ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ (ಫೆ.7) ನೋಟಿಸ್ ನೀಡಿದೆ.
ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುವ ಮುನ್ನ ಎಎಪಿಯ 16 ಅಭ್ಯರ್ಥಿಗಳನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಗುರುವಾರ (ಫೆ.6) ಆರೋಪಿಸಿದ್ದರು. ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಸಚಿವ ಸ್ಥಾನ ಮತ್ತು ಪಕ್ಷ ಬದಲಾಯಿಸಿದರೆ ತಲಾ 15 ಕೋಟಿ ರೂಪಾಯಿಗಳ ಭರವಸೆ ಸಿಕ್ಕಿದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಈ ಕುರಿತು ತನಿಖೆ ನಡೆಸುವಂತೆ ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರಿಗೆ ದೂರು ಸಲ್ಲಿಸಿದ್ದರು. ಬಿಜೆಪಿ ನಾಯಕನ ದೂರು ಆಧರಿಸಿ ಎಸಿಬಿ ತನಿಖೆ ನಡೆಸುವಂತೆ ಗವರ್ನರ್ ಆದೇಶಿಸಿದ್ದರು. ಗವರ್ನರ್ ಆದೇಶ ಬಂದ ಬೆನ್ನಲ್ಲೇ ಶುಕ್ರವಾರ (ಫೆ.7) ಸಂಜೆ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ಎಸಿಬಿ ಅಧಿಕಾರಿಗಳ ತಂಡ ಆಗಮಿಸಿತ್ತು. ಈ ವೇಳೆ ಕೇಜ್ರಿವಾಲ್ ಮನೆ ಮುಂದೆ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. “ಎಸಿಬಿ ಅಧಿಕಾರಿಗಳು ಯಾವುದೇ ಆದೇಶ ಪ್ರತಿ ಅಥವಾ ನೋಟಿಸ್ ಇಲ್ಲದೆ ಏಕಾಏಕಿ ಕೇಜ್ರಿವಾಲ್ ಮನೆಗೆ ನುಗ್ಗಿದ್ದಾರೆ” ಎಂದು ಎಎಪಿ ಕಾನೂನು ಘಟಕದ ವಕೀಲ ಸಂಜೀವ್ ನಾಸಿಯರ್ ಆರೋಪಿಸಿದ್ದರು.
ಬಿಜೆಪಿಯು 16 ಎಎಪಿ ಅಭ್ಯರ್ಥಿಗಳನ್ನು ಖರೀದಿಸಲು ತಲಾ 15 ಕೋಟಿ ರೂಪಾಯಿ ಹಣದ ಆಮಿಷವೊಡ್ಡಿದೆ ಎಂಬ ಆರೋಪದ ಕುರಿತು ತನಿಖೆಗೆ ಸಹಕರಿಸುವಂತೆ ಕೇಜ್ರಿವಾಲ್ ಅವರಿಗೆ ಎಸಿಬಿ ನೀಡಿದ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿ ಹಣದ ಆಮಿಷವೊಡ್ಡಲು ಬಳಸಿದ ಫೋನ್ ಮತ್ತು ನಂಬರ್, ಬಿಜೆಪಿ ವಿರುದ್ದ ಆರೋಪ ಮಾಡಿ ಕೇಜ್ರಿವಾಲ್ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆಯೇ ಎಂಬುವುದರ ಕುರಿತು ಎಸಿಬಿ ಮಾಹಿತಿ ಕೇಳಿದೆ ಎಂದು ವರದಿ ಹೇಳಿದೆ.
ಕೇಜ್ರಿವಾಲ್ ಪರ ವಕೀಲ ರಿಷಿಕೇಶ್ ಕುಮಾರ್ ಅವರು ಎಸಿಬಿ ನೋಟಿಸ್ ಅಸ್ಪಷ್ಟವಾಗಿದೆ ಎಂದಿದ್ದು, ತಿರಸ್ಕರಿಸಿದ್ದಾರೆ. “ನಾವು ಅವರ (ಎಸಿಬಿ) ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ” ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಮನೆಗೆ ಎಸಿಬಿ ಅಧಿಕಾರಿಗಳು ಬಂದಾಗ, ಅವರ ಬಳಿ ಯಾವುದೇ ತನಿಖಾ ಆದೇಶ ಇಲ್ಲ ಎಂದು ಆರೋಪಿಸಿ ಮನೆಯೊಳಗೆ ಬಿಡಲು ನಿರಾಕರಿಸಲಾಗಿತ್ತು. ಸ್ವಲ್ಪ ಹೊತ್ತಿನ ಹೈಡ್ರಾಮದ ಬಳಿಕ, ಸಂಜೆ 4.15ರ ಸುಮಾರಿಗೆ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿ ಎಸಿಬಿ ತಂಡ ನಿರ್ಗಮಿಸಿದೆ.
ಎಸಿಬಿ ಅಧಿಕಾರಿಗಳು ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಶಾಸಕ ಮುಖೇಶ್ ಅಹ್ಲಾವತ್ ಅವರ ಮನೆಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಜಯ್ ಸಿಂಗ್ ಅವರು ಹೇಳಿಕೆ ದಾಖಲಿಸಲು ಖುದ್ದಾಗಿ ಎಸಿಬಿ ಕಚೇರಿಗೆ ಹಾಜರಾಗಿದ್ದರು.
“ಎಸಿಬಿ ಹಠಾತ್ ಆಗಮನದ ಹಿಂದೆ ರಾಜಕೀಯ ಕುತಂತ್ರ ಅಲ್ಲದೆ ಇನ್ನೇನು ಇಲ್ಲ. ಬಿಜೆಪಿ ನಮ್ಮ ಅಭ್ಯರ್ಥಿಯೊಬ್ಬರಿಗೆ ಆಮಿಷವೊಡ್ಡಲು ಬಳಸಿದ ಫೋನ್ ನಂಬರ್ ಅನ್ನು ನಾವು ಬಹಿರಂಗಪಡಿಸಿದ್ದೇವೆ. ಎಸಿಬಿ ಇಲ್ಲಿ ಬಂದು ನಾಟಕ ಮಾಡಬಾರದು” ಎಂದು ಎಎಪಿ ನಾಯಕರು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ ತಕ್ಷಣ ಬಿಜೆಪಿ ಕಾರ್ಯದರ್ಶಿ ಗವರ್ನರ್‌ಗೆ ದೂರು ನೀಡಿದ್ದು, ಅದನ್ನು ಆಧರಿಸಿ ಗವರ್ನರ್ ತಕ್ಷಣ ತನಿಖೆಗೆ ಆದೇಶಿಸಿರುವುದು ಮತ್ತು ಗವರ್ನರ್ ಆದೇಶದ ಬೆನ್ನಲ್ಲೇ ಎಸಿಬಿ ತಂಡ ಕೇಜ್ರಿವಾಲ್ ಮನೆಗೆ ಬಂದಿರುವುದು ಸೇರಿದಂತೆ ಚುನಾವಣಾ ಫಲಿತಾಂಶದ ಮುನ್ನಾದಿನ ದೆಹಲಿಯಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳು ಎಲ್ಲರನ್ನು ಆಶ್ಚರ್ಯಗೊಳಿಸಿದೆ.
ಇಂದು (ಫೆ.8) ದೆಹಲಿಯ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಆರಂಭಿಕ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.


