Homeಮುಖಪುಟಸಿಬಿಸಿಎಸ್ ಪದ್ಧತಿ : ಉನ್ನತ ಶಿಕ್ಷಣದಲ್ಲಿ ಕನ್ನಡಕ್ಕೆ ಕುತ್ತು

ಸಿಬಿಸಿಎಸ್ ಪದ್ಧತಿ : ಉನ್ನತ ಶಿಕ್ಷಣದಲ್ಲಿ ಕನ್ನಡಕ್ಕೆ ಕುತ್ತು

- Advertisement -
- Advertisement -

ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮಹತ್ವಾಕಾಂಕ್ಷೆಯೊಂದಿಗೆ ಹೊಸ ಶಿಕ್ಷಣ ನೀತಿಯ ಭಾಗವಾಗಿ ಸಿ.ಬಿ.ಸಿ.ಎಸ್ ಪದ್ಧತಿಯನ್ನು ಜಾರಿಗೆ ತರುತ್ತಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನೇತೃತ್ವದಲ್ಲಿ ಈ ಹೊಸ ವ್ಯವಸ್ಥೆಯ ರೂಪುರೇಷೆಗಳು ಸಿದ್ಧವಾಗಿವೆ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಹಂತಗಳಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಕೋರ್ಸುಗಳ ಸ್ವರೂಪ, ಪಠ್ಯಕ್ರಮ, ಬೋಧನಾ ವಿಧಾನ, ಕಲಿಕಾ ವಿಧಾನ ಹಾಗೂ ಮೌಲ್ಯಮಾಪನ ವಿಧಾನಗಳಲ್ಲಿ ಆಮೂಲಾಗ್ರವಾದ ಬದಲಾವಣೆ ತರುವ ಒತ್ತಾಸೆಯನ್ನು ಹೊಂದಿದೆ.

ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ, ಆತ್ಮವಿಶ್ವಾಸ, ಮೌಲ್ಯಪ್ರಜ್ಞೆ, ಕೌಶಲ್ಯ ಹಾಗೂ ಔದ್ಯೋಗಿಕತೆ ಕೊರತೆಗಳು ಇದ್ದು ಶಿಕ್ಷಣ, ಕೌಶಲ್ಯ ಹಾಗೂ ಔದ್ಯೋಗಿಕತೆಗಳ ನಡುವೆ ಅರ್ಥಪೂರ್ಣ ಸಂಬಂಧವನ್ನು ಕಲ್ಪಿಸಲು ಸಿ.ಬಿ.ಸಿ.ಎಸ್ (Choise Based Credit System) ಪದ್ಧತಿಯನ್ನು ಜಾರಿಗೆ ತಂದಿರುವುದಾಗಿ ಹೇಳಲಾಗಿದೆ. ಶಿಕ್ಷಣವನ್ನು ಶಿಕ್ಷಕ ಕೇಂದ್ರದಿಂದ ವಿದ್ಯಾರ್ಥಿ ಕೇಂದ್ರಕ್ಕೆ ಸ್ಥಳಾಂತರಿಸುವುದು, ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡುವುದು, ಅಂತರ್ ಶಿಸ್ತೀಯ, ಆಂತರಿಕ ಶಿಸ್ತೀಯ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ನೀಡುವುದು, ಅಂಕಗಳ ಬದಲು ಗ್ರೇಡ್ ಪದ್ಧತಿಯನ್ನು ಜಾರಿಗೆ ತರುವುದು ಮುಂತಾದ ಮಹತ್ವದ ಉದ್ಧೇಶಗಳನ್ನು ಹೊಂದಿದೆ. ಆದರೆ ಈ ಪದ್ಧತಿಯ ನೀತಿ ನಿರೂಪಣೆಗಳನ್ನು ಅಧ್ಯಯನ ಮಾಡಿದರೆ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳ ಕಾರ್ಪೊರೇಟ್ ಅರ್ಥವ್ಯವಸ್ಥೆಯ ಹಿತಾಸಕ್ತಿಗೆ ತಕ್ಕಂತೆ ಸಂಪೂರ್ಣವಾಗಿ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನ ಎದ್ದುಕಾಣುತ್ತದೆ. ಶಿಕ್ಷಣವನ್ನು ಕುರಿತಂತೆ ಇಲ್ಲಿಯವರೆಗೆ ಜಗತ್ತಿನ ಶಿಕ್ಷಣತಜ್ಞರು, ತತ್ವಜ್ಞಾನಿಗಳು ಉಸುರಿದ ದಾರ್ಶನಿಕ ನಿಲುವುಗಳನ್ನು ಎತ್ತಂಗಡಿ ಮಾಡಿ ಅವುಗಳ ಜಾಗದಲ್ಲಿ ವಾಣಿಜ್ಯೀಕೃತ ಪರಿಭಾಷೆಗಳನ್ನು ಸ್ಥಾಪಿಸಲಾಗುತ್ತಿದೆ. ದೇಶದ ಸಮಾಜದ ಸಮಗ್ರ ಬದುಕಿಗೆ, ವಿಕಾಸಕ್ಕೆ ಆಧಾರವಾಗಬೇಕಿದ್ದು ಶಿಕ್ಷಣ ಪದ್ಧತಿಯನ್ನು “ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್” “ಆಯ್ಕೆಯಾಧಾರಿತ ಗಳಿಕೆಯ ಪದ್ಧತಿ” ಎಂದು ಹೆಸರಿಸಿರುವುದೇ ಅದರ ಸ್ವರೂಪವನ್ನು ಧ್ವನಿಸುತ್ತದೆ.

