ಭಾರೀ ಕೂತುಹಲ ಮೂಡಿಸಿದ್ದ ಕರ್ನಾಟಕದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಸಿಂದಗಿಯಲ್ಲಿ ಬಿಜೆಪಿಯ ಅಭ್ಯರ್ಥಿ ಭಾರೀ ಮುನ್ನಡೆ ಸಾಧಿಸಿ ಗೆಲುವಿನತ್ತ ಮುನ್ನುಗ್ಗುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯ ಹಾನಗಲ್‌ನಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಹಾನಗಲ್ ನಲ್ಲಿ 8ನೇ ಸುತ್ತಿನ ಮತ ಎಣಿಕೆ ನಂತರ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 4,413 ಮತಗಳ ಮುನ್ನಡೆ ಸಾಧಿಸಿದ್ದಾರೆ. ಅವರು 36,415 ಮತ ಗಳಿಸಿದರೆ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 32,002 ಮತಗಳನ್ನು ಗಳಿಸಿ ಪೈಪೋಟಿ ನೀಡುತ್ತಿದ್ದಾರೆ.
ಉಪಚುನಾವಣೆ ಎಂದಮೇಲೆ ಆಡಳಿತಾರೂಢ ಪಕ್ಷಕ್ಕೆ ಪ್ರತಿಷ್ಟೆಯದ್ದಾಗಿರುತ್ತದೆ. ಹಾವೇರಿ ಜಿಲ್ಲೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯೂ ಆಗಿರುವುದರಿಂದ ಅವರು ಹಾನಗಲ್ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು. 8 ದಿನಗಳ ಕಾಲ ಸತತ ಪ್ರಚಾರ ಮಾಡಿದ್ದರು. ಆದರೂ ಅಲ್ಲಿ ಬಿಜೆಪಿ ಸ್ವಲ್ಪ ಹಿನ್ನಡೆ ಅನುಭವಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿಯವರು, ಸಿಂದಗಿಯಲ್ಲಿ ನಾವು ಭರ್ಜರಿ ಮುನ್ನಡೆ ಸಾಧಿಸಿದ್ದೇವೆ. ಹಾನಗಲ್‌ನಲ್ಲಿ ಅಲ್ಪ ಹಿನ್ನಡೆ ಇದೆ. ಇನ್ನು ಅರ್ಧಕ್ಕಿಂತ ಹೆಚ್ಚು ಮತಗಳ ಎಣಿಕೆ ಬಾಕಿ ಇದೆ. ಅಲ್ಲಿಯೂ ನಾವು ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ.
ಈ ಕ್ಷೇತ್ರದಲ್ಲಿ ಯಾವಾಗಲೂ ಪೈಪೋಟಿ ಇರುತ್ತದೆ. ಎರಡು ಜನರಲ್ ಎಲೆಕ್ಷನ್‌ನಲ್ಲಿ ನಾವು ಗೆದ್ದಿದ್ದೇವೆ. ಬೈ ಎಲೆಕ್ಷನ್ ಆದ್ದರಿಂದ ಸ್ವಲ್ಪ ಪೈಪೋಟಿ ಇದೆ ಎಂದಿದ್ದಾರೆ.
ಇನ್ನು ಸಿಂದಗಿಯ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ನೇ ಸುತ್ತಿನ ಬಳಿಕ 18,863 ಮತಗಳ ಅಂತರ ಸಾಧಿಸಿದ್ದಾರೆ. ಅವರು 57,484 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 38,621 ಮತಗಳನ್ನಷ್ಟೇ ಪಡೆದಿದ್ದಾರೆ. ಇನ್ನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದೆ.
ಇದನ್ನೂ ಓದಿ: ಹಾನಗಲ್: ಪ್ರತಿಷ್ಠೆಯ ಕಣದಲ್ಲಿ ’ಬಿ ಟೀಮ್’ಗಳದ್ದೇ ಸಂಕಟ


