ತನ್ನ ಆದೇಶ ಉಲ್ಲಂಘಿಸಿ ಬುಲ್ಡೋಝರ್ ಕಾರ್ಯಾಚರಣೆ ನಡೆಸಿದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇಂದು (ಸೆ.30) ನೋಟಿಸ್ ಜಾರಿ ಮಾಡಿದೆ.
ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ದೇಶದಲ್ಲಿ ಎಲ್ಲೂ ಬುಲ್ಡೋಝರ್ ಕಾರ್ಯಾಚರಣೆ ನಡೆಸಬಾರದು ಎಂದು 2024 ರ ಸೆಪ್ಟೆಂಬರ್ 17 ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದನ್ನು ಉಲ್ಲಂಘಿಸಿ ಕಟ್ಟಡಗಳನ್ನು ಕೆಡವಿದ ಅಸ್ಸಾಂ ಸರ್ಕಾರದ ವಿರುದ್ದ, ಅಲ್ಲಿನ 47 ನಾಗರಿಕರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಅಸ್ಸಾಂ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಮೂರು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಈ ಮಧ್ಯೆ ಕಕ್ಷಿದಾರರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆದೇಶಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಹುಝೆಫಾ ಅಹ್ಮದಿ, “ನ್ಯಾಯಾಲಯದ ಆದೇಶದ ಘೋರ ಉಲ್ಲಂಘನೆಯಾಗಿದೆ” ಎಂದಿದ್ದಾರೆ.
ಸೆಪ್ಟೆಂಬರ್ 17ರಂದು ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, ಸಾರ್ವಜನಿಕ ರಸ್ತೆ, ಫುಟ್‌ಪಾತ್, ರೈಲು ಮಾರ್ಗಗಳ ನಿರ್ಮಾಣಕ್ಕಾಗಿ ಮತ್ತು ಜಲಮೂಲಗಳ ಅತಿಕ್ರಮಣಗಳ ತೆರವು ಹೊರತು, ದೇಶದಲ್ಲಿ ಎಲ್ಲೂ ಬುಲ್ಡೋಝರ್ ಕಾರ್ಯಾಚರಣೆ ನಡೆಸಬಾರದು ಎಂದು ಸೂಚಿಸಿತ್ತು.
ಈ ಆದೇಶ ಹೊರ ಬಿದ್ದ ಸ್ವಲ್ಪ ದಿನಗಳ ನಂತರ ಅಸ್ಸಾಂ ಸರ್ಕಾರದ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಅತಿಕ್ರಮಣ ಮಾಡಲಾಗಿದೆ ಎಂದು ಅಸ್ಸಾಂ ಸರ್ಕಾರದ ಅಧಿಕಾರಿಗಳು ನಮ್ಮ ಮನೆಗಳನ್ನು ನೆಲಸಮಗೊಳಿಸಲು ಗುರುತು ಮಾಡುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು.
ಸರ್ಕಾರ ಮನೆಗಳನ್ನು ಕೆಡವಿದೆ ಎಂದು ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲ ಹುಝೆಫಾ ಅಹ್ಮದಿ, ಬುಲ್ಡೋಝರ್ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆದ್ದರಿಂದ
ಸರ್ಕಾರ ಯಥಾಸ್ಥಿತಿ ಕಾಪಾಡಿಕೊಳ್ಳಲು ನ್ಯಾಯಾಲಯ ಆದೇಶಿಸಬೇಕು ಎಂದು ಕೋರಿದ್ದಾರೆ.
ಅಸ್ಸಾಂನ ಕಮ್ರೂಪ್ ಮೆಟ್ರೋ ಜಿಲ್ಲೆಯ ಸೋನಪುರ್ ಮೌಜಾದ ಕಚುಟೋಲಿ ಪಥರ್ ಮತ್ತು ಇತರ ಅಕ್ಕಪಕ್ಕದ ಪ್ರದೇಶಗಳ ನಿವಾಸಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ನಾವು ನಮ್ಮ ಮನೆಗಳ ಜಮೀನಿನ ಮೂಲ ಪಟ್ಟದಾರರ (ಭೂಮಾಲೀಕರು) ಜೊತೆ ಒಪ್ಪಂದ ಮಾಡಿಕೊಂಡು ಹಲವಾರು ದಶಕಗಳಿಂದ ಮನೆ ಕಟ್ಟಿ ವಾಸಿಸುತ್ತಿದ್ದೇವೆ. ನಾವು ಭೂಮಿಯ ಮಾಲೀಕರಲ್ಲದಿದ್ದರೂ, ನಮ್ಮ ಮನೆಗಳು ಕಾನೂನುಬದ್ಧವಾಗಿ ಮಾನ್ಯವಾಗಿದೆ ಮತ್ತು ಒಪ್ಪಂದಗಳಿಂದ ಗುರುತಿಸಲ್ಪಟ್ಟಿದೆ ಎಂದು ಹೇಳಿದ್ದರು.
ಸರ್ಕಾರಿ ಅಧಿಕಾರಿಗಳು ಯಾವುದೇ ಪೂರ್ವ ಸೂಚನೆ ನೀಡದೆ ನಮ್ಮ ಮನೆಗಳನ್ನು ಕೆಡವಲು ಕೆಂಪು ಸ್ಟಿಕ್ಕರ್‌ಗಳನ್ನು ಹಾಕಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಕ್ರಮವು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ, ನಿರ್ದಿಷ್ಟವಾಗಿ ಅಸ್ಸಾಂ ಭೂ ಮತ್ತು ಕಂದಾಯ ನಿಯಂತ್ರಣದ ಅಧ್ಯಾಯ Xನ ಸೆಕ್ಷನ್ 165(3) ಕ್ಕೆ ವಿರುದ್ದವಾಗಿದೆ. ಕಾನೂನಿನ ಪ್ರಕಾರ, ಅಧಿಕಾರಿಗಳು ಮನೆಗಳನ್ನು ತೆರವುಗೊಳಿಸುವ ಮುನ್ನ ಸೂಚನೆಯನ್ನು ನೀಡಬೇಕು ಮತ್ತು ನಿವಾಸಿಗಳಿಗೆ ಒಂದು ತಿಂಗಳ ಅವಧಿಯ ಸಮಯ ಒದಗಿಸಬೇಕು. ಆದರೆ, ಇವೆಲ್ಲವನ್ನೂ ಸರ್ಕಾರ ಉಲ್ಲಂಘಿಸಿ ಎಂದಿದ್ದಾರೆ.
ಇದನ್ನೂ ಓದಿ : ಜಮ್ಮು-ಕಾಶ್ಮೀರ: ಚುನಾವಣಾ ಪ್ರಚಾರದ ವೇಳೆ ಲೋಕಸಭಾ ಸಂಸದ ಇಂಜಿನಿಯರ್ ರಶೀದ್ ಕಾರಿನ ಮೇಲೆ ದಾಳಿ


