ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ, ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಬವೇರಿಯಾದ ರಾಜಧಾನಿಮ್ಯೂನಿಚ್‌ನಿಂದ ಬೆಂಗಳೂರಿಗೆ ಹಿಂತಿರುಗಲು ವಿಮಾನ ಟಿಕೆಟ್ ಕಾಯ್ದಿರಿಸಲಾಗಿದೆ ಎನ್ನಲಾಗಿದೆ.
ವಿಶೇಷ ತನಿಖಾ ತಂಡದ ಮೂಲಗಳ ಪ್ರಕಾರ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ 33 ವರ್ಷದ ಮೊಮ್ಮಗ ಮೇ 31ರ ಬೆಳಗಿನಜಾವ ಬೆಂಗಳೂರಿಗೆ ಬಂದಿಳಿಯುವ ನಿರೀಕ್ಷೆಯಿದೆ. ಬಂದಿಳಿದ ಕೂಡಲೇ ಆತನನ್ನು ಬಂಧಿಸಲು ಎಸ್‌ಐಟಿ ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿಗಾ ಇರಿಸಿದೆ.
ಹಾಸನ ಲೋಕಸಭೆ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿರುವ ಸಂಸದ, ಅಪಾರ ಪ್ರಮಾಣದ ಅಶ್ಲೀಲ ವಿಡಿಯೊ ಸಂಗ್ರಹದ ಬಗ್ಗೆ ತನಿಖೆಗೆ ಆದೇಶಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆತನಿಂದ ಆಪಾದಿತವಾಗಿ ಹಲವಾರು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೊಳಗಾದುದನ್ನು ತೋರಿಸುವ ಸ್ಪಷ್ಟ ವೀಡಿಯೊಗಳು ಪೆನ್‌ಡ್ರೈವ್ ಮತ್ತು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.
ಇದುವರೆಗೆ ಪ್ರಜ್ವಲ್ ವಿರುದ್ಧ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಎರಡು ದಿನಗಳ ಹಿಂದೆ ಹಾಸನ ಸಂಸದರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಮೇ 31 ರಂದು ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಸಂಸದರು ಈ ಹಿಂದೆ ಎರಡು ಬಾರಿ ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ ನಂತರ, ಪ್ರಯಾಣ ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಹಾಸನ ಜಿಲ್ಲಾ ಕೇಂದ್ರ ಪಟ್ಟಣದಲ್ಲಿರುವ ಪ್ರಜ್ವಲ್ ಅವರ ನಿವಾಸದಲ್ಲಿ ಎಸ್‌ಐಟಿ ಮಂಗಳವಾರ ತಡರಾತ್ರಿಯವರೆಗೆ ಶೋಧ ನಡೆಸಿತು. “ಕೆಲವು ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ; ಮೇ 31 ರಂದು ಪ್ರಜ್ವಲ್ ರೇವಣ್ಣ ಬರದಿದ್ದರೆ ಮುಂದಿನ ಪ್ರಕ್ರಿಯೆ ಆರಂಭ: ಗೃಹ ಸಚಿವ ಪರಮೇಶ್ವರ್