PC : Kuow

ಅರ್ಧದಷ್ಟು ಬೋಧನಾ ಅವಧಿ ಕಡಿತ

ಈಗಿನ ಶಿಕ್ಷಣ ಪದ್ಧತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ/ನಿ ಒಂದು ವಾರಕ್ಕೆ 5 ಗಂಟೆ ಕಾರ್ಯಭಾರಗಳ ಮೂರು ಐಚ್ಛಿಕ ವಿಷಯಗಳು (15 ಗಂಟೆ, ಉದಾ: ಇತಿಹಾಸ, ರಾಜ್ಯಶಾಸ್ತ್ರ, ಕನ್ನಡ) 5 ಗಂಟೆ ಕಾರ್ಯಭಾರಗಳ ಎರಡು ಭಾಷೆಗಳು (10 ತಾಸು, ಉದಾ: ಇಂಗ್ಲಿಷ್, ಕನ್ನಡ) ಹಾಗೂ 5 ಗಂಟೆ ಕಾರ್ಯಭಾರದ ಒಂದು ಕಡ್ಡಾಯ ವಿಷಯ (5 ಗಂಟೆ, ಉದಾ: ಭಾರತ ಸಂವಿಧಾನ) ಸೇರಿ ಒಟ್ಟು 30 ಗಂಟೆಗಳ ಬೋಧನೆಯನ್ನು ಕೇಳಬೇಕಿತ್ತು. ಹೊಸ ಪದ್ದತಿಯಲ್ಲಿ 6 ಗಂಟೆ ಕಾರ್ಯಭಾರಗಳ ಎರಡು ಐಚ್ಛಿಕ ವಿಷಯಗಳು (12 ಗಂಟೆ, ಉದಾ: ಇತಿಹಾಸ, ಕನ್ನಡ) 3 ಗಂಟೆ ಕಾರ್ಯಭಾರದ ಒಂದು ಕಡ್ಡಾಯ ವಿಷಯ(3 ಗಂಟೆ, ಉದಾ: ಪರಿಸರ ಅಧ್ಯಯನ) ಹಾಗೂ ಕೇವಲ 2 ಗಂಟೆ ಕಾರ್ಯಭಾರದ ಒಂದೇ ಒಂದು ಭಾಷೆ (2 ಗಂಟೆ, ಉದಾ: ಇಂಗ್ಲಿಷ್/ಕನ್ನಡ/ಹಿಂದಿ) ಸೇರಿ ಕೇವಲ 17 ತಾಸುಗಳಿಗೆ ಬೋಧನಾ ಕಾರ್ಯಭಾರವನ್ನು ಒಳಗೊಂಡಿದೆ. ಅಂದರೆ ಅರ್ಧದಷ್ಟು ಕಾರ್ಯಭಾರ ಕಡಿತ. ಅಂದರೆ ಅರ್ಧದಷ್ಟು ಬೋಧಕರು ಮನೆಗೆ. ಭವಿಷ್ಯದಲ್ಲಿ ಅರ್ಧದಷ್ಟು ಹುದ್ದೆಗಳು ರದ್ದುಗೊಳ್ಳುತ್ತವೆ. ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಅಧ್ಯಯನ ಇನ್ನು ಉನ್ನತ ಶಿಕ್ಷಣದಲ್ಲಿ ಅಗತ್ಯವಿಲ್ಲ ಎಂಬ ಸಂದೇಶವನ್ನು ಈ ಪದ್ಧತಿಯ ಮೂಲಕ ರವಾನಿಸಲಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದಂಥ ಘನತೆಯ ಸಂಸ್ಥೆ ಸಿ.ಬಿ.ಸಿ.ಎಸ್ ರೂಪುರೇಷೆಗಳನ್ನು ರೂಪಿಸುವಾಗ ಭಾಷಾತಜ್ಞರು, ಸಂಸ್ಕೃತಿಚಿಂತಕರನ್ನು ಹೊರಗಿಟ್ಟಿರುವುದು ಈ ಸಮಸ್ಯೆಗೆ ಕಾರಣವಾಗಿದೆ.

