Homeಮುಖಪುಟ2021-22ರ ಬಜೆಟ್ ರಾಜ್ಯಗಳಿಗೆ ದೊರಕಿದ್ದೇನು? ಕಳೆದುಕೊಂಡಿದ್ದೇನು?: ಶ್ರೀಪಾದ್ ಭಟ್

2021-22ರ ಬಜೆಟ್ ರಾಜ್ಯಗಳಿಗೆ ದೊರಕಿದ್ದೇನು? ಕಳೆದುಕೊಂಡಿದ್ದೇನು?: ಶ್ರೀಪಾದ್ ಭಟ್

ಪ್ರತಿ ಬಾರಿ ಕೇಂದ್ರ ಸರಕಾರದ ಹಣಕಾಸು ಮಂತ್ರಿ ಬಜೆಟ್ ಮಂಡಿಸುವಾಗ ಅಲ್ಲಿ ರಾಜ್ಯಗಳಿಗೆ ಸಂಬಂದಿಸಿದಂತೆ ತೆರಿಗೆ ಹಂಚಿಕೆ, ಮೂಲಬೂತ ಸೌಲಬ್ಯಗಳ ಘೋಶಣೆ, ಮನರೇಗಾದ ಅನುದಾನ ಇತ್ಯಾದಿಗಳು ಚರ್ಚಿಸಲ್ಪಡುತ್ತವೆ. ವಿಕೇಂದ್ರೀಕರಣದಲ್ಲಿ ಕಿಂಚಿತ್ತೂ ನಂಬಿಕೆಯಿಲ್ಲದ ಮೋದಿ ನೇತೃತ್ವದ ಕೇಂದ್ರ ಸರಕಾರವು ಈ ಒಕ್ಕೂಟ ವ್ಯವಸ್ಥೆಯನ್ನು ದಿಕ್ಕರಿಸುವಂತೆ ತನಗೆ ತೋಚಿದಂತೆ ಅನುದಾನ ಮತ್ತು ಹಂಚಿಕೆಯನ್ನು ನಿರ್ದರಿಸುತ್ತದೆ. ಚುನಾವಣೆ ನಡೆಯುವ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕೊಡುವ ಪ್ರಹಸನವೂ ನಡೆದುಹೋಗುತ್ತದೆ

- Advertisement -
- Advertisement -

(ಈ ಲೇಖನದಲ್ಲಿ ಹೊಸಬರಹವನ್ನು ಪ್ರಯೋಗಿಸಲಾಗಿದ್ದು ಮಹಾಪ್ರಾಣಗಳನ್ನು ಮಿತವಾಗಿ ಬಳಸಲಾಗಿದೆ)

ಮೋದಿ ಸರಕಾರ ಅದಿಕಾರಕ್ಕೆ ಬಂದ ನಂತರ ಮಾಡಿದ ಮೊದಲ ಕೆಲಸ ’ಯೋಜನಾ ಆಯೋಗ’ವನ್ನು ರದ್ದುಗೊಳಿಸಿದ್ದು. ಯಾಕೆ? ಅದನ್ನು ನೆಹರೂ ಸ್ಥಾಪಿಸಿದ್ದರು ಎನ್ನುವ ಕಾರಣಕ್ಕೆ. ಈ ಯೋಜನಾ ಆಯೋಗದ ವೈಶಿಷ್ಟ್ಯಗಳೇನು? ದೇಶದ ಸಂಪನ್ಮೂಲಗಳಾದ ಮಾನವ ಸಂಪನ್ಮೂಲ, ಬಂಡವಾಳ, ಸರಕು ಮುಂತಾದವುಗಳ ಬಳಕೆ ಮತ್ತು ಅಬಿವೃದ್ದಿ ಯೋಜನೆಗಳ ಕಾರ್ಯಸ್ವರೂಪ. ಪಂಚವಾರ್ಶಿಕ ಯೋಜನೆಗಳನ್ನು ರೂಪಿಸುವಾಗ, ವಾರ್ಶಿಕ ಯೋಜನೆಗಳನ್ನು ಅಂತಿಮಗೊಳಿಸುವಾಗ ಮತ್ತು ಅವುಗಳನ್ನು ಜಾರಿಗೊಳಿಸಲು ಆಯೋಗವು ಕೇಂದ್ರ ಮತ್ತು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುತ್ತಿತ್ತು. ಅದರ ಅನೇಕ ಮಿತಿಗಳ ನಡುವೆಯೂ ಒಕ್ಕೂಟ ವ್ಯವಸ್ಥೆಗೆ ಅಲ್ಪಸ್ವಲ್ಪವಾದರೂ ಮಾನ್ಯತೆ ದೊರಕುತ್ತಿತ್ತು. ಆದರೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ 2014ರಲ್ಲಿ ಅದಿಕಾರಕ್ಕೆ ಬಂದ ನಂತರ ಯೋಜನಾ ಆಯೋಗವು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎನ್ನುವ ಕಾರಣಕ್ಕೆ ರದ್ದುಗೊಳಿಸಿ ಸಂಪೂರ್ಣ ಕೇಂದ್ರೀಕರಣದ, ಬಂಡವಾಳಶಾಹಿಗಳ ಪರವಾಗಿರುವ ನೀತಿ ಆಯೋಗ ಎನ್ನುವ ತಮ್ಮ ಖಾಸಗಿ ಒಡ್ಡೋಲಗವನ್ನು ಸ್ಥಾಪಿಸಿಕೊಂಡರು. ಇದರದು ಬೇರೆಯದೇ ಕತೆ.

