Homeಮುಖಪುಟಕೋವಿಡ್ ತಂದಿಟ್ಟ ಮನೆಯೊಳಗಿನ ಹಿಂಸೆಯ ಸವಾಲುಗಳು

ಕೋವಿಡ್ ತಂದಿಟ್ಟ ಮನೆಯೊಳಗಿನ ಹಿಂಸೆಯ ಸವಾಲುಗಳು

- Advertisement -
- Advertisement -

ಕರೋನ ವೈರಸ್ಸಿನಿಂದ ಬಚಾವಾಗಲು ಮನೆಯ ಒಳಗೇ ಇರಿ. ನಿಮ್ಮ ಮನೆಯ ಒಳಗೆ ನೀವಿರುವ ತನಕ ನಿಮ್ಮನ್ನು ವೈರಸ್ ಎಂಬ ಸೂಕ್ಷ್ಮಜೀವಿಯೂ ಮುಟ್ಟಲಾರದು. ಹೊರಗೆ ಬಂದಿರೋ, ನಿಮ್ಮ ಜೀವಕ್ಕೆ ಹಾನಿ ಖಂಡಿತಾ ಎಂದು ಸರ್ಕಾರ ಪದೇ ಪದೇ ಹೇಳುತ್ತಲೇ ಇದೆ. ಇದನ್ನು ಜಗತ್ತಿನಾದ್ಯಂತ ಪಾಲಿಸಲು ದೇಶಗಳು ಪ್ರಯತ್ನ ಪಡುತ್ತಿವೆ. ಸಾವಿರ ಸಾವಿರದ ಸಂಖ್ಯೆಯಲ್ಲಿ ಜೀವಗಳು ವೆಂಟಿಲೇಟರಿನ ತುದಿಯಲ್ಲಿ ಉಸಿರು ಕಳೆದುಕೊಳ್ಳುತ್ತಿರುವಾಗ ದೇಶ, ಖಂಡಗಳಿಗೆಲ್ಲ ನಡುಕ ಹುಟ್ಟಿಸಿರುವ ಈ ಕಣ್ಣಿಗೆ ಕಾಣದ ರೋಗಾಣುವಿನ ಶಕ್ತಿಯಾದರೂ ಎಂಥದ್ದು ಎಂದು ಸೋಜಿಗ ಆಗದೇ ಇರದು.

ಮನೆಯಲ್ಲೇ ಇರಬೇಕು ಎನ್ನುವುದು ಸರ್ಕಾರದ ಆಜ್ಞೆ. ಅದಕ್ಕೆ ಅನುವು ಮಾಡಲೆಂದು ಲಾಕ್‍ಡೌನ್ ಕೂಡ ಆಗಿದೆ. ಯಾರೂ ಕಾರಣ ಇಲ್ಲದೆ, ಸೂಕ್ತ ಪಾಸ್ ಅಥವಾ ಅನುಮತಿ ಇಲ್ಲದೆ ಓಡಾಡುವಂತಿಲ್ಲ. ಇದೆಲ್ಲಾ ಕಣ್ಣಿಗೆ ಕಾಣದ ರೋಗಾಣುವಿನ ಮುಷ್ಠಿಯಿಂದ ದೂರ ಇರುವ ಯತ್ನ. ಇದು ಒಂದು ಹಂತದ ಹೋರಾಟ. ಇನ್ನೊಂದು ಹಂತದ ಹೋರಾಟ ಎಂದರೆ ದಿನಬೆಳಗಾದರೆ ಮನೆಯಿಂದ ಹೊರಗೆ ಬಿದ್ದು ತಂತಮ್ಮ ಕೆಲಸಕ್ಕೆ ಹೋಗಿ ಬಂದು ಮಾಡಿಕೊಂಡು ದುಡಿದು ಉಣ್ಣುತ್ತಿದ್ದ ಜನ ಒಮ್ಮಿಂದೊಮ್ಮೆಲೆ ತಮ್ಮ ಸಾಮಾಜಿಕ ಚೌಕಟ್ಟಿನಿಂದ ಹೊರಗೆ ನಿಂತು ನೀರಿನಿಂದ ಹೊರಕ್ಕೆ ಹಾಕಿದ ಮೀನಿನಂತೆ ಚಡಪಡಿಸುತ್ತಿದ್ದಾರೆ. ಇದರಲ್ಲಿ ಹೆಣ್ಣು, ಗಂಡು, ಮಗು ಎಂಬ ಭೇದವಿಲ್ಲ.

ಆಧುನಿಕ ಸಮಾಜದಲ್ಲಿ ಬದುಕುತ್ತಿರುವ ಮನುಷ್ಯನ ಮೊದಲ ಓಟ ಮನೆಯಿಂದ ಹೊರಗೆ ಹೋಗುವಲ್ಲಿ ಶುರುವಾಗಿ, ಸಮಾಜದ ವಿವಿಧ ಆಯಾಮಗಳನ್ನು ಅನುಭವಿಸಿ ಮನೆಗೆ ವಾಪಾಸ್ ಮರಳುವಲ್ಲಿ ಕೊನೆಯ ಓಟದೊಂದಿಗೆ ಪರ್ಯವಸಾನಗೊಳ್ಳುತ್ತದೆ.

ಮನೆ ಎಂಬುದೊಂದು ತಾಣ. ಸುರಕ್ಷತೆಯ ಭರವಸೆಯನ್ನು ನಿಸ್ಸಂದೇಹವಾಗಿ, ನಿರುದ್ವಿಗ್ನವಾಗಿ, ಯಾವುದೇ ಷರತ್ತುಗಳಿಗೆ ಒಳಪಡಿಸದೆ ಸಮಾಧಾನವನ್ನು ಕೊಡುವ ಮೊಟ್ಟಮೊದಲ ಮತ್ತು ಕಟ್ಟಕಡೆಯ ಜಾಗ ಎನ್ನುವುದು ಸರ್ವವಿದಿತ.

ಆದರೆ ಈ ಮನೆಯೇ ಒಂದು ಹಿಂಸೆಯ ಕಾರ್ಯಸ್ಥಾನವಾಗಿ ಮಾರ್ಪಟ್ಟರೆ?

ಬೇಲಿಯೇ ಎದ್ದು ಹೊಲ ಮೆಯ್ದರೆ? ಪದ ಕುಸಿಯೆ ನೆಲವಿಹುದು, ಮತ್ತೆ ನೆಲವೇ ಕುಸಿದು ಹೋದರೆ?

ಈ ಅಂಕಿಅಂಶಗಳನ್ನು ಗಮನಿಸಿ.

* ಲಾಕ್ಡೌನ್ ಆದ ಕೆಲವೇ ದಿನಗಳಲ್ಲಿ ಮಕ್ಕಳ ಸಹಾಯವಾಣಿಗೆ ಬಂದ ದೂರುಗಳ ಸಂಖ್ಯೆ 92,000!

* ಮಕ್ಕಳನ್ನು ಬಳಸಿ ಸೃಷ್ಟಿಸಲಾಗುವ ಲೈಂಗಿಕ ಚಿತ್ರಗಳಿಗೆ 95% ಹೆಚ್ಚು ಬೇಡಿಕೆ. (ಈ ಸಂಬಂಧ ಭಾರತ ಸರ್ಕಾರ ತಂತ್ರಜ್ಞಾನ ಕಂಪನಿಗಳಾದ ಗೂಗಲ್ ಮತ್ತು ವಾಟ್ಸಾಪಿಗೆ ದೂರು ಸಲ್ಲಿಸಿದೆ)

* ಮಹಿಳೆಯರ ಮೇಲೆ ಆಗುವ ಕೌಟುಂಬಿಕ ಹಿಂಸೆಯಲ್ಲಿ ಜಗತ್ತಿನಾದ್ಯಂತ ಕನಿಷ್ಠ 15 ಮಿಲಿಯನ್ ಹೆಚ್ಚುವರಿ ಕೇಸುಗಳಾಗಿವೆ. ಇವೆಲ್ಲವೂ ಕೋವಿಡ್ ಸಂಬಂಧಿತ ಲಾಕ್‍ಡೌನ್ ಸಮಯದಲ್ಲಿ ರಿಜಿಸ್ಟರ್ ಆದಂಥವು.

