Homeಅಂಕಣಗಳುಕೃತಿ ವಿಮರ್ಶೆ: ಆರ್‌ಎಸ್‌ಎಸ್‌ ಜಾತಿ ರಾಜಕೀಯ ಕನಸುಗಳ ಸಾಕಾರಕ್ಕೆ ಟಿಪ್ಪು ಹೆಸರಲ್ಲಿ ನಕಲಿ ಇತಿಹಾಸ ಸೃಷ್ಟಿ!

ಕೃತಿ ವಿಮರ್ಶೆ: ಆರ್‌ಎಸ್‌ಎಸ್‌ ಜಾತಿ ರಾಜಕೀಯ ಕನಸುಗಳ ಸಾಕಾರಕ್ಕೆ ಟಿಪ್ಪು ಹೆಸರಲ್ಲಿ ನಕಲಿ ಇತಿಹಾಸ ಸೃಷ್ಟಿ!

‘ಟಿಪ್ಪು ನಿಜಕನಸುಗಳು’ ನಾಟಕದಲ್ಲಿ ಅಡ್ಡಂಡ ಕಾರ್ಯಪ್ಪ ಹೇಳಿರುವ ಸಾಲು ಸಾಲು ಸುಳ್ಳುಗಳೇನು? ಇತಿಹಾಸದ ವಾಸ್ತವವೇನು?

- Advertisement -
- Advertisement -

ಸದಾ ನಕಾರಾತ್ಮಕ ವಿಚಾರಗಳಿಂದ ಸುದ್ದಿಯಲ್ಲಿರುವ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಈಗ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ವಿವಾದಾತ್ಮಕ ಮತ್ತು ಭಂಡತನದ ಹೇಳಿಕೆಗಳಿಗೆ ಹೆಸರಾದ ಅವರು, ’ಟಿಪ್ಪು ನಿಜಕನಸುಗಳು’ ಎಂಬ ನಾಟಕವನ್ನು ಬರೆದು, ನಿರ್ದೇಶಿಸಿ ರಂಗಾಯಣದಲ್ಲಿ ಪೊಲೀಸರ ಬಿಗಿಭದ್ರತೆಯಲ್ಲಿ ಪ್ರದರ್ಶನವನ್ನೂ ಮಾಡಿಸಿದ್ದಾರೆ. ಈ ನಾಟಕ ಏನನ್ನು ಹೇಳಲು ಹೊರಟಿದೆ? ಕೃತಿಕಾರನು ಹೇಳುತ್ತಿರುವಂತೆ ಇತಿಹಾಸದ ಸತ್ಯಗಳನ್ನು ಆಧರಿಸಿ ನಾಟಕ ರಚನೆಯಾಗಿದೆಯೇ?

ಬಲಪಂಥೀಯ ಧೋರಣೆಯ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಈ ನಾಟಕಕ್ಕೆ ಮುನ್ನುಡಿ ಬರೆದಿದ್ದರೆ, ಸುಳ್ಳು ಭಾಷಣಗಳಿಗೆ ಪ್ರಸಿದ್ಧರಾದ ಚಕ್ರವರ್ತಿ ಸೂಲಿಬೆಲೆ ಬೆನ್ನುಡಿ ಬರೆದಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಕೇಂದ್ರಬಿಂದುವಾಗಿದ್ದ ರೋಹಿತ್ ಚಕ್ರತೀರ್ಥರ ಅಯೋಧ್ಯೆ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಮುನ್ನುಡಿಯಲ್ಲಿ ಭೈರಪ್ಪನವರು, “’ಟಿಪ್ಪು ನಿಜಕನಸುಗಳು’ ಎಂಬ ನಾಟಕವು ಇತಿಹಾಸದ ಸತ್ಯ ಮತ್ತು ನಾಟಕದ ಕಲೆ ಎರಡನ್ನೂ ಮೇಳೈಸಿರುವ, ಆತ್ಮವಂಚನೆಗೆ ಅವಕಾಶವಿಲ್ಲದ, ವಿದ್ಯಾವಂತ ಪ್ರೇಕ್ಷಕರನ್ನು ತೃಪ್ತಿಪಡಿಸುವ ಕೃತಿ. ’ಟಿಪ್ಪು ಮತ್ತು ಕೊಡವರು’ ಕೃತಿಯನ್ನು ಓದಿದವರಿಗೆ ಇನ್ನಷ್ಟು ಕಲಾತೃಪ್ತಿಯನ್ನು ಕೊಡುವ ಕೃತಿ ಇದಾಗಿದೆ. ಹದಿನಾಲ್ಕು ದೃಶ್ಯಗಳ ನಾಟಕ ಸತ್ಯಕ್ಕೆ ನೇರವಾಗಿ ಕನ್ನಡಿ ಹಿಡಿದಿದೆ. ಬಿಗಿಯಾದ ನಿರೂಪಣೆ ದೃಶ್ಯಗಳಲ್ಲಿದೆ. ಟಿಪ್ಪು ಹೇಗೆ ಒಬ್ಬ ಮತಾಂಧನಾಗಿದ್ದ, ಹಿಂದೂಸ್ತಾನವನ್ನು ಇಸ್ಲಾಂ ದೇಶವಾಗಿಸುವ ಕನಸನ್ನು ಹೇಗೆ ಕಂಡಿದ್ದ ಎನ್ನುವುದು ಸಾಕ್ಷಿಸಹಿತವಾಗಿ ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಟಿಪ್ಪು ಫರಸಿಯ ಭಾಷೆಯಲ್ಲಿ ಬರೆದಿರುವ ಪತ್ರಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ. ಸತ್ಯ, ನೇರ ಮತ್ತು ನಿಖರತೆ ಈ ಕೃತಿಯ ದೊಡ್ಡ ಶಕ್ತಿ” ಎಂದು ಬರೆದಿದ್ದಾರೆ.

ಚುನಾವಣಾ ಹೊಸ್ತಿಲಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡಿ, ಇಸ್ಲಾಂ ವಿರುದ್ಧ ಮಿತಿ ಇಲ್ಲವೆಂಬಂತೆ ವಿಷಕಾರಿರುವ ಈ ನಾಟಕ ಸತ್ಯಾಂಶಗಳನ್ನು ಹೊಂದಿದೆಯೇ? ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಟಿಪ್ಪು ಕುರಿತು ಅನೇಕ ವೇದಿಕೆಗಳಲ್ಲಿ ನಿರಂತರವಾಗಿ ಮಾತನಾಡುತ್ತಿರುವ ಮೈಸೂರಿನ ಪತ್ರಕರ್ತ ಟಿ.ಗುರುರಾಜ್ ಪ್ರಕಾರ, “ಜಿಹಾದ್, ಅಲ್ಲಾ ಓ ಅಕ್ಬರ್, ಮುಸಲ್ಮಾನರ ರಾಜ್ಯವನ್ನಾಗಿ ಪಣತೊಟ್ಟ ಟಿಪ್ಪು ಸುಲ್ತಾನ್- ಈ ಮೂರರ ಮೇಲೆ ಇಡೀ ನಾಟಕ ಕೇಂದ್ರೀಕೃತವಾಗಿದೆ”. ಟಿಪ್ಪು ಒಬ್ಬ ಮತಾಂಧನಾಗಿದ್ದ ಎಂದು ಬಿಂಬಿಸಲೆಂದೇ ಮೊದಲಿಂದ ಕೊನೆಯವರೆಗೂ ಸರಳರೇಖೆಯಲ್ಲಿ ನಾಟಕ ಚಲಿಸುತ್ತದೆ. ನಾಟಕ ಪ್ರತಿಪಾದಿಸಲು ಹೊರಟಿರುವ ಕೆಲವು ಅಂಶಗಳನ್ನು ಪಟ್ಟಿ ಮಾಡಿ ಚರ್ಚೆ ಮುಂದುವರಿಸುವುದು ಸೂಕ್ತ.

