Homeಅಂಕಣಗಳುಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಕೇಂದ್ರ ಸಮಿತಿ; ಅಬ್ಜೆಕ್ಶನ್, ಮೈ ಲಾರ್ಡ್

ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಕೇಂದ್ರ ಸಮಿತಿ; ಅಬ್ಜೆಕ್ಶನ್, ಮೈ ಲಾರ್ಡ್

ದಿಲ್ಲಿಯ 5 ಜನ ಸವರ್ಣೀಯ ಗಂಡಸರುಳ್ಳ ಈ ಸಮಿತಿ, ನಾಗಾಲ್ಯಾಂಡ್‍ನಿಂದ ಗುಜರಾತ್‍ವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಈ ಉದ್ದಗಲದ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವ ಮೂರು ಮೂಲ ಕಾನೂನುಗಳ ಪುನರ್ರಚನೆ ಕೆಲಸವನ್ನು ಹೇಗೆ ಕೈಗೊಳ್ಳುತ್ತದೆ?

- Advertisement -
- Advertisement -

ಕೆಲವು ವಾರಗಳ ಹಿಂದೆ, ರಾಜ್ಯದ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ, ಖ್ಯಾತ ಸಾಹಿತಿ ಹಾಗು ವಕೀಲರಾದ ಭಾನು ಮುಷ್ತಾಕ್ ಅವರು, ಜನ ಸಂಕಷ್ಟದಲ್ಲಿರುವಾಗ, ರಾಜ್ಯ ಸರ್ಕಾರ ಬಲಶಾಲಿ ಶಕ್ತಿಗಳಿಗೆ ಅನುಕೂಲವಾಗುವ ‘ಸುಗ್ರೀವಾಜ್ಞೆಗಳ ಸುಗ್ಗಿ’ಗೆ ಮುಂದಾಗಿರುವುದನ್ನು ಖಂಡಿಸಿದರು. ಕೋವಿಡ್ ಸಮಯದಲ್ಲಿ ಕಾನೂನುಗಳನ್ನು ತಿದ್ದುಪಡಿ ಮಾಡಿ, ವ್ಯವಸ್ಥೆಯನ್ನು ಸಂವಿಧಾನದಿಂದ ದೂರ ಮಾಡಿದ ರಾಜ್ಯ ಸರ್ಕಾರ, ತನ್ನ ಸ್ವಇಚ್ಛೆಯಿಂದ ಇದನ್ನು ಮಾಡಲಿಲ್ಲ, ಬದಲಿಗೆ ದಿಲ್ಲಿಯ ಒತ್ತಡದಿಂದ ಮಾಡಿತ್ತು.

ದೂರದ ದಿಲ್ಲಿ ಅಲ್ಲಿಗೆ ನಿಲ್ಲುತ್ತಿಲ್ಲ. ಈಗ ದೇಶದ ಅತ್ಯಂತ ಮುಖ್ಯ ಹಾಗು ಐತಿಹಾಸಿಕ ಕಾನೂನುಗಳಾದ ಭಾರತ ದಂಡಸಂಹಿತೆ 1860 (ಐ.ಪಿ.ಸಿ), ಭಾರತ ದಂಡ ಪ್ರಕ್ರಿಯ ಸಂಹಿತೆ (ಸಿ.ಆರ್.ಪಿ.ಸಿ) 1973, ಭಾರತ ಸಾಕ್ಷ್ಯ ಅಧಿನಿಯಮ 1872 (ಎವಿಡೆನ್ಸ್ ಆಕ್ಟ್)ಗಳಿಗೆ ಕೈಹಾಕಿದೆ. ಇದೊಂದು ಗಂಭೀರವಾದ ಪ್ರಕ್ರಿಯೆ.

