Homeಅಂಕಣಗಳುಜಾತಿ ಪದ್ಧತಿಯೇ ಜಾಣ ಮೀಸಲಾತಿಯಲ್ಲವೆ?

ಜಾತಿ ಪದ್ಧತಿಯೇ ಜಾಣ ಮೀಸಲಾತಿಯಲ್ಲವೆ?

- Advertisement -
- Advertisement -

ನಾಡಿನ ಹಿರಿಯ ಸಾಹಿತಿಗಳಾದ ಲಕ್ಷ್ಮಿಪತಿ ಕೋಲಾರ ಇವರು ಈ ಹಿಂದೆ ಮಂಡಲ್ ವರದಿ ಜಾರಿಯಾದಾಗ ಅದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಮೇಲ್ಜಾತಿಗಳು ಮತ್ತು ಮೇಲ್ಜಾತಿಗಳಿಗೆ ಬೆಂಬಲ ಸೂಚಿಸಿದ ಹಿಂದುಳಿದ ಜಾತಿಗಳ ಮೇಲ್ಮಧ್ಯಮ ವರ್ಗಗಳನ್ನುದ್ದೇಶಿಸಿ ಬರೆದ ಲೇಖನವಿದು. ಅಂದು ಪ್ರತಿಭೆ ಎಂಬ ಪದವನ್ನು ಹಿಡಿದು ಮಂಡಲ್ ಮೀಸಲಾತಿ ವಿರುದ್ಧ ಮಾತಾಡಿದವರಿಗೆ ಲಕ್ಷ್ಮಿಪತಿಯವರು ಪ್ರಶ್ನೆಗಳ ಮೂಲಕವೇ ಉತ್ತರವಿತ್ತಿದ್ದರು. ಈ ಲೇಖನವನ್ನು ಅಹಿಂದ ಪ್ರಕಾಶನದಿಂದಲೂ ಪ್ರಕಟಿಸಲಾಗಿತ್ತು. ಇಂದಿಗೂ ಈ ಲೇಖನ ಪ್ರಸ್ತುತವಾಗಿರುವ ಕಾರಣ ಇಲ್ಲಿ ಪ್ರಕಟಿಸಲಾಗಿದೆ.

ಮೀಸಲಾತಿ ಪರ ವಾದಗಳಿಗೆ ಇಳಿಯತೊಡಗಿದೊಡನೆ ಅವರು ಪ್ರಯೋಗಿಸುವ ಅತ್ಯಂತ ಸವಕಲು ಅಸ್ತ್ರ ‘ಪ್ರತಿಭೆ’ ಎಂಬ ಪದ. ಇಲ್ಲಿಂದಲೇ ಶುರುವಾಗಲಿ ನಮ್ಮ ವಾದವೂ. ಪ್ರತಿಭೆ ಎಂಬುದು ಯಾವುದೋ ಒಂದು ಜಾತಿಯ ಗುತ್ತಿಗೆಯಾಗಿದೆಯೇನು? ಪ್ರತಿಭೆ, ಆಲೋಚನೆಗಳೆಂಬುದು ಕೂಡ ಯಾರಪ್ಪನ ಮನೆಯ ಸ್ವತ್ತಲ್ಲವಲ್ಲ? ಆದರೂ ಮೀಸಲಾತಿಯ ವಿರುದ್ಧ ಮೈಪರಚಿಕೊಳ್ಳುತ್ತಿರುವ ಮೇಲ್ಜಾತಿ ಮನಸುಗಳ ವಾದ ಗಮನಿಸಿದರೆ ‘ಈ ದೇಶದ ಬಹುಸಂಖ್ಯಾತ ದಲಿತ ಮತ್ತು ಹಿಂದುಳಿದ ಜಾತಿಗಳ ಜನರಿಗೆ ಪ್ರತಿಭಟನೆಯೇ ಇಲ್ಲ; ಅವರು ವೈದ್ಯಕೀಯದಂತಹ ವೃತ್ತಿಗಳಿಗೆ ಅನರ್ಹರು’ ಎಂದು ಪರೋಕ್ಷವಾಗಿ ಈ ದೇಶದ ಮುಕ್ಕಾಲು ಭಾಗದ ಜನಸಮುದಾಯವನ್ನು ಜಾತಿನೆಲೆಯ ಕಾರಣಕ್ಕಾಗಿ ಅವಮಾನಿಸುತ್ತಿದ್ದಾರೆ ಎನಿಸುವುದಿಲ್ಲವೆ? ದೇಶದ ಜನರನ್ನು ಅವಮಾನಿಸುವುದೆಂದರೆ ದೇಶವನ್ನೇ ಅಪಮಾನಿಸಿದಂತಲ್ಲವೆ? ಮೀಸಲಾತಿಯೆಂಬ ಸಾಮಾಜಿಕ ನ್ಯಾಯ ರಕ್ಷಣೆಯಲ್ಲಿ ಅನರ್ಹರಿಗೂ, ಪ್ರತಿಭಾಹೀನರಿಗೂ ಅವಕಾಶ ನೀಡಿಬಿಡುತ್ತಿದ್ದಾರೆಂದು ಭಾವಿಸುವುದರ ಆಳದಲ್ಲಿ ತಾವಷ್ಟೆ ಪ್ರತಿಭಾವಂತರೆಂಬ ಮೇಲ್ಜಾತಿಯ ಇಂಗಿತಗಳು, ಅಹಮ್ಮಿಕೆಯೂ ಅಡಗಿಲ್ಲವೆ?

