ಕೋವಿಡ್ ಎರಡನೇ ಅಲೆಯು ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಪ್ಪಳಿಸಿ ಜಗತ್ತನ್ನೇ  ತಲ್ಲಣಗೊಳಿಸಿತು. ಮಾತ್ರವಲ್ಲ ಜಗತ್ತಿನಾದ್ಯಂತ ಎಲ್ಲಾ ಸರ್ಕಾರಗಳ ಬಂಡವಾಳವನ್ನು ಬಯಲು ಮಾಡಿತು. ಎರಡನೇ ಅಲೆಗೆ ಬಹುಪಾಲು ದೇಶಗಳ, ರಾಜ್ಯಗಳ ಸರ್ಕಾರಗಳು ಸಿದ್ಧವಾಗಿರಲಿಲ್ಲ ಅನ್ನುವುದು ನಿಜವಾದರೂ, ಕಠಿಣ ಪರಿಸ್ಥಿತಿಯಲ್ಲಿ ಎಷ್ಟು ವಿವೇಕಾಯುತವಾಗಿ ಸರ್ಕಾರಗಳು ಮತ್ತು ನಾಯಕರು ನಡೆದುಕೊಂಡರು ಎಂಬುದು ಬಹಳ ಮುಖ್ಯವಾಗುತ್ತದೆ.  ಒಕ್ಕೂಟ ಸರ್ಕಾರವಂತೂ ತನಗೂ ಈ ಸಮಸ್ಯೆಗೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸಿತು.  ರೈತ ನಾಯಕ, ಹೋರಾಟಗಳಿಂದ ಬೆಳೆದುಬಂದವರು ಅನ್ನಿಸಿಕೊಂಡಿರುವ ಯಡಿಯೂರಪ್ಪನವರಾದರೂ ಜನರ ಮನಗೆಲ್ಲುವ ಕೆಲಸ ಮಾಡಬಹುದಿತ್ತು ಆದರೆ ಅವರು ಸಹ ಸಂಪೂರ್ಣವಾಗಿ ವಿಫಲರಾದರು.

ಇಡೀ ಕೋವಿಡ್ ಸಂದರ್ಭದಲ್ಲಿ ಯಾವ ಸಮಯದಲ್ಲೂ ಯಡಿಯೂರಪ್ಪ ಅಥವಾ ಅವರ ಮಂತ್ರಿಗಳು ಯಾರೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲೇ ಇಲ್ಲ. ಜನರಿಗೆ ಸರ್ಕಾರದ ಬಗ್ಗೆ ಭರವಸೆ ಹುಟ್ಟುವಂತಹ ಯಾವ ಕೆಲಸವನ್ನೂ ಮಾಡಲಿಲ್ಲ. ಇವರುಗಳಿಗೆ ದುರಾಸಕ್ತಿ ಇತ್ತೇ ಹೊರತು ದೂರದೃಷ್ಟಿ ಇರಲಿಲ್ಲ.

ಸರಕಾರಕ್ಕೆ ಕೋವಿಡ್ ಎದುರಿಸಲು ಮುಂದೇನು ಮಾಡಬೇಕು ಎಂಬುದರ ಬಗ್ಗೆ ಕೊಂಚವೂ ಅರಿವೇ ಇರಲಿಲ್ಲ. ಸಾಂಕ್ರಮಿಕ ರೋಗ ತಜ್ಞರು ಅಥವಾ ವೈರಾಲಾಜಿಸ್ಟ್‌ರ ಬದಲಿಗೆ ಇಬ್ಬರು ಹೃದಯರೋಗ ತಜ್ಞರನ್ನು ಕೋವಿಡ್ ಟಾಸ್ಕ್ ಪೋರ್ಸಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಂಡ ಸರ್ಕಾರ ಮೊದಲ ಹೆಜ್ಜೆಯಲ್ಲೇ ಎಡವಿತು.