ಯಾವ ಕೃತ್ಯಗಳು ಅಪರಾಧವಾಗುತ್ತದೆ ಮತ್ತು ಅದನ್ನು ತೀರ್ಮಾನಿಸುವುದು ಹೇಗೆ ಮತ್ತು ಯಾರು, ಅದಕ್ಕೆ ಶಿಕ್ಷೆಯೇನು, ಪೊಲೀಸರಿಗೆ ಇರುವ ಅಧಿಕಾರವೇನು, ಅದರ ಮಿತಿಯೇನು ಎಂದು ಈ ಮೂಲ ಕಾನೂನುಗಳೂ ತೀರ್ಮಾನಿಸುತ್ತವೆ. ಇದರೆ ಬಗ್ಗೆ ಜನಸಾಮಾನ್ಯರು ಏಕೆ ಚಿಂತಿಸಬೇಕು? ಏಕೆಂದರೆ, ಈ ಮೂರು ಕಾನೂನುಗಳು ದೇಶದ ಪ್ರತಿ ಪ್ರಜೆಗೂ ಮತ್ತು ಪ್ರಭುತ್ವಕ್ಕೂ ಇರುವ ಸಂಬಂಧವನ್ನು ನಿಯಂತ್ರಿಸುತ್ತಿದೆ, ಅದಕ್ಕೆ.

ಈ ಹಿಂದೆ ನಡೆದ ಕೆಲವು ಘಟನೆಗಳನ್ನು ಗಮನಿಸಿ – ದಾನಮ್ಮ ಅವರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಹಾಗು ದಿಲ್ಲಿಯಲ್ಲಿ ಸಂವಿಧಾನ ಉಳಿಸಲು ಹಾಗು ಸಿ.ಎ.ಎ. ತೊಲಗಿಸಲು ಹೋರಾಟ ಮಾಡಿದವರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳು, ಕೋವಿಡ್ ಸಮಯದಲ್ಲಿ ಜನರ ಓಡಾಟ ಹಾಗು ಸಾರ್ವಜನಿಕ ಚಟುವಟಿಕೆಗಳನ್ನು ನಿಯಂತ್ರಿಸಲು ತಂದ ಕೆಲವು ಸರ್ಕಾರಿ ಆದೇಶಗಳು – ಇವೆಲ್ಲವುದರಲ್ಲೂ ಈ ಕಾನೂನುಗಳ ಮುಖ್ಯ ಪಾತ್ರವಿದೆ. ಈ ಕಾನೂನುಗಳ ದುರುಪಯೋಗದಿಂದ ದೇಶದ ಸೆರೆಮನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ದಲಿತರು, ಮುಸಲ್ಮಾನರು ಮತ್ತು ಬಡವರು.

ಈ ಕಾನೂನುಗಳನ್ನು ಸರಿಯಾಗಿ ಜಾರಿಗೆ ತರದೆ ದಲಿತರನ್ನ ಹಾಗು ಮುಸಲ್ಮಾನರನ್ನ, ದೌರ್ಜನ್ಯಕ್ಕೆ ಒಳಗಾದ ಅನೇಕರನ್ನ ಸೆರೆಮನೆಯಲ್ಲಿ ಹಾಕಿ, ಮಹಿಳೆಯರನ್ನ ಅವಮಾನಿಸಿದ, ಫೇಕ್ ನ್ಯೂಸ್ ಹಬ್ಬಿಸುವ ಸಂಘಪರಿವಾರದ ಬಲಿಷ್ಟರನ್ನ ಮುಕ್ತವಾಗಿ ಓಡಾಡಲು ವ್ಯವಸ್ಥೆ ಬಿಟ್ಟಿದೆ. ಈ ಸಂಗತಿಗಳನ್ನೆಲ್ಲಾ ಪ್ರಸ್ತಾಪಿಸಿದ ಕಾರಣ, ಈ ಕಾನೂನುಗಳ ಪ್ರಾಮುಖ್ಯತೆ ಏನು ಮತ್ತು ಇವುಗಳು ಅಂಚಿನಲ್ಲಿರುವ ಸಮುದಾಯಗಳ ಮೇಲೆ ಬೀರುವ ಪರಿಣಾಮಗಳನ್ನು ಮನಗಾಣಿಸುವುದಕ್ಕೆ.