ವಸಂತಕುಮಾರ್ ಮೊಕದ್ದಮೆಯ ವಿಚಾರಣೆಯಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ‘ಅಸಮಾನ ಅವಕಾಶಗಳನ್ನು ಪಡೆಯುತ್ತಿರುವ ವ್ಯವಸ್ಥೆಯಲ್ಲಿ ಪ್ರತಿಭೆಗೆ ಅನ್ಯಾಯವೆಂಬ ಮಾತು ಆಡುವುದೇ ಅನ್ಯಾಯ’ ಎಂದಿರುವರಲ್ಲದೆ ‘ಯಾವುದೇ ಸೌಲಭ್ಯಗಳಿಲ್ಲದ ಗ್ರಾಮೀಣ ಪರಿಸರದಲ್ಲಿ ಬೆಳೆಯುವ ಮಕ್ಕಳು ಕಾನ್ವೆಂಟ್ ಶಿಕ್ಷಣ ಪಡೆದ, ಶ್ರೀಮಂತರ ಹಾಗೂ ಸಾಮಾಜಿಕವಾಗಿ ಉನ್ನತ ಶ್ರೇಣಿಗೆ ಸೇರಿದ ಮಕ್ಕಳ ಜೊತೆ ಸ್ಪರ್ಧಿಸುವುದು ನಿಜಕ್ಕೂ ಅಸಾಧ್ಯ. ಇಂತಹ ಎರಡು ವಿರೋಧಾಬಾಸದ ಪರಿಸರದ ಮಕ್ಕಳು ಸಮಾನವಾಗಿ ಅಂಕಗಳನ್ನು ಗಳಿಸಬೇಕೆಂದು ನಿರೀಕ್ಷಿಸುವುದು ಅಸಂಬದ್ಧ’ ಎಂಬ ಉನ್ನತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟಿನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿಗಳು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶಿಫಾರಸ್ಸು ಮಾಡಿ ವರದಿ ನೀಡಿರುವವರು ಆದ ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿಯವರು ‘ಪ್ರತಿಭೆಗೆ ಅನ್ಯಾಯ’ ಎಂಬ ಬೀದಿ ಬೊಬ್ಬೆಗಳಿಗೆ ಸರಿಯಾದ ಉತ್ತರವನ್ನು ಹೀಗೆ ನೀಡಿದ್ದಾರೆ ‘ಭಾರತದ ಕೆಲವೇ ಸಮುದಾಯಗಳು ಇಂದು “ಪ್ರತಿಭೆಗೆ ಮನ್ನಣೆ ದೊರಕಬೇಕು” ಎಂದು ಕೂಗು ಹಾಕಲು ಅಸಾಧ್ಯವಾಗಿದ್ದೇ ಇಲ್ಲಿನ ದುರ್ಬಲ ವರ್ಗಗಳಿಂದಾಗಿ. ಯಾಕೆಂದರೆ ಈ ಕೆಲವೇ ಸಮುದಾಯಗಳಲ್ಲಿ ಕಾಣುವ ಪ್ರತಿಭೆ ಈ ದುರ್ಬಲ ವರ್ಗಗಳ ಶ್ರಮದ ಮೊತ್ತ. ಹೀಗಿರುವಾಗ ಭಾರತದ ದುರ್ಬಲ ವರ್ಗಗಳಲ್ಲಿ ಬೌದ್ಧಿಕ ದಾರಿದ್ರ್ಯ ತುಂಬಿದೆ ಎಂದು ಅವಹೇಳನ ಮಾಡುವುದು ಪ್ರತಿಷ್ಠಿತ ಸಮುದಾಯಗಳ ಅಹಂಕಾರ ಹಾಗೂ ಪೊಳ್ಳು ಪ್ರತಿಷ್ಠೆಗೆ ಸಂಕೇತವಾಗುತ್ತದೆ’.