2021-22ರ ಬಜೆಟ್‌ನಲ್ಲಿ ರಾಜ್ಯಗಳಿಗೆ ದೊರಕಿದ್ದೇನು? ಕಳೆದುಕೊಂಡಿದ್ದೇನು ಎಂದು ಚರ್ಚಿಸುವಾಗ ಪಳಿಯುಳಿಕೆಯಾಗಿರುವ ಈ ಯೋಜನಾ ಆಯೋಗ ನೆನಪಾಯಿತು. ಇಂದು ರಾಜ್ಯಗಳು ನಮಗೆ ಅನ್ಯಾಯವಾಗಿದೆ ಎಂದು ಗೋಳಿಟ್ಟಾಗ ಆಯೋಗದ ಅನುಪಸ್ಥಿತಿ ಎದ್ದು ಕಾಣುತ್ತದೆ. ಆದರೆ ಅದನ್ನು ರದ್ದುಗೊಳಿಸುವಾಗ ಬಹುತೇಕ ರಾಜ್ಯಗಳು ತಮಗೆ ಸಂಬಂದಿಸಿಲ್ಲವೆನ್ನುವಂತೆ ಮೌನವಹಿಸಿದ್ದ ಕಾರಣಕ್ಕೆ ಇಂದು ಅನುಬವಿಸುತ್ತಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.

ಪ್ರತಿ ಬಾರಿ ಕೇಂದ್ರ ಸರಕಾರದ ಹಣಕಾಸು ಮಂತ್ರಿ ಬಜೆಟ್ ಮಂಡಿಸುವಾಗ ಅಲ್ಲಿ ರಾಜ್ಯಗಳಿಗೆ ಸಂಬಂದಿಸಿದಂತೆ ತೆರಿಗೆ ಹಂಚಿಕೆ, ಮೂಲಬೂತ ಸೌಲಬ್ಯಗಳ ಘೋಶಣೆ, ಮನರೇಗಾದ ಅನುದಾನ ಇತ್ಯಾದಿಗಳು ಚರ್ಚಿಸಲ್ಪಡುತ್ತವೆ. ವಿಕೇಂದ್ರೀಕರಣದಲ್ಲಿ ಕಿಂಚಿತ್ತೂ ನಂಬಿಕೆಯಿಲ್ಲದ ಮೋದಿ ನೇತೃತ್ವದ ಕೇಂದ್ರ ಸರಕಾರವು ಈ ಒಕ್ಕೂಟ ವ್ಯವಸ್ಥೆಯನ್ನು ದಿಕ್ಕರಿಸುವಂತೆ ತನಗೆ ತೋಚಿದಂತೆ ಅನುದಾನ ಮತ್ತು ಹಂಚಿಕೆಯನ್ನು ನಿರ್ದರಿಸುತ್ತದೆ. ಚುನಾವಣೆ ನಡೆಯುವ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕೊಡುವ ಪ್ರಹಸನವೂ ನಡೆದುಹೋಗುತ್ತದೆ.

