Homeಕರ್ನಾಟಕಸುಧಾಕರ್‌‌ ಸದನದಲ್ಲೇ ಕ್ಷಮೆ ಕೇಳಬೇಕು: ಬಿಜೆಪಿ ಶಾಸಕ ಹರ್ಷವರ್ಧನ್‌ ಆಗ್ರಹ

ಸುಧಾಕರ್‌‌ ಸದನದಲ್ಲೇ ಕ್ಷಮೆ ಕೇಳಬೇಕು: ಬಿಜೆಪಿ ಶಾಸಕ ಹರ್ಷವರ್ಧನ್‌ ಆಗ್ರಹ

"ಬೌದ್ಧಧರ್ಮದಿಂದ ಹಾಗೆ ಆಗಿದೆ, ಹೀಗೆ ಆಗಿದೆ ಎಂದು ಬಾಯಿ ಚಪಲಕ್ಕಾಗಿ ಸಚಿವರು ಏನೇನೋ ಮಾತನಾಡಬಾರದು" ಎಂದಿರುವ ಹರ್ಷವರ್ಧನ್‌ ಅವರು ಸಚಿವರಿಗೆ ಇತಿಹಾಸ ಪಾಠ ಮಾಡಿದ್ದಾರೆ.

- Advertisement -
- Advertisement -

ಬೌದ್ಧಧರ್ಮದ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಸದನದಲ್ಲೇ ಕ್ಷಮೆ ಕೇಳಬೇಕು. ವಿರೋಧ ಪಕ್ಷಗಳು ಇದರ ಕುರಿತು ಸದನದಲ್ಲಿ ಮಾತನಾಡಿದರೆ, ನಾನೂ ಅವರೊಂದಿಗೆ ಧ್ವನಿಗೂಡಿಸುತ್ತೇನೆ ಎಂದು ಬಿಜೆಪಿ ಶಾಸಕ ಬಿ.ಹರ್ಷವರ್ಧನ್‌ ಹೇಳಿದ್ದಾರೆ.

ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಹರ್ಷವರ್ಧನ್ ಅವರು, ಸುಧಾಕರ್‌ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು ಬೌದ್ಧ ಧರ್ಮದ ಇತಿಹಾಸವನ್ನು ವಿವರಿಸಿದ್ದಾರೆ.

“ರಕ್ತಪಾತವನ್ನು ನೋಡಿ ನೊಂದು ಸಾಮ್ರಾಟ್‌ ಅಶೋಕ ಬೌದ್ಧಧರ್ಮವನ್ನು ಸ್ವೀಕರಿಸಿದರು. ಬಳಿಕ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು. ಅಷ್ಟು ಶ್ರೇಷ್ಟತೆ ಬೌದ್ಧಧರ್ಮಕ್ಕೆ ಇದೆ. ಹೀಗಾಗಿ ಬೌದ್ಧಧರ್ಮದ ಕುರಿತು ಅಷ್ಟು ಲಘುವಾಗಿ ಸಚಿವರು ಮಾತನಾಡಬಾರದು” ಎಂದು ಪ್ರತಿಕ್ರಿಯಿಸಿದ್ದಾರೆ.

“ಭಾರತದ ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರವು ಬೌದ್ಧ ಧರ್ಮದ ಸಂಕೇತ. ರಾಷ್ಟ್ರ ಲಾಂಛನವೂ ಬೌದ್ಧಧರ್ಮದ ಪ್ರೇರಣೆಯಿಂದ ಬಂದಿದೆ. ಇಂದು ನಾವು ಅದನ್ನೆಲ್ಲ ಅನುಸರಿಸುತ್ತಿದ್ದೇವೆ. ಬೌದ್ಧಧರ್ಮದಿಂದ ಹಾಗೆ ಆಗಿದೆ, ಹೀಗೆ ಆಗಿದೆ ಎಂದು ಏನೋ ಬಾಯಿ ಚಪಲಕ್ಕಾಗಿ ಸಚಿವರು ಏನೇನೋ ಮಾತನಾಡಬಾರದು” ಎಂದು ಎಚ್ಚರಿಸಿದ್ದಾರೆ.

“ಸಚಿವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರು ಕೂಡಲೇ ಕ್ಷಮಾಪಣೆ ಕೇಳಬೇಕು. ಸದನದಲ್ಲಿ ವಿರೋಧ ಪಕ್ಷಗಳು ಇದರ ಕುರಿತು ಧ್ವನಿ ಎತ್ತಿದರೆ ನಾನು ಕೂಡ ಇದಕ್ಕೆ ಧ್ವನಿಗೂಡಿಸುತ್ತೇನೆ. ಸಚಿವರು ಸದನದಲ್ಲೇ ಕ್ಷಮಾಪಣೆ ಕೇಳಲಿ. ಬೌದ್ಧಧರ್ಮದ ಕುರಿತು ಲಘವಾಗಿ ಮಾತನಾಡುವುದು ಬೇಡ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಆರೋಗ್ಯ ಸಚಿವರ ಮನಸ್ಸು ಅನಾರೋಗ್ಯ: ಕಾಂಗ್ರೆಸ್‌‌‌‌ ನಾಯಕ, ಮಾಜಿ ಸಂಸದ ಆರ್. ಧ್ರುವನಾರಾಯಣ ಕಿಡಿ