ಹಾಗಾಗಿ, ಈ ಕಾನೂನುಗಳ ಮೂಲ ಅಂಶಗಳನ್ನೇ ತಿದ್ದುಪಡಿ ಮಾಡಲು ಕೈಗೊಂಡಿರುವ ಪ್ರಕ್ರಿಯೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಖಂಡಿತವಾಗಿ ಅಪರಾಧಿ ಕಾನೂನುಗಳ ತಿದ್ದುಪಡಿಯ ಅಗತ್ಯವಿದೆ – ಉದಾಹರಣೆಗೆ ರಾಜದ್ರೋಹದ ಅಪರಾಧವನ್ನು ಕೈಬಿಡುವುದು, ವೈವಾಹಿಕ ಅತ್ಯಾಚಾರ (ಮ್ಯಾರಿಟಲ್ ರೇಪ್) ಅನ್ನು ಅಪರಾಧಗಳ ಪಟ್ಟಿಗೆ ಸೇರಿಸುವುದು – ಈ ಕೆಲವು ಇವತ್ತಿನ ತುರ್ತು. ಆದರೆ ಸದ್ಯದಲ್ಲೇ ನಡೆಯಲಿರುವ ತಿದ್ದುಪಡಿ ಪ್ರಕ್ರಿಯೆ ಉಪಯುಕ್ತತೆಗೆ ಹೋಲಿಸಿದರೆ ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆ ಹಲವು ಪ್ರಶ್ನೆಗಳಿವೆ.

ಸಾಮಾನ್ಯವಾಗಿ ಈ ರೀತಿ ಪ್ರಮುಖ ಕಾನೂನುಗಳಿಗೆ ತಿದ್ದುಪಡಿಗಳನ್ನು ಮಾಡುವ ಮುನ್ನ, ಸರ್ಕಾರದಿಂದ ಸ್ವತಂತ್ರವಾಗಿರುವ ಕಾನೂನು ಆಯೋಗವು ಇದರ ಬಗ್ಗೆ ದೀರ್ಘವಾದ ಅಧ್ಯಯನ ನಡೆಸಿ ವರದಿ ಸಲ್ಲಿಸುತ್ತದೆ. ಆದರೆ ಹಲವು ಪ್ರಕರಣಗಳ ಸುಳಿಯಲ್ಲಿ ಸಿಕ್ಕಿಕೊಂಡಿರುವ ಗೃಹ ಸಚಿವರಾದ ಅಮಿತ್ ಶಾ ಅವರ ಆದೇಶದ ಮೇರೆಗೆ, ದಿಲ್ಲಿ ನಗರಕ್ಕೆ ಸೇರಿದ 5 ಜನರ ಸಮಿತಿಯೊಂದನ್ನು ರಚಿಸಿ, ಅದಕ್ಕೆ ಈ ಕಾನೂನುಗಳನ್ನು ತಿದ್ದುಪಡಿ ಮಾಡಲು ಕೇವಲ ಆರು ತಿಂಗಳ ಸಮಯ ಕೊಡಲಾಗಿದೆ.

ಈ ಪ್ರಕ್ರಿಯಯನ್ನು ಕೈಬಿಡಬೇಕೆಂದು ದೇಶಾದ್ಯಂತ ಕೂಗು ಕೇಳಿಬರುತ್ತಿದೆ. 12 ನಿವೃತ್ತ ನ್ಯಾಯಾಧೀಶರು, 52 ಹಿರಿಯ ವಕೀಲರು ಸಮಿತಿಗೆ ಪತ್ರ ಬರೆದು ಈ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಹೇಳಿದ್ದಾರೆ. ಹಾಗೆಯೆ ದಿಲ್ಲಿ ಉಚ್ಚ ನ್ಯಾಯಾಲಯದ ಮಹಿಳಾ ವಕೀಲರು ಸಹ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ; ಬೆಂಗಳೂರಿನ ಹಲವು ವಕೀಲರು ಹಾಗು ಸಂಘ ಸಂಸ್ಥೆಗಳು ಕೂಡ ಅದನ್ನೇ ಆಗ್ರಹಿಸಿವೆ.