ಮಂಡಲ್ ವರದಿಯಲ್ಲಿನ ಅಂಕಿಅಂಶಗಳ ಪ್ರಕಾರ ಈ ದೇಶದ ಅತ್ಯುನ್ನತ ಹುದ್ದೆಗಳಾದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ವಿಭಾಗ ಮುಖ್ಯಸ್ಥರು, ಐಎಎಸ್, ಐಪಿಎಸ್, ಐಆರ್‍ಎಸ್, ಐಎಫ್‍ಎಸ್‍ನಂತಹ ಅಧಿಕಾರಿಗಳ ಶೇಕಡ 74ರಷ್ಟು ಸ್ಥಾನಗಳಲ್ಲಿ ಶೇ.4ರಷ್ಟಿರುವ ಬ್ರಾಹ್ಮಣರು ತುಂಬಿಕೊಂಡಿದ್ದಾರೆ, ಇನ್ನುಳಿದ ಶೇ.26ರಷ್ಟು ಹುದ್ದೆಗಳನ್ನು ಶೇ.96ರಷ್ಟು ಜನಸಮುದಾಯಗಳು ಹಂಚಿಕೊಂಡಿವೆ. ಇದು ಆಕಾಶ ಪಾತಾಳದಂತಹ ಅಸಮಾನತೆ. ಹೀಗಿದ್ದು, ತಮ್ಮನ್ನು ಪ್ರತಿಭಾವಂತರೆಂದು ಸ್ವಯಂಘೋಷಿಸಿಕೊಂಡಿರುವವರೆ ಹೀಗೆ ಈ ದೇಶವನ್ನು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಆಳುತ್ತಿದ್ದರು. ಭಾರತಕ್ಕೆ ದಾರಿದ್ರ್ಯ, ಅಸಮಾನತೆ, ಹಸಿವು, ನಿರುದ್ಯೋಗ, ಅಶಾಂತಿಯ ಭಯಾನಕ ಸ್ಥಿತಿ ಬಂದದ್ದಾದರೂ ಹೇಗೆ? ಮತ್ತು ಯಾಕೆ? ಅಂತಹ ಪ್ರತಿಭಾವಂತರೇ ಆಳಿದರೂ ಈ ದೇಶ ಯಾಕಿಷ್ಟು ಅಧೋಗತಿಗಿಳಿಯಿತು. ಇದು ನಿಚ್ಚಳವಾಗಿ ಬ್ರಾಹ್ಮಣ ಪ್ರತಿಭೆಯ ಅಸಮರ್ಥತೆಯ ಫಲ ಮತ್ತು ಸೋಲುಗಳೇ ಅಲ್ಲವೆ? ಭಾರತದಂತಹ ಬೃಹತ್ ಸಮಾಜವೊಂದರ ಜನರ ಬದುಕನ್ನು ಕನಿಷ್ಠ ಸಹನೀಯವಾಗಿಸಲು ಕೂಡ ವಿಫಲವಾದ ಈ ಮೇಲ್ಜಾತಿಗಳ ಬುದ್ಧಿವಂತಿಕೆ ಎಂಬುದು