ಇನ್ನು ಸರ್ಕಾರದ ಮಂತ್ರಿಗಳಲ್ಲೇ ಕೊಂಚವೂ ಸಾಮರಸ್ಯ ಇರಲಿಲ್ಲ. ಪ್ರತೀ ಬಾರಿ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳ ಯೋಜನೆ ಮತ್ತು ಯೋಚನೆಗಳಲ್ಲಿ ತಾಳೆಯೇ ಆಗುತ್ತಿರಲಿಲ್ಲ. ಇಡೀ ಕೋವಿಡ್ ಅವಧಿಯಲ್ಲಿ ಒಂದೇ ಒಂದು ಸಣ್ಣ ನಿರ್ಧಾರವನ್ನೂ ಸರ್ಕಾರ ಸಮರ್ಪಕವಾಗಿ ತೆಗೆದುಕೊಳ್ಳಲಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳು ಜನರನ್ನು ಫೀಸಿನ ಹೆಸರಲ್ಲಿ ದೋಚುತ್ತಿದ್ದರೂ, ಸರಕಾರ ಕಣ್ಣು – ಮೂಗು – ಬಾಯಿ ಮುಚ್ಚಿಕೊಂಡು ಕುಳಿತಿತ್ತು.

ಆಮ್ಲಜನಕ ಕೊರತೆಯ ಬಗ್ಗೆ ಸರಿಯಾಗಿ ಸಿದ್ಧತೆಯನ್ನೂ ಮಾಡಲಿಲ್ಲ, ತನ್ನ ಸಂಸದರ ಮೂಲಕ ಒಕ್ಕೂಟ ಸರ್ಕಾರಕ್ಕೆ ಒತ್ತಡ ತರುವ ಕೆಲಸವನ್ನೂ ಮಾಡಲಿಲ್ಲ. ಐಸಿಯು ಬೆಡ್‌ಗಳು, ವೆಂಟಿಲೇಟರ್ ಬೆಡ್‌ಗಳ ಕೊರತೆಯ ವಿಚಾರದಲ್ಲೂ ಸರ್ಕಾರ ಪ್ರಾಮಾಣಿಕವಾಗಿ ನಡೆದುಕೊಳ್ಳದೇ ಲೂಟಿಗೆ ಸಿಕ್ಕ ಅವಕಾಶದಂತೆ ವರ್ತಿಸಿತು. ಲಸಿಕೆಯ ವಿಚಾರದಲ್ಲಂತೂ ಖುದ್ದಾಗಿ ಹೈಕೋರ್ಟ್ ಕರ್ನಾಟಕ ಸರ್ಕಾರವನ್ನು ತಿವಿದು ನಿಮ್ಮ ಬಳಿ ಪ್ಲಾನ್ ಎಂಬುದು ಏನಾದರೂ ಇದೆಯೇ ಎಂದು ಕೇಳಿತು.

ಇನ್ನು ಒಕ್ಕೂಟ ಸರ್ಕಾರ ಹಾವನ್ನು ಕಂಡ ಮುಂಗುಸಿಯ ಹಾಗೆ ಸಾಧ್ಯವಾದಷ್ಟೂ ಕಿರುಕುಳವನ್ನು ಕರ್ನಾಟಕಕ್ಕೆ ಕೊಟ್ಟಿತು. ಡಬಲ್ ಇಂಜಿನ್ ಸರಕಾರ ಜನರನ್ನು ಸಾಯಲು  ಬಿಟ್ಟು ಡಬಲ್ ಧೋಖಾ ಮಾಡಿತು. ತನ್ನ ಹಕ್ಕಿನ ಪಾಲನ್ನು ಪಡೆಯಲು ಪ್ರತೀ ಬಾರಿಯೂ ಕೋರ್ಟ್ ಮುಂದೆ ನಿಲ್ಲಬೇಕಾದ ಸ್ಥಿತಿ ರಾಜ್ಯಕ್ಕೆ ಬಂತು. ಅದು ಆಮ್ಲಜನಕದ ವಿಷಯವಾಗಿರಲಿ, ಲಸಿಕೆಯ ಹಂಚಿಕೆಯಾಗಲಿ, ಅನುದಾನ, ಪರಿಹಾರಗಳಾಗಿರಲಿ ಎಲ್ಲದರಲ್ಲೂ ಒಕ್ಕೂಟ ಸರಕಾರ ನಮ್ಮ ನಾಡನ್ನು ಕೀಳಾಗಿ ಕಂಡಿತು.