ಅಡ್ಡಂಡ ಕಾರ್ಯಪ್ಪ ಪ್ರತಿಪಾದಿಸಲು ಹೊರಟಿರುವ ವಿಚಾರಗಳು

* ಟಿಪ್ಪು ವಿರುದ್ಧ ನಿಂತು ಬ್ರಿಟಿಷರ ಜೊತೆ ಕೈಜೋಡಿಸಿದ ಅರಸರಿಗೆ ಇದ್ದ ಕಾರಣ ಧರ್ಮವೇ ಆಗಿತ್ತು. ಟಿಪ್ಪು ಮತಾಂತರ ಮಾಡುತ್ತಿದ್ದರಿಂದ ಸಿಟ್ಟಿಗೆದ್ದ ನೆರೆಹೊರೆಯ ಅರಸರು ಬ್ರಿಟಿಷರೊಂದಿಗೆ ಕೈಜೋಡಿಸಿ, ಟಿಪ್ಪುವಿನ ಸೋಲಿಗಾಗಿ ಪಣತೊಟ್ಟರು. ಅದರಲ್ಲಿ ಕೊಡವರು, ಕೇರಳದ ನಾಯರ್‌ಗಳು, ಮರಾಠರು ಸೇರಿದ್ದಾರೆ. ಚಿತ್ರದುರ್ಗದ ನಾಯಕರೂ ಹೈದರ್ ಮತ್ತು ಟಿಪ್ಪುವಿನ ಶತ್ರುಗಳಾಗಿದ್ದರು. ಹೈದ್ರಾಬಾದ್ ನಿಜಾಮರು ಮುಸ್ಲಿಮರಾದರೂ ಟಿಪ್ಪುವಿನ ಮತಾಂಧತೆಯ ಕಾರಣಕ್ಕೆ ಟಿಪ್ಪು ವಿರೋಧಿ ಬಣದಲ್ಲಿ ಗುರುತಿಸಿಕೊಂಡರು.

ಅಡ್ಡಂಡ ಸಿ.ಕಾರ್ಯಪ್ಪ

* ಒಕ್ಕಲಿಗರಾದ ಉರಿಗೌಡ, ನಂಜೇಗೌಡ ಎಂಬವರು ಮೈಸೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿಯವರ ಅಂಗರಕ್ಷಕರಾಗಿದ್ದರು. ಯದುವಂಶದ ಉಳಿವಿಗಾಗಿ ಉರಿಗೌಡ, ನಂಜೇಗೌಡ ಎಂಬವರು ಟಿಪ್ಪುವಿಗೆ ಗುಂಡಿಟ್ಟು ಕೊಂದರು.

* ಟಿಪ್ಪು ಪಾರ್ಸಿ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಕನ್ನಡವನ್ನು ಮೂಲೆಗೆ ತಳ್ಳಿದ. ಪಾರ್ಸಿಯಲ್ಲಿ ಬರೆದ ಪತ್ರಗಳೇ ಆತನ ನಿಜಕನಸಿನ ಕುರುಹುಗಳು.

* ಕೊಡವರು ಯುದ್ಧ ನಿಪುಣರಾಗಿದ್ದರು. ಅವರನ್ನು ಸೋಲಿಸುವುದು ಹೇಗೆಂದು ಟಿಪ್ಪುವಿಗೆ ತಿಳಿಯಲಿಲ್ಲ. ದೊಡ್ಡ ವೀರರಾಜೇಂದ್ರನನ್ನು ಅಧಿಕಾರದಿಂದ ಕೆಳಗಿಳಿಸಿ ತಾನು ಅಧಿಕಾರಕ್ಕೇರಬೇಕೆಂದು ರಾಜಕೀಯ ಹಿತಾಸಕ್ತಿ ಹೊಂದಿದ್ದ ಲಿಂಗಜೇಂದ್ರನ ಸಹಾಯವನ್ನು ಟಿಪ್ಪು ಪಡೆದ. ಪುತ್ತರಿ ಕೋಲಾಟದ ಸಂಭ್ರಮದಲ್ಲಿದ್ದ ಕೊಡವರನ್ನು, ಫ್ರೆಂಚರ ಸಹಾಯದಿಂದ ಕೊಲೆಗೈದ. ತನಗೆ ಸಹಕರಿಸಿದ ಲಿಂಗರಾಜನನ್ನೂ ಟಿಪ್ಪು ಕೊಲ್ಲಿಸಿದ.

ಇದನ್ನೂ ಓದಿ: ಆಧಾರ ರಹಿತ ‘ಟಿಪ್ಪು ನಿಜಕನಸುಗಳು’ ಕೃತಿ ಮಾರಾಟಕ್ಕೆ ಕೋರ್ಟ್ ತಡೆ

* ಮೇಲುಕೋಟೆಯಲ್ಲಿ ಏಳುನೂರು ಅಯ್ಯಂಗಾರಿ ಬ್ರಾಹ್ಮಣರನ್ನು ದೀಪಾವಳಿಯಂದು ಹತ್ಯೆ ಮಾಡಲಾಯಿತು.

* ತನ್ನ ಅವನತಿಯು ಸಮೀಸುತ್ತಿದ್ದಾಗ ಟಿಪ್ಪು ಹಿಂದೂ ಧರ್ಮಗುರುಗಳಿಗೆ (ಶೃಂಗೇರಿಯ ಮಠಾಧೀಶರಿಗೆ) ಪತ್ರವನ್ನು ಬರೆದ. ಅಲ್ಲಿಯವರೆಗೆ ಹಿಂದೂ ದೇವರು, ದೇವಸ್ಥಾನಗಳ ಬಗ್ಗೆ ಯಾವುದೇ ಪ್ರೀತಿ ಇರಲಿಲ್ಲ. ಹಿಂದೂಗಳಿಗೆ ಹೆದರಿ ಪಂಡಿತರಿಗೆ ದಾನ, ಉಂಬಳಿಯನ್ನು ಕೊಟ್ಟ. ಸಾವಿನಿಂದ ಪಾರಾಗಲು ಯಜ್ಞವನ್ನು ನಡೆಸಿದ. ಬಹುದೇವತಾರಾಧನೆಯನ್ನು ಟೀಕಿಸುತ್ತಿದ್ದವನು ಕೊನೆಗೆ ಯಜ್ಞದ ಮೊರೆಹೋದ.

