ಬ್ರಾಹ್ಮಣ ಸಮುದಾಯ ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದು ಹಿಮಾಚಲ ಪ್ರದೇಶದ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಭಾನುವಾರ ಹೇಳಿದ್ದಾರೆ.
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಬ್ರಾಹ್ಮಣ ಏಕತಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಿವ ಪ್ರತಾಪ್ ಶುಕ್ಲಾ, “ರಾಷ್ಟ್ರೀಯವಾದಿ ವ್ಯಕ್ತಿತ್ವ ಜನರಿಗೆ ಸ್ವಾಭಾವಿಕವಾಗಿ ಬರಬೇಕು” ಎಂದು ಸಲಹೆ ನಿಡಿದ್ದಾರೆ.
ಸಮಾರಂಭದಲ್ಲಿ ಭಾಗವಹಿಸಿದ್ದ ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಮಾತನಾಡಿ, “ಎಲ್ಲ ಬ್ರಾಹ್ಮಣ ಸಂಘಟನೆಗಳನ್ನು ಒಗ್ಗೂಡಿಸಿ ಸಮಾಜವನ್ನು ಜಾಗೃತಗೊಳಿಸುವುದು ಸಮ್ಮೇಳನದ ಉದ್ದೇಶವಾಗಿದೆ” ಎಂದಿದ್ದಾರೆ.
“ಬ್ರಾಹ್ಮಣ ಸಮುದಾಯವು ಯಾವಾಗಲೂ ಸಮಾಜದ ಎಲ್ಲ ವರ್ಗಗಳನ್ನು ಜೊತೆಗೆ ತೆಗೆದುಕೊಂಡು ಮುನ್ನಡೆದಿದೆ. ಇದು ರಾಷ್ಟ್ರದ ಒಳಿತಿಗಾಗಿ ಸಮರ್ಪಿತವಾಗಿ ಕೆಲಸ ಮಾಡುತ್ತಿದೆ. ಅಲ್ಲದೆ, ಸಮಾಜವನ್ನು ದಾರಿ ತಪ್ಪಿಸುವ ಶಕ್ತಿಗಳ ಬಗ್ಗೆ ನಾವು ಜನರಿಗೆ ಅರಿವು ಮೂಡಿಸಬೇಕು. ಸಂವಿಧಾನದ ಬಗ್ಗೆ ತಪ್ಪು ತಿಳುವಳಿಕೆ ಮೂಡಿಸುತ್ತಿರುವ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು” ಎಂದರು.
ಕಲ್ರಾಜ್ ಮಿಶ್ರಾ ಅವರು ಬಹ್ರೈಚ್‌ನಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರವನ್ನು ಖಂಡನೀಯ ಘಟನೆ ಎಂದು ಬಣ್ಣಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಮಾಜಿ ನಾಯಕ ನೂಪುರ್ ಶರ್ಮಾ, ಈ ಸಮಾವೇಶದ ಮೂಲಕ ವಿವಿಧ ಜಾತಿಗಳ ನಡುವೆ ಮಾತ್ರವಲ್ಲ, ಇಡೀ ಸಮಾಜದಲ್ಲಿ ಏಕತೆ ಇರಬೇಕು ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಬಿಜೆಪಿ ಸಂಸದರಾದ ಮಹೇಶ್ ಶರ್ಮಾ ಮತ್ತು ಸತೀಶ್ ಗೌತಮ್, ಯುಪಿ ವಿಧಾನ ಪರಿಷತ್ ಸದಸ್ಯ ಶ್ರೀಚಂದ್ ಶರ್ಮಾ ಮತ್ತು ಅನುಪ್‌ಶಹರ್ ಶಾಸಕ ಸಂಜಯ್ ಶರ್ಮಾ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ; ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: 99 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ


