ಉತ್ತರ ಗಾಜಾಗೆ ಪ್ಯಾಲೆಸ್ಟೀನಿಯನ್ನರನ್ನು ಹಿಂತಿರುಗಿಸಲು ಅವಕಾಶ ನೀಡುವ ಯೋಜನೆಗಳನ್ನು ನಿಲ್ಲಿಸುತ್ತಿರುವುದಾಗಿ ಇಸ್ರೇಲ್ ಭಾನುವಾರ ಘೋಷಿಸಿದ್ದು, ಕದನ ವಿರಾಮ ಒಪ್ಪಂದವನ್ನು ಫ್ಯಾಲೆಸ್ತೀನ್ ಪ್ರತಿರೋಧ ಗುಂಪು ಹಮಾಸ್ ಉಲ್ಲಂಘಿಸಿದೆ ಎಂದು ಅದು ಆರೋಪಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕದನ ವಿರಾಮ ಉಲ್ಲಂಘನೆ
ಶನಿವಾರ, ಹಮಾಸ್ ಗಾಜಾದಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿದ್ದ ನಾಲ್ಕು ಮಹಿಳಾ ಇಸ್ರೇಲಿ ಸೈನಿಕರನ್ನು ಬಿಡುಗಡೆ ಮಾಡಿತು. ಜನವರಿ 19 ರಂದು ಜಾರಿಗೆ ಬಂದ ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇದು ಎರಡನೇ ಒತ್ತೆಯಾಳು ವಿನಿಮಯವಾಗಿದ್ದು, ಪರಿಣಾಮ 15 ತಿಂಗಳ ಹಿಂದೆ ಪ್ರಾರಂಭವಾದ ಸಂಘರ್ಷವನ್ನು ವಿರಾಮಗೊಳಿಸಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕದನ ಒಪ್ಪಂದಕ್ಕೆ ಬಂದ ಕೂಡಲೇ, ಗಾಜಾದಲ್ಲಿ ಇರಿಸಲಾಗಿದ್ದ ಮೂವರು ಒತ್ತೆಯಾಳುಗಳಿಗೆ ಬದಲಾಗಿ ಇಸ್ರೇಲ್ 90 ಪ್ಯಾಲೆಸ್ತೀನಿ ಕೈದಿಗಳನ್ನು ಬಿಡುಗಡೆ ಮಾಡಿತ್ತು. “ಹಿಂದಿರುಗಿ ಬಂದ ನಾಲ್ವರು ಒತ್ತೆಯಾಳುಗಳು ಐಡಿಎಫ್ [ಇಸ್ರೇಲ್ ರಕ್ಷಣಾ ಪಡೆಗಳು] ಮತ್ತು ಐಎಸ್ಎ [ಇಸ್ರೇಲಿ ಭದ್ರತಾ ಸಂಸ್ಥೆ] ಪಡೆಗಳೊಂದಿಗೆ ಇಸ್ರೇಲಿ ಪ್ರದೇಶವನ್ನು ದಾಟಿದ್ದಾರೆ” ಎಂದು ಇಸ್ರೇಲ್ ಸರ್ಕಾರ ಶನಿವಾರ ತಿಳಿಸಿತ್ತು.
ಆದಾಗ್ಯೂ, ಭಾನುವಾರ ಅರ್ಬೆಲ್ ಯೆಹುದ್ ಎಂಬ ಮಹಿಳಾ ನಾಗರಿಕ ಎಂಬ ಮತ್ತೊಬ್ಬ ಒತ್ತೆಯಾಳು ಬಿಡುಗಡೆಯಾಗಬೇಕಿತ್ತು. ಆದರೆ, ಹಮಾಸ್ ಯೆಹೂದ್ ಅವರನ್ನು ಬಿಡುಗಡೆ ಮಾಡದಿರುವುದು ಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರರು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕದನ ವಿರಾಮ ಉಲ್ಲಂಘನೆ
ಅದಾಗ್ಯೂ, ಹಮಾಸ್ ಇದನ್ನು ತಾಂತ್ರಿಕ ಸಮಸ್ಯೆ ಎಂದು ಕರೆದಿದ್ದು, ಒತ್ತೆಯಾಳು ಯೆಹೂದ್ ಸುರಕ್ಷಿತವಾಗಿದ್ದಾರೆ ಎಂದು ಮಧ್ಯವರ್ತಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದೆ. ಮುಂದಿನ ಶನಿವಾರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಅದು ಹೇಳಿದೆ. ಆದರೆ, ಸಮಸ್ಯೆ ಬಗೆಹರಿಯುವವರೆಗೆ ಪ್ಯಾಲೆಸ್ತೀನಿಯನ್ನರನ್ನು ಉತ್ತರ ಗಾಜಾಗೆ ಹಿಂತಿರುಗಲು ಅವಕಾಶ ನೀಡಲಾಗುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಹಾಗಾಗಿ, ಉತ್ತರ ಗಾಝಾಕ್ಕೆ ಮರಳುವ ಆಶಯದೊಂದಿಗೆ ರಸ್ತೆಗಳಲ್ಲಿ ಜಮಾಯಿಸಿದ್ದ ಜನಸಮೂಹದ ಮೇಲೆ ಇಸ್ರೇಲಿ ಮಿಲಿಟರಿ ಗುಂಡು ಹಾರಿಸಿದೆ ಎಂದು ವರದಿಯಾಗಿದೆ. ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡರು ಎಂದು ಎಪಿ ವರದಿ ಮಾಡಿದೆ.
