Homeಮುಖಪುಟಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

ಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

- Advertisement -
- Advertisement -

ಕರ್ನಾಟಕದಲ್ಲಿ ಹಲವು ಕಾಲಘಟ್ಟಗಳಲ್ಲಿ ಸಾಂಸ್ಕೃತಿಕ ಚರ್ಚೆ-ವಾಗ್ವಾದಗಳು ಜರುಗಿವೆ. ಆ ವಾಗ್ವಾದಗಳಲ್ಲಿ ಹಲವು ಬಾರಿ ಜಾತಿಯ ವಿಷಯವೂ ಮುನ್ನೆಲೆಗೆ ಬಂದು ಒಂದಷ್ಟು ಹೊಸ ತಿಳಿವಳಿಕೆಗೆ ದಾರಿಮಾಡಿಕೊಟ್ಟಿದೆ. ಕುವೆಂಪು ಅವರ ಶೂದ್ರತಪಸ್ವಿ ನಾಟಕದ ವಾಗ್ವಾದ ಇರಬಹುದು, ಬಿ.ಬಸವಲಿಂಗಪ್ಪನವರ ಬೂಸಾ ಪ್ರಕರಣ ಇರಬಹುದು, ಸಾಂಸ್ಕೃತಿಕ ಮತ್ತು ರಾಜಕೀಯ ರಂಗಗಳಲ್ಲಿ ಬಿಸಿಬಿಸಿ ಜಾತಿ ಚರ್ಚೆಗಳು ನಡೆದಿವೆ. ಬ್ರಾಹ್ಮಣ್ಯ ಮತ್ತು ಪುರೋಹಿತಶಾಹಿ ಪಾರಮ್ಯವನ್ನು ಪ್ರಶ್ನಿಸಲಾಗಿದೆ. ಆದರೂ ಬ್ರಾಹ್ಮಣ್ಯದ ಯಜಮಾನಿಕೆಯನ್ನು ನಮ್ಮ ಸಮಾಜದಿಂದ ತೊಲಗಿಸುವುದು ಸುಲಭ ಮಾತಲ್ಲ. ಈಗ ಕನ್ನಡ ಚಿತ್ರನಟರಾದ ಚೇತನ್ ಅಹಿಂಸ ಮತ್ತು ಕಿರಣ್ ಶ್ರೀನಿವಾಸ್ ಈ ಚರ್ಚೆಗೆ ಹೊಸ ಹೊಳಪು ನೀಡಿದ್ದು, ಚೇತನ್ ಅವರ ಮೇಲೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನಗರ ಪೊಲೀಸ ಕಮಿಶನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು. ಅದಲ್ಲದೆ ರಾಜ್ಯದ ಹಲವು ಕಡೆ ಚೇತನ್ ವಿರುದ್ಧ ದೂರು ದಾಖಲಾಗಿದ್ದು, ಅವರು ಪೊಲೀಸ್ ವಿಚಾರಣೆಗೂ ಹಾಜರಾಗಿದ್ದಾರೆ. ತಾವು ನುಡಿದಿರುವ ಮಾತುಗಳಿಗೆ ಬದ್ಧರಾಗಿರುವುದಾಗಿಯೂ ಮತ್ತು ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿಯೂ ಚೇತನ್ ತಿಳಿಸಿ ಘನತೆಯನ್ನು ಮೆರೆದಿದ್ದಾರೆ. ತಾವು ಒಂದು ನಿರ್ದಿಷ್ಟ ಜಾತಿಯ ವಿರುದ್ಧ ಮಾತನಾಡಿಲ್ಲ; ಬದಲಾಗಿ ಬ್ರಾಹ್ಮಣ್ಯದ ವಿರುದ್ಧ ಮಾತನಾಡಿದ್ದೀನಿ, ತಾರತಮ್ಯವನ್ನು ಪೋಷಿಸುವ ಬ್ರಾಹ್ಮಣ್ಯ ಇಂದು ಎಲ್ಲ ಜಾತಿಗಳಲ್ಲೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದರೂ ಅವರ ವಿರುದ್ಧ ಹಲವು ವೇದಿಕೆಗಳಲ್ಲಿ ನಿಂದನೆಯನ್ನು ಸುರಿಸಲಾಗುತ್ತಿದೆ.

