ಸಿನಿಮಾ ಸ್ಟಾರ್‌ಗಳ ಹುಟ್ಟಿದ ದಿನವನ್ನು ಅಭಿಮಾನಿಗಳು ಅದ್ದೂರಿ ಸಂಭ್ರಮದಿಂದ ಆಚರಿಸುವುದು ಕಳೆದೆರಡು ದಶಕದಿಂದ ಸಾಮಾನ್ಯವಾಗಿರುವ ಸಂಗತಿ. ಅದರಲ್ಲಿ ಹಲವು ಸ್ಟಾರ್‌ಗಳು ತಮ್ಮ ಬರ್ತಡೆಯನ್ನು ಅದ್ದೂರಿಯಾಗಿ ಮಾಡಿಕೊಂಡರೆ, ಕೆಲವರು ಯಾವುದೋ ಒಂದು ಸಂದರ್ಭವನ್ನು ಮುಂದಿಟ್ಟು ತಮ್ಮ ಬರ್ತಡೇಯನ್ನು ಆಚರಿಸಿಕೊಳ್ಳುವುದಿಲ್ಲವೆಂದು ಘೋಷಿಸುವ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುವಂತಹದ್ದನ್ನು ಮಾಡಿದ್ದಾರೆ. ಈ ಎಲ್ಲದರ ನಡುವೆ ವಿಶೇಷವಾಗಿದ್ದು ದರ್ಶನ್ ಹುಟ್ಟಿದ ದಿನದ ಆಚರಣೆ.
ದರ್ಶನ್ ತನ್ನ ಹುಟ್ಟಿದ ಹಬ್ಬದ ಒಂದು ತಿಂಗಳ ಮುಂಚೆಯೇ ಮನೆಮುಂದೆ “ಯಾರೂ ಹಾರತುರಾಯಿ ತರಬೇಡಿ, ಬದಲಾಗಿ ತಮ್ಮ ಕೈಲ್ಟಾದಷ್ಟು ದಿನಸಿ ಸಾಮಗ್ರಿಗಳನ್ನು ತಂದುಕೊಡಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿ ಬ್ಯಾನರ್ ಹಾಕಿದ್ದರು.

ಅದರಂತೆಯೇ ಅಭಿಮಾನಿಗಳು ಸಾಕಷ್ಟು ದಿನಸಿಗಳನ್ನು ತಂದು ದರ್ಶನ್ ಮನೆ ತುಂಬಿಸಿದ್ದರು. ಅಲ್ಲದೆ ಮೈಸೂರಿನ ಅಭಿಮಾನಿಗಳು ಹತ್ತಾರು ಮರಗಳಿಗೆ ಎರಡೆರಡು ಲೋಟಗಳನ್ನು ನೇತುಹಾಕಿ ಒಂದು ಲೋಟಕ್ಕೆ ನೀರನ್ನು, ಮತ್ತೊಂದು ಲೋಟಕ್ಕೆ ಆಹಾರವನ್ನು ಹಾಕಿ ದರ್ಶನ್ ಹುಟ್ಟಿದ ದಿನವನ್ನು ಸಂಭ್ರಮಿಸಿದ್ದರು. ಈ ಎಲ್ಲಾ ಕಾರಣಗಳಿಂದ ಸಿನಿ ಅಂಗಳದಲ್ಲಿ ಕೇಜಿಗಟ್ಟಲೆ ಕೇಕ್ ಕಟ್ ಮಾಡಿ ಕುಣಿದು ಕುಪ್ಪಳಿಸುವ ಸಿನಿಮಾ ಸ್ಟಾರ್‍ಗಳಿಗೆ ದರ್ಶನ್ ಹುಟ್ಟಿದ ಹಬ್ಬದ ಸಂಭ್ರಮ ಆದರ್ಶವಾಗಬೇಕು.
ಆದರೆ, ಈಗ ದರ್ಶನ್ ಬರ್ತಡೇ ಸಂಭ್ರಮ ಆದರ್ಶದ ಸುದ್ದಿಗಿಂತ ಕಿರಿಕ್ ಪಾರ್ಟಿಯ ಸದ್ದುಗದ್ದಲದಿಂದ ಸುದ್ದಿಯಾಗುತ್ತಿದೆ. ಅಂತದ್ದೇನಾಯಿತು ಎಂದರೆ, ದರ್ಶನ್ ಬರ್ತಡೇಗೆ ಸ್ಯಾಂಡಲ್‍ವುಡ್‍ನ ಎಲ್ಲಾ ಸ್ಟಾರ್‍ಗಳು ವಿಶ್ ಮಾಡಿದ್ದರು. ಅದರಲ್ಲಿ ಪುನೀತ್ ಕೂಡ ‘ಹ್ಯಾಪಿ ಬರ್ತಡೇ ದರ್ಶನ್’ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ‘ಥ್ಯಾಂಕ್ಸ್ ಸರ್, ಡಿ ಬಾಸ್ ರೇಂಜ್‍ಗೆ ನೀವು ಬೆಳೆಯಬೇಕು’ ಎಂದು ‘ಡಿ ಬಾಸ್ ಕ್ರೇಜ್ ಕಾ ಬಾಪ್’ ಎನ್ನುವ ಟ್ವಿಟರ್ ಅಕೌಂಟ್‍ನಿಂದ ದರ್ಶನ್ ಅಭಿಮಾನಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.
ಈ ಪ್ರತಿಕ್ರಿಯೆ ಪುನೀತ್ ಅಭಿಮಾನಿಗಳನ್ನು ಸಿಟ್ಟಿಗೇರಿಸಿದೆ. ಪುನೀತ್ ಅಭಿಮಾನಿಗಳು ಪುನೀತ್ ರೇಂಜ್ ಎಲ್ಲರಿಗಿಂತ ಮೇಲಿದೆ, ಅವರು 08ನೇ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದವರು, ಪುನೀತ್ ರೇಂಜ್‍ಗೆ ಬೆಳಿಬೇಕಿರೋದು ದರ್ಶನ್ ಎಂದು ವಾದಕ್ಕಿಳಿದಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಹಸಿ-ಹುಸಿ ಕೋಪ-ತಾಪಗಳಿದ್ದರೂ ಒಂದು ಮಟ್ಟಕ್ಕೆ ಎಲ್ಲರೂ ಚೆನ್ನಾಗಿಯೇ ಇದ್ದಾರೆ. ಆದರೆ ಈ ಅಭಿಮಾನಿಗಳ ಹುಚ್ಚಾಟದಿಂದ ಬೂದಿಮುಚ್ಚಿದ ಕೆಂಡದಂತಿರುವ ಸ್ಟಾರ್‌ಗಳ ಶೀತಲ ಸಮರದ ಬೆಂಕಿಗೆ ತುಪ್ಪಸುರಿದಂತಾಗುತ್ತಿದೆ.
ಇದಲ್ಲದೆ, ದರ್ಶನ್ ಬರ್ತಡೇ ದಿನ ಅವರ ಮನೆಮುಂದೆ ಜಮಾಯಿಸಿದ್ದ ಅಭಿಮಾನಿಗಳು ಅಲ್ಲೂ ಇಲ್ಲಸಲ್ಲದ ಕಿತಾಪತಿ ಮಾಡಿ ದರ್ಶನ್ ಮನೆಯ ನೆರೆಹೊರೆಯವರು ದರ್ಶನ್‍ಗೆ ಹಿಡಿಶಾಪ ಹಾಕುವಂತೆ ಮಾಡಿದ್ದಾರೆ. ಬರ್ತಡೇ ಸೆಲೆಬ್ರೆಷನ್‍ಗೆ ಬಂದಿದ್ದ ಫ್ಯಾನ್‍ಗಳು ಪಕ್ಕ-ಪಕ್ಕದ ಮನೆಯ ಹಲವಾರು ವಸ್ತುಗಳನ್ನು ಹಾಳುಗೆಡವಿ ಹೋಗಿದ್ದಾರೆ. ಅದು ಯಾವ ರೇಂಜಿಗೆಂದರೆ ಪಕ್ಕದ ಮನೆಯ ಬಳಿ ನಿಂತಿದ್ದ ಕಾರಿನ ಮೇಲೆ ಹತ್ತಿ, ಕುಳಿದುಕುಪ್ಪಳಿಸಿ ಕಾರಿನ ಮೇಲೆಲ್ಲಾ ಗೀಚಿ ಕಾರು ಗುಜರಿ ಸೇರುವ ಹಂತಕ್ಕೆ ಹಾಳು ಮಾಡಿ ಹೋಗಿದ್ದಾರೆ.
ಇದರಿಂದಾಗಿ ನೆರೆಹೊರೆಯವರು ದರ್ಶನ್ ಬರ್ತಡೇ ಮ್ಯಾನೇಜ್‍ಮೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ಅದೇ ದಿನ ಅಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಪೇದೆಯ ಮೇಲೆ ಅಭಿಮಾನಿ ಪುಂಡರು ಹಲ್ಲೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಇಂತಹ ಅಭಿಮಾನಿಗಳ ಮಂಗಾಟದಿಂದಾಗಿ ಹಲವು ವಿಶೇಷತೆಯಿಂದ ಕೂಡಿದ್ದ ಬರ್ತಡೇ ಸಂಭ್ರಮ, ಕಿರಿಕ್ ಪಾರ್ಟಿಯಾಗಿ ಮಾರ್ಪಟ್ಟಿದೆ. ಕಳೆದ ಕೆಲವು ದಿನಗಳ ಹಿಂದೆ ಅಂಡ್ ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ ಎಂದಿದ್ದ ದರ್ಶನ್, ತಮ್ಮ ಅಭಿಮಾನಿಗಳಿಗೆ ಅಂಡ್ ಬಗ್ಗಿಸಿಕೊಂಡು ತಮ್ಮ ಕೆಲಸ ನೋಡ್ಕಂಡ್ ಸುಮ್ಮನಿರಿ ಎಂದು ಹೇಳದಿದ್ದರೆ ಇಂತಹ ರಾದ್ಧಾಂತಗಳು ನಿಲ್ಲುವುದಿಲ್ಲ.