ಪ್ರತಿ ಬಾರಿ ಬಜೆಟ್ ಮಂಡನೆಯ ಪೂರ್ವದಲ್ಲಿ ಮತ್ತು ನಂತರ ತೆರಿಗೆ ಹಂಚಿಕೆ ಕುರಿತು ಸುದೀರ್ಘ ಚರ್ಚೆ ನಡೆಯುತ್ತದೆ. 15ನೆ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದಂತೆ ಹಂಚಿಕೆಯಾಗುವ ತೆರಿಗೆಗಳ ಮೊತ್ತದ ಶೇ.41% ಪ್ರಮಾಣವನ್ನು ರಾಜ್ಯಗಳಿಗೆ ಕೊಡಬೇಕು. ಆದರೆ ವಿತ್ತೀಯ ಕೊರತೆ ಹೆಚ್ಚಿದಂತೆ ಹಂಚಿಕೆಯಾಗಲ್ಪಡುವ ಮೊತ್ತದ ಅಡಿಪಾಯವೇ ಸಂಕುಚಿತಗೊಂಡು ಅದರ ಪ್ರತಿಕೂಲ ಪರಿಣಾಮವನ್ನು ತಮಗೆ ವರ್ಗಾಯಿಸಲಾಗುತ್ತದೆ ಎಂಬುದು ರಾಜ್ಯಗಳ ತಗಾದೆ. 2020-21ರ ಸಾಲಿನಲ್ಲಿ ವಿತ್ತೀಯ ಕೊರತೆ 9.9% ರಶ್ಟಿದೆ ಮತ್ತು 2021-22ರ ಹಣಕಾಸು ವರ್ಶದಲ್ಲಿ ವಿತ್ತೀಯ ಕೊರತೆಯು 6.6% ರಶ್ಟಿರುತ್ತದೆ ಎಂದು ಮೋದಿ ಸರಕಾರದ ಹಣಕಾಸು ಮಂತ್ರಿ ಮೊಟ್ಟ ಮೊದಲ ಬಾರಿಗೆ ಸತ್ಯವನ್ನು ನುಡಿದಿದ್ದಾರೆ. ಇದರರ್ಥ ರಾಜ್ಯಗಳ ತೆರಿಗೆಗಳ ಹಂಚಿಕೆಯಲ್ಲಿಯೂ ವ್ಯತ್ಯಾಸವಾಗುತ್ತದೆ.

ಏಕೆಂದರೆ ವಿತ್ತೀಯ ಕೊರತೆಯ ಆದಾರದಲ್ಲಿ ರಾಜ್ಯಗಳು ಮಾರುಕಟ್ಟೆಯಿಂದ ಎಶ್ಟು ಪ್ರಮಾಣದಲ್ಲಿ ಸಾಲ ಪಡೆಯಬಹುದು ಎಂದು ನಿರ್ದರಿಸಲ್ಪಡುತ್ತದೆ. ಬಜೆಟ್ ಪೂರ್ವದಲ್ಲಿ ಅಂದಾಜಿಸುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ತೆಗೆದುಕೊಂಡರೆ ಆದಾಯದಲ್ಲಿ ವ್ಯತ್ಯಯ ಉಂಟಾಗುತ್ತದೆ ಮತ್ತು ಇದರ ಪ್ರತಿಕೂಲ ಪರಿಣಾಮ ರಾಜ್ಯಗಳ ಮೇಲಾಗುತ್ತದೆ, ಯಾಕೆಂದರೆ ತನಗೆ ಆದಾಯವಿಲ್ಲವೆಂದು ಕೇಂದ್ರ ಸರಕಾರವು ರಾಜ್ಯಗಳ ಪಾಲಿನ ತೆರಿಗೆ ಮೊತ್ತವನ್ನು ಪಾವತಿಸುವುದಿಲ್ಲ. ಉದಾಹರಣೆಗೆ ಜಿಎಸ್‌ಟಿ ಹಣವನ್ನು ಕೊಡದೆ ಕೇಂದ್ರವು ರಾಜ್ಯಗಳನ್ನು ಸತಾಯಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಿ. ಇದರ ಮೇಲೆ ಗಾಯದ ಮೇಲೆ ಬರೆ ಇಟ್ಟಂತೆ ಸಾಲದ ಮೇಲಿನ ಬಡ್ಡಿದರಗಳು ರಾಜ್ಯಗಳಿಗೆ ತಲೆನೋವಾಗಿದೆ.

