದ್ದರೆ ಬಂಧಿಸಿ, ನಮ್ಮ ಡ್ರಾಯಿಂಗ್ ಟೀಚರ್ ಈಗಲೇ ಇಲ್ಲಿಗೆ ಬರಬೇಕು’ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಡಿಸೆಂಬರ್ 18, ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಮಕ್ಕಳು ಪ್ರತಿಭಟನೆ ಆರಂಭಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಕ್ಕಳ ಮನವೊಲಿಸುವ ಕೆಲಸ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಭೇಟಿ ನೀಡಿದ್ದು, ವಸತಿ ನಿಲಯಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿ ಆಗಮಿಸುತ್ತಿದ್ದಂತೆಯೇ ಪ್ರತಿಭಟನಾನಿರತ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಸಚಿವರು ಭರವಸೆ ನೀಡಿದ ಬಳಿಕ ಮಕ್ಕಳು ಪ್ರತಿಭಟನೆ ವಾಪಸ್ ಪಡೆದುಕೊಂಡಿದ್ದಾರೆ.

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಖಂಡನೆ

ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಪ್ರಕರಣವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಖಂಡಿಸಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ಜತೆಗೆ ಶಾಲೆಗೆ ಆಗಮಿಸಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ’ಶಾಲಾ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿರುವುದು ಅಮಾನವೀಯ ಕೃತ್ಯ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಸಿಬ್ಬಂದಿ ವಿರುದ್ಧ ದೂರು ದಾಖಲು-ಸಾಮೂಹಿಕ ವರ್ಗಾವಣೆ

ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಆರೋಪದ ಮೇಲೆ ’ಅಬಾಲಿಶನ್ ಆಫ್ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಆಕ್ಟ್-1993’ರ ಅಡಿಯಲ್ಲಿ ಪ್ರಾಂಶುಪಾಲರಾದ ಭಾರತಮ್ಮ, ನಿಲಯ ಪಾಲಕ ಮಂಜುನಾಥ್ ಹಾಗೂ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಅವರ ಮೇಲೆ ದೂರು ದಾಖಲಿಸಲಾಗಿದ್ದು, ಮೂವರನ್ನೂ ಬಂಧಿಸಲಾಗಿದೆ. ಮಕ್ಕಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ್ದಕ್ಕಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಫೋಕ್ಸೋ) ಮುನಿಯಪ್ಪ ಅವರ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಈ ಮೂವರನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಲಾಗಿದ್ದು, ಉಳಿದ ಸಿಬ್ಬಂದಿಯನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಏನಂದ್ರು?

’ಶಾಲಾ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲೆ, ವಾರ್ಡನ್ ಸಹಿತ ಮೂವರನ್ನು ಅಮಾನತುಗೊಳಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ.ಮಹದೇವಪ್ಪ ತಿಳಿಸಿದ್ದು, ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ, ’ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸುವ ಕೃತ್ಯವನ್ನು ಶಾಲೆಯ ಪ್ರಿನ್ಸಿಪಾಲ್ ಭಾರತಮ್ಮ ಹಾಗೂ ಸಹಶಿಕ್ಷಕರು ಮಾಡಿದ್ದಾರೆ. ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ತಲೆ ತಪ್ಪಿಸಿಕೊಂಡಿರುವ ಶಿಕ್ಷಕರನ್ನು ಬಂಧಿಸಲಾಗುವುದು. ಇವರೆಲ್ಲಾ ಹೇಯಕೃತ್ಯ ನಡೆಸಿದ್ದಾರೆ. ವಸತಿನಿಲಯ ನಿರ್ವಹಣೆಗೆ ಒಂದು ತಿಂಗಳ ಹಿಂದೆಯೇ 25 ಸಾವಿರ ಕೊಡಲಾಗಿದೆ. ಅದನ್ನು ಉಳಿಸಿಕೊಳ್ಳುವುದಕ್ಕೆ ಈ ಹೇಯ ಕೃತ್ಯ ಮಾಡಿದ್ದು, ಅವರನ್ನು ಅಮಾನತು ಮಾಡಿ ಬಂಧಿಸಲಾಗಿದೆ. ಉನ್ನತ ತನಿಖೆ ಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವ ಕೆಲಸ ಮಾಡುತ್ತೇವೆ. ಎಲ್ಲ ಶಿಕ್ಷಕರನ್ನು ವರ್ಗಾವಣೆ ಮಾಡಿ, ಅಲ್ಲಿನ ಸ್ವಚ್ಛತಾ ಸಿಬ್ಬಂದಿಗಳನ್ನೂ ಬದಲಾವಣೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿಶಾಲೆಗಳ ಕುರಿತು

