ಇಸ್ಲಾಂ, ಕುರಾನ್ ಮತ್ತು ಪ್ರವಾದಿ ಮಹಮದ್; ಈ ಮೂರರ ಬಗ್ಗೆ ಮುಸಲ್ಮಾನೇತರ ಜನರು ಅನೇಕಾನೇಕ ತಪ್ಪು ಅಭಿಪ್ರಾಯಗಳನ್ನು ಹೊಂದಿರುವುದು ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಇಸ್ಲಾಮೋಫೋಭಿಯಾವನ್ನು ಹುಟ್ಟುಹಾಕಲು ಒಂದಷ್ಟು ರಾಷ್ಟ್ರಗಳು ಯಶಸ್ವಿ ಪ್ರಯತ್ನವನ್ನು ಮಾಡಿವೆ. ಸಾಮಾನ್ಯ ಜನರು ಹರಡುವ ಸಾಮಾನ್ಯ ತಪ್ಪು ಮಾಹಿತಿಯೆಂದರೆ ಇಸ್ಲಾಂ ಎಂಬ ಧರ್ಮವನ್ನು ಪ್ರವಾದಿ ಮಹಮದರು ಸ್ಥಾಪಿಸಿದರು ಎಂಬುದು. ಇಸ್ಲಾಂ ಮಹಮದರ ಪೂರ್ವದಲ್ಲಿಯೇ ಅರಬರಲ್ಲಿ ಇದ್ದಂತಹ ಒಂದು ಧಾರ್ಮಿಕತೆ. ಅದಕ್ಕೊಂದು ಅಚ್ಚುಕಟ್ಟಾದ ಕ್ರಮವನ್ನು ಒದಗಿಸುವ ದಿಕ್ಕಿನಲ್ಲಿ ಕೆಲಸ ಮಾಡಿದರು. ದೇವರ ಬಗ್ಗೆ ಇದ್ದಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ, ಧಾರ್ಮಿಕ ಹೊಣೆಗಾರಿಕೆಯನ್ನು ಸ್ಪಷ್ಟಪಡಿಸುವ ಮತ್ತು ಸಮಾಜೋಧಾರ್ಮಿಕ ದೃಷ್ಟಿಯನ್ನು ವ್ಯಕ್ತಿಯು ನೇಮ ಮತ್ತು ನಿಷ್ಠೆಯ ಮೂಲಕ ಅನುಷ್ಠಾನಕ್ಕೆ ತರಲು ಬೇಕಾದಂತಹ ವಿಧಾನಗಳನ್ನು ಖಚಿತತೆಯಿಂದ ಮನಗಾಣಿಸಿದ್ದು, ಕ್ರಮಗೊಳಿಸಿದ್ದು ಪ್ರವಾದಿ ಮಹಮದ್. ತತ್ವ, ನಿಯಮ, ಒಳನೋಟ, ಬಹಳ ಮುಖ್ಯವಾಗಿ ದಾರಿ; ಇತ್ಯಾದಿಗಳನ್ನು ದಾಖಲಿಸಿದ್ದು ಕುರಾನಿನಲ್ಲಿ.

ಮಹಮದ್: ಹಿಸ್ ಲೈಫ್ ಬೇಸ್ಡ್ ಆನ್ ದ ಅರ್ಲಿಯೆಸ್ಟ್ ಸೋರ್ಸಸ್ ಎಂಬ ಮಾರ್ಟಿನ್ ಲಿಂಗ್ಸ್ ಅವರ ಪುಸ್ತಕವು ಮಹಮದರ ಜೀವನವನ್ನು ಬೇರಾವ ಪುಸ್ತಕದಲ್ಲಿಯೂ ನೀಡದಿರುವಷ್ಟು ವಿವರಗಳಿಂದ ಕಟ್ಟಿಕೊಡುತ್ತದೆ. ಬೋಳುವಾರು ಮಹಮದ್ ಕುಂಯ್ಞಿ ಅವರ ’ಓದಿರಿ’ ಕಾದಂಬರಿಯನ್ನು ಓದಿದರೆ ಮಹಮದರ ಜೀವನ ಚಿತ್ರಣವನ್ನು ಕಟ್ಟಿಕೊಳ್ಳಲು ಬಹುಪಾಲು ಸಾಧ್ಯವಾಗುತ್ತದೆ. ಈ ಎರಡೂ ಪುಸ್ತಕಗಳಲ್ಲಿ ಯಾವುದನ್ನೇ ಮೊದಲು ಓದಿದರೂ ಮತ್ತೊಂದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ಮಾರ್ಟಿನ್ ಅವರ ಪುಸ್ತಕದ ಶಕ್ತಿಯೇ ಪುರಾತನ ಅರಬರ ಆಕರಗಳನ್ನು ಆಧರಿಸಿ ಬರೆದಿರುವುದು. ಅವುಗಳಲ್ಲಿ ಬಹಳಷ್ಟು ಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡಿವೆ. ಹಾಗಂತ ಇದು ಮಹಮದರ ಬಗ್ಗೆ ಇರುವ ಇತರ ಬರಹಗಳಿಗೆ ವಿರೋಧಾಭಾಸವಾಗಿಯೇನೂ ಇಲ್ಲ. ಬದಲಾಗಿ ಒಳನೋಟಗಳನ್ನು ಮತ್ತು ಹೆಚ್ಚಿನ ವಿವರಗಳನ್ನು ನೀಡುತ್ತದೆ.