1938ರಲ್ಲಿ ನಡೆದ ರೈಲ್ವೇ ನಿಮ್ನವರ್ಗದ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡುತ್ತಾ ಬಾಬಾಸಾಹೇಬರು ಬ್ರಾಹ್ಮಣ್ಯವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ: “ನನ್ನ ದೃಷ್ಟಿಯಲ್ಲಿ, ಈ ದೇಶದ ಕಾರ್ಮಿಕರು ಇಬ್ಬರು ಶತ್ರುಗಳ ಜೊತೆಗೆ ಹೋರಾಡಬೇಕಿದೆ. ಆ ಇಬ್ಬರು ಶತ್ರುಗಳು ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ” ಎನ್ನುವ ಅವರು ಮುಂದುವರೆದು “ಬ್ರಾಹ್ಮಣ್ಯ ಅಂದರೆ ಬ್ರಾಹ್ಮಣರು ಒಂದು ಸಮುದಾಯವಾಗಿ ಹೊಂದಿರುವ ಅಧಿಕಾರ, ಸವಲತ್ತುಗಳು ಮತ್ತು ಹಿತಾಸಕ್ತಿಯಷ್ಟೇ ಅಲ್ಲ. ಆ ದೃಷ್ಟಿಯಲ್ಲಿ ನಾನು ಆ ಪದವನ್ನು ಬಳಸುತ್ತಿಲ್ಲ. ಬ್ರಾಹ್ಮಣ್ಯ ಅಂದರೆ ನನ್ನ ಪ್ರಕಾರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಯನ್ನು ಇಲ್ಲವಾಗಿಸುವುದು. ಆ ನಿಟ್ಟಿನಲ್ಲಿ ಇದು ಎಲ್ಲಾ ವರ್ಗಗಳಲ್ಲೂ ವ್ಯಾಪಕವಾಗಿದೆ ಮತ್ತು ಇದರ ಹುಟ್ಟಿಗೆ ಅವರೇ ಕಾರಣರಾಗಿದ್ದರೂ ಬ್ರಾಹ್ಮಣರಲ್ಲಿ ಮಾತ್ರ ಅದು ಉಳಿದಿದೆ ಎನ್ನಲಾಗುವುದಿಲ್ಲ” ಎನ್ನುತ್ತಾರೆ. ಮುಂದುವರೆದು “…ಬ್ರಾಹ್ಮಣ್ಯ ಕೆಲವು ವರ್ಗಗಳಿಗೆ ಮಾತ್ರ ಸವಲತ್ತಿನ ಸ್ಥಾನ ನೀಡುತ್ತದೆ. ಕೆಲವು ವರ್ಗಗಳಿಗೆ ಅದು ಅವಕಾಶದ ಸಮಾನತೆಯನ್ನು ನಿರಾಕರಿಸುತ್ತದೆ” ಎಂದು ವ್ಯಾಖ್ಯಾನಿಸಿ, ಅಂದಿನ ಯೂನಿಯನ್ ಲೀಡರ್‌ಗಳಲ್ಲಿ ಇದ್ದ ಬ್ರಾಹ್ಮಣ್ಯವನ್ನೂ ವಿಮರ್ಶಿಸಿ, ಟೀಕಿಸಿ ನಿಮ್ನವರ್ಗದ ಕಾರ್ಮಿಕರ ಹಿತವನ್ನು ಕಾಪಾಡುವಂತಹ ಹೊಸ ಯೂನಿಯನ್ ಅವಶ್ಯಕತೆಯ ಬಗ್ಗೆ, ಆ ಯೂನಿಯನ್ ರಾಜಕೀಯ ಅಧಿಕಾರಕ್ಕೆ ಪ್ರಯತ್ನಿಸಬೇಕಾದ ಬಗ್ಗೆ ಬಾಬಾಸಾಹೇಬರು ಅಂದು ಮಾಡಿದ ಭಾಷಣ ಐತಿಹಾಸಿಕವಾದದ್ದು.