ನಿಸ್ಸಂಶಯವಾಗಿಯೂ ವ್ಯರ್ಥ ಬುದ್ಧಿವಂತಿಕೆ ಮತ್ತು ಅಂತಹ ಪ್ರತಿಭೆ ಗೊಡ್ಡು ಪ್ರತಿಭೆ ಮಾತ್ರ ಆಗಿರಬಲ್ಲದು. ನಿಜವಾದ ಪ್ರತಿಭೆಯೆಂದು ಚಿಗುರದಂತೆಯೂ, ತನ್ನ ಸ್ಥಾನ-ಅಧಿಕಾರಗಳು ಕೈತಪ್ಪದಂತೆಯೂ ಕೇವಲ ಕ್ಷುಲ್ಲಕ ಸಂಚುಗಳಿಗೆ ಬಹುತೇಕ ವಿನಿಯೋಗಗೊಂಡ ಈ ವ್ಯವಸ್ಥಿತ ವಿನಾಶಕಾರಿ ಆಲೋಚನೆಗಳು ಹಿಟ್ಲರನ ಆರ್ಯ ಜನಾಂಗವಾದಿ ನಾಝಿ ಇಸಂಗಿಂತಲೂ ಹೆಚ್ಚು ಅಪಾಯಕಾರಿ ಎನಿಸುತ್ತದೆ.

ಗೆಳೆಯ ಮತ್ತು ದಲಿತ ಕವಿಯಾದ ಗೊಲ್ಲಹಳ್ಳಿ ಶಿವಪ್ರಸಾದ್ ದೆಹಲಿ ಮತ್ತು ಬೆಂಗಳೂರಿನ ವೈದ್ಯಕೀಯ ವಿದ್ಯಾರ್ಥಿಗಳ ಹಾಗೆ ಮೇಧಾವಿ ಅಲ್ಲವಾದರೂ ಆತನ ಮುಗ್ಧತೆ, ಘನತೆ ಮತ್ತು ಸರಳ ವಿವೇಕ ಮೇಲ್ಜಾತಿಗಳ ಕೂಗಾದ ಪ್ರತಿಭೆಗೇ ಅನ್ಯಾಯವೆಂಬುದರ ಕುರಿತು ಹಾಡಿನ ಮೂಲಕ ಹೀಗೆ ಪ್ರಶ್ನಿಸುತ್ತೆ: ತುಟಿ ಬಿಚ್ಚಿದರೆ ಪ್ರತಿಭೆಯೆನ್ನುವರು! ಪ್ರತಿಭೆಗೇ ಪ್ರಾಧಾನ್ಯವೆನ್ನುವರು! ಪ್ರತಿಭೆ ತೋರಿದ ಏಕಲವ್ಯನ ಬೆರಳು ಕೊಯ್ದವರು ಯಾರಣ್ಣ?’ ಬೆಂಗಳೂರಿನ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳ ಬಳಿಯೇನಾದರೂ ಈ ಪ್ರಶ್ನೆಗೆ ಉತ್ತರದ ಮದ್ದಿದೆಯೇ? ಬೆಸ್ತನಾದ ವ್ಯಾಸ, ಬೇಡನಾದ ವಾಲ್ಮೀಕಿ, ಕುರುಬನಾದ ಕಾಳಿದಾಸನಿಂದ ಹಿಡಿದು ಅಂಬೇಡ್ಕರ್‍ವರೆಗೂ ಬಂದ ಅನೇಕ ಪ್ರತಿಭೆಗಳು ಮೇಲ್ಜಾತಿಯ ಇಕ್ಕಟ್ಟು ಮನಸುಗಳ ನಡುವೆಯೂ ಅರಳಿದ ಕೆಳಜಾತಿಯ ವ್ಯಕ್ತಿತ್ವಗಳೇ ಆಗಿಲ್ಲವೇನು? ಈ ಕೆಳಜಾತಿಗಳ ಪ್ರತಿಭೆ, ವಿದ್ವತ್ತು, ಪಾಂಡಿತ್ಯಗಳನ್ನು ಯಾರಿಗೆ ಅಲ್ಲಗಳೆಯಲು ಸಾಧ್ಯ? ಕಲ್ಲುಲೋಹದ ಶಿಲ್ಪಗಳನ್ನು ಕೆತ್ತಿದವರು, ಕುಶಲಕಲೆಯ ಗುಡಿಗೋಪುರಗಳು, ಅರಮನೆಗಳನ್ನು ನಿರ್ಮಿಸಿದವರು, ಸಂಗೀತ ನೃತ್ಯ ಕಲೆಗಳನ್ನು ಸಾವಿರಾರು ಪೋಷಿಸಿಕೊಂಡು ಬಂದವರು, ಆಭರಣಗಳಿಂದ ಆಯುಧಗಳವರೆಗೂ ಚಿನ್ನ-ಬೆಳ್ಳಿ-ಹಿತ್ತಾಳೆ-ಕಬ್ಬಿಣದ ಸಾಧನಗಳನ್ನು ತಯಾರಿಸಿದವರು, ಮಡಿವಾಳ, ಕ್ಷೌರಿಕ, ಮೇದಾರರ ವೃತ್ತಿಗಳು, ಇಂದಿಗೂ ರಸ್ತೆಗಳನ್ನು ನಿರ್ಮಿಸುವವರು, ಹತ್ತಿ ರೇಷ್ಮೆಗಳಿಂದ ವಸ್ತ್ರಗಳನ್ನು ನೇಯುವವರು, ಕೆಳಜಾತಿಯ ಕೃಷಿಕಾರ್ಮಿಕರು, ಬಾವಿಕೆರೆಗಳನ್ನು ತೋಡುವವರು, ಜನಪದ ಕಲೆ ಸಾಹಿತ್ಯಗಳನ್ನು ಸೃಷ್ಟಿಸಿದವರು ಪ್ರತಿಭಾವಂತರಲ್ಲವೆ?

ಇವೆಲ್ಲಾ ಪ್ರತಿಭೆಗಳಲ್ಲವೆಂದರೆ ಮತ್ಯಾವುದನ್ನು ಪ್ರತಿಭೆ ಎನ್ನಲಾದೀತು? ಪ್ರತಿಭೆಯ ಮಾನದಂಡಗಳಾದರೂ ಯಾವುವು? ಬಹುಸಂಖ್ಯಾತ ಸಮುದಾಯಗಳನ್ನು ಎಂದಾದರೂ ಹೊಟ್ಟೆ, ಬಟ್ಟೆ, ಸೂರಿನ ಮೂಲಕ ಮುನ್ನಡೆಸಿದಂತಹ ಮೇಲ್ಜಾತಿಗಳ ಪ್ರತಿಭೆಗೆ ಈ ದೇಶದಲ್ಲಿ ಚರಿತ್ರೆಯಾದರೂ ಎಲ್ಲಿದೆ?