ಈ ಎಲ್ಲ ಮನವಿಗಳನ್ನು ಗಮನಿಸಿದರೆ, ಈ ಪ್ರಕ್ರ್ರಿಯೆಯಲ್ಲಿರುವ ಸಮಸ್ಯೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಮೊದಲನೆಯದಾಗಿ, ಕೋವಿಡ್ ಸೋಂಕಿನ ಪ್ರಕರಣಗಳು 14 ಲಕ್ಷ ದಾಟಿದ್ದು, ಸಾವಿರಾರು ಜನ ಪ್ರಾಣ ಕಳೆದುಕೊಂಡು, ಕೋಟ್ಯಂತರ ಜನ ಕೆಲಸ ಕಳೆದುಕೊಂಡಿರುವ ಸಮಯದಲ್ಲಿ ಅಪರಾಧಿ ಕಾನೂನಿನ ತಿದ್ದುಪಡಿಗಳ ಅಗತ್ಯವೇನು? ಇಂತಹ ಒಂದು ಪ್ರಮುಖ ಕಾನೂನನ್ನು ತಿದ್ದುಪಡಿ ಮಾಡಲು ಇದು ಸರಿಯಾದ ಸಮಯವೇ?

16 ವರ್ಷಗಳ ಸುದೀರ್ಘ ಚರ್ಚೆಯ ನಂತರ ಐ.ಪಿ.ಸಿ ರಚನೆಗೊಂಡಿತು, ಸಿ.ಆರ್.ಪಿ.ಸಿ ರಚಿಸಲು ಕೆಲವು ದಶಕಗಳೇ ಆದವು ಹಾಗು 1961 ರಲ್ಲಿ ಅದನ್ನು ತಿದ್ದುಪಡಿ ಮಾಡಲು ಹೊರಟಾಗ, ಆ ಪ್ರಕ್ರಿಯೆ 12 ವರ್ಷಗಳ ಕಾಲ ತೆಗೆದುಕೊಂಡಿತು. ಅದೇ ರೀತಿ ಎವಿಡೆನ್ಸ್‍ಗೆ ಸಂಬಂಧಪಟ್ಟ ಕಾಯ್ದೆ ರಚಿಸಲು ಕೆಲವು ದಶಕಗಳೇ ಆದವು. ಈಗ ಈ ಮೂರು ಕಾನೂನುಗಳನ್ನು, ಕೋವಿಡ್ ಪಿಡುಗಿನ ನಡುವೆ ಆರು ತಿಂಗಳ ಕಾಲದಲ್ಲಿ ಹೇಗೆ ತಿದ್ದುಪಡಿ ಮಾಡುತ್ತೀರ ಎಂದು ಕೇಳಲಾಗಿದೆ.

ಇಂತಹ ಕಾನೂನು ತಿದ್ದುಪಡಿಗಳನ್ನು ಮಾಡಲು ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು, ಸಾರ್ವಜನಿಕ ಅಹವಾಲು ಸ್ವೀಕರಿಸಬೇಕು ನಂತರ ಹಲವು ಕಡೆ ಸಭೆಗಳು ನಡೆಯಬೇಕು, ಹಲವು ಚರ್ಚೆಗಳಾಗಬೇಕು ಇದಕ್ಕೆಲ್ಲ ವರ್ಷಗಟ್ಟಲೆ ಹಿಡಿಯುತ್ತದೆ. ಸೋಂಕಿನ ನಡುವೆ ಸಭೆಗಳನ್ನು ನಡೆಸುವುದಾದರೂ ಹೇಗೆ ಹಾಗು ಜನ ತಮ್ಮ ಜೀವದ ಬಗ್ಗೆ ಆತಂಕದಿಂದ ಇರುವಾಗ ಹಾಗು ಹಲವು ಜನ ಪ್ರಾಣ ಕಳೆದುಕೊಳ್ಳುತ್ತಿರಬೇಕಾದರೆ, ಸಮಾಜ ಹಾಗು ಸಾಮಾಜಿಕ ಕಾರ್ಯಕರ್ತರು ಕಾನೂನು ತಿದ್ದುಪಡಿ ಬಗ್ಗೆ ಯೋಚಿಸಬೇಕೋ ಅಥವ ಜನರ ಜೀವ ಉಳಿಸಲು ಪೂರಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಯೋಚಿಸಬೇಕೋ?

ಇಂತಹ ಮುಖ್ಯ ಕೆಲಸ ನಿರ್ವಹಿಸಲು ಸಮಿತಿಯ ಸದಸ್ಯತ್ವದಲ್ಲಿ ಪ್ರಾತಿನಿಧಿತ್ವದ ಕೊರತೆ ಎದ್ದು ಕಾಣುತ್ತದೆ. ಬರೀ ರಾಜಧಾನಿ ದಿಲ್ಲಿಯ 5 ಜನ ಸವರ್ಣೀಯ ಗಂಡಸರುಳ್ಳ ಈ ಸಮಿತಿ, ನಾಗಾಲ್ಯಾಂಡ್‍ನಿಂದ ಗುಜರಾತ್‍ವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಈ ಉದ್ದಗಲದ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವ ಮೂರು ಮೂಲ ಕಾನೂನುಗಳ ಪುನರ್ರಚನೆ ಕೆಲಸವನ್ನು ಹೇಗೆ ಕೈಗೊಳ್ಳುತ್ತದೆ?

ಮಹಿಳೆಯರ ಮೇಲೆ ನಡೆಯುವ ಎಲ್ಲ ದೌರ್ಜನ್ಯಗಳನ್ನು ಈ ಕಾನೂನುಗಳ ವ್ಯಾಪ್ತಿಗೆ ಬರುತ್ತದೆ, ಆದರೆ ಸಮಿತಿಯಲ್ಲಿ ಒಬ್ಬರೂ ಮಹಿಳೆಯರಿಲ್ಲ. ಪೊಲೀಸ್ ದೌರ್ಜನ್ಯಕ್ಕೆ ಹೆಚ್ಚು ಒಳಗಾಗಿರುವುದು ಆದಿವಾಸಿಗಳು, ದಲಿತರು ಮತ್ತು ಮುಸಲ್ಮಾನರು. ಆದರೆ ಈ ಸಮುದಾಯದವರು ಒಬ್ಬರೂ ಇಲ್ಲವೇಕೆ? ಲೈಂಗಿಕ ಹಾಗು ಲಿಂಗತ್ವ ಅಲ್ಪಸಂಖ್ಯಾತರು ಸಹ ಈ ದೇಶದ ಪೊಲೀಸ್ ದೌರ್ಜನ್ಯಕ್ಕೆ ಹಾಗು ಶೋಷಣೆಗೆ ಒಳಗಾಗಿದ್ದಾರೆ. ಈ ಸಮುದಾಯದಿಂದಲೂ ಸಹ ಪ್ರತಿನಿಧಿ ಯಾರಿಲ್ಲ.

ಇಷ್ಟಲ್ಲದೆ, ಈ ಕಾಯ್ದೆಯಡಿ ಪ್ರಕರಣಗಳ ವಿಚಾರಣೆ ನಡೆಯುವ ಟ್ರಯಲ್ ನ್ಯಾಯಾಲಯಗಳಲ್ಲಿ ಪ್ರತಿಪಾದಿಸುವ ವಕೀಲರೇ ಇಲ್ಲ! ಯಾರು ಈ ಕಾನೂನುಗಳನ್ನು ದಿನಬೆಳಗಾದರೆ ಉಪಯೋಗಿಸುತ್ತಾರೋ ಆ ವಕೀಲರೆ ಈ ಸಮಿತಿಯಲ್ಲಿಲ್ಲ! ಬಹುಮುಖ್ಯವಾಗಿ, ದಿಲ್ಲಿ ಬಿಟ್ಟು ಬೇರೆ ಯಾವ ಊರಿನವರೂ ಈ ಸಮಿತಿಯಲ್ಲಿಲ್ಲ! ದೇಶದ ಪ್ರತಿ ನಗರಕ್ಕೆ ಹಳ್ಳಿಗೆ ಅನ್ವಯವಾಗುವ ಕಾನೂನುಗಳನ್ನು ಕೇವಲ ದಿಲ್ಲಿ ಏಕೆ ತೀರ್ಮಾನಿಸಬೇಕು? ದೇಶದ ಫೆಡರೆಲಿಸ್ಮ್ (ಒಕ್ಕೂಟ ವ್ಯವಸ್ಥೆ) ಅನ್ನು ಹಂತಹಂತವಾಗಿ ಕೇಂದ್ರ ಸರ್ಕಾರ ನಾಶ ಮಾಡುತ್ತಿದೆ ಅನ್ನುವುದಕ್ಕೆ ಇದು ಇನ್ನೊಂದು ತಾಜಾ ಉದಾಹರಣೆ.