ಕನ್ನಡದ ಕರ್ಮಕತೆ: ಕನ್ನಡಕ್ಕೆ ಸಂಬಂಧಿಸಿದಂತೆ ಈಗಿರುವ ಪದ್ಧತಿಯಲ್ಲಿ ಆವಶ್ಯಕ ಮತ್ತು ಐಚ್ಛಿಕ ವಿಷಯವಾಗಿ ಎರಡು ಸ್ತರಗಳಲ್ಲಿ ಕನ್ನಡವನ್ನು ಬೋಧಿಸಲಾಗುತ್ತಿದೆ. ಬಿಎ, ಬಿ.ಕಾಂ ಮತ್ತು ಬಿ.ಎಸ್‍ಸಿ ಕೋರ್ಸುಗಳಿಗೆ ಮೊದಲ ಹಾಗೂ ಎರಡನೇ ವರ್ಷಗಳಿಗೆ ಕನ್ನಡ ಆವಶ್ಯಕ ವಿಷಯವು ಆಧುನಿಕ ಭಾರತೀಯ ಭಾಷೆಗಳಲ್ಲಿ ಒಂದಾಗಿ ಕಲಿಸಲ್ಪಡುತ್ತಿದೆ. ಪ್ರತಿ ತರಗತಿಗಳಿಗೆ ವಾರಕ್ಕೆ 5 ತಾಸುಗಳ ಕಾರ್ಯಭಾರವಿದ್ದು ಬಿಎ, ಬಿ.ಕಾಂ, ಬಿ.ಎಸ್‍ಸಿ ಪ್ರಥಮ ತರಗತಿಗಳಿಗೆ 15 ಗಂಟೆ ಹಾಗೂ ದ್ವಿತೀಯ ತರಗತಿಗಳಿಗೆ 15 ಗಂಟೆಗಳಂತೆ ಒಟ್ಟು 30 ತಾಸುಗಳ ಕಾರ್ಯಭಾರ ಲಭ್ಯವಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ ತೃತೀಯ ತರಗತಿಗೂ ಒಂದು ಆಧುನಿಕ ಭಾರತೀಯ ಭಾಷೆ ಕಡ್ಡಾಯವಾಗಿರುವುದರಿಂದ ಕನ್ನಡಕ್ಕೆ ಮತ್ತೆ 5 ಗಂಟೆಗಳ ಕಾರ್ಯಭಾರ ಸಿಗುತ್ತಿದೆ. ಕಳೆದ ವರ್ಷದಿಂದ ಕನ್ನಡ ಆವಶ್ಯಕ ವಿಷಯ ಕಡ್ಡಾಯವಾಗಿ ಜಾರಿಗೆ ಬಂದಿದ್ದು ಕನ್ನಡೇತರ ವಿದ್ಯಾರ್ಥಿಗಳಿರುವ ಕೆಲವು ಪಟ್ಟಣದ ಕಾಲೇಜುಗಳಲ್ಲಿ ಅವರಿಗಾಗಿ ಮತ್ತೆ 5 ಗಂಟೆಗಳ ಕಾರ್ಯಭಾರ ಆರಂಭವಾಗಿದೆ. ಒಟ್ಟಾರೆ ಕನ್ನಡ ಆವಶ್ಯಕ ವಿಷಯಕ್ಕೆ 35 ರಿಂದ 40 ಗಂಟೆಗಳ ಕಾರ್ಯಭಾರ ಲಭ್ಯವಿದೆ.

ಕನ್ನಡ ಐಚ್ಛಿಕ ವಿಷಯವು ಬಿ.ಎ ಕೋರ್ಸಿನಲ್ಲಿ ಬೋಧಿಸಲ್ಪಡುತ್ತಿದ್ದು, ಪ್ರಥಮ ವರ್ಷ 5, ದ್ವಿತೀಯ ವರ್ಷ 5 ಹಾಗೂ ತೃತೀಯ ವರ್ಷ 10ರಂತೆ ಒಟ್ಟು 20 ಗಂಟೆಗಳ ಕಾರ್ಯಭಾರ ಲಭ್ಯವಿದೆ. ಮೂರೂ ಕೋರ್ಸುಗಳನ್ನು ಹೊಂದಿರುವ ಕಾಲೇಜುಗಳಲ್ಲಿ ಕನ್ನಡ ಆವಶ್ಯಕ 35 ಹಾಗೂ ಕನ್ನಡ ಐಚ್ಛಿಕ 20 ಗಂಟೆ ಸೇರಿ ವಾರಕ್ಕೆ ಒಟ್ಟು 55 ಗಂಟೆಗಳ ಕಾರ್ಯಭಾರ ಲಭ್ಯವಿರುತ್ತವೆ. ಒಬ್ಬರಿಗೆ ವಾರಕ್ಕೆ 16 ಗಂಟೆಯಂತೆ ಮೂರು ಪೂರ್ಣಾವಧಿ ಇಲ್ಲವೇ 6 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ.