ಮತ್ತೊಂದೆಡೆ ಕೇಂದ್ರ ಸರಕಾರ ವಿದಿಸುವ ಸೆಸ್ ಮತ್ತು ಸರ್‌ಚಾರ್ಜನ ಮೊತ್ತವು ರಾಜ್ಯಗಳಿಗೆ ಹಂಚಿಕೆಯಾಗುವುದಿಲ್ಲ. ಈ ಬಾರಿ ಕೃಶಿ ಸೆಸ್ ಎಂದು ಕೇಂದ್ರ ಸರಕಾರ ಪ್ರಸ್ತಾಪಿಸಿರುವ 15 ಬಗೆಯ ತೆರಿಗೆಗಳು (ಪೆಟ್ರೋಲ್, ಡೀಸೆಲ್, ಬಂಗಾರ, ಬೆಳ್ಳಿ, ಆಲ್ಕೋಹಾಲ್, ಪಾಮ್ ಎಣ್ಣೆ, ಸೇಬು, ಕಲ್ಲಿದ್ದಲು ಇತ್ಯಾದಿ) ಸಂಪೂರ್ಣವಾಗಿ ಕೇಂದ್ರದ ಬೊಕ್ಕಸಕ್ಕೆ ಜಮಾ ಆಗುತ್ತದೆ. ಇಲ್ಲಿ ರಾಜ್ಯಕ್ಕೆ ನಯಾ ಪೈಸೆ ದೊರಕುವುದಿಲ್ಲ. ಜಿಎಸ್‌ಟಿ ಎನ್ನುವ ಏಕರೂಪದ ತೆರಿಗೆ ಜಾರಿಗೆ ಬಂದ ನಂತರವೂ ಕೇಂದ್ರವು ಈ ಸೆಸ್ ಮತ್ತು ಸರ್‌ಚಾರ್ಜ್ ತೆರಿಗೆಯನ್ನು ಅಂತ್ಯಗೊಳಿಸದೆ ಮತ್ತಶ್ಟು ವಿಸ್ತರಿಸುತ್ತಿದೆ ಎಂದು ಈ ತಾರತಮ್ಯದ ಕುರಿತು ಆಕ್ರೋಶ ವ್ಯಕ್ತಪಡಿಸುವ ರಾಜ್ಯಗಳ ದನಿ ಅರಣ್ಯರೋದನವಾಗಿದೆ. ಏಕೆಂದರೆ ಜಿಎಸ್‌ಟಿ ಅಡಿಯಲ್ಲಿ ತಂದರೆ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕು ಆದರೆ ಸೆಸ್ ಮತ್ತು ಸರ್‌ಚಾರ್ಜ ಆಗಿದ್ದರೆ ಶೇ.100 ಪ್ರಮಾಣದಲ್ಲಿ ತನಗೇ ದೊರಕುತ್ತದೆ ಎನ್ನುವ ಕೇಂದ್ರದ ದೂರ್ತತನದ ಮುಂದೆ ರಾಜ್ಯಗಳ ಸ್ವಾಯತ್ತತೆಯ ಆಶಯಗಳು ನಾಶಗೊಂಡಿವೆ

2019-20ರ ಹಣಕಾಸು ವರ್ಶದಲ್ಲಿ ಕೇಂದ್ರದ ತೆರಿಗೆಗಳಿಂದ ರಾಜ್ಯಗಳು 6.5 ಲಕ್ಷ ಕೋಟಿ ಮೊತ್ತವನ್ನು, 2020-21ರಲ್ಲಿ 5.49 ಲಕ್ಷ ಕೋಟಿ ಮೊತ್ತವನ್ನು ಪಡೆದುಕೊಂಡವು. ಕುಂಠಿತಗೊಂಡ ಈ ಮೊತ್ತದಿಂದ ರಾಜ್ಯಗಳ ಆರ್ಥಿಕ ಅಬಿವೃದ್ದಿಯ ಮೇಲೆ ದುಶ್ಪರಿಣಾಮ ಬೀರಿದ್ದು ನಿಜ. 2021-22ರ ಬಜೆಟ್‌ನಲ್ಲಿ ಸೀತಾರಾಮನ್ ಅವರು ಮುಂದಿನ ಐದು ವರ್ಶಗಳಿಗೆ ಒಟ್ಟು 135.2 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಇದರಲ್ಲಿ ಕೇಂದ್ರಕ್ಕೆ ದೊರಕುವ ಸೆಸ್ ಮತ್ತು ಸರ್‌ಚಾರ್ಜ ಕಳೆದರೆ ಉಳಿಯುವ ಒಟ್ಟು ಮೊತ್ತ 103 ಲಕ್ಷ ಕೋಟಿ. ಶೇ.41% ಪ್ರಮಾಣದಲ್ಲಿ 2021-26ರ ಅವದಿಗೆ ರಾಜ್ಯಗಳಿಗೆ ಹಂಚಿಕೆಯಾಗುವ ಒಟ್ಟು ಮೊತ್ತ 42.2 ಲಕ್ಷ ಕೋಟಿ. ಈ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯಗಳ ಕೊಡುಗೆ ಅದಿಕವಾಗಿದ್ದರೂ ಸಹ ಅವುಗಳಿಗೆ ಹಂಚಿಕೆಯಾಗುವುದು 42.2 ಲಕ್ಷ ಕೋಟಿ ಮತ್ತು ಕೇಂದ್ರದ ಬೊಕ್ಕಸಕ್ಕೆ ಜಮೆಯಾಗುವುದು 93 ಲಕ್ಷ ಕೋಟಿ. ಇದು ಅಂದಾಜು ಮಾತ್ರ. ಒಂದು ವೇಳೆ ಅಂದಾಜಿಸಿದ ತೆರಿಗೆ ಸಂಗ್ರಹವಾಗದಿದ್ದರೆ ರಾಜ್ಯಗಳ ಸ್ಥಿತಿ ಮತ್ತಶ್ಟು ಹದಗೆಡುತ್ತದೆ. ನಾವು ರಾಜ್ಯಗಳ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆ ಕುರಿತು ಮಾತನಾಡುವ ಮೊದಲು ಈ ತೆರಿಗೆ ಹಂಚಿಕೆಯನ್ನು ಅಸಮಾನತೆ ಮತ್ತು ತಾರತಮ್ಯವನ್ನು ಬಗೆಹರಿಸಿಕೊಳ್ಳಬೇಕು.