“ಬೌದ್ಧಧರ್ಮದ ಇತಿಹಾಸ ಬೇಡ, ಸಾಮ್ರಾಟ್ ಅಶೋಕನ ಕುರಿತು ತಿಳಿದುಕೊಳ್ಳಿ ಸಾಕು. ರಷ್ಯಾ ಅಧ್ಯಕ್ಷ ಉಕ್ರೇನ್‌ ವಶಪಡಿಸಿಕೊಳ್ಳಲು ಹೊರಟಿದ್ದಾನೆ. ಸಾಮ್ರಾಟ್ ಅಶೋಕ ಅಫಘಾನಿಸ್ತಾನ, ಶ್ರೀಲಂಕಾ, ಬರ್ಮಾವರೆಗೂ ಸಾಮ್ರಾಜ್ಯ ವಿಸ್ತರಿಸಿದ್ದ. ಅಂಥವನು ಕಳಿಂಗ ಯುದ್ಧದ ಬಳಿಕ ಶಸ್ತ್ರಾಸ್ತ್ರ ತ್ಯಜಿಸುತ್ತಾನೆಂದರೆ ಅವನ ಮನಸ್ಸಿಗೆ ಎಷ್ಟು ನೋವಾಗಿರಬೇಡ” ಎಂದು ಹರ್ಷವರ್ಧನ ಹೇಳಿದ್ದಾರೆ.

“ಅಶೋಕ ಬೌದ್ಧಧರ್ಮವನ್ನು ಸ್ವೀಕರಿಸಿ ತನ್ನ ಮಕ್ಕಳನ್ನು ಶ್ರೀಲಂಕಾಕ್ಕೆ ಕಳುಹಿಸಿ ಬೌದ್ಧಧರ್ಮದ ಬಗ್ಗೆ ಪ್ರಚಾರ ಮಾಡುತ್ತಾನೆ. ಶ್ರೀಲಂಕಾದಂತಹ ದೇಶದಲ್ಲಿ ಬೌದ್ಧಧರ್ಮವೇ ಇಂದಿಗೂ ಇದೆ. ನಮ್ಮ ದೇಶದಲ್ಲಿ ಬೌದ್ಧಧರ್ಮ ಯಾಕೆ ಇಲ್ಲವಾಯಿತು ಎಂಬ ಚರ್ಚೆ ಬೇರೆ ಮಾಡೋಣ” ಎಂದಿದ್ದಾರೆ.

ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಹೇಳಿದ ಮೇಲೆ ಎಲ್ಲ ಧರ್ಮಗಳ ಬಗ್ಗೆ ಅಧ್ಯಯನ ಮಾಡಿದರು. ಇಸ್ಲಾಂ, ಕ್ರೈಸ್ತ, ಸಿಖ್‌ ಧರ್ಮಗಳ ಕುರಿತು ಚಿಂತಿಸಿದರು. ಕೊನೆಗೆ ಅವರು ಆಯ್ಕೆ ಮಾಡಿದ್ದು ಬೌದ್ಧಧರ್ಮವನ್ನು. ಅಷ್ಟು ಶ್ರೇಷ್ಠತೆ ಹಾಗೂ ಪಾವಿತ್ರ್ಯತೆ ಬೌದ್ಧಧರ್ಮದಲ್ಲಿ ಇದೆ. ಸಚಿವರು ಮಾತನಾಡುವಾಗ ಈ ಎಲ್ಲಾ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು. ಅವರು ಕೂಡಲೇ ಕ್ಷಮಾಪಣೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.

ಏನಿದು ವಿವಾದ?

ಚಿಕ್ಕಬಳ್ಳಾಪುರ ತಾಲ್ಲೂಕು ಬ್ರಾಹ್ಮಣರ ಸಂಘವು ಇತ್ತೀಚೆಗೆ ಏರ್ಪಡಿಸಿದ್ದ ‘ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, “ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

“ಬೌದ್ಧಧರ್ಮದ ಸುಳಿಗೆ ಸಿಕ್ಕ ವಿಶ್ವದ ನಾನಾ ದೇಶಗಳು ಆ ಧರ್ಮಕ್ಕೆ ಮತಾಂತರ ಆಗುತ್ತಿರುವಾಗ ಅದನ್ನು ತಡೆದು ಭಾರತೀಯ ಧರ್ಮವನ್ನು ಉಳಿಸಿದ ಕೀರ್ತಿ ಬ್ರಾಹ್ಮಣ ಸಮುದಾಯದ ಆದಿಶಂಕರಾಚಾರ್ಯರಿಗೆ ಸಲ್ಲುತ್ತದೆ” ಎಂದು ಸುಧಾಕರ್‌ ಹೇಳಿದ್ದರು.

“ವಿಜ್ಞಾನಕ್ಕೂ ಮೊದಲು ಮಾನವ ಸಮಾಜಕ್ಕೆ ದಿಕ್ಕುದೆಸೆ ತೋರಿ ಆಚಾರ್ಯ ಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯ ಎಲ್ಲಾ ಸಮಾಜದ ಕಾರ್ಯಕ್ರಮಗಳಿಗೂ ನೈತಿಕ ಬಲ ತುಂಬಿ ಆಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಇಂದು ಭಾರತೀಯ ಸಂಸ್ಕೃತಿ, ಆಚಾರ ವಿಚಾರ ವಿಶ್ವಮಾನ್ಯವಾಗಿದ್ದರೆ ಅದರ ಶ್ರೇಯ ಈ ಸಮುದಾಯಕ್ಕೆ ಸಲ್ಲಬೇಕು. ಈ ನಿಟ್ಟಿನಲ್ಲಿ ಸಾವಿರಾರು ವರ್ಷದಿಂದ ನಾಗರಿಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಬ್ರಾಹ್ಮಣ ಸಮುದಾಯವು ವಿಶೇಷ ಗೌರವ ಸ್ಥಾನವನ್ನು ಹೊಂದಿದೆ” ಎಂದು ತಿಳಿಸಿದ್ದರು.


ಇದನ್ನೂ ಓದಿರಿ: ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರು: ಸಚಿವ ಸುಧಾಕರ್‌ ಹೇಳಿಕೆಗೆ ಆಕ್ಷೇಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...