ಬಹುಶಃ ಕರ್ನಾಟಕ  ಹೈಕೋರ್ಟ್ ಇಲ್ಲದೇ ಹೋಗಿದ್ದರೆ ರಾಜ್ಯದ ಕೋವಿಡ್ ರೋಗಿಗಳ ಸ್ಥಿತಿ ಊಹಿಸಲೂ ಅಸಾಧ್ಯವಾಗಿರುತ್ತಿತ್ತು.

ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಶಾಸಕ ಅಥವಾ ಸಂಸದನನ್ನು ಹೊಂದಿಲ್ಲದ ಆಮ್ ಆದ್ಮಿ ಪಕ್ಷದಂತಹ ಸಣ್ಣ ಪಕ್ಷವೊಂದು ರಾತೋರಾತ್ರಿ 42 ನುರಿತ ವೈದ್ಯರನ್ನು ಒಟ್ಟುಗೂಡಿಸಿ,   ಹಗಲೂ ರಾತ್ರಿ ಕರೆ ಸ್ವೀಕರಿಸಬಲ್ಲ ಕಾರ್ಯಕರ್ತರ ತಂಡ ರಚಿಸಿ,  24*7 ಸಹಾಯವಾಣಿಯನ್ನು ಆರಂಭಿಸಿತು. ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಆಕ್ಸಿಮೀಟರ್ ವಿತರಣೆ,  ಸುಮಾರು 16000 ಜನ ರೋಗಿಗಳಿಗೆ ಹೋಂ ಐಸೋಲೇಶನ್ ನೆರವು, ಸುಮಾರು 1300 ರೋಗಿಗಳಿಗೆ ಮನೋವೈದ್ಯರಿಂದ ಕೌನ್ಸಿಲಿಂಗ್, 3,00,000 ಕ್ಕೂ ಅಧಿಕ ಮಾಸ್ಕ್ ವಿತರಣೆ, ಅಪಾರ್ಟ್ಮೆಂಟ್‌ಗಳು, ವಸತಿ ಸಮುಚ್ಚಯಗಳು, ಮನೆಗಳು ಹಾಗೂ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಕಛೇರಿಗಳು, ಪೊಲೀಸ್ ಠಾಣೆಗಳು, ಪೊಲೀಸ್ ಚೌಕಿಗಳು ಸೇರಿದಂತೆ 18,000 ಕ್ಕೂ ಹೆಚ್ಚು ಕಡೆ ಸ್ಯಾನಿಟೈಶೇಷನ್ ಇಷ್ಟನ್ನೂ ಬರೀ ಬೆಂಗಳೂರು ನಗರವೊಂದರಲ್ಲೇ ಮಾಡಿತ್ತು. ಡಬಲ್ ಇಂಜಿನ್ ಸರಕಾರ ಏನೆಲ್ಲಾ ಮಾಡಬಹುದಿತ್ತು ಯೋಚಿಸಿ!

ಬರೀ ಆಮ್ ಆದ್ಮಿ ಪಕ್ಷ ಮಾತ್ರವಲ್ಲ, ವಿದ್ಯಾರ್ಥಿ ಸಂಘಟನೆಗಳು, ನೂರಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ರಾಜ್ಯ ಮತ್ತು ಒಕ್ಕೂಟ ಸರಕಾರ ಮಾಡುವುದಕ್ಕಿಂತಲೂ ಹೆಚ್ಚಿನ ಕೆಲಸವನ್ನು ನಾಜೂಕಾಗಿ, ಯೋಜಿತ ರೀತಿಯಲ್ಲಿ ಮಾಡಿದ್ದಾರೆ.

ಒಕ್ಕೂಟ ಸರಕಾರಕ್ಕೆ ಪೂರ್ತಿ ಎಂಟು ತಿಂಗಳ ಕಾಲಾವಕಾಶ ಇತ್ತು. ಈ ಅವಧಿಯಲ್ಲಿ ‘ಆಕ್ಸಿಜನ್ ಪ್ಲಾಂಟ್`ಗಳನ್ನು  ಅಗತ್ಯಕ್ಕೆ ಅನುಗುಣವಾಗಿ ಸ್ಥಾಪಿಸಬಹುದಿತ್ತು, ಸಾಕಷ್ಟು ಆಕ್ಸಿಜನ್ ಬೆಡ್ ಮತ್ತು ವೆಂಟಿಲೆಟರ್ ಬೆಡ್ ಸಿದ್ಧಪಡಿಸಿಟ್ಟುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಬಹುದಿತ್ತು. ಇದು ಯಾವುದನ್ನೂ ಮಾಡದೇ ಬೀದಿ ಬೀದಿಯಲ್ಲಿ ಜನ ಸಾಯುವಂತೆ ಮಾಡಿದರು. ಇದು ಸರ್ಕಾರದ ವಿಫಲತೆ ಅಲ್ಲ. ಇದು ಸರ್ಕಾರಿ ಪ್ರಾಯೋಜಿತ ಮಾರಣಹೋಮ ಅಂದರೂ ತಪ್ಪಲ್ಲ.