ಸಿ.ಬಿ.ಸಿ.ಎಸ್ ಪದ್ಧತಿಯಲ್ಲಿ ಬಿ.ಎ, ಬಿ.ಕಾಂ ಮತ್ತು ಬಿ.ಎಸ್‍ಸಿ ತರಗತಿಗಳಿಗೆ ಕನ್ನಡ ಅವಶ್ಯಕ ಕಡ್ಡಾಯವಲ್ಲ. ಕೇವಲ ಒಂದು ವರ್ಷಕ್ಕೆ ಮಾತ್ರ ಕನ್ನಡ ಆವಶ್ಯಕ ವಿಷಯವಾಗಿ ಬೋಧಿಸಲ್ಪಡುತ್ತದೆ. ಅದೂ ಕೇವಲ 2 ತಾಸುಗಳ ಬೋಧನಾ ಕಾರ್ಯಭಾರವನ್ನು ನಿಗದಿಪಡಿಸಲಾಗಿದೆ. ಇದರಿಂದಾಗಿ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್‍ಸಿ ತರಗತಿಗಳಿಗೆ ಕನ್ನಡ ಆವಶ್ಯಕ ವಿಷಯದಲ್ಲಿ ಕೇವಲ 8 ಗಂಟೆಗಳ ಕಾರ್ಯಭಾರ ಲಭ್ಯವಾಗುತ್ತದೆ. ಕನ್ನಡ ಆವಶ್ಯಕ ವಿಷಯದಲ್ಲಿ ಈಗಿರುವ 35 ಗಂಟೆಗಳ ಕಾರ್ಯಭಾರದ ಜಾಗದಲ್ಲಿ ಕೇವಲ 8 ಗಂಟೆಗಳ ಕಾರ್ಯಭಾರ ಬಂದು, ಕನಿಷ್ಠ 28 ಗಂಟೆಗಳ ಕಾರ್ಯಭಾರದ ಕೊರತೆ ಉದ್ಭವಿಸುತ್ತದೆ. ಈಗಿರುವ ಕನ್ನಡ ಐಚ್ಛಿಕ ವಿಷಯದಿಂದ ಪ್ರತಿ ಪತ್ರಿಕೆಗೆ 5 ಗಂಟೆಗಳ ಬದಲಾಗಿ 6 ಗಂಟೆಗಳ ಕಾರ್ಯಭಾರ ಸಿ.ಬಿ.ಸಿ.ಎಸ್ ಪದ್ಧತಿಯಲ್ಲಿ ಲಭ್ಯವಿರುವುದರಿಂದ ಬಿಎ ಐಚ್ಛಿಕ ಕನ್ನಡ ವಿಷಯದಲ್ಲಿ ಹೊಸ ವ್ಯವಸ್ಥೆಯಲ್ಲಿ ಪ್ರಥಮ ವರ್ಷ 1, ದ್ವಿತೀಯ ವರ್ಷ 1 ಹಾಗೂ ತೃತೀಯ ವರ್ಷ 2 ಗಂಟೆಗಳ ಒಟ್ಟು 4 ಗಂಟೆಗಳ ಕಾರ್ಯಭಾರ ಹೆಚ್ಚುವರಿಯಾಗಿ ಲಭ್ಯವಿದೆ. ಆವಶ್ಯಕ ವಿಷಯದಲ್ಲಿ ಉಂಟಾಗುವ 28 ಗಂಟೆಗಳ ಕೊರತೆಯ ಕಾರ್ಯಭಾರದಲ್ಲಿ 4 ಗಂಟೆಗಳ ಹೆಚ್ಚುವರಿ ಕಾರ್ಯಭಾರವನ್ನು ಕಳೆದರೆ ಒಟ್ಟಾರೆ ಕನ್ನಡ ವಿಷಯದಲ್ಲಿ 24 ತಾಸುಗಳ ಕಾರ್ಯಭಾರದ ಕೊರತೆ ಉಂಟಾಗುತ್ತದೆ. ಸಿ.ಬಿ.ಸಿ.ಎಸ್ ಪದ್ಧತಿಯಲ್ಲಿ ಎರಡು ಬಗೆಯ ಪದವಿಗಳಿಗೆ ಅವಕಾಶವಿದ್ದು ಮೊದಲನೆಯದು ಸಾಮಾನ್ಯ ಪದವಿ ಎರಡನೆಯದು ಆನರ್ಸ್ ಪದವಿ. ವಿಷಯಾಧಾರಿತವಾಗಿ ಬಿಎ, ಬಿ.ಕಾಂ ಹಾಗೂ ಬಿ.ಎಸ್‍ಸಿ ಆನರ್ಸ್ ಪದವಿ ಕೋರ್ಸುಗಳನ್ನು ಆರಂಭಿಸಿದರೆ ಆನರ್ಸ್ಸ್ ವಿಷಯಕ್ಕೆ ಮೇಜರ್ ಮೈನರ್ ಪದ್ಧತಿಯಲ್ಲಿದ್ದಂತೆ ಪ್ರತಿ ತರಗತಿಗೆ 12 ಗಂಟೆಯಂತೆ ಮೂರು ತರಗತಿಗಳಿಗೆ 36 ಗಂಟೆಗಳ ಕಾರ್ಯಭಾರವನ್ನು ಪಡೆಯಬಹುದು. ಆದರೆ ಪ್ರಾಯೋಗಿಕವಾಗಿ ಆನರ್ಸ್ ಪದವಿ ಕೋರ್ಸುಗಳನ್ನು ಬೆರಳೆಣಿಕೆಯಷ್ಟು ಕಾಲೇಜುಗಳಲ್ಲಿ ಮಾತ್ರ ಆರಂಭಿಸಲು ಸಾಧ್ಯ.

ಸಂಕಷ್ಟಗಳ ಸರಮಾಲೆ

ಮೂರು ಕೋರ್ಸುಗಳಿರುವ ಪದವಿ ಕಾಲೇಜುಗಳಲ್ಲಿ ಕನಿಷ್ಠ 24 ಗಂಟೆಗಳ ಬೋಧನಾ ಕಾರ್ಯಭಾರ ಕಡಿಮೆಯಾದರೆ ಒಬ್ಬ ಪೂರ್ಣಾವಧಿ ಹಾಗೂ ಒಬ್ಬ ಅತಿಥಿ ಉಪನ್ಯಾಸಕರಿಗೆ ಕೆಲಸ ಉಳಿಯುವುದಿಲ್ಲ. ಐಚ್ಛಿಕ ಕನ್ನಡ ಇರಲಾರದೇ ಕೇವಲ ಆವಶ್ಯಕ ಕನ್ನಡ ಮಾತ್ರ ಇರುವ ಕಾಲೇಜುಗಳಲ್ಲಿ ಕೇವಲ 8 ತಾಸು ಕಾರ್ಯಭಾರ ಬಂದುಬಿಟ್ಟರೆ ಇಬ್ಬರು ಪೂರ್ಣಾವಧಿ ಅಥವಾ ನಾಲ್ವರು ಅತಿಥಿ ಉಪನ್ಯಾಸಕರಿಗೆ ಕೆಲಸವಿಲ್ಲದಿರುವುದಿಲ್ಲ. ಈ ಪದ್ಧತಿ ಜಾರಿಗೆ ಬಂದರೆ ಬಹುಪಾಲು ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರ ಇರುವುದಿಲ್ಲ. ಪೂರ್ಣಾವಧಿ ಪ್ರಾಧ್ಯಾಪಕರಿಗೂ ವಿ.ಆರ್.ಎಸ್ ಯೋಜನೆ ಜಾರಿಗೆ ಬರಬಹುದು. ಕನ್ನಡ ವಿಷಯಕ್ಕೆ ಮಂಜೂರಾದ ಹುದ್ದೆಗಳು ರದ್ದುಗೊಳ್ಳುತ್ತವೆ. ಕನ್ನಡ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗ ಕನಸಿನ ಮಾತಾಗುತ್ತದೆ.

ವಿಶ್ವವಿದ್ಯಾಲಯಗಳಲ್ಲಿ ಮಾರ್ಪಾಡುಗಳು

ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನೀತಿ ನಿರೂಪಣೆಗಳನ್ನು ಯಥಾವತ್ತಾಗಿ ಜಾರಿಗೆ ತಂದರೆ ಆಗಬಹುದಾದ ಸಮಸ್ಯೆಗಳನ್ನು ಪರಿಗಣಿಸಿ ಬಹುತೇಕ ವಿಶ್ವವಿದ್ಯಾಲಯಗಳು ಮೊದಲಿನಂತೆ ಐಚ್ಛಿಕ 3 ವಿಷಯಗಳು ಹಾಗೂ ಎರಡು ಭಾಷೆಗಳ ಕಲಿಕೆಯನ್ನು ಮುಂದುವರೆಸಿವೆ. ಇದರಿಂದಾಗಿ ವಿಜ್ಞಾನ, ವಾಣಿಜ್ಯ ಹಾಗೂ ಸಮಾಜ ವಿಜ್ಞಾನಗಳ ವಿಷಯಗಳಿಗೆ ಯಾವುದೇ ಆತಂಕ ಎದುರಾಗಿಲ್ಲ. ಯಾಕೆಂದರೆ ಕಾರ್ಯಭಾರ ಎಂದಿನಂತೆ ಮುಂದುವರೆದಿದೆ. ಆದರೆ ಭಾಷಾ ವಿಷಯಗಳ ಕಾರ್ಯಭಾರ ನಿಗದಿಪಡಿಸುವಲ್ಲಿ ಒಂದು ತರಗತಿಗೆ 5 ತಾಸುಗಳ ಬದಲಾಗಿ ಕೆಲವೊಂದು ವಿ.ವಿ.ಗಳು 3 ತಾಸು, ಕೆಲವು ವಿ.ವಿ.ಗಳು 4 ತಾಸುಗಳನ್ನು ನಿಗದಿಪಡಿಸಿವೆ.