* ಟಿಪ್ಪುವಿನ ಹೆಂಡತಿ ರಜಿಯಾ ಬೇಗಂ ಟಿಪ್ಪುವಿನ ಮತಾಂಧತೆಯ ಕುರಿತು ತಕರಾರು ತೆಗೆದಿದ್ದರಿಂದ ಶ್ರೀರಂಗಪಟ್ಟಣ, ಮೇಲುಕೋಟೆ, ನಂಜನಗೂಡು ದೇವಾಲಯಗಳನ್ನು ಮುಟ್ಟುವುದಿಲ್ಲ ಎಂಬ ವಾದ್ಗಾನವನ್ನು ಟಿಪ್ಪು ನೀಡಿದ. ಶ್ರೀರಂಗಪಟ್ಟಣದಲ್ಲಿ ದೇವಾಲಯ ಮುಟ್ಟಿದರೆ ಹಿಂದೂಗಳು ದಂಗೆ ಏಳುತ್ತಾರೆಂಬ ಭಯ ಆತನಿಗಿತ್ತು. ಅದಕ್ಕೂ ಮುಂಚೆ ಚಿತ್ರದುರ್ಗದ ಉಚ್ಚಂಗಮ್ಮನ ಗುಡಿಯನ್ನು ಕಡವಿ ಮಸೀದಿ ಕಟ್ಟಿಸಿದ. ನರಸಿಂಹಸ್ವಾಮಿ ಆಲಯದ ರಾಜಗೋಪುರ, ಶ್ರೀಗಂಗಾಧರೇಶ್ವರನ ಗೋಪುರ, ಮೈಸೂರು ಅರಮನೆಯ ತ್ರಿನಯನೇಶ್ವರ, ವೆಂಕಟರಮಣಸ್ವಾಮಿ ದೇವಾಲಯದ ಗೋಪುರಗಳನ್ನು ಕೆಡವಿದ.

* ಟಿಪ್ಪು ಹೇಡಿಯಾಗಿದ್ದ. ಕೊನೆಗಳಿಗೆಯಲ್ಲಿ ತಪ್ಪಿಸಿಕೊಂಡು ಹೋಗಲು ಮಾರುವೇಷ ಧರಿಸಿದ್ದ.

* ಹಿಂದೂವಾದಿಯಾಗಿ ದಿವಾನ್ ಪೂರ್ಣಯ್ಯ ಕೊನೆಗಳಿಗೆಯಲ್ಲಿ ಇತಿಹಾಸಕಾರ ಹುಸೇನ್ ಆಲಿ ಕೀರ್ಮಾನಿಗೆ ಬೋಧನೆ ಮಾಡಿದ. ದಿವಾನ್ ಪೂರ್ಣಯ್ಯನ ಆಶಯಗಳಿಗೆ ವಿರುದ್ಧವಾಗಿ ಹುಸೇನ್ ಆಲಿ ಕೀರ್ಮಾನಿ ಇತಿಹಾಸದಲ್ಲಿ ಸುಳ್ಳುಗಳನ್ನು ದಾಖಲಿಸಿದ. ಅದಕ್ಕೆ ದಿವಾನ್ ಪೂರ್ಣಯ್ಯ ತಕರಾರು ತೆಗೆದಿದ್ದ.

* ಟಿಪ್ಪು ತನ್ನ ಅಧಿಕಾರಾವಧಿ ಪೂರ್ತಿ ಮತಾಂತರ ಮಾಡುತ್ತಲೇ ಇದ್ದ. ಆತನಿಗೆ ಬೇರೆ ಕೆಲಸ ಇರಲಿಲ್ಲ. ಸಿಂಹಾಸನಕ್ಕೆ ಏರಿದಕೂಡಲೇ ಊರಿನ ಹೆಸರುಗಳನ್ನು ಬದಲಿಸಲು ಆಜ್ಞೆ ಮಾಡಿದ. ಹುದ್ದೆಯ ಹೆಸರುಗಳನ್ನು ಪರ್ಶಿಯನ್ ಹೆಸರುಗಳಿಂದ ನಮೂದಿಸಲು ಸೂಚಿಸಿದ. ಹಿಂದೂಗಳಿಗೆ ಹೆದರಿ ದೇವರಾಜಮ್ಮಣ್ಣಿಯವರನ್ನು ಕೊಲ್ಲದೆ ಬಿಟ್ಟ. ಟಿಪ್ಪು ಹತನಾದಾಗ ದೇವರಾಜಮ್ಮಣ್ಣಿ ಖುಷಿಪಟ್ಟರು.

* ಮುಸ್ಲಿಮರಿಗೆ ತೆರಿಗೆ ಮನ್ನಾ ಮಾಡಿದ. ಮತಾಂತರವಾದರೆ ತೆರಿಗೆ ವಿಧಿಸುತ್ತಿರಲಿಲ್ಲ.

– ಹೀಗೆ ಪುಂಖಾನುಪುಂಖವಾಗಿ ಅಡ್ಡಂಡ ಕಾರ್ಯಪ್ಪನವರ ಪಿತೂರಿ ಥಿಯರಿ ಮಂಡನೆಯಾಗುತ್ತಾ ಸಾಗುತ್ತದೆ. ಕೆಲವು ಸಂಗತಿಗಳನ್ನಷ್ಟೇ ಇಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಿದೆ. “ಅರ್ಧ ಸತ್ಯವನ್ನು ಅಥವಾ ತಿರುಚಲ್ಪಟ್ಟ ಇತಿಹಾಸವನ್ನು, ಕಪೋಲಕಲ್ಪಿತ ಸಂಗತಿಗಳನ್ನು ರಂಗಾಯಣ ನಿರ್ದೇಶಕರು ಬರೆದಿದ್ದಾರೆ” ಎಂದು ಇತಿಹಾಸ ಬಲ್ಲವರು ಹೇಳುತ್ತಾರೆ.

ಇದನ್ನೂ ಓದಿ: ತಮಿಳು ವೀರರನ್ನು ಎರವಲು ತಂದು ಇಲ್ಲದ ‘ಉರಿಗೌಡ, ನಂಜೇಗೌಡ’ರನ್ನು ಸೃಷ್ಟಿಸಿದ ವಾಟ್ಸಾಪ್‌ ವಿವಿ!