ಬ್ರಾಹ್ಮಣ್ಯದ ಬಗ್ಗೆ ಇಷ್ಟು ವರ್ಷಗಳಿಂದ ಹೊಮ್ಮಿರುವ ಸ್ಪಷ್ಟವಾದ ವಿಚಾರವನ್ನು ಕಡೆಗಣಿಸಿ, ಈ ನೆಲದ ಪಾರಂಪರಿಕ ಜಾತಿ ತಾರತಮ್ಯವನ್ನು ಬಯಸುವ ಮನಸ್ಸುಗಳು ಇಂದು ಮತ್ತೆ ರಚ್ಚೆ ಹಿಡಿದಿವೆ. ಇದು ಕುವೆಂಪು ಕಾಲದಲ್ಲಿಯೂ ಆಗಿತ್ತು. ಬಸವಲಿಂಗಪ್ಪ, ಸಿದ್ಧಲಿಂಗಯ್ಯನವರ ಮೇಲೆ ದಾಳಿ ನಡೆಸಿದ ಶಕ್ತಿಗಳು ಕೂಡ ಇವೇ ಆಗಿದ್ದವು. ಇಂದು ಚೇತನ್ ಮೇಲೆ ಮುಗಿಬಿದ್ದವರೂ ಅವರೇ ಆಗಿದ್ದಾರೆ. ವಿವಿಧ ಕಾಲಘಟ್ಟಗಳಲ್ಲಿ ಬ್ರಾಹ್ಮಣ್ಯವನ್ನು ತೊಲಗಿಸುವುದಕ್ಕೆ ಚಿಂತಿಸಿದವರ ಮೇಲೆ, ಅದಕ್ಕಾಗಿ ಕೆಲಸ ಮಾಡಿದವರ ಮೇಲೆ ದಾಳಿ ನಡೆಸಿರುವುದಕ್ಕೆ ಹಲವು ನಿದರ್ಶನಗಳಿವೆ. ಆರ್.ವೆಂಕಟೇಶ್ ಎಂಬುವವರು ’ವಿಚಾರ ತರಂಗ’ ಎಂಬ ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ವಿಚಾರವಾದ ಗೌಣವಾಗಿದ್ದು ಬ್ರಾಹ್ಮಣ್ಯದ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದಿರುವ ಕೃತಿಯದು. ಪುಸ್ತಕದ ಕೊನೆಯ ಭಾಗದ ’ವಿಶ್ವಮಾನವೀಯ ಚಿಂತನ’ ಎಂಬ ತಲೆಬರಹದಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ಕುವೆಂಪು ಅವರನ್ನು, ಅವರ ವಿಶ್ವಮಾನವ ವಿಚಾರವನ್ನು