ಸಾಂಸ್ಕೃತಿಕ ಪರಿಣಾಮಗಳು

ಇದು ಕೇವಲ ಕಾರ್ಯಭಾರ ಮತ್ತು ಉದ್ಯೋಗಾವಕಾಶದ ಪ್ರಶ್ನೆಯಲ್ಲ. ಪದವಿ ಹಂತದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಹೋರಾಟಗಳ ಅಧ್ಯಯನಕ್ಕೆ ಆ ಮೂಲಕ ನಾಡು ನುಡಿ ಕುರಿತಂತೆ ಹೊಸ ತಲೆಮಾರಿನಲ್ಲಿ ಸಹಜವಾಗಿ ಅರಳಬೇಕಾದ ಅರಿವು ಚಿಂತನೆ ಹಾಗೂ ಮುನ್ನೋಟಗಳಿಗೆ ಹಿನ್ನಡೆಯಾಗುತ್ತದೆ. ಭಾಷೆ ಎಂದರೆ ಆಲೋಚನಾ ವಿಧಾನ ಮತ್ತು ಅಭಿವ್ಯಕ್ತಿ ವಿಧಾನ. ವಿಜ್ಞಾನ, ವಾಣಿಜ್ಯ ಹಾಗೂ ಸಮಾಜ ಶಾಸ್ತ್ರಗಳು ಕೂಡ ಭಾಷೆಯಲ್ಲಿಯೇ ವ್ಯಕ್ತವಾಗಬೇಕು. ವಿದ್ಯಾರ್ಥಿಗಳಿಗೆ ಭಾಷಾ ಪ್ರಾವೀಣ್ಯ ಇರಬೇಕಾದದ್ದು ಅಲಂಕಾರಕ್ಕಾಗಿ ಅಲ್ಲ, ತಮ್ಮ ವಿಷಯದಲ್ಲಿ ಸಮರ್ಪಕವಾಗಿ ಆಲೋಚಿಸುವುದಕ್ಕೆ, ತಮ್ಮೊಳಗೆ ಚಿಂತಿಸಿ ಜ್ಞಾನವನ್ನು ಸಂಪಾದಿಸುವುದಕ್ಕೆ ಹಾಗೂ ಆ ಜ್ಞಾನದ ಅಭಿವ್ಯಕ್ತಿಗೆ ಎಂಬ ತಾತ್ವಿಕ ಕಾರಣಕ್ಕೆ ಭಾಷಾ ವಿಷಯವನ್ನು ಆವಶ್ಯಕ ಎಂದು ಕರೆಯಲಾಗಿದೆ. ಬದುಕು ಗಾಳಿ, ನೀರು, ಆಹಾರದಷ್ಟೇ ಜ್ಞಾನ ಸಂಪಾದನೆ ಮತ್ತು ಅರಿವಿನ ವಿಕಾಸಕ್ಕೆ

Pc : DU Beat

ಭಾಷೆ, ಸಾಹಿತ್ಯ ಸಂಸ್ಕೃತಿಗಳ ಅಧ್ಯಯನ ಅವಶ್ಯವಾದುದು ಎಂಬ ತಾತ್ವಿಕತೆ ಇಲ್ಲಿಯವರೆಗಿನ ಶಿಕ್ಷಣಪದ್ಧತಿಯ ಅಡಿಪಾಯವಾಗಿತ್ತು. ಈಗ ಆ ಅಡಿಪಾಯವನ್ನೇ ತಪ್ಪಿಸಲಾಗುತ್ತದೆ. ಸಾಮಾನ್ಯವಾಗಿ ಕನ್ನಡ ಆವಶ್ಯಕ ವಿಷಯದ ಪಠ್ಯ ಕ್ರಮದಲ್ಲಿ ಸಾವಿರಾರು ವರುಷಗಳ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಸಮೃದ್ಧ ಚರಿತ್ರೆಯನ್ನು ಪರಿಚಯಿಸಲಾಗುತ್ತದೆ. ಕನ್ನಡದಲ್ಲಿ ಬಳಕೆಗೊಂಡ ಎಲ್ಲ ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸುವುದು, ಪ್ರಮುಖ ಕವಿ, ಲೇಖಕರ ಬರಹಗಳ ಉತ್ಕೃಷ್ಟ ಭಾಗಗಳನ್ನು ಓದಿಸುವುದು ಮುಖ್ಯ ಉದ್ದೇಶಗಳು. ಪರಂಪರೆಯೊಂದಿಗೆ ಅನುಸಂಧಾನಗೊಳ್ಳುತ್ತ ಅದನ್ನು ಸ್ವೀಕರಿಸುವ, ನಿರಾಕರಿಸುವ ಮತ್ತು ಪುನರ್ ಸೃಷ್ಟಿಸುವ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯುತ್ತಿತ್ತು. ಸಮುದಾಯವೊಂದರ, ಪರಂಪರೆಯ ಜೀವಂತ ಮುಂದುವರಿಕೆಯ ಪ್ರಕ್ರಿಯೆಗೆ ಈಗ ತಡೆಯೊಡ್ಡಿದಂತಾಗುತ್ತದೆ. ಕನ್ನಡ ಸಾಹಿತ್ಯ ಕೇವಲ ಮನರಂಜನೆಯ ಸಾಧನವಾಗಿರದೆ, ಕನ್ನಡ ಸಮುದಾಯ ಎದುರಿಸಿದ ಎಲ್ಲ ಅಸಮಾನತೆ, ತಾರತಮ್ಯ, ಸಂಕಟ ಬಿಕ್ಕಟ್ಟುಗಳಿಗೆ ಸ್ಪಂದಿಸುತ್ತ ಸಮಾಜೋ ರಾಜಕೀಯ, ಆರ್ಥಿಕ ವಾಸ್ತವಗಳನ್ನು ಅನುಸಂಧಾನಿಸುತ್ತ ನೊಂದವರ ಬೆಂದವರ ಪರವಾದ ಹೋರಾಟವೇ ಆಗಿದೆ. ಸಾಹಿತ್ಯಕ ಪಠ್ಯ ಸದಾ ಪ್ರಭುತ್ವ ವಿರೋಧಿ ಜನಪರ ನಿಲುವನ್ನು ಉಳಿಸಿಕೊಂಡು ಬಂದಿವೆ. ಸಾಹಿತ್ಯದ ಅಧ್ಯಯನದ ಮೂಲಕ ದಕ್ಕುವ ಸಮಾನತೆ ಪಾಠಕ್ಕೆ ಕೂಡ ಅಡೆತಡೆ ಎದುರಾಗಿದೆ. ಭಾಷಾ ಅಧ್ಯಯನದ ಸಹಾಯದಿಂದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ವಲಯದಿಂದಲೂ ದೊಡ್ಡ ಲೇಖಕರು ಹುಟ್ಟಲು ಅವಕಾಶ ಕಲ್ಪಿಸಿದ್ದವು. ಈಗ ಅಂಥ ಅವಕಾಶ ಇಲ್ಲವಾಗುತ್ತದೆ.

