ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕಾವು ಬಿಜೆಪಿ ಒಳಗೆ ಏರುತ್ತಲೇ ಇದೆ. ಒಬ್ಬರ ನಂತರ ಮತ್ತೊಬ್ಬರು ತಮ್ಮ ಅಸಮಾಧಾನವನ್ನು ನೇರವಾಗಿಯೇ ಹೊರಹಾಕುತ್ತಿದ್ದಾರೆ. ಬಿಜೆಪಿಗೆ ವಲಸೆ ಬಂದವರಲ್ಲಿಯೇ ಒಡಕುಂಟಾಗಿದೆ. ಇನ್ನು ಬಿಜೆಪಿಯ ಒಳಗೆ ಹಲವು ವರ್ಷಗಳಿಂದ ದುಡಿದವರಿಗೆ ಅವಕಾಶ ನೀಡಿಲ್ಲ ಎಂದು ಮೂಲ ಬಿಜೆಪಿಗರು ಆರೋಪಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಂಪುಟ ವಿಸ್ತರಣೆಯ ಕಾವು ಭಿನ್ನಮತವಾಗಿ ಮಾರ್ಪಟ್ಟು ಈಗ ಸ್ಫೋಟಗೊಂಡಿದೆ.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ, ”ನೇರ, ನಿಷ್ಠುರ ಮಾತುಗಳೇ ನನಗೆ ಮುಳುವಾಯಿತು. ಲಾಬಿ ಮಾಡಿದವರು ಸಚಿವರಾಗುತ್ತಾರೆ. ಯಾರ ಬಳಿಯೂ ಲಾಬಿ ಮಾಡುವ ಹವ್ಯಾಸ ನನಗೆ ಇಲ್ಲ. ಅದು ನನ್ನ ಅಪರಾಧ. ವೈಯಕ್ತಿಕವಾಗಿ ನನಗೆ ಬೇಸರವಾಗಿದೆ. ಮಂತ್ರಿಗಿರಿ ಕೊಡಿ ಎಂದು ಯಾರಿಗೂ ನಾನು ಅರ್ಜಿ ಹಾಕಲ್ಲ” ಎಂದು ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಮುಖ್ಯಮಂತ್ರಿ ಯಡಿಯೂರಪ್ಪ ನಿವೃತ್ತಿಯ ಬಗ್ಗೆ BJP ಹೈಕಮಾಂಡ್ ಹೇಳಿದ್ದೇನು?
“ಇದು ಬೆಂಗಳೂರು-ಬೆಳಗಾವಿ ಕ್ಯಾಬಿನೆಟ್ ಆಗಿದೆ. ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನನಗೆ ಬೇಸರವಾಗಿದೆ. ನಾವು ಯಾರ ಮುಂದೆ ಆಸಮಾಧಾನ ಹೇಳಿಕೊಳ್ಳಬೇಕು. ಸ್ವಾಭಿಮಾನ ಬಿಟ್ಟು ಬದುಕುವ ವ್ಯಕ್ತಿ ನಾನಲ್ಲ. ಕ್ಷೇತ್ರದ ಜನ ಹೇಳಿದಂತೆ ಕೇಳುವ ವ್ಯಕ್ತಿ ನಾನು” ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ನೂತನ ಸಚಿವರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ, ವಿಜಯಪುರ ಶಾಸಕ ಬಸನಗೌಡ ಪಾಟಿಲ ಯತ್ನಾಳ್, ಸಂಕ್ರಾಂತಿಯ ನಂತರ ಯಡಿಯೂರಪ್ಪ ಅವರ ಅಧಃಪತನ ಆರಂಭವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಮೂರು ಬ್ಲ್ಯಾಕ್‌ಮೇಲರ್‌ಗಳನ್ನು ಮಂತ್ರಿಗಳನ್ನಾಗಿ ಮಾಡುತ್ತಿದ್ದಾರೆ. ಸಂಕ್ರಾಂತಿಯ ನಂತರ ಅವರ ಅಧಃಪತನ ಪ್ರಾರಂಭವಾಗುತ್ತದೆ” ಎಂದು ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿ ನಂತರ ಯಡಿಯೂರಪ್ಪ ಅಧಃಪತನ ಆರಂಭ: ಯತ್ನಾಳ್
ಬೊಮ್ಮನಹಳ್ಳಿಯ ಶಾಸಕ ಸತಿಶ್ ರೆಡ್ಡಿ ಟ್ವೀಟ್ ಮಾಡಿ, “ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಅನಂತಕುಮಾರ್ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ @BSYBJP @JPNadda @blsanthosh
— M Satish Reddy (@msrbommanahalli) January 13, 2021
ಇದನ್ನೂ ಓದಿ: ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದಕ್ಕೆ ಬೆಂಬಲವಿದೆ: ಸಿದ್ದರಾಮಯ್ಯ
ವಿಧಾನ ಪರಿಷತ್ ಸದಸ್ಯ ಸುನಿಲ್ ಕುಮಾರ್ ಕಾರ್ಕಳ ಟ್ವೀಟ್ ಮಾಡಿ, “ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ. ಜಾತಿ ರಾಜಕೀಯದ ವೈಭವೀಕರಣ ಅರಿತಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯು ಈ ಮಾರ್ಗ ಹಿಡಿಯುವುದಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ.
