ಸ್ವಾತಂತ್ರ ಬಂದು 75 ವರ್ಷ ಕಳೆದರೂ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಕೆಟ್ಟ ಪದ್ದತಿ ಚಾಲ್ತಿಯಲ್ಲಿದೆ. ಹೌದು, ಅಂತಹದ್ದೇ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಅಂತರ್ಜಾತಿ ಮದುವೆಯಾದ ದಂಪತಿಗೆ ಊರಿನಿಂದ ಬಹಿಷ್ಕಾರ ಹಾಕಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.
ದೂರಿನ ಪ್ರಕಾರ, ಕೊಳ್ಳೇಗಾಲ ಸಮೀಪದ ಕುಣಗಳ್ಳಿ ಗ್ರಾಮದ ಉಪ್ಪಾರ ಸಮುದಾಯದ ಗೋವಿಂದ ಶೆಟ್ಟಿ ಅವರು, 2018ರ ಸೆಪ್ಟೆಂಬರ್ 18ರಂದು ಮಂಡ್ಯ ಜಿಲ್ಲೆಯ ಹೂವಿನಕೊಪ್ಪಲು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ತನ್ನ ಗೆಳತಿ ಶ್ವೇತಾಳನ್ನು ವಿವಾಹವಾಗಿದ್ದರು. ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ.
ಈ ಅಂತರ್ಜಾತಿ ವಿವಾಹದ ವಿಷಯ ತಿಳಿದ ಗ್ರಾಮದ ಮುಖಂಡರು ಸಭೆ ಕರೆದು, ಗೋವಿಂದ ಶೆಟ್ಟಿ ಊರಿನ ಕುಲ ಕೆಡಿಸಿದ್ದಾನೆ ಎಂದು ಹೇಳಿ ಅವರ ತಲೆ ಬೋಳಿಸಿ, ಆತನ ಕುಟುಂಬಕ್ಕೆ 1.25 ಲಕ್ಷ ರೂಪಾಯಿ ದಂಡ ವಿಧಿಸಿ, ಗ್ರಾಮದಿಂದ ಬಹಿಷ್ಕರಿಸಿದ್ದರು.
ಇದನ್ನೂ ಓದಿ: ದಲಿತ ಹೋರಾಟಗಾರ ಸಂದೇಶ್ ಆತ್ಮಹತ್ಯೆಗೆ ಯತ್ನ; ಕಿರುಕುಳ ನೀಡಿದವರನ್ನು ಬಂಧಿಸಿ: ಸಿದ್ದರಾಮಯ್ಯ ಆಗ್ರಹ
ದಂಪತಿಗಳು ಮಳವಳ್ಳಿಯಲ್ಲಿ ಇದ್ದು ಜೀವನೋಪಾಯ ನಡೆಸುತ್ತಿದ್ದರು. ಆದರೆ, ಗೋವಿಂದ ಶೆಟ್ಟಿ ಅವರು, ತನ್ನ ಹೆಂಡತಿ ಒಕ್ಕಲಿಗರ ಜಾತಿ ಎಂದು ಸುಳ್ಳು ಹೇಳುತ್ತ ಆಗಾಗ ಊರಿಗೆ ಹೋಗಿ ತನ್ನ ತಂದೆತಾಯಿಗೆ ಭೇಟಿಯಾಗುತ್ತಿದ್ದರು. ಆದರೆ, ಫೆಬ್ರುವರಿಯಲ್ಲಿ ಗೋವಿಂದ ಶೆಟ್ಟಿ ಅವರ ತಾಯಿಯು ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಹೆಂಡತಿಯನ್ನೂ ಕುಣಗಲ್ಲಿಗೆ ಕರೆದುಕೊಂಡು ಬಂದಿದ್ದರು.