ಸಮಿತಿಯ ಸದಸ್ಯತ್ವದಲ್ಲಿ ಪ್ರಾತಿನಿಧಿತ್ವ ಸರಿ ಇಲ್ಲದಿರುವ ಲೋಪದ ಬಗ್ಗೆ ಮಹಿಳಾ ವಕೀಲರ ಮನವಿಯಲ್ಲಿ ಹೀಗೆ ಹೇಳಿದ್ದಾರೆ:

“ಸಮಿತಿಯ ಪ್ರಶ್ನಾವಳಿಯ ಹೆಚ್ಚಿನ ಭಾಗವನ್ನು ನಿರ್ದಿಷ್ಟವಾಗಿ ಲೈಂಗಿಕ ಅಪರಾಧಗಳ ಸುಧಾರಣೆಗೆ ಮೀಸಲಿಟ್ಟಾಗ, ಸಮಿತಿಯಲ್ಲಿ ಅಪರಾಧ ಕಾನೂನಿನ ಪ್ರಕರಣಗಳನ್ನು ಪ್ರತಿಪಾದಿಸುವ ಮಹಿಳಾ ವಕೀಲರನ್ನೆ ಸೇರಿಸದೇ ಇರುವುದು ನಮಗೆ ಅಸಂಬದ್ಧವಾಗಿ ಕಂಡಿದೆ. ಸಮಿತಿಯಲ್ಲಿ ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಸೇರಿಸದೆ ಗೌರವ ಹತ್ಯೆ ಅಥವ ಮಾಬ್ ಲಿಂಚಿಂಗ್ ಅನ್ನು ಅಪರಾಧೀಕರಿಸುವ ಕುರಿತು ಚರ್ಚೆ ಅರ್ಥಪೂರ್ಣವಾಗಬಹುದೆ? ಇವು ಕೇವಲ ಕೆಲವು ಉದಾಹರಣೆಗಳು. ನಾವು ಒತ್ತಿಹೇಳುವುದೇನೆಂದರೆ, ಕಾನೂನಿನ ಸುಧಾರಣೆಯ ಪ್ರತ್ರಿಯೆ ಪ್ರಜಾಸತ್ತಾತ್ಮಕವಾಗಿ ಸಂಪೂರ್ಣವಾಗಿರಬೇಕಾದರೆ ಬಹುತ್ವ ದೃಷ್ಟಿಕೋನಗಳು ಹಾಗು ಸುದೀರ್ಘ ಚರ್ಚೆ ಬೇಕಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಏಕೈಕ ಮಾರ್ಗವೆಂದರೆ ವೈವಿಧ್ಯತೆ ಮತ್ತು ಸಮರ್ಪಕ ಪ್ರತಿನಿಧಿತ್ವವನ್ನು ಖಚಿತಪಡಿಸುವುದು.”

