Homeಮುಖಪುಟಗೋಕಾಕ್ ವರದಿ ಹೋರಾಟ: ಕನ್ನಡದ ರಕ್ಷಣೆಗೆ ಈಗಲೂ ಮಾದರಿ

ಗೋಕಾಕ್ ವರದಿ ಹೋರಾಟ: ಕನ್ನಡದ ರಕ್ಷಣೆಗೆ ಈಗಲೂ ಮಾದರಿ

ಪ್ರತಿಭಟನೆ ಮಾಡಿದ ನಂತರ ಅವ್ರು ಹೋಗಿ ಸಂಪೂರ್ಣ ಕನ್ನಡದ ಪರವಾದ ವರದಿಯನ್ನು ಕೊಟ್ರು. ಅದನ್ನ ಗೋಕಾಕ್ ವರದಿ ಅಂತ ಕರೀತೀವಿ

- Advertisement -
- Advertisement -

ಕನ್ನಡಿಗರ ಕಸುವನ್ನು ಹೀರಿ, ಕನ್ನಡ ಸಂಸ್ಕೃತಿಯ ಮೇಲೆ ಯಜಮಾನಿಕೆ ಸಾಧಿಸುವ ಸಂಸ್ಕೃತದ ಹುನ್ನಾರಗಳು ಇಂದು ನಿನ್ನೆಯವಲ್ಲ. ಸಂಸ್ಕೃತಿಯ ಹೆಸರಿನ ಪ್ರಭುತ್ವ ರಾಜಕಾರಣದ ಭಾಷಿಕ ಅಸ್ತ್ರವೇ ಸಂಸ್ಕೃತ ಎಂಬುದನ್ನು ಭಾರತದ ಸಾಂಸ್ಕೃತಿಕ ರಾಜಕಾರಣದ ಚರಿತ್ರೆಯನ್ನು ಅರಿತವರಿಗೆ ಸರಳವಾಗಿಯೇ ತಿಳಿಯುವ ಸತ್ಯ. ದ್ರಾವಿಡ ಭಾಷಾ ಬಳಗಕ್ಕೆ ಸೇರಿದ ಕನ್ನಡವನ್ನು ಸಂಸ್ಕೃತದ ಅಧೀನ ಭಾಷೆಯಾಗಿ ಅಥವಾ ಸಂಸ್ಕತವನ್ನು ಎಲ್ಲ ಭಾಷೆಗಳ ತಾಯಿ ಎಂಬ ಹುಸಿ ನಂಬಿಕೆಯನ್ನು ಹುಟ್ಟುಹಾಕಿ ಸಂಸ್ಕೃತದ ಶ್ರೇಷ್ಠತೆಯನ್ನು ಸ್ಥಾಪಿಸುವ ಸದ್ದಿಲ್ಲದ ತಂತ್ರಗಾರಿಕೆಯೂ ಎಂದಿನಿಂದಲೂ ನಡೆದು ಬಂದಿದೆ. ಕಳೆದ ನಾಲ್ಕು ದಶಕಗಳ ಹಿಂದಿನ “ಗೋಕಾಕ್ ವರದಿ”ಯ ಹಿಂದೆಯೂ ಸಂಸ್ಕೃತವನ್ನು ಶೈಕ್ಷಣಿಕ ವಲಯದಲ್ಲಿ ನೆಲೆಯೂರಿಸುವ ಸಂಚುಗಳಿದ್ದದ್ದು, ಆದರೆ ಚಂಪಾ ಮತ್ತಿತರ ಕನ್ನಡಪರರ ಮಧ್ಯಪ್ರವೇಶ ಹಾಗೂ ವಿ.ಕೃ.ಗೋಕಾಕರಿಗಿದ್ದ ಕನ್ನಡದ ಬದ್ಧತೆಯ ಕಾರಣಕ್ಕೆ ಅಂತಹ ಪ್ರಯತ್ನಗಳು ವಿಫಲಗೊಂಡಿದ್ದನ್ನು ಚಂಪಾ ಅವರು ದಶಕಗಳ ಹಿಂದೆಯೇ ಸಂದರ್ಶನವೊಂದರಲ್ಲಿ ಬಯಲುಗೊಳಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ, ಡಾ.ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಯೋಜನೆಯೊಂದರ ಭಾಗವಾಗಿ ಪ್ರಕಟವಾದ “ಸಮಾಜವಾದಿ ಹೋರಾಟಗಾರರ ಸಂದರ್ಶನಗಳು” ಸಂಪುಟ 2ರಲ್ಲಿ ಈ ಮಾತುಕತೆ ದಾಖಲಾಗಿದೆ. ಬಿ.ಪೀರ್ ಬಾಷಾ ಅವರು ಚಂದ್ರಶೇಖರ್ ಪಾಟೀಲರೊಂದಿಗೆ ನಡೆಸಿದ ಸುದೀರ್ಘ ಸಂದರ್ಶನದಿಂದ ಈ ಕೆಳಗಿನ ಭಾಗವನ್ನು “ನಾನುಗೌರಿ” ಆಯ್ದುಕೊಂಡಿದೆ. ಈ ಸಂದರ್ಶನದ ಸಂಪೂರ್ಣ ಪಠ್ಯವು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದ ಈ ಮೇಲಿನ ಕೃತಿಯಲ್ಲಿ ಲಭ್ಯವಿದೆ.

ಕರ್ನಾಟಕದ ಶೈಕ್ಷಣಿಕ ಕ್ರಮದಲ್ಲಿ ಸಂಸ್ಕೃತವನ್ನು ನೆಲೆಯೂರಿಸುವ ನಿಟ್ಟಿನಲ್ಲಿ ಅಂದಿನ ಪೇಜಾವರ ಮಠಾಧೀಶರು ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್ ಅವರ ಮೇಲೆ ನಯವಾದ ಒತ್ತಡ ಹಾಕಿದ್ದನ್ನು, ಅದರ ಪರಿಣಾಮವಾಗಿ ಗುಂಡುರಾಯರು ಪಠ್ಯಕ್ರಮದಲ್ಲಿ ಸಂಸ್ಕೃತದ ಸ್ಥಾನಮಾನ ನಿರ್ಧರಿಸುವ ಹೊಣೆಯನ್ನು ವಿ.ಕೃ.ಗೋಕಾಕ್ ಅವರಿಗೆ ವಹಿಸಿದ್ದನ್ನು ಚಂಪಾ ಈ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಅಂತೆಯೇ ಸಂಸ್ಕೃತದ ಅಗತ್ಯವನ್ನು ಬದಿಗೆ ಸರಿಸಿದ ಗೋಕಾಕರ ಕನ್ನಡದ ಬದ್ಧತೆ ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೋಕಾಕರು ವರದಿ ರೂಪಿಸಿದ್ದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.

ಕರ್ನಾಟಕದಲ್ಲಿ ಸಂಸ್ಕೃತ ‌ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬಿ.ಜೆ.ಪಿ.ಸರಕಾರದ ಕ್ರಮವನ್ನು ಕನ್ನಡದ ಬರಹಗಾರರು ಹಾಗೂ ಹೋರಾಟಗಾರರು ವಿರೋಧಿಸುತ್ತಿರುವ ಸಂದರ್ಭದಲ್ಲಿ ಚಂಪಾ ಅವರ ಸಂದರ್ಶನದ ಓದು ಸಕಾಲಿಕವಾದದ್ದು ಎಂಬ ಹಿನ್ನೆಲೆಯಲ್ಲಿ ಈ ಆಯ್ದಭಾಗವನ್ನು “ನಾನುಗೌರಿ” ಪ್ರಕಟಿಸುತ್ತಿದೆ.