ಕನ್ನಡ ತಲೆಯೆತ್ತುವ ಬಗೆ

ಸಿ.ಬಿ.ಸಿ.ಎಸ್ ಪಠ್ಯಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಜಾರಿಗೆ ತಂದರೆ ಉನ್ನತ ಶಿಕ್ಷಣದಲ್ಲಿ ಕನ್ನಡ ವಿಷಯ ಮತ್ತು ಕನ್ನಡ ಬೋಧಕರು ಉಳಿಯಬಹುದು. ಮೊದಲನೆಯದಾಗಿ ನಾಲ್ಕು ಸೆಮಿಸ್ಟರ್‌ಗಳಿಗೆ ಕನ್ನಡವನ್ನು ಕಡ್ಡಾಯಗೊಳಿಸುವುದು ಹಾಗೂ ಪ್ರತಿ ತರಗತಿಗೆ ಕನಿಷ್ಠ 5 ಗಂಟೆಗಳ ಕಾರ್ಯಭಾರವನ್ನು ನಿಗದಿಗೊಳಿಸುವುದು. ಇದರಿಂದಾಗಿ ಬಿ.ಎ, ಬಿಕಾಂ, ಮತ್ತು ಬಿ.ಎಸ್‍ಸಿ ಕೋರ್ಸುಗಳ ಪ್ರಥಮ ಹಾಗೂ ದ್ವಿತೀಯ ಒಟ್ಟು 6 ತರಗತಿಗಳಲ್ಲಿ ಪ್ರತಿ ತರಗತಿಗಳಿಗೆ 5 ಗಂಟೆಯಂತೆ 30 ಗಂಟೆಗಳ ಕಾರ್ಯಭಾರ ಲಭ್ಯವಾಗುತ್ತದೆ. ಕನ್ನಡೇತರ ವಿದ್ಯಾರ್ಥಿಗಳಿರುವ ಕೆಲವು ಕಾಲೇಜುಗಳಲ್ಲಿಯಾದರೂ ಮತ್ತೆ 5 ಗಂಟೆಗಳ ಕಾರ್ಯಭಾರ ಹೆಚ್ಚುತ್ತದೆ. ಎರಡನೆಯದಾಗಿ ಬಿ.ಎ. ಅಂತಿಮ ವರ್ಷದಲ್ಲಿಯೂ ಒಂದು ಭಾಷೆಯ ಅಧ್ಯಯನಕ್ಕೆ ಅವಕಾಶ ಕಲ್ಪಿಸುವುದು. ಮತ್ತೆ 5 ತಾಸುಗಳ ಕಾರ್ಯಭಾರ ಲಭ್ಯವಾಗುತ್ತದೆ. ಮೂರನೆಯದಾಗಿ ಯು.ಜಿ.ಸಿ ನಿಯಮಾವಳಿಯಲ್ಲಿ ಅವಕಾಶವಿರುವಂತೆ 40 ರಿಂದ 50 ವಿದ್ಯಾರ್ಥಿಗಳಿಗೆ ವಿಭಾಗ ಮಾಡಲು ಅವಕಾಶ ನೀಡುವುದು. ಇದರಿಂದ ಕೆಲವು ತರಗತಿಗಳಲ್ಲಾದರೂ ಡಿವಿಜನ್‍ಗಳು ಆರಂಭವಾಗಿ ಮತ್ತೆ 5 ಗಂಟೆಗಳ ಕಾರ್ಯಭಾರ ಹೆಚ್ಚುತ್ತದೆ. ನಾಲ್ಕನೆಯದಾಗಿ ನಾಡು-ನುಡಿ ಎಂಬ ಕಾರಣಕ್ಕೆ ಕನ್ನಡ ಬಿ.ಎ ಆನರ್ಸ್ ಆರಂಭಿಸಲು ಕನಿಷ್ಟ ವಿದ್ಯಾರ್ಥಿಗಳ ಸಂಖ್ಯೆಯನ್ನು 5ಕ್ಕೆ ನಿಗದಿಪಡಿಸುವುದು. ಇದರಿಂದ ಬಹುಪಾಲು ಕಾಲೇಜುಗಳಲ್ಲಿ ಆನರ್ಸ್ ಆರಂಭಿಸಬಹುದು.