ಕೇಂದ್ರ ಮತ್ತು ರಾಜ್ಯಗಳ combined ವೆಚ್ಚದಲ್ಲಿ ರಾಜ್ಯಗಳ ಪಾಲು ಶೇ.60% ಪ್ರಮಾಣದಲ್ಲಿದ್ದರೂ ಸಹ ಜಿಎಸ್‌ಟಿ ಜಾರಿಗೊಂಡ ನಂತರ ಈ ಮುಂಚೆ ರಾಜ್ಯಗಳಿಗೆ ನೇರವಾಗಿ ಹರಿದು ಬರುತ್ತಿದ್ದ ತೆರಿಗೆಗಳು ಎಲ್ಲವೂ ಕೇಂದ್ರದ ಬಳಿ ಸಂಚಯಗೊಂಡು ಅದರಲ್ಲಿ ರಾಜ್ಯದ ಪಾಲನ್ನು ಕೊಡದೆ ಕೇಂದ್ರವು ಸತಾಯಿಸುತ್ತಿರುವುದು ಮತ್ತು ಈ ಕಾರಣಕ್ಕೆ ರಾಜ್ಯಗಳ ಅಬಿವೃದ್ದಿಗೆ ತೀವ್ರವಾದ ಹಿನ್ನಡೆಯಾಗುತ್ತಿರುವುದು ಒಕ್ಕೂಟ ಪ್ರಜಾಪ್ರಬುತ್ವ ವ್ಯವಸ್ಥೆಯ ದೊಡ್ಡ ಸೋಲು ಎಂದು ಹೇಳಬಹುದು. ಆದರೆ ಈ ಬಾರಿ ಬಜೆಟ್‌ನಲ್ಲಿ ಹಣಕಾಸು ಮಂತ್ರಿಗಳು ಈ ಜಿಎಸ್‌ಟಿ ಹಗರಣದ ಕಾರಣದಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಹದಗೆಟ್ಟ ವಿಶ್ವಾಸವನ್ನು ಮರಳಿ ಪುನಃಸ್ಥಾಪಿಸುವ, ಅದರಲ್ಲಿನ ಲೋಪದೋಶಗಳನ್ನು ಸರಿಪಡಿಸುವ ಯಾವುದೇ ಬರವಸೆಯ ಮಾತನ್ನು ಆಡಲಿಲ್ಲ, ಅದರ ಪ್ರಸ್ತಾಪವನ್ನು ಮಾಡಲಿಲ್ಲ.

2021-26ರ ಅವದಿಗೆ ಸ್ಥಳೀಯ ಸರಕಾರಗಳಿಗೆ 4,36,361 ಕೋಟಿ ಅನುದಾನದ ಗಾತ್ರ ನಿಗದಿಯಾಗಿದೆ. ಇದರಲ್ಲಿ ಹೊಸ ನಗರಗಳ ನಿರ್ಮಾಣಕ್ಕೆ 8000 ಕೋಟಿಯನ್ನು ಕಾರ್ಯನಿರ್ವಹಣೆಯ ಆದಾರದಲ್ಲಿ ಮತ್ತು 450 ಕೋಟಿಯನ್ನು ನಗರಸಬೆಯ ಸೇವೆಗಳಿಗೆ, 2,36,805 ಕೋಟಿ ಮೊತ್ತವನ್ನು ಗ್ರಾಮೀಣ ಬಾಗದ ಸ್ಥಳೀಯ ಸಂಸ್ಥೆಗಳಿಗೆ, 1,21,055 ಕೋಟಿ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು 70,051 ಕೋಟಿಯನ್ನು ಆರೋಗ್ಯ ಅನುದಾನಕ್ಕೆ ಮೀಸಲಿಡಲಾಗಿದೆ. 15ನೆ ಹಣಕಾಸು ಆಯೋಗವು ರಾಜ್ಯಗಳು ತಮ್ಮ ಬಜೆಟ್ ಗಾತ್ರದ ಶೇ. 8 ಪ್ರಮಾಣವನ್ನು ಆರೋಗ್ಯ ವಲಯದಲ್ಲಿ ವೆಚ್ಚ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಆದರೆ ಇದು ಎಶ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದು ಶಿವನೇ ಬಲ್ಲ!!