ಇತಿಹಾಸ ಸಂಶೋಧಕ ನಿಧಿನ್ ಓಲಿಕಾರ ಅವರು ’ಟಿಪ್ಪು ನಿಜಕನಸುಗಳು’ ಕೃತಿಕುರಿತು ’ನ್ಯಾಯಪಥ’ಕ್ಕೆ ಪ್ರತಿಕ್ರಿಯಿಸಿದರು. “ಮತಾಂತರಗಳು ಶಿಕ್ಷೆಯ ಭಾಗವಾಗಿ ಆಯ್ದ ಪ್ರಕರಣಗಳಲ್ಲಿ ನಡೆದಿವೆ. ಆದರೆ ಇವರು ಹೇಳುವ ಪ್ರಮಾಣವು ಉತ್ಪ್ರೇಕ್ಷೆಯಿಂದ ಕೂಡಿದೆ. ಅರಸರಿಗೆ ಸಿಂಹಾಸನ ಪಡೆಯುವ ಗುರಿ ಇತ್ತು. ಹೀಗಾಗಿ ಟಿಪ್ಪುವಿನ ವಿರುದ್ಧವಿದ್ದರು. ಇದನ್ನು ಮತಾಂತರ ವಿಚಾರಕ್ಕೆ ಥಳುಕುಹಾಕುವುದು ಸರಿಯಲ್ಲ. ಅರಸುಗಳು ಹೈದರ್ ಮತ್ತು ಟಿಪ್ಪು ಇಬ್ಬರ ವಿರುದ್ಧವೂ ಇದ್ದರು. ಅರಸರು ಧರ್ಮದ ಹಿನ್ನೆಲೆಯಲ್ಲಿ ಸಿಟ್ಟಿಗೇಳುವಂತಿದ್ದರೆ ಚಿಕ್ಕದೇವರಾಜ ಒಡೆಯರ್‌ರವರು ಔರಂಗಜೇಬ್‌ನ ಮಿತ್ರರಾಗಿದ್ದು ಏತಕ್ಕೆ? ಮಿತ್ರನ ಪರವಾಗಿ ಮರಾಠರ ವಿರುದ್ಧವೂ ಹೋರಾಡಿದ್ದರಲ್ಲ? ಇದೇ ಮಾತು ನಿಜಾಮ, ಮರಾಠರು, ಕೊಡವರು, ನಾಯಕರು- ಎಲ್ಲರಿಗೂ ಅನ್ವಯಿಸುತ್ತದೆ. ಟಿಪ್ಪು ಒಬ್ಬ ಮತಾಂಧ ಎಂಬ ಕಾರಣಕ್ಕೆ ಕೊಡವರು, ನಿಜಾಮರು ಬಂಡಾಯವೆದ್ದು ಬ್ರಿಟಿಷರೊಂದಿಗೆ ಕೈಜೋಡಿಸಿದ್ದಾರೆ ಎಂದು ವಾದಿಸುವುದು ಬಾಲಿಶವಾದದ್ದು. ಟಿಪ್ಪು ಸಾವಿನ ನಂತರದ 10-25 ವರ್ಷಗಳ ಕಾಲ ಇವರೇಕೆ ಬ್ರಿಟಿಷರೊಂದಿಗೆ ಹೋರಾಡಿದರು? ಹಾಗೂ ಸೋತರು? ಬ್ರಿಟಿಷರೂ ಬಲವಂತವಾಗಿ ಮತಾಂತರ ಮಾಡಿದ್ದರಾ?” ಎಂದು ಪ್ರಶ್ನಿಸಿದರು.

“ಉರಿಗೌಡ, ನಂಜೇಗೌಡರ ಕಥೆ ಅಸಂಬದ್ಧವಾದದ್ದು. ಇತಿಹಾಸದಲ್ಲಿ ಎಲ್ಲಿಯೂ ಈ ಕುರಿತು ದಾಖಲಾಗಿಲ್ಲ. ಊರುಗಳ ಹೆಸರನ್ನು ಬದಲಾವಣೆ ಮಾಡಿದ ಚರಿತ್ರೆಯನ್ನು ಮತಾಂಧತೆಯ ಕಣ್ಣಿನಿಂದ ನೋಡುವ ಅಗತ್ಯವಿಲ್ಲ. ಎಲ್ಲ ರಾಜರುಗಳು ಇದನ್ನು ಮಾಡಿದ್ದಾರೆ. ಉದಾಹರಣೆಗೆ: ನರಸಿಂಹರಾಜಪುರ, ಚಾಮರಾಜನಗರ, ಅಲಹಾಬಾದ್ ಇತ್ಯಾದಿ. ಇದ್ಯಾವುದೂ ಅಸಾಮಾನ್ಯವಾದ ಸಂಗತಿಯಾಗಿ ಇತಿಹಾಸದಲ್ಲಿ ದಾಖಲಾಗಿಲ್ಲ” ಎಂದು ಅಭಿಪ್ರಾಯಪಟ್ಟರು.

ನಿಧಿನ್ ಓಲೆಕಾರ

“ದೊಡ್ಡವೀರರಾಜೇಂದ್ರ ಮತ್ತು ಲಿಂಗರಾಜೇಂದ್ರ ಇಬ್ಬರದ್ದೂ ಸಹಜ ಸಾವು. ಕೊಡವರು ಮೈಸೂರು ಪ್ರಾಂತ್ಯದಲ್ಲಿ ನಿಯಮಿತವಾಗಿ ಶಸ್ತ್ರಸಜ್ಜಿತ ದಾಳಿಗಳನ್ನು ಮಾಡುತ್ತಿದ್ದರು. ಹಲವಾರು ಎಚ್ಚರಿಕೆಗಳನ್ನು ನೀಡಿದ ನಂತರ ಟಿಪ್ಪು (ಮತ್ತು ಹೈದರ್) ಅವರ ಮೇಲೆ ದಾಳಿ ಮಾಡಿದ್ದರು. ಕಾಳುಮೆಣಸಿನಿಂದ ಸಮೃದ್ಧವಾಗಿರುವ ಮಲಬಾರ್-ವಯನಾಡ್‌ಗೆ ಪ್ರವೇಶಿಸಬೇಕಾದರೆ ಕೊಡಗಿನ ಮೂಲಕವೇ ಹಾದು ಹೋಗಬೇಕಾಗಿತ್ತು ಎಂಬುದನ್ನು ಮರೆಯಬಾರದು. ಅಯ್ಯಂಗಾರಿ ಬ್ರಾಹ್ಮಣರನ್ನು ಕೊಂದ ಕುರಿತು ಉತ್ಪ್ರೇಕ್ಷಿತವಾಗಿ ಮಾತನಾಡುತ್ತಾರೆ. ಆಗ ಅಯ್ಯಂಗಾರರ ಮುಖ್ಯಸ್ಥರಾಗಿದ್ದ ತಿರುಮಲರಾಯರನ್ನು ಬ್ರಿಟಿಷ್ ಗೂಢಾಚಾರಿ ಎಂದು ಆರೋಪಿಸಲಾಗಿತ್ತು. ಅವರು ಟಿಪ್ಪುವನ್ನು ಉರುಳಿಸಲು ಮಹಾರಾಣಿ ಲಕ್ಷ್ಮಮ್ಮಣ್ಣಿಗೆ ಸಹಕರಿಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಮರಣದಂಡನೆಗೆ ಒಳಗಾದವರೆಲ್ಲರೂ ಟಿಪ್ಪು ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ತಿರುಮಲ ರಾಯರ ಕುಟುಂಬದ ಸದಸ್ಯರು. ಇವರೆಲ್ಲರೂ ಬ್ರಿಟಿಷರೊಂದಿಗೆ ಶಾಮೀಲಾಗಿದ್ದಾರೆಂದು ಆರೋಪಿಸಲಾಗಿದೆ. ದೇಶದ್ರೋಹಕ್ಕೆ ಮರಣದಂಡನೆಯನ್ನು ವಿಧಿಸಲಾಗುತ್ತಿತ್ತು. ಟಿಪ್ಪುವೇ ಹೇಳಿದ ಪ್ರಕಾರ 50000 ಬ್ರಾಹ್ಮಣರು ಆತನ ಬಳಿ ಕೆಲಸ ಮಾಡುತ್ತಿದ್ದರು” ಎಂದು ತಿಳಿಸಿದರು.

“ಬ್ರಿಟಿಷರೊಂದಿಗೆ ಯುದ್ಧ ಮಾಡುವುದಕ್ಕಿಂತ ಹಿಂದೆಯೇ ಶೃಂಗೇರಿ ಮಠದೊಂದಿಗೆ ಟಿಪ್ಪುವಿನ ಪತ್ರ ವ್ಯವಹಾರವಿತ್ತು. ಆತ ಕೊನೆಗಾಲದಲ್ಲಿ ಪತ್ರಗಳನ್ನು ಬರೆದ ಎಂಬುದು ಸುಳ್ಳು. ಶೃಂಗೇರಿ ಅರಸರು ಟಿಪ್ಪುವಿನೊಂದಿಗೆ ನಡೆಸುವ ಪತ್ರ ವ್ಯವಹಾರ 1791, 1792ರ ಅವಧಿಗೆ ಸೇರಿವೆ. ಟಿಪ್ಪು ದೇವರ ಹೆಸರಲ್ಲಿ ಹೋಮಗಳನ್ನು ನಡೆಸಿದ. ಲಿಂಗಗಳು ಮತ್ತು ಇತರ ವಿಗ್ರಹಗಳನ್ನು ದಾನ ಮಾಡಿದ. ಯಾವ ಸಾಂಪ್ರದಾಯಿಕ ಮುಸಲ್ಮಾನರೂ ಹಾಗೆ ನಡೆದುಕೊಳ್ಳುವುದಿಲ್ಲ” ಎಂದರು.

ದೇವಾಲಯ ದ್ವಂಸದ ಬಗ್ಗೆ ವಿವರಿಸಿದ ಅವರು, “ಟಿಪ್ಪು ದೇವಾಲಯಗಳನ್ನು ಕೆಡವಿದ ಎಂಬುದು ಮತ್ತೆ ಅಸಂಬದ್ಧ ವಿಚಾರ. ಚಿತ್ರದುರ್ಗವು ಕೆಳದಿ ವಾಸ್ತುಶೈಲಿಯಿಂದ ಪ್ರಭಾವಿತವಾಗಿದೆ, ಇದು ಇಂಡೋ ಸಾರಾಸೆನಿಕ್ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಾಗರಾಳ ಮತ್ತು ಕವಲೇದುರ್ಗಕ್ಕೆ ಭೇಟಿ ನೀಡಬಹುದು. ಟಿಪ್ಪು ಕಾಲದಲ್ಲಿ ಸಾವಿರಾರು ದೇವಾಲಯಗಳು ಪ್ರವರ್ಧಮಾನಕ್ಕೆ ಬಂದವು. 1780 ಮತ್ತು 1790ರ ದಶಕದಲ್ಲಿನ ಶ್ರೀರಂಗಪಟ್ಟಣದ ವರ್ಣಚಿತ್ರಗಳು ಈಗಲೂ ಲಭ್ಯವಿವೆ. ಗೋಪುರ ಸಹಿತ ದೇವಾಲಯಗಳನ್ನು ಇವುಗಳಲ್ಲಿ ಕಾಣಬಹುದು. ಟಿಪ್ಪು ಹೇಡಿಯಾಗಿದ್ದ ಎಂಬುದೂ ಸತ್ಯಕ್ಕೆ ದೂರವಾದ ಮಾತು. ಬ್ರಿಟಿಷರು ಧೈರ್ಯಶಾಲಿ ಶತ್ರುಗಳನ್ನು ಮಾತ್ರ ಹೊಗಳಿದ್ದಾರೆಯೇ ಹೊರತು, ಹೇಡಿಗಳನ್ನಲ್ಲ” ಎಂದು ವಿವರಿಸಿದರು.

ಇದನ್ನೂ ಓದಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

“ಪೂರ್ಣಯ್ಯ ಟಿಪ್ಪುವನ್ನು ಮೂದಲಿಸಿ, ಹಿಂದೂವಾದಿಯಂತೆ ಮಾತನಾಡಿದ್ದಕ್ಕೆ ಯಾವುದೇ ಪುರಾವೆ ಇಲ್ಲ. ಟಿಪ್ಪುವಿಗೆ ಕೊನೆಗಾಲದವರೆಗೂ ಪೂರ್ಣಯ್ಯ ವಿಧೇಯರಾಗಿದ್ದರು. ಟಿಪ್ಪು ಮರಣದ ನಂತರ ಆತನ ಮಗನನ್ನು ಸಿಂಹಾಸನದ ಮೇಲೆ ಕೂರಿಸಲು ವೆಲ್ಲೆಸ್ಲಿಯೊಂದಿಗೆ ಮಾತುಕತೆ ನಡೆಸಿದ್ದರು. ಈ ಬಗ್ಗೆ ಪತ್ರ ವ್ಯವಹಾರ ನಡೆದಿರುವುದಕ್ಕೆ ಸಾಕ್ಷಿಗಳಿವೆ” ಎಂದು ಉಲ್ಲೇಖಿಸಿದರು.

