ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿ ಪಕ್ಷ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ನಾಯಕ ಪ್ರಫುಲ್ ಪಟೇಲ್ ವಿರುದ್ಧ 2017ರಲ್ಲಿ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮುಕ್ತಾಯಗೊಳಿಸಿದೆ.
ಮೇ 2017ರಲ್ಲಿ, ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಸಿಬಿಐ, ಏರ್ ಇಂಡಿಯಾಕ್ಕೆ ವಿಮಾನವನ್ನು ಬಾಡಿಗೆಗೆ ನೀಡುವಲ್ಲಿನ ಅಕ್ರಮಗಳ ಆರೋಪಗಳ ತನಿಖೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಏರ್ ಇಂಡಿಯಾದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಸುಮಾರು ಏಳು ವರ್ಷಗಳ ಕಾಲ ಪ್ರಕರಣದ ತನಿಖೆ ನಡೆಸಿದ ನಂತರ, ಸಿಬಿಐ ತನಿಖೆಯನ್ನು ಮುಕ್ತಾಯಗೊಳಿಸಿದೆ. ಪ್ರಫುಲ್ ಪಟೇಲ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಮತ್ತು ಏರ್ ಇಂಡಿಯಾದ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣವನ್ನು ಮುಚ್ಚಿ ಹಾಕಿರುವ ಕುರಿತು ವರದಿಯನ್ನು ಮಾ.2024ರಲ್ಲಿ ಸಕ್ಷಮ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದೆ.
ಪ್ರಫುಲ್ ಪಟೇಲ್ ಈ ಹಿಂದೆ ಮಾತನಾಡುತ್ತಾ, ಜೂನ್ 23ರಂದು ನಾನು ಎನ್‌ಡಿಎ ಸಭೆಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಪಾಟ್ನಾಕ್ಕೆ ಹೋದಾಗ ನನಗೆ ನಗು ಬಂತು. ಪವಾರ್ ಸಾಹೇಬರ ಜೊತೆ ಪಾಟ್ನಾದಲ್ಲಿ ನಡೆದ ಜಂಟಿ ವಿರೋಧ ಪಕ್ಷದ ಸಭೆಗೆ ಹೋಗಿದ್ದ ನನಗೆ ಅಲ್ಲಿನ ದೃಶ್ಯ ನೋಡಿ ನಗು ಬಂತು. ಅಲ್ಲಿ 17 ವಿರೋಧ ಪಕ್ಷಗಳಿದ್ದವು, ಅವುಗಳಲ್ಲಿ ಏಳು ಪಕ್ಷಗಳು ಲೋಕಸಭೆಯಲ್ಲಿ ಕೇವಲ 1 ಸಂಸದರನ್ನು ಹೊಂದಿದ್ದವು ಮತ್ತು ಒಂದು ಪಕ್ಷಕ್ಕೆ ಸಂಸದರೇ ಇರಲಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಪಟೇಲ್ ಇಂಡಿಯಾ ಮೈತ್ರಿ ಕೂಟವನ್ನು ಲೇವಡಿ ಮಾಡಿಕೊಂಡು ಹೇಳಿದ್ದಾರೆ.
ಫೆಬ್ರವರಿ 15 ರಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ರಾಜ್ಯಸಭಾ ಚುನಾವಣೆಗೆ ಪಟೇಲ್ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿತ್ತು.
ಆಗಿನ ನಾಗರಿಕ ವಿಮಾನಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರು ಅಧಿಕಾರಿಗಳ ಜೊತೆ ಸೇರಿಕೊಂಡು ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ಗುತ್ತಿಗೆ ನೀಡಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡರು ಎಂದು ಆರೋಪಿಸಲಾಗಿದೆ. ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ವಿಲೀನದ ನಂತರ ಸಾರ್ವಜನಿಕ ವಲಯದ ಉದ್ಯಮವಾದ ನ್ಯಾಷನಲ್ ಏವಿಯೇಷನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NACIL)ನ್ನು ರಚಿಸಲಾಯಿತು.
ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸಂಸದೀಯ ಸಮಿತಿಯು ಜನವರಿ 21, 2010ರ ತನ್ನ ವರದಿಯಲ್ಲಿ ಮತ್ತು ಸಾರ್ವಜನಿಕ ಉದ್ಯಮಗಳ ಸಮಿತಿಯು ತನ್ನ ಮಾರ್ಚ್ 12, 2010ರ ವರದಿಯಲ್ಲಿ ಅವ್ಯವಹಾರದ ಬಗ್ಗೆ ಬೆಳಕು ಚೆಲ್ಲಿದೆ. ಏರ್ ಇಂಡಿಯಾಗೆ 15 ದುಬಾರಿ ವಿಮಾನಗಳನ್ನು ಬಾಡಿಗೆಗೆ ನೀಡಲಾಗಿದ್ದು, ಇದಕ್ಕಾಗಿ ಪೈಲಟ್‌ಗಳನ್ನು ಸಹ ಸಿದ್ಧಗೊಳಿಸಿಲ್ಲ, ಇದರಿಂದಾಗಿ ಕಂಪನಿಗೆ ಭಾರಿ ನಷ್ಟ ಉಂಟಾಗಿದೆ ಎಂದು ಹೇಳಿತ್ತು.
ಇದನ್ನು ಓದಿ: ಅರವಿಂದ್ ಕೇಜ್ರಿವಾಲ್‌ಗೆ ಕಸ್ಟಡಿಯಲ್ಲಿ ಕಿರುಕುಳ ನೀಡಲಾಗುತ್ತಿದೆ: ಪತ್ನಿ ಆರೋಪ


