ಕೋವಿಡ್-19 ತಂದೊಡ್ಡಿದ ಸಂಕಷ್ಟದಿಂದ ಭಾರತವು ಇನ್ನೂ ಚೇತರಿಸಿಕೊಳ್ಳುತ್ತಲೇ ಇದೆ. ಕೋವಿಡ್‌ನಿಂದ ದೇಶದಲ್ಲಿ ಉಂಟಾದ ಸಾವು-ನೋವು ಜನರನ್ನು ತಲ್ಲಣಗೊಳಿಸಿತ್ತು. ಪ್ರಸ್ತುತ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,423 ಪ್ರಕರಣಗಳು ದಾಖಲಾಗಿವೆ. 8 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿ ಕನಿಷ್ಟ ಪ್ರಕರಣಗಳು ಕಂಡುಬಂದಿವೆ. ಒಂದು ದಿನದಲ್ಲಿ 443 ಸಾವು ಸಂಭವಿಸಿದ್ದು, ಈವರೆಗೂ ಒಟ್ಟು 4,58,880 ಜನರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಈವರೆಗೂ 3,42,96,237 ಕೋವಿಡ್‌ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇತ್ತೀಚಿನ ಹೊಸ ಸೋಂಕು ಪ್ರಕರಣಗಳಲ್ಲಿ ಸೋಮವಾರ ಅತಿ ಕಡಿಮೆ ಶೇ. 17 ರಷ್ಟು ಪ್ರಕರಣಗಳು ದಾಖಲಾಗಿವೆ. ಕಳೆದ 128 ದಿನಗಳಿಂದ ಪ್ರತಿದಿನ ಸೋಂಕಿತರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ವರದಿಯಾಗಿದೆ.

ಮಂಗಳವಾರದ ಬುಲೆಟಿನ್‌ ಪ್ರಕಾರ ಇನ್ನೂ 15,021  ಸೋಂಕಿತರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಕೋವಿಡ್‌ ಚೇತರಿಕೆ ಪ್ರಮಾಣವು ಕಳೆದ ವರ್ಷ ಮಾರ್ಚ್‌‌ನಿಂದ ಪ್ರತಿಶತ 98.21 ಸುಧಾರಿಸಿದೆ. ದೇಶದಲ್ಲಿ ಈವರೆಗೂ ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 3,26,83,581 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕರ್ನಾಟಕದ ಸ್ಥಿತಿಗತಿ

ರಾಜ್ಯದಲ್ಲಿಯೂ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಸೋಮವಾರ 188 ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ 318 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.. ರಾಜ್ಯದಲ್ಲಿ ಪ್ರಸ್ತುತ 8512 ಸಕ್ರಿಯ ಪ್ರಕರಣಗಳಿದ್ದು, ಈವರೆಗೂ 29,41,896 ಜನರು ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿಯಲ್ಲಿ ತಿಳಿಸಿದೆ.

ಕೋವಿಡ್‌ ಸೋಂಕಿನಿಂದ ಜನರು ಚೇತರಿಸಿಕೊಳ್ಳುತ್ತಿದ್ದು, ಆದರೆ ಕೋವಿಡ್‌ ಉಂಟುಮಾಡಿದ ತಲ್ಲಣದಿಂದ ಜನರು ಆರ್ಥಿಕವಾಗಿ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳು, ಬೆಲೆ ಏರಿಕೆಯಂತಹ ಸಮಸ್ಯೆಗಳಿಂದಾಗಿ ಜನರು ಕಂಗಾಲಾಗಿದ್ದಾರೆ.


ಇದನ್ನು ಓದಿ: ಕೋವಿಡ್‌ ಎದುರಿಸುವಲ್ಲಿ ವಿಫಲತೆ: ಡಬಲ್ ಇಂಜಿನ್ ಸರಕಾರಗಳಿಂದ ಡಬಲ್ ಧೋಖಾ

LEAVE A REPLY

Please enter your comment!
Please enter your name here