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಸತಿ ಶಾಲೆಗಳನ್ನು ಆರಂಭಿಸಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಈ ಮೇಲಿನ ಶಿಕ್ಷಣ ಸಂಸ್ಥೆಗಳ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಕೋಲಾರದ ನಂತರ ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ; ಶೌಚಾಲಯ ಸ್ವಚ್ಛಗೊಳಿಸಿದ ಶಾಲಾ ಮಕ್ಕಳು!

ರಾಜ್ಯದಲ್ಲಿ ಪ್ರಸ್ತುತ 400ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ವಸತಿಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇದನ್ನು ಜವಾಹರ್ ನವೋದಯ ಶಾಲೆಗಳ ಮಾದರಿಯಲ್ಲಿ ಸ್ಥಾಪಿಸಲಾಗಿದೆ. ಆರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಶತಾಬ್ಧಿ ಅಂಗವಾಗಿ 4 ಕಂದಾಯ ವಿಭಾಗಗಳಲ್ಲಿ ತಲಾ ಒಂದೊಂದು ಪರಿಶಿಷ್ಟ ಜಾತಿ ನವೋದಯ ಮಾದರಿ ಶಾಲೆಗಳನ್ನು ಆರಂಭಿಸಲಾಯಿತು. ನಂತರ ಪ್ರತಿ ಕಂದಾಯ ಜಿಲ್ಲೆಗೆ ಒಂದರಂತೆ ಶ್ರೀ ಮೊರಾರ್ಜಿ ದೇಸಾಯಿ ವಸತಿಶಾಲೆಗಳನ್ನು ಆರಂಭಿಸಲಾಯಿತು. 1996-97ನೇ ಸಾಲಿನಿಂದ ಈವರೆಗೆ ಒಟ್ಟು 400ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ಶಾಲೆಗಳು ಆರಂಭಗೊಂಡಿವೆ.

