ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2023-24ನೇ ಸಾಲಿನ ಕೇಂದ್ರ ಬಜೆಟ್ ‘ಬೀಜವಿಲ್ಲದ ಕಡಲೆಕಾಯಿ’ ಇದ್ದಂತಿದೆ ಎಂದು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), “20 ಲಕ್ಷ ಕೋಟಿ ಪ್ಯಾಕೇಜ್ ಎಂಬ ಬಿಳಿ ಕಾಗೆ ತೋರಿಸಿದಂತೆಯೇ ಈ ಬಜೆಟ್ ಕೂಡ! ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಯುವಸಮುದಾಯಕ್ಕೆ ಯಾವುದೇ ಭರವಸೆ ಇಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವಿಲ್ಲ. ಜನರ ಸಂಕಷ್ಟ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿ ಮಾಡಿದೆ ಕೇಂದ್ರ ಸರ್ಕಾರ” ಎಂದಿದೆ.
ಕೇಂದ್ರ ಸರಕಾರದ ಬಜೆಟ್ "ಸೀಡ್ಲೆಸ್ ಕಡಲೆಕಾಯಿ" ಇದ್ದಂತಿದೆ!
'20 ಲಕ್ಷ ಕೋಟಿ ಪ್ಯಾಕೇಜ್' ಎಂಬ ಬಿಳಿಕಾಗೆ ತೋರಿಸಿದಂತೆಯೇ ಈ ಬಜೆಟ್ ಕೂಡ!
ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಯುವಸಮುದಾಯಕ್ಕೆ ಯಾವುದೇ ಭರವಸೆ ಇಲ್ಲ.
ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವಿಲ್ಲ.ಜನರ ಸಂಕಷ್ಟ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿ ಮಾಡಿದೆ ಕೇಂದ್ರ ಸರ್ಕಾರ.
— Karnataka Congress (@INCKarnataka) February 1, 2023
“ಡಬಲ್ ಇಂಜಿನ್ ಸರ್ಕಾರ ಎಂದುಕೊಳ್ಳುವ ಕರ್ನಾಟಕ ಬಿಜೆಪಿ ಉತ್ತರಿಸಬೇಕು. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಸಿಗದಿರುವುದೇಕೆ? 23 ಸಾವಿರ ಕೋಟಿ ಅಗತ್ಯವಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 5,300 ಕೋಟಿ ನೀಡಿ ಮೂಗಿಗೆ ತುಪ್ಪ ಸವರಿದ್ದೇಕೆ? ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಚಕಾರ ಎತ್ತದಿರುವುದೇಕೆ?” ಎಂದು ಪ್ರಶ್ನಿಸಿದೆ.
“ಸಬ್ ಅರ್ಬನ್ ರೈಲು ಕಾಮಗಾರಿಗೆ ನಿಗದಿಪಡಿಸಿದ್ದ ಕಾಲಮಿತಿ ಮುಗಿಯುತ್ತಿದೆ, 18 ಸಾವಿರ ಕೋಟಿಯ ಯೋಜನೆಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಹಣ ನೀಡಿದ್ದು ಕರ್ನಾಟಕದೆಡೆಗೆ ಕೇಂದ್ರ ಸರ್ಕಾರಕ್ಕಿರುವ ತಾತ್ಸಾರ ಮನೋಭಾವಕ್ಕೆ ನಿದರ್ಶನ. ನಿಗದಿತ ಕಾಲಮಿತಿಯಲ್ಲಿ ಖಂಡಿತವಾಗಿಯೂ ಪೂರ್ಣಗೊಳಿಸುವ ಇರಾದೆ ಬಿಜೆಪಿಗಿಲ್ಲ” ಎಂದು ಟೀಕಿಸಿದೆ.
“ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದ ರೈತರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? ಕೃಷಿ ಡಿಜಿಟಲೀಕರಣ ಎಂಬ ಆಕರ್ಷಕ ಪದವನ್ನು ಪರಿಚಯಿಸಿದಾಕ್ಷಣ ರೈತರ ಸಮಸ್ಯೆ ಬಗೆಹರಿಯದು. ಬೆಳೆಯನ್ನು ಡಿಜಿಟಲ್ ತಾಂತ್ರಿಕತೆಯಲ್ಲಿ ಬೆಳೆಯಲಾಗದು ಎಂಬ ವಾಸ್ತವು ಪ್ರಧಾನಿಗೆ ತಿಳಿದಂತಿಲ್ಲ” ಎಂದು ಕುಟುಕಿದೆ.
“ಮಧ್ಯಮ ವರ್ಗ ಆದಾಯವನ್ನೇ ಕಳೆದುಕೊಂಡಿದೆ, ಜನರ ಆದಾಯಕ್ಕೆ ಹೊಡೆತ ಕೊಟ್ಟು ಆದಾಯ ತೆರಿಗೆ ಮಿತಿ ಏರಿಸಿದರೆ ಪ್ರಯೋಜನವೇನು?! ಜನರ ಆದಾಯವನ್ನು ವೃದ್ಧಿಸುವ ವಾತಾವರಣ ಸೃಷ್ಟಿಸುವಲ್ಲಿ ಬಜೆಟ್ ವಿಫಲವಾಗಿದೆ” ಎಂದು ಅಭಿಪ್ರಾಯಪಟ್ಟಿದೆ.
ರಾಜ್ಯ ಬಿಜೆಪಿ ಶ್ಲಾಘನೆ
ಕೇಂದ್ರ ಬಜೆಟ್ ಅನ್ನು ರಾಜ್ಯ ಬಿಜೆಪಿ ಶ್ಲಾಘಿಸಿದೆ. ‘ಅಮೃತ ಕಾಲದ ಬಜೆಟ್’ ಎಂದು ಬಣ್ಣಿಸಿದೆ.
“ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದ್ದು, ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕಿಂತ ಶೇ. 30ರಷ್ಟು ಹೆಚ್ಚಳವಾಗಿದೆ. ರಾಜ್ಯಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಮುಂದುವರಿಸಲಾಗಿದೆ” ಎಂದಿದೆ.
“ಮಧ್ಯಮವರ್ಗದ ಮೇಲಿದ್ದ ತೆರಿಗೆಯ ಭಾರವನ್ನು ಗಣನೀಯವಾಗಿ ತಗ್ಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೇಶದ ಜನಮೆಚ್ಚುಗೆ ಗಳಿಸಿದೆ. ರೂ. 3 ಲಕ್ಷದವರೆಗೆ ವೈಯುಕ್ತಿಕ ತೆರಿಗೆಯ ಹೊರೆಯನ್ನು ಇಳಿಸಿರುವುದು ಮಧ್ಯಮವರ್ಗದ ಮುಖದಲ್ಲಿ ಮಂದಹಾಸ ಮೂಡಿದೆ” ಎಂದು ಅಭಿಪ್ರಾಯಪಟ್ಟಿದೆ.
“ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದೆ.