ಜಾತಿ ರಾಜಕೀಯದ ವೈಭವೀಕರಣ ಅರಿತಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯು ಈ ಮಾರ್ಗ ಹಿಡಿಯುವುದಿಲ್ಲ.
— Sunil Kumar Karkala (@karkalasunil) January 13, 2021
ಇದನ್ನೂ ಓದಿ: ‘ತಕ್ಷಣವೇ ರಾಜೀನಾಮೆ ಕೊಡಿ, ಇಲ್ಲದಿದ್ದರೆ ವಜಾಗೊಳಿಸಲಾಗುವುದು’ – ಯಡಿಯೂರಪ್ಪ ಎಚ್ಚರಿಕೆ
ಮತ್ತೋರ್ವ ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್ ಮೈಸೂರಿನಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, “ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಯೋಗೇಶ್ವರ್ ಮಂತ್ರಿ ಆಗೋಕೆ ವಿಜಯೇಂದ್ರ ಕಾರಣ. ಅದೇ ರೀತಿ ಯಡಿಯೂರಪ್ಪನವರ ಪ್ರತಿಷ್ಠೆ ಡೆಮಾಲಿಷ್ ಆಗೋಕೂ ವಿಜಯೇಂದ್ರರೇ ಕಾರಣ. ಇಡೀ ವಿಧಾನಸೌಧದಲ್ಲಿ ಅವರ ಅಣ್ಣ ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಎಲ್ಲಾದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಬಿಎಸ್ ಯಡಿಯೂರಪ್ಪರೇ ಹೈಕಮಾಂಡ್” ಎಂದು ಕಿಡಿ ಕಾರಿದ್ದಾರೆ.
“ಯೋಗೇಶ್ವರ್ ಅವರದ್ದು ಟೋಟಲಿ ಬ್ಲಾಕ್ ಮೇಲ್ ತಂತ್ರ. ಆ ಬ್ಲಾಕ್ ಮೇಲ್ ಏನಂತ ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತೆ. ರಾಜ್ಯದಲ್ಲಿ ಸಚಿವರಾಗೋಕೆ ಬ್ಯಾಗ್ ಹಿಡಿದುಕೊಳ್ಳೋದೆ ಮಾನದಂಡವೇ..? ಯೋಗೇಶ್ವರ್ ಬಾಂಬೆಯಲ್ಲಿ ಬ್ಯಾಗ್ ಹಿಡಿದ್ದಿದ್ದು ಬಿಟ್ರೆ ಮತ್ತೇನು ಮಾಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ನನಗೆ ನೋವಾಗಿದೆ. ನಾವು ಮನುಷ್ಯರು, ನಮಗೂ ಹೃದಯ ಇದೆ, ನಮಗೂ ನೋವಾಗುತ್ತೆ. ಯಡಿಯೂರಪ್ಪನವರೇ ಸಿದ್ಧಲಿಂಗೇಶ್ವರ ನಿಮಗೆ ಒಳ್ಳೆಯದು ಮಾಡಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನು ಸಿದ್ಧಲಿಂಗೇಶ್ವರ ಕ್ಷಮಿಸೋದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮ ಭಿಕ್ಷೆಯಿಂದಲೇ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪ ಅವರು ಮಾತಿಗೆ ತಪ್ಪಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ನಾಯಕತ್ವದ ಬಗ್ಗೆ ಅಸಮಾಧಾನಗೊಂಡು ಬಂಡೆದ್ದು ಬಂದ ಎಲ್ಲ 17 ಮಂದಿಗೂ ಸಚಿವ ಸ್ಥಾನ ನೀಡುವುದು ಆದ್ಯತೆ ಆಗಿತ್ತು. ನಾವು ಬಂಡೇಳದಿದ್ದರೆ, ಬಿಜೆಪಿ ಸರ್ಕಾರ ರಚನೆ ಆಗಲು ಅವಕಾಶವೇ ಇರಲಿಲ್ಲ” ಎಂದು ಕಿಡಿ ಕಾರಿದ್ದಾರೆ.