ಈ ವಿಚಾರ ಗ್ರಾಮದ ಮುಖಂಡರಿಗೆ ಕೆರಳಿಸಿದೆ, ಹಾಗಾಗಿ ಮತ್ತೆ ಅವರ ತಂದೆಯನ್ನು ಕರೆಸಿ ನಿನ್ನ ಮಗ ಹೆಂಡತಿಯನ್ನು ಮತ್ತೆ ಊರೊಳಗೆ ಕರೆದುಕೊಂಡು ಬಂದು ಕುಲ ಕೆಡಸಿದ್ದಾನೆ ಹಾಗಾಗಿ 3 ಲಕ್ಷ ರೂ. ದಂಡ ವಿಧಿಸಿ, ಮಾರ್ಚ್ 1ರೊಳಗೆ ಪಾವತಿಸಬೇಕು. ಒಂದು ವೇಳೆ ಅಷ್ಟರಲ್ಲಿ ಕೊಡದೇ ಹೋದಲ್ಲಿ 6 ಲಕ್ಷ ರೂ.ಗೆ ಹೆಚ್ಚಿಸಬೇಕಾಗುತ್ತದೆ ಎಂದಿದ್ದಾರೆ. ಅದರ ಜೊತೆಗೆ ಗ್ರಾಮಸ್ಥರೊಂದಿಗೆ ಮಾತನಾಡದಂತೆ ನಿಷೇಧ ಹೇರಿದ್ದು, ಅವರಿಗೆ ಗ್ರಾಮದ ಅಂಗಡಿಗಳಲ್ಲಿ ಯಾವುದೇ ಅಗತ್ಯ ವಸ್ತುಗಳನ್ನು ನೀಡದಂತೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಗೋವಿಂದ ಶೆಟ್ಟಿ ಅವರು ಮಾರ್ಚ್ 1ರಂದು ಡಿವೈಎಸ್‌ಪಿ ಕಚೇರಿಯಲ್ಲಿ ದೂರು ನೀಡಿದ್ದಾರೆ. ಆದರೆ ಅವರು ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿರಲಿಲ್ಲ. ಆಗ ಅವರು ಸಿಪಿಎಂ ಮುಖಂಡರಾದ ಕೃಷ್ಣೆಗೌಡರನ್ನು ಭೇಟಿಯಾಗಿ ತಮಗಾದ ಅನ್ಯಾಯದ ಬಗ್ಗೆ ವಿವರಿಸಿದ್ದಾರೆ. ಆನಂತರದಲ್ಲಿ ದಲಿತ ಹಕ್ಕುಗಳ ಸಮಿತಿ ಹಾಗೂ ಸಿಪಿಎಂ ಪಕ್ಷ ಮಧ್ಯಪ್ರವೇಶ ಮಾಡಿ, ಪ್ರಕರಣದ ಬಗ್ಗೆ ಎಸ್‌ಪಿ ಅವರ ಗಮಮಕ್ಕೆ ತಂದಿದ್ದಾರೆ.
ಆನಂತರ ಡಿವೈಎಸ್‌ಪಿ ಕ್ರಮಕ್ಕೆ ಮುಂದಾಗಿ, ಮಾ.3ರಂದು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಸಧ್ಯ ಸಮಾಜದ ಮುಖಂಡರಾದ ವೆಂಕಟಶೆಟ್ಟಿ, ಮಹದೇವ, ಮೋಂಡ ಶೆಟ್ಟಿ ಕನ್ನಪ್ಪ, ನಂಜಶೆಟ್ಟಿ, ಮಹದೇವ ಶೆಟ್ಟಿ, ಸಿದ್ದೇಶ್ ಸೇರಿ 15ಜನರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಪೊಲೀಸರು ಆರೋಪಿಗಳನ್ನು ಪ್ರಶ್ನಿಸಿದಾಗ, ತಾವು ಯಾವುದೇ ರೀತಿಯ ಬಹಿಷ್ಕಾರ ಹಾಕಿಲ್ಲ ಗೋವಿಂದರಾಜುವನ್ನು ಅವರ ತಂದೆಯೇ ಮನೆಗೆ ಸೇರಿಸುತ್ತಿಲ್ಲ. ಹಾಗಾಗಿ ತಂದೆಯ ಮೇಲೆ ದೂರು ನೀಡುವ ಬದಲು ತಮ್ಮ ಮೇಲೆ ದೂರು ನೀಡಿದ್ದಾರೆ ಎಂದು ಉಪ್ಪಾರ ಸಮುದಾಯದ ಯಜಮಾನರು ಪ್ರತ್ಯಾರೋಪ ಮಾಡಿದ್ದಾರೆ. ಆದರೆ, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