ಇನ್ನು ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಗಳಲ್ಲಿನ (ಸಿಎಸ್‌ಸ್) ಪ್ರತ್ಯೇಕತೆ ಮತ್ತು ತಾರತಮ್ಯದ ಕುರಿತು ರಾಜ್ಯಗಳು ಮೊದಲಿನಿಂದಲೂ ತಮ್ಮ ಅಸಮದಾನ ವ್ಯಕ್ತಪಡಿಸುತ್ತಲೇ ಬಂದಿವೆ. ಈ ಸಿಎಸ್‌ಸ್‌ನ್ನು ಕೆಲವೇ ವಲಯಗಳಿಗೆ ಸೀಮಿತಗೊಳಿಸಬೇಕು ಮತ್ತು ಅದರ ಆಯ್ಕೆಯನ್ನು ರಾಜ್ಯಗಳಿಗೆ ಬಿಡಬೇಕೆಂದು ಅನೇಕ ಸಮಿತಿಗಳು ಶಿಫಾರಸ್ಸು ಮಾಡಿದರೂ ಸಹ ಅದು ಊರ್ಜಿತಗೊಂಡಿಲ್ಲ. 2021-22ರ ಬಜೆಟ್ ಮಂಡನೆಯಲ್ಲಿ 5.35 ಲಕ್ಷ ಕೋಟಿ ವೆಚ್ಚದ ಭಾರತಮಾಲಾ ಯೋಜನೆಯ ಅಡಿಯಲ್ಲಿ 13,000 ಕಿ.ಮೀ. ಉದ್ದ ರಸ್ತೆ ನಿರ್ಮಾಣಕ್ಕೆ 3.3 ಲಕ್ಷ ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಇದರಲ್ಲಿ 3,800 ಕಿ.ಮೀ. ನಿರ್ಮಿಸಲಾಗಿದೆ, 11,000 ಕಿ.ಮೀ. ರಾಶ್ಟ್ರೀಯ ಹೆದ್ದಾರಿ ಕಾರಿಡಾರ್‌ನ್ನು 2022ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಈ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳನ್ನು ರೂಪಿಸುವಾಗ ರಾಜ್ಯಗಳೊಂದಿಗೆ ಸಮಾಲೋಚಿಸುವುದಿಲ್ಲ, ಅವರ ಆದ್ಯತೆಗಳನ್ನು ಪರಿಗಣಿಸುವುದಿಲ್ಲ.

ರಾಜ್ಯಗಳಿಗೆ ನಿರ್ಣಯಿಸುವ ಅದಿಕಾರವೂ ಸಹ ಮೊಟಕುಗೊಂಡಿರುತ್ತದೆ. ಇದರ ಪರಿಣಾಮವಾಗಿ ಕೇಂದ್ರ ಸರಕಾರವು ತನಗೆ ಚುನಾವಣಾ ಲಾಭ ತಂದುಕೊಡುವ ಯೋಜನೆಗಳನ್ನು ಮಾತ್ರ ವಿಶೇಷವಾಗಿ ಪ್ರಸ್ತಾಪಿಸುತ್ತದೆ. ಮುಂದಿನ ತಿಂಗಳುಗಳಲ್ಲಿ ಚುನಾವಣೆ ನಡೆಯುವ ತಮಿಳುನಾಡುಗೆ 1 ಲಕ್ಷ ಕೋಟಿ, ಕೇರಳಕ್ಕೆ 65 ಸಾವಿರ ಕೋಟಿ, ಪ.ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ 25 ಸಾವಿರ ಕೋಟಿ ಹೆದ್ದಾರಿ ಯೋಜನೆಯನ್ನು ಹಣಕಾಸು ಮಂತ್ರಿಗಳು ಪ್ರಸ್ತಾಪಿಸಿದ್ದಾರೆ. ಆದರೆ ಇದು ಜಾರಿಗೊಳ್ಳುವುದಿಲ್ಲ ಎನ್ನುವುದು ಬೇರೆ ಮಾತು. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರಗಳಿದ್ದರೆ ಎಲ್ಲ ಬಂಡವಾಳವೂ ಹರಿದು ಬರುತ್ತದೆ ಎಂದು ಪ್ರಚಾರ ಮಾಡಿದ ಬಿಜೆಪಿ ಪಕ್ಷವು ಸ್ವತಃ ಅದಿಕಾರದಲ್ಲಿರುವ ಕರ್‍ನಾಟಕ ರಾಜ್ಯಕ್ಕೆ ಈ ಬಾರಿ ಯಾವುದೇ ಬಂಡವಾಳ ಹೂಡಿಕೆಯನ್ನಾಗಲಿ, ಯೋಜನೆಗಳನ್ನಾಗಲೀ ಅದೇ ಪಕ್ಷದ ಹಣಕಾಸು ಮಂತ್ರಿಗಳು ಪ್ರಸ್ತಾಪಿಸಿಲ್ಲ. ಮುಂದಿನ ಹಣಕಾಸು ವರ್ಶದಲ್ಲಿ 278 ಕಿ.ಮೀ. ಉದ್ದದ ಬೆಂಗಳೂರು-ಚೆನ್ನೈ ಹೆದ್ದಾರಿ ಪ್ರಾರಂಬಿಸಲಾಗುವುದು ಎಂದು ಹೇಳಿದ್ದಾರೆ ಆದರೆ ಅದಕ್ಕೆ ಆರ್ಥಿಕ ಅನುದಾನ ಕೊಟ್ಟಿಲ್ಲ.