“ಹಿಂದೂಗಳಿಗೆ ಹೆದರಿ ದೇವರಾಜಮ್ಮಣ್ಣಿಯವರನ್ನು ಕೊಲ್ಲದೆ ಬಿಟ್ಟಿದ್ದ; ಟಿಪ್ಪು ಹತನಾದಾಗ ದೇವರಾಜಮ್ಮಣ್ಣಿ ಖುಷಿಪಟ್ಟರು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಕೇವಲ ಮುಸ್ಲಿಮರಿಗೆ ತೆರಿಗೆ ವಿನಾಯಿತಿ ನೀಡಿದನೆಂಬುದು ಅರ್ಧ ಸತ್ಯ. ಮುಸ್ಲಿಮರಿಗೆ ಕೆಲವೆಡೆ, ಹಿಂದೂಗಳಿಗೆ (ದಾವಣಗೆರೆಯಲ್ಲಿ ಹಿಂದೂ ವ್ಯಾಪಾರಿಗಳು, ಮಲಬಾರ್‌ನಲ್ಲಿ ಹಿಂದೂ ಹೋಟೆಲ್‌ಗಳು ಇತ್ಯಾದಿ. ಕೊಚ್ಚಿನ್‌ನಲ್ಲಿ ಯಹೂದಿ ವ್ಯಾಪಾರಿಗಳು) ಕೆಲವೆಡೆ ತೆರಿಗೆ ಪ್ರಯೋಜನಗಳನ್ನು ಟಿಪ್ಪು ನೀಡಿದನು. ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮರಿರುವ ಕಡೆ ತೆರಿಗೆ ಪ್ರಯೋಜನ ನೀಡಿ ವೃತ್ತಿಗಳನ್ನು ಪ್ರೊತ್ಸಾಹಿಸಿದನು” ಎಂದು ಹೇಳಿದರು.

ಮತ್ತೊಬ್ಬ ಇತಿಹಾಸ ಸಂಶೋಧಕ ಬಸವ ಬಿರಾದಾರ್ ಅವರು ಪತ್ರಿಕೆಯೊಂದಿಗೆ ಮಾತನಾಡಿ, ರಂಗಾಯಣ ಇಟ್ಟಿರುವ ಹೆಜ್ಜೆ ಹಾಗೂ ನಕಲಿ ಇತಿಹಾಸದ ಕೃತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

“ತನ್ನದೇ ಆದ ಘನತೆಯನ್ನು ಹೊಂದಿರುವ ರಂಗಾಯಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಜನರ ಹಣದಲ್ಲಿ ಪೊಲಿಟಕಲ್ ಅಜೆಂಡಾವನ್ನು ತುರುಕಲಾಗುತ್ತಿದೆ. ಇಲ್ಲಿ ಅಭಿನಯ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಆತಂಕವಾಗುತ್ತಿದೆ. ಬಿ.ವಿ.ಕಾರಂತರು ಕಟ್ಟಿದ ರಂಗಾಯಣವೆಲ್ಲಿ? ಇಂತಹ ನಕಲಿ ನಾಟಕ ಮಾಡುತ್ತಿರುವ ರಂಗಾಯಣವೆಲ್ಲಿ? ಒಂದು ಸಂಸ್ಥೆಯ ಸಾಂಸ್ಕೃತಿಕ ಇತಿಹಾಸವನ್ನು ಹಾಳುಮಾಡಲಾಗುತ್ತಿದೆ” ಎಂದು ವಿಷಾದಿಸಿದರು.

“ಟಿಪ್ಪು ತನ್ನ ಕನಸುಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡಿದ್ದ. ಅವುಗಳು ಇಂಗ್ಲೆಡ್‌ನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಲಭ್ಯವಿವೆ. ಬಿಬಿಸಿ ಕೋರಿಕೆಯ ಮೇರೆಗೆ ಈ ದಾಖಲೆಗಳನ್ನು ಆಧರಿಸಿ ಗಿರೀಶ್ ಕಾರ್ನಾಡರು, ’ಟಿಪ್ಪು ಸುಲ್ತಾನ್ ಕಂಡ ಕನಸುಗಳು’ ನಾಟಕ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಈ ಕೃತಿ ರಚಿಸಿದ್ದಾರೆ. ಆದರೆ ನಾಟಕಕ್ಕೂ ಇತಿಹಾಸಕ್ಕೂ ಸಂಬಂಧವಿಲ್ಲ. ಇವರೇ ಹಬ್ಬಿಸಿರುವ ಸುಳ್ಳು ಕತೆಗಳನ್ನೇ ಆಧರಿಸಿ ನಾಟಕ ಬರೆದಿದ್ದಾರೆ” ಎಂದು ಟೀಕಿಸಿದರು.

ಬಸವ ಬಿರಾದರ್

“ಮೊದಲನೇ ಆಂಗ್ಲ ಮೈಸೂರು ಯುದ್ಧದಲ್ಲಿ ಮರಾಠರು ಟಿಪ್ಪುವಿನ ಜೊತೆಯಲ್ಲಿದ್ದರು. ನಂತರದಲ್ಲಿ ಮುಸ್ಲಿಂ ರಾಜರು ಟಿಪ್ಪುವಿನಿಂದ ದೂರವಾದರು. ಮರಾಠರಿಗೆ ಟಿಪ್ಪುವಿನ ಮೇಲೆ ಮಾತ್ರ ಕೋಪವಿದ್ದರೆ ಶೃಂಗೇರಿಯಲ್ಲಿ ಗುಡಿಗಳನ್ನೇಕೆ ಒಡೆದುಹಾಕಿದರು? ಮರಾಠರು ಡಕಾಯಿತರ ಥರ ದೇವಾಲಯಗಳ ಮೇಲೆ ದಾಳಿ ಮಾಡಿ ಸಂಪತ್ತು ದೋಚಿದ್ದು ಇತಿಹಾಸ. ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಕೊನೆಯವರೆಗೂ ಮರಾಠರು ಮಧ್ಯ ಪ್ರವೇಶಿಸುವುದಿಲ್ಲ. ಬ್ರಿಟಿಷರು ಮತ್ತು ಟಿಪ್ಪು ನಡುವಿನ ಜಗಳದಲ್ಲಿ ನಮ್ಮದೇನು ಕೆಲಸ ಎಂದು ಸುಮ್ಮನಿದ್ದರು. ಕೊಡಗಿನ ರಾಜರು ಮೊದಲಿನಿಂದಲೂ ಟಿಪ್ಪು ಮತ್ತು ಮೈಸೂರು ಒಡೆಯರ ವಿರುದ್ಧವೇ ಇದ್ದರು. ಬ್ರಿಟಿಷರ ಬೆಂಬಲ ಕೊಡಗಿನ ರಾಜರಿಗೆ ಸಿಕ್ಕಿತ್ತು. ಕೊಡಗಿನ ಜನ ಮೈಸೂರು ಒಡೆಯರ ಪರವಿದ್ದರು ಎನ್ನುವುದಾದರೆ ಅವರು ಯಾಕೆ 1956ರವೆಗೂ ಮೈಸೂರು ಸಂಸ್ಥಾನವನ್ನು ಸೇರಿಕೊಂಡಿರಲಿಲ್ಲ? ಕೊಡಗಿನ ಜನರು ಗನ್ ಬಳಸುವ ಅಧಿಕಾರ ಪಡೆದಿದ್ದೇ ಬ್ರಿಟಿಷರಿಂದ. ಆ ಮಟ್ಟಿಗಿನ ಸಂಬಂಧ ಈ ಇಬ್ಬರ ನಡುವೆ ಇತ್ತು” ಎಂದು ಇತಿಹಾಸ ಬಿಡಿಸಿಟ್ಟರು.

