ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ.
ಫೆಬ್ರವರಿ 27ರಂದು ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಸಿದ್ಧಾರ್ಥ್ ನಂದನ್ ಅವರಿದ್ದ ಪೀಠವು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಜಿಲ್ಲಾಧಿಕಾರಿ (ಡಿಸಿ) ಕಾನೂನು ಸುವ್ಯವಸ್ಥೆ ಸಮಸ್ಯೆಯ ನೆಪವೊಡ್ಡಿ ಜನರ ಸಂಖ್ಯೆಯನ್ನು ಸೀಮಿತಗೊಳಿಸಲು ಮುಂದಾದರೆ, ಅವರಿಗೆ ಕಾನೂನಿನ ಆಳ್ವಿಕೆಯನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದಲ್ಲಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ವರ್ಗಾವಣೆ ಪಡೆಯಬೇಕು ಎಂದು ತೀಕ್ಷ್ಣವಾಗಿ ಹೇಳಿದೆ.
“ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಆತಂಕದಿಂದಾಗಿ ಮಸೀದಿಯಲ್ಲಿ ಜನರ ಸಂಖ್ಯೆಯನ್ನು ನಿರ್ಬಂಧಿಸುವ ಆದೇಶವನ್ನು ಹೊರಡಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಈ ವಾದವನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಯಾವುದೇ ಸಂದರ್ಭದಲ್ಲೂ ಕಾನೂನಿನ ಆಳ್ವಿಕೆ ಜಾರಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಸ್ಥಳೀಯ ಅಧಿಕಾರಿಗಳು, ಅಂದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಜಿಲ್ಲಾಧಿಕಾರಿ (ಡಿಸಿ) ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಬಹುದು ಎಂಬ ಕಾರಣ ನೀಡಿ ಮಸೀದಿಯಲ್ಲಿ ಜನರ ಸಂಖ್ಯೆಯನ್ನು ಸೀಮಿತಗೊಳಿಸಲು ಬಯಸಿದರೆ; ಅವರು ಕಾನೂನಿನ ಆಳ್ವಿಕೆಯನ್ನು ಜಾರಿಗೊಳಿಸಲು ತಾವು ಅಸಮರ್ಥರು ಎಂದು ಭಾವಿಸಿದ್ದಲ್ಲಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಸಂಭಾಲ್ ಜಿಲ್ಲೆಯಿಂದ ಹೊರಗೆ ವರ್ಗಾವಣೆ ಪಡೆಯಬೇಕು” ಎಂದು ನ್ಯಾಯಾಲಯವು ಹೇಳಿದೆ.
“ಪ್ರತಿಯೊಂದು ಸಮುದಾಯವು ತಮಗಾಗಿ ನಿಗದಿಪಡಿಸಿದ ಆರಾಧನಾ ಸ್ಥಳಗಳಲ್ಲಿ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸುವುದನ್ನು ಖಚಿತಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ. ಒಂದು ವೇಳೆ ಅದು ಖಾಸಗಿ ಆಸ್ತಿಯಾಗಿದ್ದರೆ, ನ್ಯಾಯಾಲಯವು ಈಗಾಗಲೇ ತಿಳಿಸಿರುವಂತೆ, ಸರ್ಕಾರದ ಯಾವುದೇ ಅನುಮತಿಯಿಲ್ಲದೆ ಅಲ್ಲಿ ಆರಾಧನೆ ಮಾಡುವ ಹಕ್ಕು ಅವರಿಗೆ ಇರುತ್ತದೆ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಸಂಭಾಲ್ ಜಿಲ್ಲೆಯ ಸರ್ವೆ ನಂಬರ್ 291ರಲ್ಲಿ ಮಸೀದಿ ಇದ್ದು, ರಂಝಾನ್ ತಿಂಗಳಲ್ಲಿ ಅಲ್ಲಿ ಪ್ರಾರ್ಥನೆ ಮಾಡದಂತೆ ನಮ್ಮನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿ ಮುನಾಝಿರ್ ಖಾನ್ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಮೇಲಿನ ಅವಲೋಕನಗಳನ್ನು ಮಾಡಿದೆ.