ಇದನ್ನೂ ಓದಿ: ಕೃಷಿಗೆ ಏನಿದೆ ಬಜೆಟ್‌ನಲ್ಲಿ? ರೈತರಿಗೆ ಆದ ಮೋಸ ಅಷ್ಟೇ! : ಯೋಗೇಂದ್ರ ಯಾದವ್

ಗ್ರಾಮೀಣ ಉದ್ಯೋಗ ಖಾತರಿಯ ’ಮನರೇಗ’ ಯೋಜನೆಯ ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯಗಳು 90:10 ಅನುಪಾತದಲ್ಲಿ ಭರಿಸಬೇಕು. ಇದರಲ್ಲಿ ಸರಕುಗಳು, ವೇತನದ ಶೇ. 75% ಪ್ರಮಾಣವನ್ನು ಕೇಂದ್ರವೂ ಶೇ.25 ಪ್ರಮಾಣವನ್ನು ರಾಜ್ಯಗಳೂ ಹಂಚಿಕೊಳ್ಳಬೇಕು. 2016-17ರಲ್ಲಿ ಕೇಂದ್ರವು ಕರ್‍ನಾಟಕಕ್ಕೆ 2,100 ಕೋಟಿ ಮನರೇಗ ವೆಚ್ಚದ ಮೊತ್ತ ಕೊಡಬೇಕಿತ್ತು. ಕರ್‍ನಾಟಕವು ಕೇಂದ್ರದ ಪಾಲನ್ನು ಕೇಳಿದಾಗ ತನ್ನ ಬಳಿ ಹಣವಿಲ್ಲವೆಂದು ತಾರಮ್ಮಯ್ಯ ಆಡಿಸಿತು ಈ ಮೋದಿ ಸರಕಾರ. ನೀವು ಕೊಟ್ಟಿರಿ ನಂತರ ನಾವು ಕೊಡುತ್ತೇವೆ ಎಂದು ಕೇಂದ್ರ ಸರಕಾರ ಬರವಸೆ ಕೊಟ್ಟ ನಂತರ 2019ರಲ್ಲಿ ಕರ್‍ನಾಟಕ ಸರಕಾರವು ತನ್ನ ಬೊಕ್ಕಸದಿಂದ 500 ಕೋಟಿಯನ್ನು ಪಾವತಿಸಬೇಕಾಯಿತು. ಇದಕ್ಕೂ ಮುಂಚೆ 2016ರಲ್ಲಿ ಸುಪ್ರೀಂಕೋರ್ಟ ತರಾಟೆ ತೆಗೆದುಕೊಂಡ ನಂತರ ಮೋದಿ ಸರಕಾರವು ತಾನು ಪಾವತಿಸಬೇಕಾದ 12,230 ಕೋಟಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡಿತು. ನಂತರ ಮಾರ್ಚ 2020ರಂದು ರಾಜ್ಯಗಳಿಗೆ ಪಾವತಿಸಬೇಕಾದ 11,499 ಕೋಟಿ ಬಾಕಿ ಮೊತ್ತವನ್ನು ಏಪ್ರಿಲ್ 2020ರೊಳಗೆ ಪಾವತಿಸುವ ಭರವಸೆ ಕೊಟ್ಟಿತು. ಆದರೆ ಇದುವರೆಗೂ 4,431 ಕೋಟಿ ಮೊತ್ತವನ್ನು ಮಾತ್ರ ಕೊಟ್ಟಿದೆ, ಬಾಕಿ ಮೊತ್ತ 7,068 ಕೋಟಿಯನ್ನು ಇನ್ನೂ ನೀಡಿಲ್ಲ ಎನ್ನುವ ವರದಿ ಹಳೆಯದೋ ಅಥವಾ ಇನ್ನೂ ತಾಜಾ ಸುದ್ದಿಯೋ ಗೊತ್ತಿಲ್ಲ. ಏಕೆಂದರೆ ಮೋದಿ ಆಡಳಿತದಲ್ಲಿ ಎಲ್ಲವೂ ನಿಗೂಢ ಮತ್ತು ಯಾವುದೇ ಮಾಹಿತಿ ದೊರಕುವುದಿಲ್ಲ ಮತ್ತು ನಾವು ಕೇಳುವಂತಿಲ್ಲ.