PC : Prajavani

ವಿರೋಧಿಸುವ ಲೇಖನಗಳದ್ದೇ ಸಿಂಹಪಾಲು. ಅದರಲ್ಲಿ ಸ್ಥಾನ ಪಡೆದುಕೊಂಡಿರುವ ಪರಮ ಬ್ರಾಹ್ಮಣ್ಯದ ಲೇಖನ ’ವಿಶ್ವಮಾನವೀಯತೆ ಹಾಗು ಸಮಯಸಾಧಕತನ’. 1975ರಲ್ಲಿ ’ಮಧ್ವವಿಜಯ’ ಎಂಬ ಪತ್ರಿಕೆಗೆ ಪುತ್ತಿಗೆ ಲಕ್ಷ್ಮೀನಾರಾಯಣರಾಯರು ಎಂಬುವವರು ಬರೆದಿರುವ ಸಂಪಾದಕೀಯದಲ್ಲಿ ಕುವೆಂಪು ಮತ್ತು ಪ್ರಗತಿಪರ ಬರಹಗಾರರ ಒಕ್ಕೂಟದ ಮೇಲೆ ವಿಷ ಕಾರುವುದಕ್ಕೆಂದೇ ಅವರು ತಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿದ್ದಾರೆ. ಅದರ ಒಂದು ಪ್ಯಾರಾವನ್ನು ಇಲ್ಲಿ ಉಲ್ಲೇಖಿಸುತ್ತಿರುವ ಉದ್ದೇಶ, ಬ್ರಾಹ್ಮಣ್ಯದ ನೀಚತನ ಸ್ಪಷ್ಟವಾದೀತೆಂದು: “…ನನಗೀಗ ಬಲವಾದ ಅನುಮಾನವೊಂದು ಕಾಡುತ್ತಿದೆ. ಇದನ್ನು ಅಮೆರಿಕಾದ ವಾಟರ್‌ಗೇಟ್ ಪ್ರಕರಣದಂತೆ ಯಾರಾದರೂ ಸಾಹಸಿಗಳು ಬಯಲಿಗೆಳೆದರೆ ಉಪಕಾರ. ಇತ್ತೀಚೆಗೆ ಗತಿಸಿದ ದೊಡ್ಡ ವಾಗ್ಗೇಯಕಾರರು, ತತ್ತ್ವಶಾಸ್ತ್ರ ಪಂಡಿತರು, ಮಹಾಮೇಧಾವಿಗಳೆಂದು ದೇಶವಿದೇಶಗಳಲ್ಲಿ ಮೂಢ ಜನರಿಂದ ಮತ್ತು ಭಟ್ಟಂಗಿಗಳಿಂದ ಹೊಗಳಿಸಿಕೊಂಡ ದೊಡ್ಡ ವ್ಯಕ್ತಿಯೊಬ್ಬರಿಗೆ ಕೀರ್ತನೆ ಪ್ರಬಂಧಗಳನ್ನು ಭಾಷಣಗಳನ್ನು ಬರೆದುಕೊಡುತ್ತಿದ್ದವರೆಲ್ಲಾ ಯಾರು ಯಾರು ಎಂಬುದು ನನಗೆ ಗೊತ್ತು. ಇದು ಪ್ರಚಾರಯುಗ, ಭಾಷಣಯುಗ. ಪತ್ರಿಕೆಗಳಲ್ಲಿ ಬಂದದ್ದೆಲ್ಲಾ ಸತ್ಯವೆಂದು ತಿಳಿದು ವಿಮರ್ಶೆ ಮಾಡದೆ ನಂಬುವ ಅವಿದ್ಯಾವಂತರೇ ಬಹುತೇಕವಾಗಿರುವ ಈ ನಮ್ಮ ದೇಶದಲ್ಲಿ ಇದೆಲ್ಲಾ ಈಗೀಗ ಮಾಮೂಲು. ಇಲಿಮರಿಯಿಂದ ಹಿಡಿದು ಪರಮಾಣು ಬಾಂಬಿನವರೆಗೆ (Every Thing Under Sun) ವೇದಿಕೆಯ ಮೇಲೆ ಭರ್ಜರಿ ಹೂ ಹಾರ ಹಾಕಿಸಿಕೊಂಡು ತಾವು ಮಾತನಾಡುವ ವಿಷಯದ ಬಗ್ಗೆ ಸ್ವಲ್ಪ ಕೂಡಾ ತಮಗೆ ತಿಳಿದಿಲ್ಲವಾದರೂ ಮಂತ್ರಿಗಳೆಲ್ಲ ಭಾಷಣ ಬಿಗಿಯುತ್ತಾರೆ. ಕಾರ್ಯದರ್ಶಿಗಳು ಬರೆದುಕೊಡುತ್ತಾರೆ, ಮಂತ್ರಿಗಳು ಭಾಷಣ ಬಿಗಿಯುತ್ತಾರೆ. ಇಬ್ಬರಿಗೂ ಇದೇ ಕೆಲಸ ಯಾವಾಗಲೂ. ಹಾಗೆಯೇ ಪುಟ್ಟಪ್ಪ ದಕ್ಷಿಣೆಯ ಆಸೆ ತೋರಿಸಿ ಬಡ ಬ್ರಾಹ್ಮಣನೊಬ್ಬನಿಂದ ಬರೆಸಿರಬಹುದೆ?”