ಮರಣ ಶಾಸನ

ಈ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಎಸ್.ಜಿ. ಸಿದ್ದರಾಮಯ್ಯನವರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರು ಸಿ.ಬಿ.ಸಿ.ಎಸ್ ಶಿಕ್ಷಣ ಪದ್ಧತಿಯಲ್ಲಿ ಕನ್ನಡ ವಿಷಯ ಹಾಗೂ ಬೋಧನಾ ಕಾರ್ಯಭಾರಕ್ಕೆ ಉಂಟಾಗುತ್ತಿರುವ ತೊಡಕುಗಳನ್ನು ಬಗೆಹರಿಸಲು ಹಾಗೂ ಕನ್ನಡವನ್ನು ಕಡ್ಡಾಯ ವಿಷಯವಾಗಿ ಬೋಧಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ 21 ನೇ ಸಾಮಾನ್ಯ ಸಭೆಯಲ್ಲಿ ಇಬ್ಬರು ಕುಲಪತಿಗಳನ್ನೊಳಗೊಂಡ ಸಮಿತಿಯು ಇವರ ಮನವಿಯನ್ನು ತಿರಸ್ಕರಿಸಿ ಈ ಕೆಳಗಿನಂತೆ ತೀರ್ಮಾನಿಸಿದೆ. “ಈ ಕುರಿತು ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವಂತೆ ಭಾಷೆಯ ಆಯ್ಕೆಗೆ ವಿದ್ಯಾರ್ಥಿಗಳ ಅಪೇಕ್ಷೆಯಂತೆ ಅವಕಾಶ ನೀಡಿ ಮುಂದುವರೆಯುವಂತೆ ತೀರ್ಮಾನಿಸಲಾಯಿತು”. ಈ ತೀರ್ಮಾನವು ಕನ್ನಡದ ಪಾಲಿಗೆ ಮರಣಶಾಸನವಾಗಿದೆ. ಈ ವಿಷಯವನ್ನು ಸದ್ಯದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಇವರ ಗಮನಕ್ಕೆ ತರಲಾಗಿದೆ.

ಹೋರಾಟಗಳು

ಈ ಎಲ್ಲ ಸಮಸ್ಯೆ ಸಂಕಟಗಳಿಗೆ ಪರಿಹಾರ ಕಂಡುಕೊಳ್ಳಲು ಹೋರಾಟಗಳು ಆರಂಭವಾಗಿವೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್ತು ಹೋರಾಟವನ್ನು ತೀವ್ರಗೊಳಿಸಿದ್ದು ಕರ್ನಾಟಕದ ಬಹುಪಾಲು ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಾಪಕರು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಮುಖ್ಯ ಮಂತ್ರಿಗಳಿಗೆ ನಾಡಿನ ಘನತೆಯ ಹಿರಿಯ ಜೀವಗಳು ಪತ್ರ ಬರೆದು ಕನ್ನಡಕ್ಕೆ ಒದಗಿರುವ ಸಂಕಟವನ್ನು ಪರಿಹರಿಸಲು ವಿನಂತಿಸಿದ್ದಾರೆ. ಚೆಂಡು ಸರಕಾರದ ಅಂಗಳದಲ್ಲಿದೆ. ಉಪಚುನಾವಣೆ ಮುಗಿದಿದ್ದು ಸರಕಾರ ಈ ನಿಟ್ಟಿನಲ್ಲಿ ಕ್ರಮ ಜರುಗಿಸಬಹುದೆಂಬ ಆಶಾಭಾವ ಎಲ್ಲರದು.

ಡಾ.ಎಂ.ಡಿ.ಒಕ್ಕುಂದ

ಕವಿ- ಲೇಖಕ ಎಂ.ಡಿ.ಒಕ್ಕುಂದ ಅವರು ಕನ್ನಡ ಅಧ್ಯಾಪಕರು. ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ರೆಕ್ಕೆ ಗರಿಗಳ ಬಿಚ್ಚಿ, ತುಳುಕು ಅವರ ಕವನ ಸಂಕಲನಗಳು. ಸಾಹಿತ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಆಂದೋಲನಗಳಲ್ಲಿ ಸಕ್ರಿಯವಾಗಿರುವ ಆರ್ಗ್ಯಾನಿಕ್ ಇಂಟಲೆಕ್ಚುಯಲ್.


ಇದನ್ನೂ ಓದಿ: ಮಗು ಕನಸು ಕಾಣುವ-ಚಿಂತಿಸುವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಹೋರಾಟದ ಸುತ್ತ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...