“ಉರಿಗೌಡ, ನಂಜೇಗೌಡ ಎಂಬವರ ಕುರಿತು ಜಾನಪದ ಕತೆ ಇದೆ. ಅದರ ಹೊರತಾಗಿ ಇವರು ಟಿಪ್ಪುವನ್ನು ಕೊಂದವರೆಂಬುದಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲ. ಟಿಪ್ಪುವಿನ ಕೊನೆಯ ದಿನಗಳ ಕುರಿತು ಇಂಚಿಂಚು ದಾಖಲೆಯನ್ನು ಬ್ರಿಟಿಷರು ಬರೆದಿಟ್ಟಿದ್ದಾರೆ. ಕಾವ್ಯ, ನಾಟಕದಲ್ಲಿ ಕಾಲ್ಪನಿಕ ಪಾತ್ರಗಳನ್ನು ಸೇರಿಸುವುದು ಕೃತಿಕಾರನಿಗೆ ಬಿಟ್ಟಿದ್ದು. ಆದರೆ ಐತಿಹಾಸಿಕ ಪಾತ್ರವೆಂದು ಹೇಳುವುದಾದರೆ ಅದಕ್ಕೆ ಸೂಕ್ತ ಪುರಾವೆಗಳನ್ನು ಒದಗಿಸಬೇಕು. ಬಲಪಂಥೀಯ ಚರಿತ್ರಾಕಾರರೂ ಉರಿಗೌಡ, ನಂಜೇಗೌಡರ ಕಥೆಯನ್ನು ಎಲ್ಲಿಯೂ ಹೇಳಿಲ್ಲ ಎಂದರು.

“ಆ ಕಾಲಘಟ್ಟದಲ್ಲಿ ಬ್ರಿಟಿಷರು, ಮೈಸೂರು ಒಡೆಯರು, ಟಿಪ್ಪು ಸುಲ್ತಾನ್ ಸೇರಿದಂತೆ ಎಲ್ಲ ಅರಸರ ಆಡಳಿತ ಭಾಷೆ ಪರ್ಶಿಯನ್ ಆಗಿತ್ತು. ಇಡೀ ಜಗತ್ತಿನ ಮೇಲೆ ಪರ್ಶಿಯನ್ ಪ್ರಭಾವಿತ್ತು. ಇತಿಹಾಸಕಾರ ರಿಚರ್ಡ್ ಎಂ.ಈಟನ್ ಅವರು, “India in the Persianate Age” ಎಂಬ ಕೃತಿಯನ್ನೇ ಬರೆದಿದ್ದಾರೆ. ಪರ್ಶಿಯನ್ ಕಲಿತವರಿಗೆ ಬೇರೆಬೇರೆ ಸಂಸ್ಥಾನಗಳಲ್ಲೂ ಕೆಲಸ ಗಿಟ್ಟಿಸಿಕೊಳ್ಳಲು ಅವಕಾಶವಿತ್ತು. ರಾಜ್ಯ ರಾಜ್ಯಗಳ ನಡುವೆ ಪರ್ಶಿಯನ್ ಭಾಷೆಯ ಮೂಲಕ ವ್ಯವಹಾರ ನಡೆಯುತ್ತಿತ್ತು. ಅದು ಆಡಳಿತ ಭಾಷೆಯಾಗಿತ್ತೇ ಹೊರತು, ಆಡುಭಾಷೆಯಾಗಿರಲಿಲ್ಲ. ಜನರು ಕಲಿಯಲೇಬೇಕು ಎಂದು ಟಿಪ್ಪು ಹೇರಿಕೆ ಮಾಡಿದ್ದರೆ ನಾವೆಲ್ಲ ಇಂದು ಪರ್ಶಿಯನ್ ಮಾತನಾಡುತ್ತಿದ್ದೆವು” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮತ್ತೆ ಮತ್ತೆ ನೆನೆಯಬೇಕಾದ ‘ಟಿಪ್ಪುವಿನ ಸರ್ವಧರ್ಮ ಸಹಿಷ್ಣುತೆ’

ಹೀಗೆ ಇತಿಹಾಸ ಸಂಶೋಧಕರು ಆರ್‌ಎಸ್‌ಎಸ್ ಪ್ರಣೀತ ನಕಲಿ ಇತಿಹಾಸವನ್ನು ಇಂಚಿಂಚೂ ವಿಶ್ಲೇಷಣೆ ಮಾಡುತ್ತಿದ್ದಾರೆ. ಇಡೀ ನಾಟಕದ ಪ್ರತಿ ದೃಶ್ಯದಲ್ಲೂ ಒಂದೊಂದು ಅಜೆಂಡಾವನ್ನು ತುರುಕಿರುವುದನ್ನು ಗುರುತಿಸಬಹುದು. ಮುಸ್ಲಿಮರ ವಿರುದ್ಧ ಹಿಂದೂ ಧರ್ಮದಲ್ಲಿನ ಜಾತಿಗಳನ್ನು ಎತ್ತಿಕಟ್ಟಿ, ಆ ಮೂಲಕ ತನ್ನ ಹಿಡನ್ ಅಜೆಂಡಾವನ್ನು ಜಾರಿಗೊಳಿಸುವ ಸಂಘಪರಿವಾರದ ಹುನ್ನಾರದ ಭಾಗವೇ ಈ ಕೃತಿ ಎಂಬುದು ಮೇಲುನೋಟಕ್ಕೆ ಕಂಡುಬರುತ್ತದೆ. ಈ ಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹಿಂದುತ್ವ ರಾಜಕಾರಣವು ಜಾತಿ ಐಡೆಂಟಿಟಿಗಳನ್ನು ಹೇಗೆ ತನ್ನೊಳಗೆ ಎಳೆದುಕೊಳ್ಳಲು ಯತ್ನಿಸುತ್ತದೆ, ಜಾತಿ ಅಸ್ಮಿತೆಗಳ ಎದುರಿಗೆ ಕಲ್ಪಿತ ಇಸ್ಲಾಮಿಕ್ ಸ್ಟೇಟ್ ಥಿಯರಿಯನ್ನು ನಿಲ್ಲಿಸಿ ಹೇಗೆ ವೋಟ್‌ಬ್ಯಾಂಕ್ ರಾಜಕಾರಣ ಮಾಡಲು ಪ್ರಯತ್ನಿಸುತ್ತದೆ ಎಂಬುದನ್ನು ಗುರುತಿಸಬಹುದು.