ಇನ್ನು ಹಾಲಿ ಅಬಕಾರಿ ಸಚಿವ ಎಚ್ ನಾಗೇಶ್ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದ್ದು, ಬೇರೆ ಯಾವುದಾದರೂ ಸಮನಾಂತರ ಹುದ್ದೆ ನೀಡುವುದಾಗಿ ಭರವಸೆ ನೀಡಿ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರೈತರ ಕೊರಳಿಗೆ ಬಿದ್ದ ರೇಶಿಮೆ ಕುಣಿಕೆ; ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಅವಲೋಕನ
ಆದರೆ ನಾಗೇಶ್ ಅವರನ್ನು ಕೈಬಿಡುವುದು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗರು ಮುಖ್ಯಮಂತ್ರಿಯವರ ನಿವಾಸ ‘ಕೃಷ್ಣಾ’ದ ಮುಂದೆ ಪ್ರತಿಭಟನೆ ನಡೆಸಿದರು. “ಬಲಗೈ ಸಮುದಾಯಕ್ಕೆ ಸೇರಿದ ನಾಗೇಶ್ ಅವರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ಬಿಜೆಪಿ ಸರ್ಕಾರ ರಚನೆಯಾಗಲು ಪ್ರಮುಖ ಕಾರಣರೂ ಆಗಿದ್ದು, ಇತ್ತೀಚಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಕಾರಣರಾಗಿದ್ದಾರೆ” ಎಂದು ವಾದಿಸಿದರು.
ಬಳ್ಳಾರಿಯ ರೆಡ್ಡಿ ಸಹೋದರರಾದ ಸೋಮಶೇಖರ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಅವರು ಮುನಿಸಿಕೊಂಡು ಹೊಸಪೇಟೆಯಲ್ಲಿ ನಡೆದ ಜನಸೇವಕ ಸಮಾವೇಶ ಬಹಿಷ್ಕರಿಸಿದ್ದಾರೆ.
ಒಟ್ಟಾರೆಯಾಗಿ ಈಗ ಬಿಜೆಪಿಯ ಒಳಗೆ ಬಿರುಕು ಬಿಡಲು ಪ್ರಾರಂಭವಾಗಿದ್ದು, ಇದು ಬಿರುಸಾಗುತ್ತಲೇ ಇದೆ. ಬಹುಶಃ ಈ ತಾಪತ್ರಯದಿಂದಲೆ ಯಡಿಯೂರಪ್ಪನವರು ಇಷ್ಟುದಿನ ಸಂಪುಟ ವಿಸ್ತರಣೆಗೆ ಮೀನ-ಮೇಷ ಎಣಿಸುತ್ತಿದ್ದರು ಎನಿಸುತ್ತಿದೆ.
ಈ ಭಿನ್ನಮತೀಯರ ಅಸಮಾಧಾನವನ್ನು ಹತ್ತಿಕ್ಕಲು ಯಡಿಯೂರಪ್ಪನವರು ಯಾವ ತಂತ್ರ ಬಳಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಲಾಬಿ ಮಾಡಿದವರು ಸಚಿವರಾಗುತ್ತಾರೆ, ನನಗೆ ಬೇಸರವಾಗಿದೆ: ಶಾಸಕ ರೇಣುಕಾಚಾರ್ಯ ಕಿಡಿ