’ಸಮಾನ ಶಾಲೆ’ ಮಾದರಿ ಜಾರಿಯಾಗಬೇಕು: ನಿರಂಜನಾರಾಧ್ಯ

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಶಿಕ್ಷಣತಜ್ಞ ವಿ.ಪಿ ನಿರಂಜನಾರಾಧ್ಯ, “ನಾನು ಮೊದಲಿನಿಂದಲೂ ’ಸಮಾನ ಶಾಲೆ’ ಮಾದರಿಯ ಬಗ್ಗೆ ಪ್ರತಿಪಾದಿಸುತ್ತಿದ್ದೇನೆ. ಈ ಜಾತಿ ಹಾಗೂ ಧರ್ಮದ ಆಧಾರದಲ್ಲಿ ಶಾಲೆ ನಡೆಸುವುದು ನಮ್ಮ ಸಂವಿಧಾನದ ಜಾತ್ಯತೀತ ಕಲ್ಪನೆಗೆ ಮಾರಕವಾಗಿದೆ. ಶಾಲಾ ಹಂತಗಳಲ್ಲಿ ಎಲ್ಲ ಜಾತಿ, ಧರ್ಮ ಹಾಗೂ ಲಿಂಗದ ಮಕ್ಕಳು ಎಲ್ಲರ ಜತೆಯಲ್ಲಿ ’ನೈಬರ್ ಹುಡ್ ಶಾಲೆ’ಯಲ್ಲಿ ಕಲಿಯಬೇಕು. ಎಲ್ಲ ವರ್ಗದ ಮಕ್ಕಳು ಒಂದು ಕಡೆ ಸೇರಿದಾಗ ಮಾತ್ರ ಇವತ್ತಿನ ನಮ್ಮ ಸವಾಲುಗಳಾದ ಶೋಷಣೆ, ಅಸ್ಪೃಶ್ಯತೆ ಹಾಗೂ ಧರ್ಮವನ್ನು ತೊಡೆದುಹಾಕುವ ಕೆಲಸ ಸಾಧ್ಯ, ನಾವು ಹಾಗೆ ಮಾಡುವ ಬದಲು, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಎಂದು ಪ್ರತ್ಯೇಕ ಶಾಲೆಗಳನ್ನು ನಡೆಸುತ್ತಿದ್ದೇವೆ. ಈ ವ್ಯವಸ್ಥೆಯು ಮಕ್ಕಳ ಮನಸ್ಸಲ್ಲಿ ಪ್ರತ್ಯೇಕತೆ ಭಾವನೆ ಸೃಷ್ಟಿಸಿವೆ. ನಾವೆಲ್ಲಾ ಸಮಾನರಲ್ಲ ಎಂಬ ಭಾವನೆಯನ್ನು ಗಟ್ಟಿ ಮಾಡುತ್ತಿವೆ. ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಸಿಗುವ ಸವಲತ್ತುಗಳು ವಸತಿಶಾಲೆಗಳಲ್ಲಿ ಸಿಗುತ್ತಿಲ್ಲ. ಸಮಾನ ಶಾಲೆಗೆಳಿಂದ ಈ ರೀತಿಯ ಸಮಸ್ಯೆಗೆ ಅರ್ಧ ಪರಿಹಾರ ಸಾಧ್ಯ.

“ಈ ಪ್ರಕರಣದಲ್ಲಿ ಶಿಕ್ಷಕರ ಮನಸ್ಥಿತಿ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಮಕ್ಕಳು ಶಾಲೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡುವುದು ತಪ್ಪಲ್ಲ. ಆದರೆ, ಒಂದು ಜಾತಿಯ ಮಕ್ಕಳನ್ನು ಈ ಕೆಲಸಕ್ಕೆ ಹಚ್ಚಿರುವುದು ಕೊಳಕು ಮನಸ್ಥಿತಿ; ಇದು ತಪ್ಪು.

ವಿ.ಪಿ ನಿರಂಜನಾರಾಧ್ಯ

“ಈಗಲಾದರೂ ಇದನ್ನೆಲ್ಲಾ ಅರ್ಥ ಮಾಡಿಕೊಂಡು ಸರ್ಕಾರ ’ಸಮಾನ ಶಾಲೆ’ ಮಾದರಿಯನ್ನು ಜಾರಿ ಮಾಡಬೇಕು. ಮಕ್ಕಳಲ್ಲಿ ಸಮಾನತೆಯ ಮೊದಲ ಬೀಜವನ್ನು ಬಿತ್ತಬೇಕು. ಈ ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಅನೇಕ ಸೌಲಭ್ಯಗಳು ಇವರಿಗೆ ಸಿಗುವುದಿಲ್ಲ. ಸಾಮಾನ್ಯ ಶಾಲೆಗಳ ಶಿಕ್ಷಕರಿಗೆ ಮಕ್ಕಳ ಹಕ್ಕುಗಳ ಬಗ್ಗೆ, ಮಕ್ಕಳ ನಡುವೆ ತಾರತಮ್ಯ ಯಾಕೆ ಮಾಡಬಾರದು ಎಂಬ ಬಗ್ಗೆ ಸಾಕಷ್ಟು ತರಬೇತಿ ಸಿಗುತ್ತದೆ. ಆದರೆ, ವಸತಿ ಶಾಲಾ ಶಿಕ್ಷಕರಿಗೆ ಸೂಕ್ತ ತರಬೇತಿ ಸಿಗುವುದಿಲ್ಲ. ಆದ್ದರಿಂದ, ಅವರಿಗೆ ಕನಿಷ್ಠ ತಿಳಿವಳಿಕೆಯೂ ಇರುವುದಿಲ್ಲ. ಅವರು ಅದೇ ಹಿಂದಿನ ಮನಸ್ಥಿತಿಯಲ್ಲೇ ಮುಂದುವರಿಯುತ್ತಾರೆ. ಪ್ರತ್ಯೇಕ ಶಾಲಾ ವ್ಯವಸ್ಥೆ ಬದಲಾದರೆ ಮಾತ್ರ ತಾರತಮ್ಯ ತೊಡೆದುಹಾಕಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು” ಎಂದಿದ್ದಾರೆ.