PC : ಅರಳಿಮರ

ಕುವೆಂಪು ಅವರಿಗೆ ಇಂತಹ ನೀಚ ಶಕ್ತಿಗಳನ್ನು ಮೆಟ್ಟಿನಿಲ್ಲುವ ಶಕ್ತಿ ಹಲವು ಕಾರಣಗಳಿಂದ ಒದಗಿತ್ತು. ಆದರೆ ಒಂದು ಹೇಳಿಕೆಗಾಗಿ ಬಿ.ಬಸವಲಿಂಗಪ್ಪನವರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ ಜಾತಿ ಕಬಂಧಗಳು ಮತ್ತು ಅದರಲ್ಲಿ ಅಂತರ್ಗತವಾಗಿರುವ ಬ್ರಾಹ್ಮಣ್ಯ ಎಷ್ಟು ದೈತ್ಯಾಕಾರವಾದದ್ದು, ಎಷ್ಟು ವಿಷಕಾರಿ ಮತ್ತು ಎಷ್ಟು ವಿನಾಶಕಾರಿ ಎಂಬುದನ್ನು ಮನಗಾಣಬಹುದು. ಇಂದು ಚೇತನ್ ವಿರುದ್ಧ ಅದು ತನ್ನ ತೋಳು ತಟ್ಟಿರುವುದು ಸಾಂಕೇತಿಕವಷ್ಟೇ! ಸಾವಿರಾರು ವರ್ಷಗಳಿಂದ ಅದರ ಕಾಲ್ತುಳಿತಕ್ಕೆ ಸಿಕ್ಕಿ ನಶಿಸಿಹೋದವರಿಗೆ ಲೆಕ್ಕವೇ ಇಲ್ಲ. ಮತ್ತೊಂದು ಕೋನದಿಂದ ನೋಡುವುದಾದರೆ ಆರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಹೇಳುವಂತೆ, ಸಂವಿಧಾನ ನೀಡಿದ ಬಲದಿಂದ ಈಗಷ್ಟೇ ಹಿಂದುಳಿದವರು ಮತ್ತು ದಲಿತರು ಸಣ್ಣ ಮಟ್ಟದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯುತ್ತಿದ್ದಂತೆ, ಹೊಟ್ಟೆ ಉರಿಯಿಂದ ಮೇಲ್ಜಾತಿಗಳು ಎದ್ದಿರುವ ’ಬಂಡಾಯ’ ಕೂಡ ಇದಾಗಿದೆ.

