ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ ಮರುಕಳಿಸಿದೆ.
ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್ ಆಫ್ ದಿ ನೇಟಿವಿಟಿಯ ಹೊರಗೆ ಕ್ರಿಸ್‌ಮಸ್ ಮರವನ್ನು ಬೆಳಗಿಸಲಾಗಿದೆ. ಗಾಝಾದ ನರಮೇಧದ ನೋವಿನಿಂದ ಕಳೆದ ಎರಡು ವರ್ಷಗಳಲ್ಲಿ ಮಂಕಾಗಿದ್ದ ಜನರ ಮನಸ್ಸಿನಲ್ಲಿ, ಆ ಬೆಳಕು ಈ ಕೊಂಚ ಭರವಸೆ ಮತ್ತು ಸಮೃದ್ಧಿಯ ಕಿರಣವನ್ನು ಮೂಡಿಸಿದೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ಈ ಬಾರಿ ಕ್ರಿಸ್‌ಮಸ್ ಮರವನ್ನು ಬೆಳಗಿದ್ದರೂ, ಜನರಿಲ್ಲಿ ಈ ಹಿಂದಿನ ಸಂಭ್ರಮ ಇಲ್ಲ. ಜನರು ಕುಣಿದು ಕುಪ್ಪಳಿಸುವ ಮೂಲಕ ಹಬ್ಬದ ಸಂಭ್ರವನ್ನು ಅನುಭವಿಸುತ್ತಿದ್ದರು. ಆದರೆ, ಈ ಬಾರಿ ಕೇವಲ ಶಾಂತಿಯುತ ಪ್ರಾರ್ಥನೆಯಲ್ಲಿ ಮಾತ್ರ ತೊಡಗಿಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.
ಗಾಝಾ ಮತ್ತು ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸಿದ ಸತತ ಎರಡು ವರ್ಷಗಳ ನರಮೇಧ ಮತ್ತು ಈಗಲೂ ಪಶ್ಚಿಮ ದಂಡೆಯಲ್ಲಿ ನಡೆಸುತ್ತಿರುವ ದೌರ್ಜನ್ಯದಿಂದ ಬೆಥ್ಲೆಹೆಮ್‌ಗೆ ಭೇಟಿ ನೀಡುವ ಜನರ ಸಂಖ್ಯೆ ಕಡಿಮೆಯಾಗಿದೆ. ಇದು ಅಲ್ಲಿನ ಪ್ರವಾಸೋದ್ಯಮದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದೆ ಎಂದು ವರದಿ ಹೇಳಿದೆ.
ನಿರುದ್ಯೋಗವು ಶೇಕಡ 34ರಷ್ಟಿದೆ ಮತ್ತು ಬಡತನ ರೇಖೆಯ ಕೆಳಗೆ ವಾಸಿಸುವವರ ಸಂಖ್ಯೆ ಹೆಚ್ಚಾಗಿದೆ. ಶೇಕಡ 40ಕ್ಕೂ ಹೆಚ್ಚು ಜನರು ಜೀವಿಸಲು ಕಷ್ಟಪಡುತ್ತಿದ್ದಾರೆ ಎಂದು ಅಲ್-ಜಝೀರಾ ವರದಿ ತಿಳಿಸಿದೆ.
“ಕ್ರಿಸ್‌ಮಸ್ ಹೇಗಿರಬೇಕು ಎಂಬ ಸಂದೇಶವನ್ನು ನಾವು ಜಗತ್ತಿಗೆ ಸಾರುತ್ತೇವೆ. ಈ ವರ್ಷ, ಕ್ರಿಸ್‌ಮಸ್ ಶಾಂತಿಯುತವಾಗಿದ್ದರೆ, ಅದು ಇಡೀ ಜಗತ್ತಿಗೆ ಒಳ್ಳೆಯ ಸಂದೇಶವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಸ್ಥಳೀಯ ಆಭರಣ ವಿನ್ಯಾಸಕಿ ನಾಡಿಯಾ ಹಜ್‌ಬೌನ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದ್ದ ಹಿನ್ನೆಲೆ, ಕಳೆದ ಎರಡು ವರ್ಷಗಳ ಕಾಲ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ ಕಳೆಗುಂದಿತ್ತು. ನಮ್ಮ ಸಹೋದರರು ಸಾಯುತ್ತಿರುವಾಗ ನಾವು ಹೇಗೆ ಸಂಭ್ರಮಪಡಲಿ ಎಂದು ಮಾನವೀಯ ಮನಸ್ಸುಳ್ಳು ಬೆಥ್ಲೆಹೆಮ್‌ನ ಜನರು ಪ್ರಶ್ನಿಸಿದ್ದರು. ಬೀದಿಗಿಳಿದು ಇಸ್ರೇಲ್‌ನ ಆಕ್ರಮಣವನ್ನು ಪ್ರತಿಭಟಿಸಿದ್ದರು.
ಕ್ಯಾಥೋಲಿಕ್ ಪಂಗಡದ ಪರಮೋಚ್ಚ ನಾಯಕರಾಗಿದ್ದ ದಿವಂಗತ ಪೋಪ್ ಫ್ರಾನ್ಸಿಸ್ ಅವರು ಇಸ್ರೇಲ್ ಆಕ್ರಮಣವನ್ನು ತೀವ್ರವಾಗಿ ಖಂಡಿಸಿದ್ದರು. ಗಾಝಾ ಜನತೆಯ ಜೊತೆ ನಿಲ್ಲುವಂತೆ ಜಾಗತಿಕ ಕ್ರೈಸ್ತ ಸಮುದಾಯಕ್ಕೆ ಕರೆ ಕೊಟ್ಟಿದ್ದರು. ಕದನ ವಿರಾಮಕ್ಕೆ ಆಗ್ರಹಿಸಿದ್ದರು.