ಮಕ್ಕಳ ಮೂಲಭೂತ ಹಕ್ಕುಗಳಿಗೆ ಧಕ್ಕೆ

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕ ವೀರಣ್ಣ ಮಡಿವಾಳರ ಅವರು “ಮೊದಲಿಗೆ ಯಾವುದೇ ಮಕ್ಕಳನ್ನು ಮಲ ಬಾಚುವುದಕ್ಕೆ ಬಳಸಿಕೊಳ್ಳುವುದು ತಪ್ಪು; ಅದರಲ್ಲೂ ದಲಿತ ಮಕ್ಕಳನ್ನು ಬಳಸಿಕೊಂಡಿರುವುದು ಕ್ರೌರ್ಯ. ಇದರಿಂದ ಮಕ್ಕಳ ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ಇಂಥ ಪ್ರಕರಣಗಳು ವಸತಿ ಶಾಲೆಯಲ್ಲಿ ಮಾತ್ರ ಕಂಡುಬರುತ್ತಿದೆ. ನಾವು ಈವರೆಗೆ ಇಂತಹ ಘಟನೆ ನಡೆದಿರುವ ಬಗ್ಗೆ ಕೇಳಿರಲಿಲ್ಲ. ಶಿಕ್ಷಣ ಇಲಾಖೆ ಶಾಲೆಗಳು ಹಾಗೂ ವಸತಿಶಾಲೆಗಳು ಬೇರೆಬೇರೆಯಾಗಿದ್ದು, ವಸತಿಶಾಲೆಗಳಿಗೆ ಸಾಕಷ್ಟು ಅನುದಾನ ಬರುತ್ತದೆ. ಅವರು ಅದನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ.

“ಸಾಮಾನ್ಯ ಶಾಲೆಗಳಲ್ಲೂ ದಲಿತ ಹಾಗೂ ಬಡ ಮಕ್ಕಳು ಓದುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡಬೇಕು. ನಾವೀಗ ಮಲದ ಗುಂಡಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಎಲ್ಲ ಮಕ್ಕಳು ಸಣ್ಣಪುಟ್ಟ ಸ್ವಚ್ಛತೆ ಕೆಲಸ ಮಾಡುತ್ತಾರೆ. ಮಕ್ಕಳು ಯಾವ ಕೆಲಸ ಮಾಡಬೇಕು ಎಂಬುದು ಅಲ್ಲಿನ ಶಿಕ್ಷಕರ ಮನಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ. ಶೌಚಾಲಯ ನಿರ್ವಹಣೆಗೆಂದು ಸರ್ಕಾರ ಕೊಡುತ್ತಿರುವ ಹಣ ಬಳಸಿಕೊಂಡು ಸ್ವಚ್ಛ ಮಾಡಿಸಬೇಕು.

ವೀರಣ್ಣ ಮಡಿವಾಳರ

“ನಾವು ಶೈಕ್ಷಣಿಕ ಕ್ಷೇತ್ರದ ವರ್ತಮಾನಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಭವಿಷ್ಯದ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಈಗಾಗಲೇ ಸರ್ಕಾರ ಕೃಷಿ ಬಜೆಟ್ ಮಂಡಿಸಿದೆ. ಒಂದು ಬಾರಿ ಶಿಕ್ಷಣ ಬಜೆಟ್ ಮಂಡಿಸಿದರೆ ರಾಜ್ಯದ 56 ಸಾವಿರ ಸರ್ಕಾರಿ ಶಾಲೆಗಳಲ್ಲಿ ದೊಡ್ಡಮಟ್ಟದ ಬದಲಾವಣೆ ಆಗುತ್ತದೆ. ತೆಲಂಗಾಣ, ದೆಹಲಿಯಲ್ಲಿ ಸಾಕಷ್ಟು ಮಾದರಿ ಬದಲಾವಣೆಗಳು ಆಗಿವೆ. ಥೈಲ್ಯಾಂಡ್‌ನಂಥ ದೇಶಗಳು, ದೆಹಲಿ ಸರ್ಕಾರಿ ಶಾಲೆಗಳ ಬಗ್ಗೆ ಅಧ್ಯಯನ ಮಾಡಿದೆ. ನಾವಿನ್ನೂ ಶೌಚಾಲಯಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದನ್ನೆಲ್ಲಾ ಬದಲಾಯಿಸಲು ಒಂದು ಶೈಕ್ಷಣಿಕ ಬಜೆಟ್ ಸಾಕು. ಎಷ್ಟು ದಿನ ಇದನ್ನೇ ಮಾತನಾಡಬೇಕು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ಅಬಾಲಿಶನ್ ಆಫ್ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಆಕ್ಟ್’ ಕುರಿತು:

’ಮಲಹೊರುವುದು ಮತ್ತು ಮಲಬಾಚುವುದು ಅಮಾನವೀಯ ಪದ್ಧತಿಯಾಗಿದ್ದು, ಇಡೀ ಸಮಾಜ ತಲೆತಗ್ಗಿಸುವ, ನಾಚಿಕೆ ಪಡಬೇಕಾದ ದುರಂತದ ಸಂಗತಿ. ಮನುಷ್ಯನ ಘನತೆಗೆ ಧಕ್ಕೆ ತರುವ ಸಂವಿಧಾನಬಾಹಿರ ಕೃತ್ಯ, ಘೋರ ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಕಾನೂನು ಹೇಳುತ್ತದೆ.

ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ ಹಾಗೂ 21ನೇ ವಿಧಿಯು ಎಲ್ಲರಿಗೂ ಸಮಾನವಾದ ಗೌರವಯುತವಾಗಿ ಬದುಕುವ ಹಕ್ಕುನ್ನು ಖಾತ್ರಿ ಪಡಿಸಿದೆ. ಇದರ ಆಧಾರದಲ್ಲಿ ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಮಲಬಾಚುವ ಹಾಗೂ ಹೊರುವ ಪದ್ಧತಿಯನ್ನು 1974ರಲ್ಲಿ ಅಂದಿನ ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪನವರು ನಿಷೇಧಿಸಿ ಆದೇಶ ಹೊರಡಿಸಿದ್ದರು.

ಈ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿ ಮತ್ತು ಕುಟುಂಬಗಳ ಪುನರ್ವಸತಿ ಕುರಿತ ಐ.ಪಿ.ಡಿ. ಸಾಲಪ್ಪರವರ ಸಮಿತಿ ವರದಿ ಶಿಫಾರಸ್ಸುಗಳನ್ನು ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸಿತು. ಇದಾದ ನಂತರ 1993ರಲ್ಲಿ ಭಾರತ ಸರ್ಕಾರ ಮಲಹೊರುವ ಪದ್ಧತಿಯನ್ನು ನಿಷೇಧಿಸಿ ಕಾಯ್ದೆ ಜಾರಿಗೊಳಿಸಿತು. ಪ್ರಸ್ತುತ ಸುಪ್ರೀಂ ಕೋರ್ಟ್ ಆದೇಶದಂತೆ 2013ರಲ್ಲಿ ಮಲಬಾಚುವ ಹಾಗೂ ಸ್ವಚ್ಛಗೊಳಿಸುವ ಕಾರ್ಮಿಕರು ಮತ್ತವರ ಕುಟುಂಬಗಳ ಪುನರ್ವಸತಿಗಾಗಿ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಹಲವಾರು ದಶಕಗಳಿಂದ ಮಲಬಾಚುವ ಪದ್ದತಿಯನ್ನು ನಿರ್ಮೂಲನೆ ಮಾಡಬೇಕು, ಸಂಪೂರ್ಣ ಆಧುನಿಕ ಯಾಂತ್ರಿಕೃತ ವ್ಯವಸ್ಥೆ ಜಾರಿಗೊಳಿಸಬೇಕೆಂದು ಸಾವಿರಾರು ಹೋರಾಟಗಳು ನಡೆದಿವೆ. ಆದರೆ ಈ ಪದ್ಧತಿ ಮಾತ್ರ ಕೊನೆಗೊಂಡಿಲ್ಲ. ಇತ್ತೀಚೆಗೆ ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಎಚ್ಚೆತ್ತುಕೊಂಡಂತೆ ಕಂಡುಬಂದಿದ್ದು, ಮಲ ಬಾಚುವ ಪದ್ದತಿ ನಿರ್ಮೂಲನೆಗೆ ವಿಶೇಷ ಕಾಯ್ದೆಯನ್ನು ಶಿಫಾರಸ್ಸು ಮಾಡಿದೆ.