PC : Beyaz Tarih

ಮಹಮದರ ಸಮಕಾಲೀನರು ಮತ್ತು ಅವರ ಜೀವನಶೈಲಿ ಮತ್ತು ಕೆಲಸಗಳನ್ನು ನೇರವಾಗಿ ಸಾಕ್ಷೀಕರಿಸಿರುವವರ ಮಾತುಗಳು ಅರಬ್ ಸಾಹಿತ್ಯದಲ್ಲಿ ದಾಖಲಾಗಿವೆ. ಅವುಗಳನ್ನೂ ಮಾರ್ಟಿನ್ ಮುಖ್ಯವಾಗಿ ಆಕರವನ್ನಾಗಿ ಬಳಸಿಕೊಂಡಿದ್ದಾರೆ. ಇಸ್ಲಾಮಿನ ಮತ್ತು ಅರಬ್ಬರ ಚರಿತ್ರೆಯ ಮೈಲಿಗಲ್ಲುಗಳನ್ನು ಮತ್ತು ಮಹಮದರ ಜೀವನದ ಗತಿಯನ್ನು ಕಾಲಾನುಕ್ರಮಣಿಕೆಯ ಆಧಾರದಲ್ಲಿಯೇ ಮಾರ್ಟಿನ್ ಬರೆಯುತ್ತಾರೆ. ಹಾಗಾಗಿ ಇದು ಇತಿಹಾಸ ಅಧ್ಯಯನ ಮಾಡುವವರಿಗೆ ಮಾತ್ರವಲ್ಲದೇ ಸಂಶೋಧನಾಸಕ್ತಿ ಇರುವವರಿಗೂ ಒಂದು ಮುಖ್ಯ ಆಕರವಾಗಿ ಪರಿಣಮಿಸುತ್ತದೆ.

ಇದು ಕಾದಂಬರಿಯಲ್ಲದಿದ್ದರೂ ಭಾಷೆಯ ಸರಳ ಶೈಲಿ ಮತ್ತು ಓಘದ ರೀತಿಯು ಕತೆಯನ್ನು ಓದಿಸುವಷ್ಟೇ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇಸ್ಲಾಮಿನ ಬೋಧನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸದ ಇದು ಮಹಮದರ ಜೀವನವನ್ನೇ ತನ್ನ ಕೇಂದ್ರವಾಗಿಟ್ಟುಕೊಂಡಿದೆ. ಇಂಗ್ಲೆಂಡಿನ ಇಂಗ್ಲಿಷಾದರೂ ಜಾಗತಿಕ ಮಟ್ಟದ ಇಂಗ್ಲಿಷಿನ ಸರಳತೆಯನ್ನು ಹೊಂದಿದೆ. ಇತಿಹಾಸದ ದೃಷ್ಟಿಯಲ್ಲಿ ಇದರಲ್ಲಿರುವ ನಿಖರತೆಯ ಕಾರಣ ಇದನ್ನು ಇಂಗ್ಲಿಷ್ ಭಾಷೆಯಲ್ಲಿರುವ ವ್ಯಕ್ತಿಚರಿತ್ರೆಗಳ ಸಾಲಿನಲ್ಲಿ ಬಹಳ ಮಹತ್ವದ ಪುಸ್ತಕವನ್ನಾಗಿ ಪರಿಗಣಿಸುತ್ತಾರೆ.