ಅಲ್ಲದೆ ಸಂಪೂರ್ಣ ಪ್ರಕ್ರಿಯೆ ಇಂಗ್ಲಿಷ್ ಭಾಷೆಯಲ್ಲಿ ಮತ್ತು ಆನಲೈನ್‍ನಲ್ಲಿ ನಡೆಯುತ್ತದೆ. ಹೀಗಾದರೆ ಎಲ್ಲರ ಭಾಗವಹಿಸುವಿಕೆ ಖಚಿತಪಡಿಸುವುದು ಹೇಗೆ ಸಾಧ್ಯ? ಅಪರಾಧಿ ಕಾನೂನು ಜಾರಿಗೆ ತರುವುದರಲ್ಲಿ ಅಥವಾ ಅದರ ಅಡಿ ಬರುವ ಅಪರಾಧಿಗಳ ಹಕ್ಕುಗಳನ್ನು ಕಾಪಾಡುವುದರಲ್ಲಿ, ರಾಜಧಾನಿಗಳಲ್ಲಿ ಒಂದು ರೀತಿಯ ಸಮಸ್ಯೆಗಳಿದ್ದರೆ ದೂರದ ಜಿಲ್ಲೆಗಳಲ್ಲಿ, ಹಳ್ಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆಗಳು ಇರುತ್ತವೆ. ಭಾರತದ ಪಟ್ಟಣಗಳಲ್ಲಿ ಪ್ರತಿಪಾದಿಸುವ ಅನೇಕ ವಕೀಲರಿಗೆ ಇಂಗ್ಲಿಷ್ ಭಾಷೆಯನ್ನು ಉಪಯೋಗಿಸುವುದು ಕಷ್ಟ. ಅವರ ಭಾಗವಹಿಸಿಕೆಯನ್ನು ಖಚಿತಪಡಿಸುವುದು ಹೇಗೆ? ದೇಶದ ಬಹುಪಾಲು ಜನರಿಗೆ ಇಂಗ್ಲಿಷ್ ಬರುವುದಿಲ್ಲ, ಇಂಟರ್ನೆಟ್ ಉಪಯೋಗಿಸಲು ಸಾಧ್ಯವಿಲ್ಲ. ಇದು ಅವರನ್ನು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಡ್ಡಿಪಡಿಸುತ್ತಿದೆ.

ಈ ಇಡೀ ಪ್ರಕ್ರಿಯೆಯಲ್ಲಿರುವ ಸಮಸ್ಯೆಗಳ ಬಗ್ಗೆ ಹಲವು ಮನವಿಗಳನ್ನು ಸಮಿತಿಗೆ ಸಲ್ಲಿಸಲಾಗಿದೆ, ಅದರಲ್ಲಿ ಕೆಲವು ಅಂಶಗಳಿಗೆ ಸಮಿತಿ ಉತ್ತರಿಸಿದೆ. ಆದರೆ ಆ ಉತ್ತರಗಳು ಇನ್ನೂ ಹೆಚ್ಚು ಆತಂಕಗಳನ್ನು ಸೃಷ್ಟಿಸಿದೆ. ಸಮಿತಿಯನ್ನು ರಚನೆ ಮಾಡಿದ್ದು ಅಮಿತ್ ಶಾರ ಕೆಳಗೆ ಕೆಲಸ ಮಾಡುವ ಗೃಹ ಸಚಿವಾಲಯ. ಸಮಿತಿಗೆ ಸಚಿವಾಲಯದಿಂದ ಸ್ವಾತಂತ್ರವಿಧೆಯೆ, ಸಮಿತಿಯ ವರದಿಯನ್ನು ಸಚಿವಾಲಯದೊಂದಿಗೆ ಜಂಟಿಯಾಗಿ ತಯಾರಿಸಲ್ಪಡುವುದೇ ಎನ್ನುವ ಪ್ರಶ್ನೆಗೆ ಸಮಿತಿ ಉತ್ತರಿಸಲೇ ಇಲ್ಲ! ಅಲ್ಲದೆ, ಸಮಿತಿಗೆ ಸರ್ಕಾರ ನೀಡಿರುವ ಟರ್ಮ್ಸ್ ಆಫ್ ರೆಫೆರೆನ್ಸ್ ಅನ್ನೂ ಸಾರ್ವಜನಿಕಗೊಳಿಸಿಲ್ಲ!