ಮೂರು ವರ್ಷದಲ್ಲಿ 90 ಸಾವು

ದೇಶದಾದ್ಯಂತ ಮಲದ ಗುಂಡಿ ಹಾಗೂ ಮ್ಯಾನ್‌ಹೋಲ್‌ಗಳಿಗೆ ಇಳಿದು ಪ್ರತಿ ವರ್ಷ ನೂರಾರು ಜನ ಸಾವನ್ನಪ್ಪುತ್ತಲೇ ಇದ್ದಾರೆ. ಮ್ಯಾನ್‌ಹೋಲ್‌ಗೆ ಇಳಿದ ಹಲವಾರು ಕಾರ್ಮಿಕರು ಉಸಿರುಕಟ್ಟಿ ಸಾಯುತ್ತಾರೆ. ಅದಕ್ಕಾಗಿಯೇ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿ, ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೂ, ಈ ಅಮಾನವೀಯ ಹಾಗೂ ಅಪಾಯಕಾರಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ.

2020ರ ನಂತರ ಮಲದ ಗುಂಡಿ ಮತ್ತು ಮ್ಯಾನ್‌ಹೋಲ್‌ಗಳನ್ನು ಕೈಗಳಿಂದ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ರಾಜ್ಯದಲ್ಲಿ 90 ಸ್ಕ್ಯಾವೆಂಜರ್‌ಗಳು ಸಾವನ್ನಪ್ಪಿದ್ದಾರೆ. ಕೆಲವರು ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಈ ಕುರಿತು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗವೇ ಮಾಹಿತಿ ನೀಡಿದೆ.

’ವಿಶ್ವಗುರು ಭಾರತ’ ಚಂದ್ರಗ್ರಹಕ್ಕೆ ತೆರಳಿ ಬಾವುಟ ನೆಡುವಷ್ಟು ಬಲಿಷ್ಠವಾಗಿದ್ದಾಗಲೂ ಮಲದ ಗುಂಡಿಗಳಿಗಿಳಿದು ಸಹಮನುಷ್ಯರು ಸಾವನ್ನಪ್ಪುವ ಅಮಾನವೀಯ ಘಟನೆಗಳನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವ ಸುಧಾರಿತ ಯಂತ್ರಗಳು ಇನ್ನೂ ತಯಾರಿಯಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಒಂದು ಕಡೆಯಾದರೆ, ನಮ್ಮಂತೆಯೇ ಮತ್ತೊಬ್ಬ ಮನುಷ್ಯರ ಕೈನಲ್ಲಿ ಮಲ ಬಾಚಿಸಬಾರದು ಎಂಬ ಮನಸ್ಥಿತಿ ಇನ್ನೂ ಬಾರದೇ ಇರುವುದು ಈ ದೇಶದ ಜಡ್ಡುಗಟ್ಟಿದ ಜಾತಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಿ, ಇಂಥ ಹೇಯಕೃತ್ಯಗಳನ್ನು ತಡೆಯುತ್ತದಾ ಎಂಬುದನ್ನ ಕಾದುನೋಡೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸತ್ಯ ಆದಷ್ಟು ಬೇಗ ಹೊರಬರಲಿದೆ..’; ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ

0
ದೇಶದಾದ್ಯಂತ ಭಾರೀ ಸುದ್ದಿಯಾಗಿರುವ, ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಲೈಂಗಿಕ ಹಗರಣದ ಪ್ರಮುಖ ಆರೋಪಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯೆ...