ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ ಮೂಲ ತಿರುಳಿನ ರದ್ದತಿಗೆ ಮುಂದಾಗಿದೆ ಎಂದು ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಬುಧವಾರ (ಸೆ.3) ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಸಲಹೆಯನ್ನು ಕೋರಿ ರಾಷ್ಟ್ರಪತಿಯವರು ಮಾಡಿದ್ದ ಶಿಫಾರಸ್ಸು ಸಂಬಂಧ 7ನೇ ದಿನದ ವಿಚಾರಣೆ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ.
ಕರ್ನಾಟಕದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ, “ಕೇಂದ್ರ ಸರ್ಕಾರವು ಪರೋಕ್ಷವಾಗಿ ಸಂವಿಧಾನದ ಮೂಲ ಆಶಯವಾದ ‘ಸಂಪುಟ ಸರ್ಕಾರ ಮತ್ತು ಶಾಸಕಾಂಗ’ದ ಜವಾಬ್ದಾರಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದೆ ಎಂದು ವಾದಿಸಿದ್ದಾರೆ.
ಸಚಿವ ಸಂಪುಟದ ಮೂಲಕ ಸರ್ಕಾರದ ಪ್ರಜಾಪ್ರಭುತ್ವ ರೂಪವು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ರಾಜ್ಯಪಾಲರು ಸಂವಿಧಾನದ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಬಲೆಗೆ ನ್ಯಾಯಾಲಯ ಬೀಳಬಾರದು ಎಂದು ಮನವಿ ಮಾಡಿದ್ದಾರೆ.
“ಸಂವಿಧಾನವು ಜೀವಂತ ದಾಖಲೆಯಾಗಿದೆ. ಅದು ಇತಿಹಾಸದಿಂದ ಹುಟ್ಟಿಕೊಂಡಿದೆ, ಆದರೆ ಭವಿಷ್ಯಕ್ಕೆ ನಿಷ್ಠವಾಗಿದೆ. ನೀವು [ನ್ಯಾಯಾಧೀಶರು] ಭವಿಷ್ಯ, ಏಕೆಂದರೆ ನೀವು ಅದನ್ನು ಅರ್ಥೈಸುತ್ತೀರಿ. ರಾಜ್ಯಪಾಲರು ಸಂವಿಧಾನದ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಬಲೆಗೆ ಬೀಳಬಾರದು. ಆದ್ದರಿಂದ, ನೀವು ಏನನ್ನಾದರೂ ಹೇಳಬೇಕಾಗುತ್ತದೆ. ಕಾಲಮಿತಿಯನ್ನು ನೀಡಬೇಡಿ, ಆದರೆ, ಅದು (ಮಸೂದೆ) ಮತ್ತೊಮ್ಮೆ ಅಂಗೀಕರಿಸಲ್ಪಟ್ಟರೆ ತಡೆಹಿಡಿಯಲು ರಾಜ್ಯಪಾಲರಿಗೆ ಅವಕಾಶವಿಲ್ಲ ಎಂದು ನೀವು ಹೇಳಬೇಕು” ಎಂದು ಕಪಿಲ್ ಸಿಬಲ್ ಕೋರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ.ಎಸ್. ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರ ಸಂವಿಧಾನ ಪೀಠದ ಮುಂದೆ ಈ ವಾದಗಳನ್ನು ಮಂಡಿಸಲಾಗಿದೆ.
ರಾಷ್ಟ್ರಪತಿಗಳ ಶಿಫಾರಸ್ಸನ್ನು ವಜಾಗೊಳಿಸುವಂತೆ ಕೋರಿ ಸಿಬಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಧಾನಸಭೆ ಅಂಗೀಕರಿಸಿದ ಮಸೂದೆಯ ಶಾಸಕಾಂಗ ಸಾಮರ್ಥ್ಯವನ್ನು ರಾಜ್ಯಪಾಲರು ಪರಿಶೀಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ಸ್ವಾತಂತ್ರ್ಯದ ನಂತರ, ಸಂಸತ್ತು ಅಂಗೀಕರಿಸಿದ ಮಸೂದೆಯು ಜನರ ಇಚ್ಛೆಯಾಗಿರುವುದರಿಂದ ರಾಷ್ಟ್ರಪತಿಗಳು ತಡೆಹಿಡಿದ ಯಾವುದೇ ಉದಾಹರಣೆ ಇಲ್ಲ. ಮಸೂದೆಯ ಶಾಸಕಾಂಗ ಸಾಮರ್ಥ್ಯವನ್ನು ನ್ಯಾಯಾಲಯಗಳಲ್ಲಿ ಪರೀಕ್ಷಿಸಬೇಕಾಗುತ್ತದೆ” ಎಂದಿದ್ದಾರೆ.
ರಾಜ್ಯಪಾಲರು ಮಸೂದೆಯ ಸಾಂವಿಧಾನಿಕತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂಬ ಸಿಬಲ್ ವಾದಕ್ಕೆ ಪ್ರತಿಕ್ರಿಯಿಸಿದ ಪೀಠ, “ಕೇಂದ್ರ ಶಾಸನದ ದೃಷ್ಟಿಯಿಂದ ವ್ಯತಿರಿಕ್ತವಾಗಿದ್ದರೆ ರಾಜ್ಯಪಾಲರು ತಡೆಹಿಡಿಯಬಹುದೇ?” ಎಂದು ಕೇಳಿದೆ.
ಇದಕ್ಕೆ ಉತ್ತರಿಸಿದ ಸಿಬಲ್, “ಅದು ಅಪರೂಪದಲ್ಲೇ ಅಪರೂಪದ ಪ್ರಕರಣ” ಎಂದಿದ್ದಾರೆ. ನಾಗರಿಕರು ಅಥವಾ ಬೇರೆಯವರು ಕಾನೂನಿನ ನ್ಯಾಯಾಲಯದಲ್ಲಿ ಶಾಸನವನ್ನು ಪ್ರಶ್ನಿಸಬಹುದು. ನಾನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳುವುದು ಅತ್ಯಂತ ಅಪರೂಪದ ಪ್ರಕರಣದಲ್ಲಿ” ಎಂದು ಸಿಬಲ್ ಹೇಳಿದ್ದಾರೆ.
ಹಿಮಾಚಲ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಆನಂದ್ ಶರ್ಮಾ ವಾದ ಮಂಡಿಸಿ, ಸಂವಿಧಾನದ ವಿಚಾರಕ್ಕೆ ಬಂದಾಗ ನ್ಯಾಯಾಲಯಗಳೇ ಅಂತಿಮ ತೀರ್ಪುಗಾರರಾಗಿದ್ದು, ಅದು ಭಾರತೀಯ ಗಣರಾಜ್ಯದ ಶಕ್ತಿ. ರಾಜ್ಯಪಾಲರುಗಳು ವೈಸರಾಯ್ ಅಥವಾ ಗವರ್ನರ್ ಜನರಲ್‌ಗಳಲ್ಲ. ಅವರು ಸಚಿವ ಸಂಪುಟದ ಸಲಹೆ ಮತ್ತು ಮಾರ್ಗದರ್ಶನಕ್ಕೆ ಬದ್ಧರಾಗಿರಬೇಕು. ರಾಷ್ಟ್ರಪತಿ ಅಥವಾ ಗವರ್ನರ್‌ಗೆ ವಿಧಾನಮಂಡಲ ರೂಪಿಸುವಲ್ಲಿ ಅಥವಾ ಅದರ ಅಧಿವೇಶನ ನಡೆಸುವಲ್ಲಿ ಯಾವುದೇ ಸ್ವತಂತ್ರ ಪಾತ್ರವಿಲ್ಲ. ವಿಧಾನ ಮಂಡಲವೇ ಶ್ರೇಷ್ಠವಾದುದು ಎಂದು ತಿಳಿಸಿದ್ದಾರೆ.
ಜನರ ಇಚ್ಛೆಗೆ ವಿರುದ್ಧವಾಗಿ ರಾಜ್ಯಪಾಲರ ಹುದ್ದೆ ಬಳಕೆಯಾಗಬಾರದು. ರಾಜ್ಯ ಸರ್ಕಾರಗಳನ್ನು ಮುನಿಸಿಪಾಲಿಟಿಗಳಂತೆ ನಡೆಸಿಕೊಳ್ಳಲಾಗದು. ಅವುಗಳಿಗೆ ತಮ್ಮದೇ ಆದ ಸ್ವತಂತ್ರ ಸ್ಥಾನ ಇದ್ದು ಅದನ್ನು ಉಳಿಸಿ ಗೌರವಿಸಬೇಕು ಎಂದು ಹೇಳಿದ್ದಾರೆ.