ಜಾತಿಪದ್ಧತಿ ಎಂಬುದೇ ಈ ದೇಶದಲ್ಲಿ ಜಾಣ ಮೀಸಲಾತಿ! ಇಂದಿಗೆ 170 ವರ್ಷಗಳ ಹಿಂದೆ ಮೆಕಾಲೆ ಎಲ್ಲರಿಗೂ ಶಿಕ್ಷಣ ಪದ್ಧತಿಯನ್ನು ಮುಕ್ತವಾಗಿಸುವವರೆಗೂ ಶಿಕ್ಷಣದಲ್ಲಿ 100 ಕ್ಕೆ 100 ರಷ್ಟು ಮೀಸಲಾತಿಯನ್ನು ಉಚ್ಚ ಕುಲಗಳವರೇ ಅನುಭವಿಸುತ್ತಿರಲಿಲ್ಲವೇ? 100 ಕ್ಕೆ 100 ರಷ್ಟು ರಾಜಕೀಯ ಅಧಿಕಾರವನ್ನು ಕ್ಷತ್ರಿಯರು, ಆರ್ಥಿಕ ವಹಿವಾಟನ್ನು ವೈಶ್ಯರು ಅನುಭವಿಸುತ್ತಾ ಉಳಿದ ಶೂದ್ರ ಕುಲಗಳ ಶ್ರಮದ ಕೆಲಸಗಳನ್ನು ತಲೆಬಗ್ಗಿಸಿ ಮಾಡುತ್ತಿರಲಿಲ್ಲವೇ? ಇದು 3000 ವರ್ಷಗಳಿಂದ ಮುಂದುವರೆದುಕೊಂಡೇ ಬಂದ ಜಾಣ ಜಾತಿ ಮೀಸಲಾತಿಯಲ್ಲವೇ? ಈ ಚಾರಿತ್ರಿಕ ಹುಳುಕಿಗೆ ಈಗಲಾದರೂ ಪರಿಹಾರ ಬೇಡವೆಂದರೆ ಹೇಗೆ? ಅದರೊಂದಿಗೆ ಮೀಸಲಾತಿಯನ್ನು ಈಗ ವಿರೋಧಿಸುತ್ತಿರುವ ಎಲ್ಲಾ ಮೇಲ್ಜಾತಿಗಳು ಹಿಂದೊಮ್ಮೆ ಅದರ ಎಲ್ಲಾ ಅನುಕೂಲತೆಗಳನ್ನು ಪಡೆದಿರುವವರೆ. ಬ್ರಿಟಿಷರ ವಿರುದ್ಧ ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಭಾರತದ ಬ್ರಾಹ್ಮಣರು, ಮಿಲ್ಲರ್ ಆಯೋಗದ ಸಂದರ್ಭದಲ್ಲಿ ಬ್ರಾಹ್ಮಣರ ವಿರುದ್ಧ ಲಿಂಗಾಯತ, ಒಕ್ಕಲಿಗರು, ಹಾವನೂರು ಆಯೋಗದ ಸಂದರ್ಭದಲ್ಲಿ ಒಕ್ಕಲಿಗ, ಹಿಂದುಳಿದರ ವಿರುದ್ಧ ಎಲ್ಲಾ ಮೇಲ್ಜಾತಿಗಳು ಹಾಗೂ ಚಿನ್ನಪ್ಪರೆಡ್ಡಿ ವರದಿ ಮತ್ತು ಮಂಡಲ್ ವರದಿಗಳ ವಿರುದ್ಧ ಲಿಂಗಾಯತ-ಒಕ್ಕಲಿಗರನ್ನು ಸೇರಿಕೊಂಡಂತೆ ಎಲ್ಲಾ ಮೇಲ್ಜಾತಿಗಳು ಹೋರಾಡಿದ ಮೀಸಲಾತಿ ಸಂಘರ್ಷದ ಇತಿಹಾಸವೇ ಈ ದೇಶದಲ್ಲಿದೆ. ಹಿಂದೆಲ್ಲ ಸಾಮಾಜಿಕ ನ್ಯಾಯವೆನಿಸಿದ್ದ ಮೀಸಲಾತಿ ಕೆಳಜಾತಿಗಳಿಗೆ ವಿಸ್ತರಿಸಿದೊಡನೆ ಅನ್ಯಾಯ ಹೇಗಾಗಿ ಬಿಟ್ಟಿತು?

ಈ ಚಾರಿತ್ರಿಕ ಸತ್ಯಗಳ ಹಿನ್ನೆಲೆಯಲ್ಲಿ ಜಾತಿನಾಶಕ್ಕೆ ಜಾತಿ ಆಧಾರಿತ ಮೀಸಲಾತಿಯೊಂದೇ ಮದ್ದು. ಇದರಾಚೆಗಿನದೆಲ್ಲ ಕಲಿತವರ ಕಂದಾಚಾರ. ಹಿಂದುಳಿದ, ದಲಿತ ವರ್ಗಗಳ ಬದುಕಲ್ಲಿ ಮೇಲ್ಜಾತಿಗಳವರು ಕಹಿ ಬಿತ್ತಿದರೆ ಅದು ಅವರಿಗೇ ಮುಂದೆ ವಾಪಾಸಾಗಲಿದೆ. ಬಿತ್ತಿದ್ದಂತೆ ಬೆಳೆಯಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...