ಒಕ್ಕೂಟ ಸರಕಾರ ಮತ್ತು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷವು ಒಂದಿಷ್ಟೂ  ಹೊಣೆಗಾರಿಕೆಯನ್ನು ಹೊಂದದೇ ತನ್ನೆಲ್ಲಾ ವಿಫಲತೆಗಳ ಮೂಟೆಯನ್ನು ಕಾಂಗ್ರೆಸ್ ಪಕ್ಷದ ಮೇಲೆ ಹಾಕಿಬಿಟ್ಟಿತು. ಬಾಲಕ್ಕೆ ಬೆಂಕಿ ಹಚ್ಚಿಸಿಕೊಂಡ ಕುನ್ನಿಯಾದರೂ ಪ್ರತಿರೋಧ ತೋರುತ್ತದೆ, ಪಾಪ ಕಾಂಗ್ರೆಸ್ ಪಕ್ಷಕ್ಕೆ ಆ ಶಕ್ತಿಯೂ ಇಲ್ಲ.

ಮುಂದೆ ಬರಬಹುದಾದ ಮೂರನೇ ಕೋವಿಡ್ ಅಲೆಗೆ ಅರವಿಂದ್ ಕೇಜ್ರಿವಾಲರ ಸರಕಾರ ಈಗಾಗಲೇ ಸಿದ್ದತೆ ಆರಂಭಿಸಿದೆ. ಪೇಡಿಯಾಟ್ರಿಸ್ಟ್‌ಗಳ ತಂಡ ರಚಿಸಿ ಮಕ್ಕಳ ಐಸಿಯೂಗಳ, ವೆಂಟಿಲೇಟರ್ ಗಳ ನಿರ್ಮಾಣ ಆರಂಭಿಸಿದೆ. ಮಕ್ಕಳಿಗೆ ಆದಷ್ಟೂ ಬೇಗ ಲಸಿಕೆ ಹಾಕಿಸುವ ಸಿದ್ಧತೆ ಮಾಡುತ್ತಿದೆ. ಆದರೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಕ್ಕೆ ಈಗಲೂ ಮುಂಬರುವ ದಿನಗಳ ಬಗ್ಗೆ ಚಿಂತೆ ಇದ್ದಂತೆ ಕಾಣುತ್ತಿಲ್ಲ.

ಈ ಕೋವಿಡ್ ಮಹಾಮಾರಿಯ ಅವಧಿಯಲ್ಲಿ ಒಕ್ಕೂಟ ಸರಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಒಂದು ಪಾಠವನ್ನಂತೂ ಕಲಿಯಬಹುದು. ಅದೇನೆಂದರೆ “ಸರ್ಕಾರಗಳು ಯಾವ ರೀತಿ ಸಾಂಕ್ರಾಮಿಕ ರೋಗಗಳನ್ನು ಎದುರಿಸಬಾರದು” ಅಂತ.

ದರ್ಶನ್ ಜೈನ್

(ದರ್ಶನ್ ಜೈನ್ ಸಾಮಾಜಿಕ ಕಾರ್ಯಕರ್ತರು ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಗಳು)


ಇದನ್ನೂ ಓದಿ: ಬಿಬಿಎಂಪಿ ಗೆದ್ದರೆ ದೆಹಲಿ ಮಾದರಿಯ ’ಮೊಹಲ್ಲಾ ಕ್ಲಿನಿಕ್’ ಆರಂಭ: ಆಮ್ ಆದ್ಮಿ ಪಕ್ಷ

LEAVE A REPLY

Please enter your comment!
Please enter your name here