ಟಿಪ್ಪು ತನ್ನ ಜೀವಿತಾವಧಿಯಲ್ಲಿ ದಾನ-ಧರ್ಮಗಳನ್ನು ನೀಡಿದ ಎಂಬುದು ಸ್ಪಷ್ಟ. ಇದನ್ನು ಕಾರ್ಯಪ್ಪ ಹೇಗೆ ಮರೆಮಾಚಲು ಯತ್ನಿಸಿದ್ದಾರೆಂಬುದನ್ನು ಉದಾಹರಣೆಯಾಗಿ ಗಮನಿಸಬಹುದು. “ಸೋಲಿನಿಂದ ಕಂಗಾಲಾದ ಬಳಿಕ ಟಿಪ್ಪು ಪಂಡಿತರಿಗೆ, ಶೃಂಗೇರಿ ಮಠಕ್ಕೆ ದಾನವನ್ನು ಕೊಟ್ಟನು. ಸೋಲಿನ ಭೀತಿಯಲ್ಲಿ ಆತನಿಗೆ ಈಗ ಕನ್ನಡ ಪ್ರೇಮ ಮೊಳೆಯುತ್ತದೆ” ಎಂಬಂತೆ ಚಿತ್ರಿಸುತ್ತಾರೆ. ಟಿಪ್ಪು ಹೀಗೆ ಹೇಳುತ್ತಾನೆ: “ಪಂಡಿತರೇ, ನಿಮ್ಮ ಶೃಂಗೇರಿ ಮಠ ಬಹುಪುರಾತನ ಅಲ್ಲವೇ? ನಮ್ಮ ಪೂಜ್ಯ ತಂದೆಯವರು ಗೌರವ ನೀಡುತ್ತಿದ್ದರು. ನಿಮ್ಮ ಹಿಂದೂಗಳ ನಂಬಿಕೆಯ ಕೇಂದ್ರ. ಈ ದೇವಾಲಯಕ್ಕೆ ದಾನ, ದತ್ತಿ ಕೊಡಲು ನಿರ್ಧರಿಸಿದ್ದೇನೆ. ಅದು ಇಂದೇ ಆಗಲಿ. ದಿವಾನರೇ, ಮಠಾಧೀಶರಿಗೆ ಕನ್ನಡದಲ್ಲಿ ಪತ್ರ ಬರೆದು ಖುದ್ದಾಗಿ ಕಳುಹಿಸಬೇಕು… …ನನ್ನ ಪಾಪದ ಕೊಳೆಯನ್ನು ತೊಳೆಯಬೇಕಿದೆ. ದಿವಾನರೇ, ಮೇಲುಕೋಟೆ ಚಲುವರಾಯಸ್ವಾಮಿಗೆ ಬೆಳ್ಳಿಯ ಬಟ್ಟಲು, 4 ಆನೆ, ನಗಾರಿಯನ್ನು ಕೊಡಿರಿ. ಇಂದಿನಿಂದ ಸಲಾಂ ಆರತಿ ಎಂದು ಆರತಿಯಾಗಲಿ…. ಅಲ್ಲಿನ ಅರ್ಚಕರಿಗೆ ದಾನಧರ್ಮವನ್ನು ಕೊಡುವ ವ್ಯವಸ್ಥೆಯಾಗಲಿ…”- ಹೀಗೆ ಸಾರ್ವಜನಿಕವಾಗಿ ಲಭ್ಯವಿರುವ ಸಂಗತಿಗಳ ಇತಿಹಾಸವನ್ನು ತಿರುಚಿ ಉಲ್ಲೇಖಿಸಲಾಗುತ್ತದೆ. ಕಾಲಘಟ್ಟವನ್ನೇ ಅದಲು ಬದಲು ಮಾಡಲಾಗಿದೆ.

ಒಬ್ಬ ರಾಜಪ್ರಭುತ್ವ ಕಾಲದ ಮುಸ್ಲಿಂ ಸುಲ್ತಾನನನ್ನು ವರ್ತಮಾನದಲ್ಲಿ ನಿಲ್ಲಿಸಿ ಆತ ಹಿಂದೂ ವಿರೋಧಿಯಾಗಿದ್ದ, ಒಕ್ಕಲಿಗರ, ಚಿತ್ರದುರ್ಗದ ನಾಯಕರ, ಕ್ರಿಶ್ಚಿಯನ್ನರ, ಕೊಡವರ, ಬ್ರಾಹ್ಮಣರ ಹಾಗೂ ಕನ್ನಡದ ವಿರೋಧಿಯಾಗಿದ್ದ. ಟಿಪ್ಪುವನ್ನು ಬೆಂಬಲಿಸುವವರು ಇವರೆಲ್ಲರ ವಿರೋಧಿ ಎಂಬುದನ್ನು ಸುಳ್ಳುಸುಳ್ಳೇ ಸಾಧಿಸುವುದು ಇಲ್ಲಿನ ಉದ್ದೇಶ. ಕೃತಿಯಲ್ಲಿ ಮತ್ತೆಮತ್ತೆ ಪುನರಾವರ್ತಿತವಾಗುವ ಜಾತಿ ಉದ್ದೇಶಿತ ಸಾಲುಗಳೇ ಇದನ್ನು ಮಾರ್ದನಿಸುತ್ತದೆ. ಇದು ಹಿಂದೂ ರಾಷ್ಟ್ರ, ಮುಸ್ಲಿಮರು ದ್ವಿತೀಯ ದರ್ಜೆಯಲ್ಲಿ ಬದುಕಬೇಕು ಎಂಬ ಸಂವಿಧಾನ ವಿರೋಧಿ ಆಶಯವನ್ನು ಅಡ್ಡಂಡ ಕಾರ್ಯಪ್ಪ ಇಲ್ಲಿ ಪ್ರತಿಪಾದಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಮನುಷ್ಯ ಅನ್ನೋದಕ್ಕಿಂತ ಜಾತಿ ಕ್ರಿಮಿ ಕೀಟ ಅನ್ನೋದು ಸೂಕ್ತ ಏಕೆಂದರೆ ಮನುವಾದಿ ಗಳನ್ನ ಎಷ್ಟು ಆರಾಧಿಸುತ್ತಾನೆ ಅಂದರೆ ನಿಜ ಅರ್ಥದಲ್ಲಿ ಮನುವಾದಿಗಳ ಗುಲಾಮ ಅನ್ನೋದರಲ್ಲಿ ಯಾವುದೇ ಶಂಕೆ ಇಲ್ಲಾ, ಇವನಾರು ಟಿಪ್ಪುವಿನ ಬಗ್ಗೆ ಮಾತನಾಡಲು? ಮೊದಲು ಇವನು ಇವ ಇರೋ ಧರ್ಮದ ನಾರುತ್ತಿರುವ ಕೊಳಕನ್ನ ಸರಿಪಡೆಸಿಕೊಳ್ಳಲಿ,ಅನಂತರ ಉಳಿದಜಾತಿ ಧರ್ಮಗಳ ಬಗ್ಗೆ ಮಾತನಾಡಲಿ.

LEAVE A REPLY

Please enter your comment!
Please enter your name here

- Advertisment -