“ಕಳೆದ ವಾರ ಬೈರುತ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅವರು ಹತರಾಗುವ ಸ್ವಲ್ಪ ಸಮಯದ ಮೊದಲು ಹಿಜ್ಬುಲ್ಲಾದ ಮಾಜಿ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರು ಎಂದು ಲೆಬನಾನ್ ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬೀಬ್ ಇಂದು ಹೇಳಿದ್ದಾರೆ.
ಅಮೆರಿಕನ್ ಪತ್ರಕರ್ತರೊಂದಿಗೆ ಮಾತನಾಡಿದ ಬೌ ಹಬೀಬ್, ಕದನ ವಿರಾಮ ನಿರ್ಧಾರದ ಬಗ್ಗೆ ಯುಎಸ್ ಮತ್ತು ಫ್ರೆಂಚ್ ಪ್ರತಿನಿಧಿಗಳಿಗೂ ತಿಳಿಸಿದ್ದೇವೆ ಎಂದು ಹೇಳಿದರು.
ಸೆಪ್ಟೆಂಬರ್ 27 ರಂದು ಇಸ್ರೇಲ್ ಬಾಂಬ್ ದಾಳಿ ನಡೆಸಿದಾಗ ಹಸನ್ ನಸ್ರಲ್ಲಾ ದಕ್ಷಿಣದ ಉಪನಗರ ದಹಿಯೆಹ್‌ನ ಬಂಕರ್‌ನಲ್ಲಿದ್ದರು. ನಸ್ರಲ್ಲಾ ಅವರ ಸಾವನ್ನು ದೃಢೀಕರಿಸುವ ಹಿಜ್ಬುಲ್ಲಾ ಅವರ ಹೇಳಿಕೆಯು ಅವರು ಹೇಗೆ ಕೊಲ್ಲಲ್ಪಟ್ಟರು ಎಂಬುದನ್ನು ನಿಖರವಾಗಿ ಹೇಳಿಲ್ಲ. ಅವರ ದೇಹಕ್ಕೆ ಯಾವುದೇ ನೇರವಾದ ಗಾಯಗಳಿಲ್ಲ ಎಂದು ರಾಯಿಟರ್ಸ್ ಹೇಳಿದೆ. ಸಾವಿಗೆ ಕಾರಣವೆಂದರೆ ಸ್ಫೋಟದ ಬಲದಿಂದ ಉಂಟಾದ ಆಘಾತ ಎನ್ನಲಾಗಿದೆ.
“ಕದನ ವಿರಾಮಕ್ಕೆ ನಸ್ರಲ್ಲಾ ಒಪ್ಪಿದರು, ನೆತನ್ಯಾಹು ಸಹ ಒಪ್ಪಿದರು. ಹೆಜ್ಬೊಲ್ಲಾ ಇಸ್ರೇಲ್ ಜೊತೆಗೆ ಸಮಾಲೋಚಿಸಿದ ನಂತರ ಕದನ ವಿರಾಮಕ್ಕೆ ಲೆಬನಾನ್ ಸಂಪೂರ್ಣವಾಗಿ ಒಪ್ಪಿಗೆ ನೀಡಿದೆ. ಇದನ್ನು ಯುಎಸ್ ಮತ್ತು ಫ್ರಾನ್ಸ್‌ಗೆ ತಿಳಿಸಲಾಗಿತ್ತು” ಎಂದರು.
“ಲೆಬನಾನಿನ ಹೌಸ್ ಸ್ಪೀಕರ್, ನಬಿಹ್ ಬೆರ್ರಿ, ಹೆಜ್ಬೊಲ್ಲಾ ಅವರೊಂದಿಗೆ ಸಮಾಲೋಚಿಸಿದರು. ನಾವು ಒಪ್ಪಂದದ ಬಗ್ಗೆ ಅಮೆರಿಕನ್ನರು ಮತ್ತು ಫ್ರೆಂಚ್‌ಗೆ ತಿಳಿಸಿದ್ದೇವೆ. ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕೂಡ ಇಬ್ಬರೂ ಅಧ್ಯಕ್ಷರು ನೀಡಿದ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ನಮಗೆ ತಿಳಿಸಿದ್ದರು” ಎಂದು ಅವರು ಹೇಳಿದರು.
ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು ಇತರ ಮಿತ್ರರಾಷ್ಟ್ರಗಳು ಸೆಪ್ಟೆಂಬರ್ 25 ರಂದು 21 ದಿನಗಳ ಕದನ ವಿರಾಮ ಪ್ರಸ್ತಾಪಿಸಿದವು. ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಅವರ ಫ್ರೆಂಚ್‌ನ ಇಮ್ಯಾನುಯೆಲ್ ಮ್ಯಾಕ್ರನ್, ನ್ಯೂಯಾರ್ಕ್‌ನಲ್ಲಿ ಯುಎನ್ ಜನರಲ್ ಅಸೆಂಬ್ಲಿಯ ಭೇಟಿಯಾದ ನಂತರ ಈ ಕದನ ವಿರಾಮ ಪ್ರಸ್ತಾಪವಾಗಿದೆ. ಆದರೆ, ನೆತನ್ಯಾಹು ಅವರು ಒಂದು ದಿನದ ನಂತರ ಕದನ ವಿರಾಮದ ಪ್ರಸ್ತಾಪವನ್ನು ತಿರಸ್ಕರಿಸಿದರು ಎನ್ನಲಾಗಿದೆ. “ಪೂರ್ಣ ಬಲದೊಂದಿಗೆ ಹೋರಾಡುವುದಕ್ಕೆ” ಮಿಲಿಟರಿಗೆ ಆದೇಶಿಸಿದರು ಎನ್ನಲಾಗಿದೆ.
ಇಸ್ರೇಲ್ ದಾಳಿಯಲ್ಲಿ ಸಾಯುವ ಕೆಲವು ದಿನಗಳ ಮೊದಲು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ನಸ್ರಲ್ಲಾ ಅವರನ್ನು ಲೆಬನಾನ್‌ನಿಂದ ಪಲಾಯನ ಮಾಡುವಂತೆ ಎಚ್ಚರಿಸಿದ್ದರು ಎಂದು ರಾಯಿಟರ್ಸ್ ಬುಧವಾರ ವರದಿ ಮಾಡಿದೆ.
ಇದನ್ನೂ ಓದಿ; ಹೆಚ್ಚಿದ ಯುದ್ಧ ಭೀತಿ: ಬೈರುತ್‌ನ ಹೃದಯಭಾಗದಲ್ಲಿ ಇಸ್ರೇಲ್ ವಾಯು ದಾಳಿ, 6 ಜನ ಸಾವು


