ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 31 ಜನರು ಸಾವನ್ನಪ್ಪಿದ ಆಸ್ಪತ್ರೆಯಲ್ಲಿ ಕೊಳಕು ಶೌಚಾಲಯವನ್ನು ಕಂಡು ಡೀನ್ ಕೈಯಲ್ಲಿ ಶುಚಿಗೊಳಿಸಿದ ಆಡಳಿತಾರೂಢ ಶಿವಸೇನೆಯ ಸಂಸದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಮಾನಹಾನಿ ಮಾಡಿದ ಆರೋಪದ ಮೇಲೆ ಹಂಗಾಮಿ ಡೀನ್ ಎಸ್‌ಆರ್ ವಾಕೋಡೆ ನೀಡಿದ ದೂರಿನ ಮೇರೆಗೆ ಪೊಲೀಸರು ಪಾಟೀಲ್ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ಸಂಸದರಾದ ಹೇಮಂತ್ ಪಾಟೀಲ್, ಸರಣಿ ಸಾವು ಸಂಭವಿಸಿದ ಶಂಕರರಾವ್ ಚವ್ಹಾಣ್ ಸರ್ಕಾರಿ ಆಸ್ಪತ್ರೆಯ ಡೀನ್ ವಾಕೋಡೆ ಅವರಿಗೆ ಪೊರಕೆ ನೀಡಿ ಕೊಳಕು ಶೌಚಾಲಯ ಮತ್ತು ಮೂತ್ರಾಲಯಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದ್ದು, ಅದರಂತೆ ಡೀನ್ ಸ್ವಚ್ಛತೆ ಕಾರ್ಯವನ್ನು ಮಾಡಿದ್ದರು. ಈ ಘಟನೆಯು ತನಗೆ ಮಾನಹಾನಿ ಮಾಡಿದೆ ಎಂದು ಡೀನ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಪಾಟೀಲ ಅವರ ಮೇಲೆ ಸಾರ್ವಜನಿಕ ನೌಕರನ ಹಲ್ಲೆ, ಮಾನಹಾನಿ, ಕ್ರಿಮಿನಲ್ ಬೆದರಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 48 ಗಂಟೆಗಳಲ್ಲಿ 35ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಆಸ್ಪತ್ರೆಗೆ ಭೇಟಿ ನೀಡುವ ಮುನ್ನವೇ ಆಸ್ಪತ್ರೆಗೆ ಆಗಮಿಸಿದ ಸಂಸದ ಹೇಮಂತ ಪಾಟೀಲ್, ಕೊಳಚೆ ಸ್ಥಿತಿಯಲ್ಲಿರುವ ಶೌಚಾಲಯವನ್ನು ಗಮನಿಸಿದರು. ಅದನ್ನು ಸ್ವಚ್ಛಗೊಳಿಸುವಂತೆ ಆಸ್ಪತ್ರೆಯ ಡೀನ್‌ಗೆ ಸೂಚಿಸಿದ್ದಾರೆ.
ಡೀನ್ ಶೌಚಾಲಯವನ್ನು ಶುಚಿಗೊಳಿಸುವಾಗ ಸಂಸದರು ನಿಂತುಕೊಂಡು ಪೈಪ್‌ನ್ನು ಹಿಡಿದಿರುವುದು ವೀಡಿಯೊಗಳಲ್ಲಿ ಕಂಡು ಬಂದಿದೆ. ಡೀನ್ ಟಾಯ್ಲೆಟ್ ಸ್ವಚ್ಛಗೊಳಿಸುವಾಗ ಸಂಸದರು ಟಾಯ್ಲೆಟ್‌ಗೆ ಪೈಪ್ ಮೂಲಕ ನೀರು ಹಾಕುವುದು ಕಂಡು ಬಂದಿದೆ.
ಇದಲ್ಲದೆ ರೋಗಿಗಳ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಪಾಟೀಲ್ ಒತ್ತಾಯಿಸಿದ್ದರು.
ಸೋಮವಾರ ಇದೇ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ಸಾವುಗಳು ಸಂಭವಿಸಿದೆ ಮತ್ತು ಮಂಗಳವಾರ 48 ಗಂಟೆಗಳಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಇನ್ನು 71 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಆದರೆ ಡೀನ್ ವಕೋಡೆ ಅವರು ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆಸ್ಪತ್ರೆಯಲ್ಲಿ ಔಷಧಿಗಳು ಅಥವಾ ವೈದ್ಯರ ಕೊರತೆಯಿಲ್ಲ ಎಂದು ಹೇಳಿದ್ದಾರೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದರೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದರು.
ಇದನ್ನು ಓದಿ: ನಾಂದೇಡ್‌ನಲ್ಲಿ ಸರಣಿ ಸಾವು ಸಂಭವಿಸಿದ ಆಸ್ಪತ್ರೆಯ ಶೌಚಾಲಯವನ್ನು ಡೀನ್ ಕೈಯಲ್ಲೇ ಶುಚಿಗೊಳಿಸಿದ ಸಂಸದ