2020ರಲ್ಲಿ ಮನರೇಗಾ ಯೋಜನೆಗೆ ಅನುದಾನವನ್ನು ಪರಿಶ್ಕರಿಸಿ 1.1 ಲಕ್ಷ ಕೋಟಿಯನ್ನು ನಿಗದಿಪಡಿಸಲಾಯಿತು. ಆದರೆ 2021-22ರ ಬಜೆಟ್‌ನಲ್ಲಿ ಕೇವಲ 73,000 ಕೋಟಿ ಕೊಟ್ಟಿದೆ. 31,111 ಕೋಟಿ ಕಡಿತಗೊಳಿಸಿದೆ. ಇದು ಕೇವಲ ಬಜೆಟ್ ಪ್ರಸ್ತಾಪ. ಹಿಂದಿನ ಅನುಬವಗಳನ್ನು ನೆನಪಿಸಿಕೊಂಡರೆ ಕೇಂದ್ರದ ಸರಕಾರವು ತನ್ನ ಪಾಲಿನ ವೆಚ್ಚವನ್ನು ಬರಿಸುವ ಯಾವುದೇ ಲಕ್ಷಣಗಳಿಲ್ಲ. ಸದಾ ಕೈ ಎತ್ತುವ ಚಾಳಿಯನ್ನು ರೂಡಿಸಿಕೊಂಡಿರುವ ಮೋದಿ ಸರಕಾರದ ಈ ದೋರಣೆಯಿಂದ ರಾಜ್ಯಗಳ ಹಣಕಾಸು ಪರಿಸ್ಥಿತಿ ಸಂಕಶ್ಟಕ್ಕೆ ಸಿಲುಕಲಿದೆ.

ಉಪಸಂಹಾರ

ಈಗಿನ ಕೇಂದ್ರೀಕೃತ ವ್ಯವಸ್ಥೆ ಸಂಪೂರ್ಣ ಬದಲಾಗದೇ ಹೋದರೆ ರಾಜ್ಯಗಳ ಆಸ್ತಿತ್ವಕ್ಕೆ ಯಾವುದೇ ಉಳಿಗಾಲವಿಲ್ಲ. ಮೋದಿ ಸರಕಾರದ ಸರ್ವಾದಿಕಾರದ ದೋರಣೆಯ ಆಡಳಿತವು ಪರಿಸ್ಥಿತಿಯನ್ನು ಮತ್ತಶ್ಟು ಹದಗೆಡಿಸಲಿದೆ. ರಾಜ್ಯಗಳಿಗೆ ಸ್ವಾಯತ್ತತೆ ದೊರಕಿಸಿಕೊಡದಿದ್ದರೆ ಈ ಒಕ್ಕೂಟ ವ್ಯವಸ್ಥೆ ಎಂಬುದು ಕೇವಲ ಅಣುಕು ಪ್ರಹಸನವಾಗಲಿದೆ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಕನ್ನಡಿಗರೆಂದರೆ ಒಕ್ಕೂಟ ಸರ್ಕಾರಕ್ಕೆ ತಾತ್ಸಾರ: ಕೇಂದ್ರ ಬಜೆಟ್ ವಿರುದ್ಧ ಕರವೇ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಎಂಸಿಯನ್ನು ಭಷ್ಟ ಎನ್ನುವ ಮೋದಿ ಕನ್ನಡಿ ನೋಡಿಕೊಳ್ಳಬೇಕು; ಅವರ ಪಕ್ಷ ಡಕಾಯಿತರಿಂದ ತುಂಬಿದೆ: ಮಮತಾ

0
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ತಂಡಗಳು ನಡೆಸಿರುವ ತನಿಖೆಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ತಮ್ಮ ಟಿಎಂಸಿ ಭ್ರಷ್ಟಾಚಾರದ ಆರೋಪ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಕನ್ನಡಿಯಲ್ಲಿ...