ಅದಾಗ್ಯೂ, ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್ ಸರ್ಕಾರ ಶನಿವಾರ ಇನ್ನೂರು ಕೈದಿಗಳನ್ನು ಬಿಡುಗಡೆ ಮಾಡಿದೆ ಎಂದು ಹಮಾಸ್ ಬಿಡುಗಡೆ ಮಾಡಿದ ಪಟ್ಟಿಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಆದರೆ, ಇಸ್ರೇಲಿಗಳನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾದವರನ್ನು ಮನೆಗೆ ಮರಳಲು ಅನುಮತಿಸಲಾಗುವುದಿಲ್ಲ ಎಂದು ಅದು ತಿಳಿಸಿದೆ. ಬಿಡುಗಡೆಯಾದವರಲ್ಲಿ ಸುಮಾರು 70 ಜನರನ್ನು ಅಲ್ಲಿಂದ ಈಜಿಪ್ಟ್ ಮತ್ತು ಇನ್ನೊಂದು ದೇಶಕ್ಕೆ ಗಡೀಪಾರು ಮಾಡಲಾಗುವುದು ಎಂದು ಪ್ಯಾಲೆಸ್ತೀನಿ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 15 ರಂದು, ಕತಾರ್ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಮತ್ತು ಒತ್ತೆಯಾಳು ವಿನಿಮಯ ಒಪ್ಪಂದಕ್ಕೆ ಬರಲಾಗಿದೆ ಎಂದು ಘೋಷಿಸಿತು. ಈ ಮಾತುಕತೆಗಳಲ್ಲಿ ಕತಾರ್ ಪ್ರಮುಖ ಮಧ್ಯವರ್ತಿಯಾಗಿತ್ತು. ಜನವರಿ 18 ರಂದು ಇಸ್ರೇಲಿ ಸಚಿವ ಸಂಪುಟ ಈ ಒಪ್ಪಂದಕ್ಕೆ ಅನುಮೋದನೆ ನೀಡಿತು.
ಭಾನುವಾರ ಪ್ರಾರಂಭವಾದ ಕದನ ವಿರಾಮದ ಮೊದಲ ಆರು ವಾರಗಳ ಹಂತದಲ್ಲಿ ನೂರಾರು ಪ್ಯಾಲೆಸ್ತೀನಿ ಬಂಧಿತರಿಗೆ ಬದಲಾಗಿ 33 ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಈ ಹಂತದಲ್ಲಿ ಇಸ್ರೇಲ್ ಸೇನೆಯು ಗಾಜಾದ ಎಲ್ಲಾ ಜನನಿಬಿಡ ಪ್ರದೇಶಗಳಿಂದ ಹಿಂದೆ ಸರಿಯಬೇಕಾಗುತ್ತದೆ ಮತ್ತು ಮುತ್ತಿಗೆ ಹಾಕಿದ ಪ್ರದೇಶಕ್ಕೆ ಮಾನವೀಯ ನೆರವು ನೀಡಲಾಗುತ್ತದೆ.
ಒಪ್ಪಂದವು ಲಕ್ಷಾಂತರ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯನ್ನರು ಗಾಜಾದ ತಮ್ಮ ಪ್ರದೇಶಗಳಿಗೆ ಮರಳಲು ಸಹ ಅನುಮತಿಸುತ್ತದೆ. ವಿಶ್ವಸಂಸ್ಥೆಯ ಪ್ಯಾಲೆಸ್ತೀನಿಯನ್ ನಿರಾಶ್ರಿತರ ಸಂಸ್ಥೆಯ ಪ್ರಕಾರ, ಅಕ್ಟೋಬರ್ 2023 ರಿಂದ ಗಾಜಾದಲ್ಲಿ ಸುಮಾರು 19 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ.
ಎರಡನೇ ಹಂತದ ಕದನ ವಿರಾಮದ ಹದಿನಾರನೇ ದಿನದಂದು ಮಾತುಕತೆಗಳು ಪ್ರಾರಂಭವಾಗಲಿವೆ ಮತ್ತು “ಯುದ್ಧಕ್ಕೆ ಶಾಶ್ವತ ಅಂತ್ಯ” ವನ್ನು ಗುರಿಯಾಗಿರಿಸಿಕೊಳ್ಳಲಾಗುತ್ತದೆ. ಇಸ್ರೇಲ್ ಹಿಡಿದಿರುವ ಹೆಚ್ಚಿನ ಪ್ಯಾಲೆಸ್ಟೀನಿಯನ್ ಕೈದಿಗಳಿಗೆ ಬದಲಾಗಿ ಪುರುಷರು ಸೇರಿದಂತೆ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದನ್ನು ಇದು ಒಳಗೊಂಡಿರುತ್ತದೆ.
ಇದನ್ನೂಓದಿ: 5 ವರ್ಷಗಳಲ್ಲಿ ಬಿಜೆಪಿಯಿಂದ 400-500 ಜನರ ₹10 ಲಕ್ಷ ಕೋಟಿ ಸಾಲ ಮನ್ನಾ: ಅರವಿಂದ್ ಕೇಜ್ರಿವಾಲ್
5 ವರ್ಷಗಳಲ್ಲಿ ಬಿಜೆಪಿಯಿಂದ 400-500 ಜನರ ₹10 ಲಕ್ಷ ಕೋಟಿ ಸಾಲ ಮನ್ನಾ: ಅರವಿಂದ್ ಕೇಜ್ರಿವಾಲ್