ಆದರೆ, ಈ ಪುಸ್ತಕವು ಸುದೀರ್ಘಕಾಲಿನ ವಿಷಯಭರಿತವಾಗಿದೆ ಎಂದು ಅರಬ್ಬಿನ ಸಂಪ್ರದಾಯವಾದಿಗಳು ಟೀಕಿಸಿರುವುದುಂಟು. ಆದರೆ, ಅರಬ್ ಭಾಷೆಯ ನಿಯತಕಾಲಿಕಗಳಲ್ಲಿ ಮಾರ್ಟಿನ್ ಅವುಗಳಿಗೆಲ್ಲಾ ಸೂಕ್ತ ಉತ್ತರಗಳನ್ನು ನೀಡಿದ್ದಾರೆ. ಪ್ರಾಯಶಃ ಮಾರ್ಟಿನ್ ಅವರ ಬರಹಗಳಲ್ಲಿ ಇಸ್ಲಾಮಿನ ತಾತ್ವಿಕತೆಯು ಸೂಫಿ ಪಂಥದ ಛಾಯೆಯನ್ನು ಪಡೆದುಕೊಳ್ಳುವುದರ ಕಾರಣವೂ ಈ ಬಗೆಯ ವಿರೋಧಗಳನ್ನು ಎದುರಿಸಿದ್ದಿರಬಹುದು. ಇವರನ್ನು ಹತ್ತಿರದಿಂದ ಬಲ್ಲವರು ಸೂಫಿ ಸಂತರೆಂದೇ ಕರೆಯುತ್ತಿದ್ದರು. ಬೌದ್ಧಿಕವಾಗಿ ಮನವೊಲಿಸುವ ಕಲೆಯಂತೂ ಮಾರ್ಟಿನರಿಗೆ ಕರಗತವಾಗಿದ್ದು, ಮುಸಲ್ಮಾನೇತರರೂ ಅವರನ್ನು ಅಭಿಮಾನದಿಂದ ನೋಡುತ್ತಿದ್ದರು ಮತ್ತು ಅನುಸರಿಸುತ್ತಿದ್ದರು.

ಪ್ರಾಟಸ್ಟೆಂಟ್ ಕ್ರೈಸ್ತ ಕುಟುಂಬದಲ್ಲಿ ಹುಟ್ಟಿದ ಮಾರ್ಟಿನ್ ನಾಸ್ತಿಕರಾಗಿ ಪರಿವರ್ತನೆ ಹೊಂದಿದ್ದರು. ಅನೇಕ ಐರೋಪ್ಯ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದ್ದ ಮಾರ್ಟಿನ್ ಅವರ ಈಜಿಪ್ಟಿನ ಹೆಂಡತಿಯ ಜೊತೆ ಸಂವಹನ ನಡೆಸಲು ಅರಬ್ ಭಾಷೆಯನ್ನು ಕಲಿತರು. ನಂತರ ಇಸ್ಲಾಂ ಧರ್ಮದ ಪ್ರಭಾವಕ್ಕೊಳಗಾದ ಮಾರ್ಟಿನ್ ಇಸ್ಲಾಂ ಸ್ವೀಕರಿಸಿದರು. ಧಾರ್ಮಿಕತೆಯಲ್ಲದ ಆಧ್ಯಾತ್ಮಿಕತೆಯ ಒಲವನ್ನು ಹೊಂದಿದ್ದ ಮಾರ್ಟಿನ್ ಸೂಫಿಯ ರೀತಿ ನೀತಿಗಳ ಅಧ್ಯಯನ ಮತ್ತು ಅನುಸರಣೆಗಳನ್ನು ಮಾಡತೊಡಗಿದ್ದರು.

ಒಟ್ಟಾರೆ ಪ್ರಾಚೀನ ಅರಬ್ ಆಕರಗಳನ್ನು ಆಧರಿಸಿ ರಚಿಸಿರುವ ಮಹಮದ್, ಇಸ್ಲಾಂಅನ್ನು ಧಾರ್ಮಿಕವಾಗಿ ಮಾತ್ರವಲ್ಲದೇ ಚಾರಿತ್ರಿಕವಾಗಿ ತಿಳಿಯಲು ನೆರವಾಗುತ್ತದೆ.


ಇದನ್ನೂ ಓದಿ: ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಯೋಗೇಶ್ ಮಾಸ್ಟರ್
+ posts

LEAVE A REPLY

Please enter your comment!
Please enter your name here