ಇಂತಹ ದುರಿತ ಸಮಯದಲ್ಲಿ ನ್ಯಾಯಪಥ ಪತ್ರಿಕೆಯ ಈ ಸಂಚಿಕೆಯಲ್ಲಿ ಬ್ರಾಹ್ಮಣ್ಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ಚಿಂತಕರಾದ ರಾಜೇಂದ್ರ ಚೆನ್ನಿ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಯುವ ಸಂಶೋಧಕ ಅಮರ್ ಹೊಳೆಗದ್ದೆ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಬ್ರಾಹ್ಮಣ್ಯದ ಬೇರುಗಳು ಎಷ್ಟು ಆಳಕ್ಕೆ ಇಳಿದಿವೆಯೋ ಹಾಗೆಯೇ ಈ ಆಧುನಿಕ ಜಗತ್ತಿನಲ್ಲಿ ಅದು ಚಾಚಿರುವ ಕೊಂಬೆಗಳು ಕೂಡ ವಿಸ್ತಾರವಾಗಿದೆ. ವಾಸಿಸುವ ಸ್ಥಳಗಳಲ್ಲಿ ಸೆಗ್ರಿಗೇಶನ್, ಮೆರಿಟ್ ಎಂಬುದರ ಬಗ್ಗೆ ಸುಳ್ಳಿನ ಪ್ರಾಮುಖ್ಯತೆ, ಮೀಸಲಾತಿ-ಪ್ರಾತಿನಿಧ್ಯದ ಬಗ್ಗೆ ಲೇವಡಿ ಮಾಡುವ ಪ್ರಚಾರ ಇತ್ಯಾದಿಯಾಗಿ ಅದು ರೂಪಾಂತರಗೊಂಡಿದೆ. ಪತ್ರಿಕೆ ಮುಂದಿನ ವಾರಗಳಲ್ಲಿ ಇವುಗಳ ಚರ್ಚೆಯನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲಿದೆ.


ಇದನ್ನೂ ಓದಿ: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತವನ್ನು ಬೆದರಿಸುವಲ್ಲಿ ತಿಂಗಳುಗಟ್ಟಲೆ ಕಳೆದ ಅಮೆರಿಕ ಈಗ ಜಗತ್ತನ್ನ ಬೇಡಿಕೊಳ್ಳುತ್ತಿದೆ’: ರಷ್ಯಾದ ತೈಲ ವಿಚಾರದ ಕುರಿತು ಇರಾನ್ ಟೀಕೆ

ಟೆಹ್ರಾನ್: ರಷ್ಯಾದ ತೈಲದ ವಿಷಯದಲ್ಲಿ ಅಮೆರಿಕವು ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಇರಾನ್ ಶನಿವಾರ ಆರೋಪಿಸಿದೆ. ವಾಷಿಂಗ್ಟನ್ ಈಗ ಒತ್ತಡ ಮತ್ತು ನಿರ್ಬಂಧಗಳ ಮೂಲಕ ನಿರ್ಬಂಧಿಸಲು ಪ್ರಯತ್ನಿಸಿದ ಅದೇ ಕಚ್ಚಾ ತೈಲವನ್ನು ಖರೀದಿಸಲು...

ಗಾಝಾ ನರಮೇಧ : ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್‌ ಪರ ಅಮೆರಿಕ ವಕಾಲತ್ತು

ಗಾಝಾ ನರಮೇಧಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾ ಹೂಡಿರುವ ಪ್ರಕರಣದಲ್ಲಿ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಮಧ್ಯ ಪ್ರವೇಶಿಸಿದ್ದು, ಇಸ್ರೇಲ್ ಪರ ವಕಾಲತ್ತು ವಹಿಸಲು ಮುಂದಾಗಿವೆ ಎಂದು ವರದಿಯಾಗಿದೆ. ದಿ...

ಇರಾನ್‌ನ ಕಿರೀಟ ರತ್ನ ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ : ಟ್ರಂಪ್ ಹೇಳಿಕೆ

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ 'ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿ' ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ದ್ವೀಪದಲ್ಲಿರುವ ತೈಲ ಮೂಲಸೌಕರ್ಯಗಳನ್ನು ನಾಶಪಡಿಸದೆ ಇರಲು ನಿರ್ಧರಿಸಿದ ಅಮೆರಿಕ ಪಡೆಗಳು, ಅಲ್ಲಿನ ಮಿಲಿಟರಿ ಕೇಂದ್ರಗಳನ್ನು...

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...