ಹಾಗಾಗಿ ಈ ಪ್ರಕ್ರಿಯೆಯನ್ನು ಕೂಡಲೆ ಕೈಬಿಡಬೇಕೆಂದು ದೇಶದ ಪ್ರಜ್ಞಾವಂತರ ಕೂಗಾಗಿದೆ. ಕೋವಿಡ್ ಸೋಂಕಿನ ಬಿಕ್ಕಟ್ಟನ್ನು ದಾಟಿದ ನಂತರ, ಪಾರದರ್ಶಕವಾಗಿ, ದೇಶದ ಸಾಮಾಜಿಕ ವೈವಿಧ್ಯತೆಯನ್ನು ಅರ್ಥಪೂರ್ಣವಾಗಿ ಪ್ರತಿನಿಧಿಸುವ ಹಾಗು ಸುದೀರ್ಘ, ಸಮರ್ಪಕ ಚರ್ಚೆಗೆ ಅವಕಾಶ ಉಳ್ಳಂತಹ ಪ್ರಕ್ರಿಯೆಯನ್ನು ಕೈಗೊಳ್ಳಬಹುದಲ್ಲ ಎಂದು ಅನೇಕರ ವಾದ.

ಸಮಾಜದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಈ ಪ್ರಕ್ರಿಯೆ ಬಗ್ಗೆ ಗಮನ ವಹಿಸಬೇಕಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಕಾರ್ಖಾನೆಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಧರಣಿ ಮಾಡಿದಾಗ ಪೊಲೀಸರು ಪ್ರಕರಣವನ್ನು ದಾಖಲಿಸುವುದು ಕಾರ್ಮಿಕರ ಮೇಲೆ; ದಲಿತ ಯುವಕರ ಮೇಲೆ ಹಲ್ಲೆ ಆದಾಗ ಅವರನ್ನು ರಾಜಿ ಮಾಡಿಸಲು ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತದೆ; ಸರ್ಕಾರ ತನ್ನ ವೈಫಲ್ಯತೆಯಿಂದ ಜನರ ಗಮನ ಸೆಳೆಯಲು ಒಮ್ಮೊಮ್ಮೆ ಮುಸಲ್ಮಾನರ ಮೇಲೆ ಸುಳ್ಳ ಪ್ರಕರಣ ದಾಖಲಿಸುತ್ತದೆ.

ಹೀಗೆ ಅಪರಾಧಿ ಕಾನೂನು ಅನ್ನೋದು ಎಲ್ಲರ ಜೀವನವನ್ನು ತಟ್ಟುತ್ತದೆ. ಅದನ್ನು ಅಮಿತ್ ಶಾ ನೇತೃತ್ವದ ಸಚಿವಾಲಯ ತಿದ್ದುಪಡಿ ಮಾಡಲು ಹೊರಟಿದೆ ಎಂದರೆ ಅದು ಜನಪರವಾದೀತೆ? ಹತ್ತಾರು ವರ್ಷಗಳ, ನೂರಾರು ಜನರ ಶ್ರಮದಿಂದ, ಸಾವಿರಾರು ಸಭೆಗಳ ಮೂಲಕ ರಚನೆಯಾದ ಈ ಕಾನೂನಿನ ಮೂಲ ಅಂಶಗಳನ್ನು ಈ ಸಮಿತಿಯಲ್ಲಿರುವ 5 ದಿಲ್ಲಿಯ ಸವರ್ಣೀಯ ಪುರುಷರಿಗೆ ತಿದ್ದುಪಡಿ ಮಾಡಲು ಬಿಟ್ಟರೆ, ನಮ್ಮ ಸ್ವಾತಂತ್ರವನ್ನು, ನಮ್ಮ ಸಂವಿಧಾನಿಕ ಹಕ್ಕುಗಳನ್ನು ನಾವೆ ಅಡವಿಟ್ಟು ಕೈಬಿಟ್ಟಂತಾಗುತ್ತದೆ.

-ವಿನಯ್ ಕೂರಗಾಯಲ ಶ್ರೀನಿವಾಸ ( ಲೇಖಕರು ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು)


ಓದಿ:

ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಈ ಲೇಖನವನ್ನು ಡಾಬಸ್ಪೇಟೆ ವಾಯ್ಸ್ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿಸಬೇಕಾಗಿ ವಿನಂತಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...