ಅರ್ಜಿದಾರ ಮುನಾಝಿರ್ ಪ್ರಕಾರ, ರಂಝಾನ್ ತಿಂಗಳಲ್ಲಿ ಮಸೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಆದರೆ, ಸ್ಥಳೀಯಾಡಳಿತ ಕೇವಲ 20 ಜನರಿಗೆ ಮಾತ್ರ ಮಸೀದಿಯಲ್ಲಿ ನಮಾಝ್ ಮಾಡಲು ಅನುಮತಿ ನೀಡಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮಸೀದಿಯಲ್ಲಿ ಜನರ ಸಂಖ್ಯೆಯ ಮೇಲೆ ಮಿತಿಯನ್ನು ಹೇರಲಾಗಿದೆ ಎಂದು ತಿಳಿಸುವ ಮೂಲಕ ಸರ್ಕಾರವು ತನ್ನ ನಿರ್ಬಂಧವನ್ನು ಸಮರ್ಥಿಸಿಕೊಂಡಿದೆ.
ಆದರೆ, ಆಡಳಿತದ ಸಮರ್ಥನೆಯನ್ನು ನ್ಯಾಯಪೀಠ ತಿರಸ್ಕರಿಸಿದ್ದು, ಎಲ್ಲಾ ಸಂದರ್ಭಗಳಲ್ಲೂ ಕಾನೂನಿನ ಆಳ್ವಿಕೆ ಜಾರಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪ್ರತಿಯೊಂದು ಸಮುದಾಯವು ಶಾಂತಿಯುತವಾಗಿ ತನ್ನ ಧರ್ಮವನ್ನು ಪಾಲಿಸಲು ಅವಕಾಶ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಒತ್ತಿಹೇಳಿದೆ.
ಧಾರ್ಮಿಕ ಚಟುವಟಿಕೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆದಾಗ ಅಥವಾ ಅವು ಸಾರ್ವಜನಿಕ ಆಸ್ತಿಗೆ ವ್ಯಾಪಿಸಿದಾಗ ಮಾತ್ರ ಸರ್ಕಾರದ ಅನುಮತಿಯ ಅಗತ್ಯವಿರುತ್ತದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಆಸ್ತಿಯ ಕುರಿತಾದ ಅರ್ಜಿದಾರರ ಹಕ್ಕನ್ನು ಸರ್ಕಾರವು ಆಕ್ಷೇಪಿಸಿದೆ. ಕಂದಾಯ ದಾಖಲೆಗಳ ಪ್ರಕಾರ ಆ ಜಮೀನು ಸುಖಿ ಸಿಂಗ್ ಅವರ ಪುತ್ರರಾದ ಮೋಹನ್ ಸಿಂಗ್ ಮತ್ತು ಭೂರಜ್ ಸಿಂಗ್ ಅವರ ಹೆಸರಿನಲ್ಲಿದೆ ಎಂದು ಸರ್ಕಾರ ತಿಳಿಸಿದೆ. ಅಷ್ಟೇ ಅಲ್ಲದೆ, ನಮಾಝ್ ಮಾಡಲು ಉದ್ದೇಶಿಸಿರುವ ಸ್ಥಳದಲ್ಲಿ ಮಸೀದಿ ಅಥವಾ ಆರಾಧನಾ ಕೇಂದ್ರ ಇರುವುದನ್ನು ಸಾಬೀತುಪಡಿಸುವ ಯಾವುದೇ ಫೋಟೋಗಳನ್ನು ಅರ್ಜಿದಾರರು ಈವರೆಗೆ ಸಲ್ಲಿಸಿಲ್ಲ ಎಂಬ ಅಂಶವನ್ನೂ ನ್ಯಾಯಾಲಯದ ನ್ಯಾಯಾಲಯದ ಗಮನಕ್ಕೆ ತಂದಿತ್ತು.
ಜಾಗಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ಕಂದಾಯ ದಾಖಲೆಗಳನ್ನು ಒದಗಿಸಲು ಅರ್ಜಿದಾರರು ಕಾಲಾವಕಾಶ ಕೋರಿದ್ದಾರೆ. ಇದೇ ವೇಳೆ ಹೆಚ್ಚಿನ ಮಾಹಿತಿ ಪಡೆಯಲು ಸರ್ಕಾರ ಕೂಡ ಕಾಲಾವಕಾಶ ಕೋರಿದೆ.
ನ್ಯಾಯಾಲಯ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ನಿಗದಿಪಡಿಸಿದೆ.
Courtesy :livelaw.in