ಸಧ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಆ ದಂಪತಿಗೆ 1.25ಲಕ್ಷ ರೂ. ಹಣ ನೀಡಲಾಗಿದೆ. ಇನ್ನೂ ಗ್ರಾಮದಲ್ಲಿ ಅವರ ಸುರಕ್ಷತೆಗಾಗಿ ಪೊಲೀಸರು ಕ್ರಮವಹಿಸಿದ್ದು, ದಂಪತಿ ಗ್ರಾಮದಲ್ಲಿ ನೆಲೆಯೂರಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಸಿಪಿಎಂ ಮುಖಂಡರಾದ ಕೃಷ್ಣೆಗೌಡರು ಮಾತನಾಡಿದ್ದು, ”ಕೊಳ್ಳೆಗಾಲ ಭಾಗದ ಗ್ರಾಮಗಳಲ್ಲಿ ಊರಿನ ಮುಖಂಡರ ಪಾರುಪತ್ಯ ಹೆಚ್ಚಾಗಿ ನಡೆಯುತ್ತದೆ. ಊರಿನ ಹಿಡಿತವನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಮನಸ್ಥಿಯಲ್ಲಿ ಆ ಮುಖಂಡರು ಪಾಳೇಗಾರರಂತೆ ವರ್ತಿಸುತ್ತಾರೆ. ಈ ರೀತಿಯಲ್ಲಿ ಯಾರಾದರೂ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದರೆ, ಅವರಿಗೆ ದಂಡ ವಿಧಿಸುವುದು, ಬಹಿಷ್ಕಾರ ಹಾಕುವುದನ್ನು ಮಾಡುತ್ತಾರೆ” ಎಂದು ತಿಳಿಸಿದರು.
”ಈ ಭಾಗದಲ್ಲಿ ಇದು ಒಂದೇ ಪ್ರಕರಣ ಅಲ್ಲ, ಇಂತಹ ಬಹಳಷ್ಟು ಪ್ರಕರಣಗಳಿವೆ. ಇದೇ ಕುಣಿಗಲ್ಲ ಗ್ರಾಮದ 10-12 ಹುಡುಗರು ಬೇರೆ ಜಾತಿಯ ಹುಡುಗಿಯರನ್ನು ಮದುವೆಯಾಗಿದ್ದಾರೆ. ಅವರೆಲ್ಲಾ ಈ ಪಾಳೆಗಾರಿಕೆ ಮನಸ್ಥಿತಿಯವರ ದಂಡ ಮತ್ತು ಶಿಕ್ಷೆಗೆ ಹೆದರಿ, ಊರಿಗೂ ಬರದೇ ಬೇರೆ ಬೇರೆ ಕಡೆಗಳಲ್ಲಿ ಬದುಕು ನಡೆಸುತ್ತಿದ್ದಾರಂತೆ. ಇದು ಪೊಲೀಸರಿಗೂ ಗೊತ್ತಿದೆ, ಅವರ ವಿರುದ್ಧ ದೂರು ನೀಡಲು ಯಾರೂ ಮುಂದೆ ಬರುವುದಿಲ್ಲ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.
”ಕೊಳ್ಳೆಗಾಲ ತಾಲೂಕಿನಲ್ಲಿ ಯಾರೆಲ್ಲ ಈ ಪಾಳೆಗಾರಿಕೆ ನಡೆಸುತ್ತಿದ್ದಾರೋ ಅಂತವರ ವಿರುದ್ಧ ಸಿಪಿಎಂ ಪಕ್ಷದ ವತಿಯಿಂದ ಇನ್ನೆರಡು ದಿನಗಳಲ್ಲಿ ಹೋರಾಟ ನಡೆಸುತ್ತೇವೆ. ಅವರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ ಎಂದು ಸಿಪಿಎಂ ಮುಖಂಡರಾದ ಕೃಷ್ಣೆಗೌಡರು ಹೇಳಿದರು.