* ಲಾಕ್‍ಡೌನ್ ಶುರುವಾದ ಕೆಲವೇ ದಿನಗಳಲ್ಲಿ ಭಾರತದ ಪೋಲಿಸ್ ಸ್ಟೇಷನ್ನುಗಳಲ್ಲಿ ಮತ್ತು ಸಹಾಯವಾಣಿಗಳ ಮೂಲಕ ದಾಖಲಾದ ದೂರುಗಳ ಸಂಖ್ಯೆ ಸಾವಿರ ದಾಟಿದೆ. ಲಾಕ್‍ಡೌನ್ ತೆರವಾಗುವ ಹೊತ್ತಿಗೆ ಈ ಸಂಖ್ಯೆ ಕನಿಷ್ಠ ನಾಲ್ಕು ಪಟ್ಟು ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.

ಇದಕ್ಕೆ ಕಾರಣಗಳು ಹಲವಾರು. ಮನೆಯಲ್ಲೇ ಬಂಧಿಯಾಗಬೇಕಾದ ಸಂದರ್ಭದಲ್ಲಿ, ಕಾನೂನು ವ್ಯವಸ್ಥೆಯಲ್ಲಿ ಇರುವ ಏಜೆನ್ಸಿಗಳು `ಪೋಲಿಸ್, ಸಹಾಯವಾಣಿ, ವಕೀಲರು, ಕೋರ್ಟು ಇತ್ಯಾದಿ’ ಎಲ್ಲವೂ ದೇಶದ ಜನರನ್ನು ಮನೆಯ ಒಳಗೆ ಇರಿಸಲು ಹರಸಾಹಸ ಪಡುತ್ತಿವೆ. ಇದರ ಪರಿಣಾಮವಾಗಿ ಬೇರೆ ನಮೂನೆಯ ಸಮಸ್ಯೆಗಳಿಗೆ ಗಮನ ಹರಿಸುವುದು ಸದ್ಯದ ಅವಶ್ಯಕತೆ ಅಲ್ಲ.

ಊರಿಂದ ಊರಿಗೆ ಪ್ರಯಾಣ ಸಾಧ್ಯವೇ ಇಲ್ಲದಿರುವುದರಿಂದ ಹಿಂಸೆ ಉಂಟಾದ ಸಮಯದಲ್ಲಿ ಯಾರೊಬ್ಬರ ಸಹಾಯಕ್ಕೆ ಇನ್ನೊಬ್ಬರು ಬರಲಾಗದಂತಹ ವಾತಾವರಣ ಇದೆ.

ಈಗ ನಾವು ಎದುರಿಸುತ್ತಿರುವುದು ಒಂದು ಭಯಾನಕ ಮತ್ತು ಅಪರೂಪದ ಘಟಿತ. ಇದು ನಮಗೆ ಈ ಮಟ್ಟದಲ್ಲಿ ಹಿಂದೆಂದೂ ಬೆದರಿಸಿರಲಿಲ್ಲ. ಎಲ್ಲರೂ ಮನೆಯಲ್ಲಿ ದಿನಗಟ್ಟಲೇ ಇರಬೇಕಾಗಿ ಬಂದಾಗ ಎಂತಹ ಅನ್ಯೋನ್ಯ ಪರಿವಾರ ಎಂದುಕೊಂಡರೂ ಒಬ್ಬರಿಗೊಬ್ಬರು ತಿಕ್ಕಾಟ ಆಗಿಬಿಡುವುದು ಅತ್ಯಂತ ಸಹಜವಾದ ವಿಷಯ. ಇದನ್ನು ತಿಳಿಹೇಳಲು ನಮ್ಮಲ್ಲಿ ಮಾನಸಿಕ ತಜ್ಞರು ಸನ್ನದ್ಧರಿಲ್ಲ.…ಒಂದು ಪಕ್ಷ ಕೆಲವು ಊರುಗಳಲ್ಲಿ ಇದ್ದರೂ ಅವರ ಹತ್ತಿರ ಯಾವ ರೀತಿಯಲ್ಲಿ ತಮ್ಮ ಸಮಸ್ಯೆಯನ್ನು ವೈಯಕ್ತಿಕವಾಗಿಸದಂತೆ ಹೇಳಿಕೊಳ್ಳಬಹುದು ಎನ್ನುವ ತಯಾರಿ ಬಹುತೇಕ ಜನಕ್ಕೆ ಇಲ್ಲ.

ಯಾಕೆಂದರೆ ಎಲ್ಲರೂ ಹೊರಗಿನ ಸೂಕ್ಷ್ಮಾಣುಜೀವಿಯನ್ನು ಸೋಲಿಸುವಲ್ಲಿ ನಿರತರಾಗಿದ್ದೇವೆಯೇ ಹೊರತು ಮನೆಯೊಳಗಿನ ಸೂಕ್ಷ್ಮ ವಾತಾವರಣವನ್ನು ನಿಭಾಯಿಸುವ ತಯಾರಿ ಮಾಡಿಕೊಂಡೇ ಇಲ್ಲ. ಇದು ಮುಖ್ಯ ಎಂದು ಸರ್ಕಾರಕ್ಕೂ ಅನ್ನಿಸದೇ ಹೋಗಿರಬೇಕು.

ಮದ್ಯದಂಗಡಿಗಳು ಲಾಕ್‍ಡೌನ್ ಸಮಯದಲ್ಲಿ ದಿಢೀರನೆ ಮುಚ್ಚಿರುವ ಪ್ರಯುಕ್ತ ಮನೆಗಳಲ್ಲಿ ಮದ್ಯ, ಸಾರಾಯಿಯ ಮೇಲೆ ಅವಲಂಬಿತರಾಗಿರುವವರ ಗತಿ ತೀರಾ ಕಷ್ಟದಲ್ಲಿದೆ.

ಹಾಗಂತ ಸಾರಾಯಿ ಸಿಗುತ್ತಲೇ ಇಲ್ಲ ಎಂತಲೂ ಹೇಳಲಾಗದು. ಲಾಕ್‍ಡೌನ್ ಆದ ಮೊದಲ ದಿನಗಳನ್ನು ಹೊರತುಪಡಿಸಿದರೆ ಸಾರಾಯಿ/ಮದ್ಯ ಮೊದಲಿಗಿಂತ ನಾಲ್ಕೈದು ಪಟ್ಟು ಹೆಚ್ಚು ದುಬಾರಿಯಾಗಿ ಬಡವರ ಕೈಗೆ ಸಿಗುತ್ತಿದೆ. ಸರ್ಕಾರ ಅನ್ನ, ಬೇಳೆಯ ವ್ಯವಸ್ಥೆಯನ್ನೇನೋ ಮಾಡುತ್ತಿದೆ. ಅದಕ್ಕಾಗಿ ಧನ್ಯವಾದಗಳನ್ನು ಹೇಳಿಬಿಡೋಣ. ಆದರೆ ಮದ್ಯಕ್ಕೆ ಐದು-ಹತ್ತು ಪಟ್ಟು ಹೆಚ್ಚು ಬೆಲೆ ತೆತ್ತು ತರುವಾಗ ಮನೆಯಲ್ಲಿ ಒಂದು ಬಗೆಯ ಘರ್ಷಣೆ ಆಗುವುದು ಬಹು ಸಾಮಾನ್ಯ ಸಂಗತಿ.

ದುಡಿಮೆಯೇ ಇಲ್ಲದೆ ಇರುವ ದಿನಗಳಲ್ಲಿ ಇದ್ದ ಬದ್ದ ಪುಡಿಗಾಸನ್ನು ಯಾವ ಎಗ್ಗೂ ಇಲ್ಲದೆ ಹೆಂಡಕ್ಕೆ ಸುರಿಯುವಾಗ ಹೆಂಡತಿ ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ಆತಂಕ ಕೆಳ ಮಧ್ಯಮವರ್ಗದಲ್ಲಿ, ಶ್ರಮಿಕ ಜನಗಳಲ್ಲಿ ಜಗಳದ ಸ್ವರೂಪ ಪಡೆಯದೇ ಇದ್ದೀತೆ? ಇದರ ನೇರ ಪರಿಣಾಮವಾಗಿ ಕೌಟುಂಬಿಕ ಹಿಂಸೆಯ ಹೆಚ್ಚಳ ನೇರವಾಗಿಯೇ ಆಗುತ್ತದೆ.

ಇನ್ನು ಪೀಡೋಫೈಲ್ಸ್ ಅಥವಾ ಶಿಶುಕಾಮಿಗಳ ಸಂಗತಿಯಂತೂ ಭಯಾನಕವಾದದ್ದು. ಅವರಿಗೆ ಸಿಗುವ ಅವಕಾಶಗಳು ಅಪರಿಮಿತ. ಕೈಯ್ಯಲ್ಲಿ ಅವರ ಮಾನಸಿಕ ವಾಂಛೆಯನ್ನು ತೀರಿಸಲು ಡೇಟಾ ತುಂಬಿದ ಮೊಬೈಲ್ ಇದೆ. ಶಿಶುಕಾಮದ ಚಿತ್ರಗಳೂ ಅಂತರ್ಜಾಲದಲ್ಲಿ ಹೇರಳವಾಗಿವೆ. ಅವುಗಳನ್ನು ಹೆಕ್ಕಿ ಕೊಡಲು ಗೂಗಲ್‍ನಂತಹ ಸರ್ಚ್ ಎಂಜಿನುಗಳಿವೆ. ಮತ್ತೆ ಇದನ್ನೆಲ್ಲಾ ಅನುಭವಕ್ಕೆ ಇಳಿಸಲು ಮನೆಯಲ್ಲಿ ಮಕ್ಕಳಿದ್ದಾರೆ. ಅವರೀಗ ಅಸಹಾಯಕರು. ಯಾರ ಹತ್ತಿರವೂ ಸಹಾಯಕ್ಕೆ ಅಥವಾ ಬೆಂಬಲಕ್ಕೆ ಹೋಗಲಾರರು. ಹೋದರೂ ಅವರಿಗೆ ಸಹಾಯ ಸಿಗುವ ಸಂಭವವೇ ಇಲ್ಲ, ಯಾಕೆಂದರೆ ಎಲ್ಲರ ಮನಸ್ಸಿನಲ್ಲಿ ಈಗ ಕೋವಿಡ್ ತುಂಬಿದೆ. ಯಾವ ರಕ್ಷಣಾ ವ್ಯವಸ್ಥೆಯೂ ಈಗ ಶಿಶುಕಾಮಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ವ್ಯವಧಾನ ಹೊಂದಿಲ್ಲ. ಇದರ ಪರಿಣಾಮವಾಗಿ ಆಗಲೇ ದುರ್ಬಲವಿರುವ ಮುಗ್ಧ “ಬಲಿ”ಗಳು ಇನ್ನಷ್ಟು ದುರ್ಬಲವಾಗಿವೆ. ಮಕ್ಕಳಿಗೀಗ ರಕ್ಷಣೆಯೇ ಇಲ್ಲ. ಯಾಕೆಂದರೆ, ಸಮಾಜದ, ಸರ್ಕಾರದ ಪ್ರಕಾರ ಮನೆ ಇಂದು ‘ಸುರಕ್ಷಿತ’ ತಾಣ.

ಇದು ಬಹುಪಾಲು ಅಥವಾ ಕೆಲವು ಪಾಲು ಜನಸಂಖ್ಯೆಗೆ ಸತ್ಯವೇ ಇರಬಹುದು. ಆದರೆ ಇದೇ ಸಮಾಜಕ್ಕೆ, ದೇಶಕ್ಕೆ ಸೇರಿದ ಜನಸಂಖ್ಯೆಯ ಘಟಕ ಇದು. ಇದರ ಸಂಖ್ಯೆ ಕಡಿಮೆಯೋ ಜಾಸ್ತಿಯೋ ಹೇಳಲಾಗದು. ಆದರೆ ಇಲ್ಲಿ ಇರುವ ಮನಸುಗಳು, ವ್ಯಕ್ತಿಗಳು, ಮುಂದೂ ಇದೇ ಸಮಾಜದ ಭಾಗವಾಗಿ ಮುಂದುವರೆಯುತ್ತಾರೆ. ಚಿಕ್ಕಂದಿನ ಆಘಾತ, ಅನುಭವಿಸಿದ ಹಿಂಸೆ ಮುಂದೆ ಇನ್ಯಾವುದೋ ರೂಪ ತಾಳಿ ಅವರ ಮುಂದಿನ ಪೀಳಿಗೆಗೆ ಮಾರಕವಾಗಲಾರದೇ?

ವಿಷವನ್ನೇ ಬಿತ್ತಿ ವಿಷವನ್ನೇ ಬೆಳೆಯುವ ಈ ವ್ಯವಸ್ಥೆಯೊಳಗೆ ಹೊಸ ಭರವಸೆಯ ಬೆಳಕು ಹಿಂಸೆಯ ಮಧ್ಯದಿಂದಲೇ ಆರಂಭವಾದರೆ ಅದರ ಪರ್ಯವಸಾನ ಹೇಗೆ ಆಗಬಹುದು ಎನ್ನುವುದು ಎಂಥವರೂ ಯೋಚಿಸಬಹುದಾದ ಮತ್ತು ಯೋಚಿಸಲೇಬೇಕಾದ ವಿಚಾರ.

ಕೋವಿಡ್ ಲಾಕ್ಡೌನ್ ಮುಗಿದ ನಂತರ ಈ ವೈರಸ್ಸಿನ ಹಿಡಿತದಿಂದ ಮನುಷ್ಯಕುಲವನ್ನು ರಕ್ಷಿಸುವುದು ಹೇಗೆ ಎಂದು ಸರ್ಕಾರಗಳು ಯೋಚಿಸುವಾಗ ಸರ್ಕಾರಗಳು ಕೌಟುಂಬಿಕ ಹಿಂಸೆಯ ಬಗ್ಗೆ ದಾಖಲಾದ ದೂರುಗಳನ್ನೂ ಅತ್ಯಂತ ಕಾಳಜಿಯಿಂದ ನೋಡಬೇಕಾಗುತ್ತದೆ.

ಆರ್ಥಿಕ ಮತ್ತು ಸಾಮಾಜಿಕ ಸಬಲತೆ ಇಲ್ಲದೆ ಇರುವ ಸಂದರ್ಭದಲ್ಲಿ ಮಧ್ಯಮವರ್ಗದಿಂದ ಹಿಡಿದು ಕೆಳವರ್ಗದವರೆಗೂ ಮಹಿಳೆಯ ಮತ್ತು ಮಕ್ಕಳ ಸುರಕ್ಷೆಯ ಜವಾಬ್ದಾರಿಯನ್ನು ವ್ಯವಸ್ಥೆ ಮತ್ತು ಸರ್ಕಾರ ಹೊರದೇ ಹೋದರೆ, ದೇಹಕ್ಕೆ ಅಂಟುವ ವೈರಸ್ಸೇನೋ ಕೊನೆಯಾದೀತು. ಅದು ಹೋಗುವಾಗ ಸಮಾಜವನ್ನು ಮತ್ತಷ್ಟು ರೋಗಗ್ರಸ್ತ ಮಾಡಿ ಹೋಗುವುದು ಖಾತ್ರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ನಮ್ಮ ಬೆಂಗಳೂರಿನಂತ ದೊಡ್ಡ ಊರುಗಳಲ್ಲಿ ೨೪ ತಾಸು ಮನೆಯಲ್ಲೇ ಉಳಿಯುವಂತಾ ಅಗಲವಾದ ಮನೆಗಳಿವೆಯೇ ಎಂಬುದನ್ನೂ ನೋಡಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...