ಗೋಕಾಕ್ ನೇತೃತ್ವದ ಸಮಿತಿಗೆ ನೀವು ಪ್ರತಿಭಟಿಸಿ “ಗೋ-ಕಾಕ್, ಗೋ-ಬ್ಯಾಕ್’ ಹೋರಾಟ ಮಾಡಿದ್ದ ಬಗ್ಗೆ ಹೇಳ್ರೀ

ಗೋಕಾಕರ ಅಧ್ಯಕ್ಷತೆಯೊಳಗೆ ಒಂದು ಸಮಿತಿ ಆತು. ಅದಕ್ಕಿಂತ ಮುಂಚೆ ಈ ಸಂಸ್ಕೃತದ ಪ್ರಾಧಾನ್ಯವನ್ನು ಪ್ರತಿಭಟನೆ ಮಾಡಿ ಮೊಟ್ಟ ಮೊದಲು ಕನ್ನಡ ಚಳುವಳಿಯನ್ನು ಪ್ರಾರಂಭ ಮಾಡಿದವು ಬಂಡಾಯ ಸಾಹಿತ್ಯ ಸಂಘಟನೆಯವು. ಇದನ್ನ ಯಾರೂ ಹೇಳಿಲ್ಲ. ಅವ್ರೂ ಹೇಳ್ಕೊಳ್ತಾ ಇಲ್ಲ. ಬೆಂಗಳೂರಿನ ಬೀದಿ ಬೀದಿಯೊಳಗ ಕನ್ನಡದ ಸ್ಥಾನಮಾನಕ್ಕಾಗಿ ಆಗ್ರಹ ಮಾಡಿ ಮೆರವಣಿಗೆ ಮಾಡಿದವ್ರು. ಬಂಡಾಯ ಸಾಹಿತ್ಯ ಸಂಘಟನೆಯವ್ರು.

ಗೋಕಾಕ್ ಸಮಿತಿ ನೇಮಕ ಆದಮ್ಯಾಲೆ, ಈ ಸಮಿತಿಯ ಸದಸ್ಯರು ಯಾರ್ಯಾರು ಅಂತಾ ನೋಡಿದಾಗ ಸ್ಪಷ್ಟವಾಗಿ ಗೊತ್ತಾಯ್ತು ಇದು ಕನ್ನಡದ ಪರವಾದ ವರದಿ ಕೊಡ್ಲಿಕ್ಕೆ ಸಾಧ್ಯಾನೇ ಇಲ್ಲ. ಇದು ಸಂಸ್ಕೃತದ ಪರವಾದ ಸಮಿತಿ ಅಂತಾ ನಮಗೆ ಅನಿಸಿದ ಕೂಡ್ಲೆ ಅವರು ಅಭಿಪ್ರಾಯ ಸಂಗ್ರಹಣೆಗಂತ ಹೊಂಟ್ರಲ್ಲ, ಹಳೇ ಮೈಸೂರಿನ್ಯಾಗ ಮನವಿ ಗಿನವಿ ಸ್ವೀಕರಿಸಿ ಧಾರವಾಡಕ್ಕೆ ಬಂದು, ಅದರ ಹಿಂದಿನ ದಿವಸನಾ ನಾನೇ ಸ್ವತಃ ತಿರುಗಾಡಿ ಒಂದು ಸ್ಟೇಟ್‌ಮೆಂಟ್ ಕೊಡಿಸಿದ್ದೆ ಸಾಹಿತಿಗಳ ಮೂಲಕ, ನಾವು ಇದನ್ನ ವಿರೋಧ ಮಾಡ್ತೀವಿ ಅಂತಾ, ಶಂಬಾ ಜೋಶಿಯವರು ನಮಗಿದಕ್ಕೆ ಲೀಡರು ಅವಾಗ. ಬ್ರಾಹ್ಮಣ ಆದ್ರೂ ಭಾಳಾ ವೈಚಾರಿಕ ಮನ್ಷ್ಯಾ.

ಸಮಿತಿ ಧಾರವಾಡಕ್ಕೆ ಬಂತು. ನಾವಾ ಗೋಕಾಕರ ಹಳೇ ಶಿಷ್ಯರು, ಗೋ-ಕಾಕ್, ಗೋ-ಬ್ಯಾಕ್ ಅಂತಾ ಶುರು ಮಾಡಿಬಿಟ್ಟೆ, ಕಪ್ಪು ಬಾವುಟ ಪ್ರದರ್ಶನ ಮಾಡಿ ಅದು ಮುಂದೆ ಬೆಳಗಾಂವಕ್ಕೆ ಹೋತು, ಬಿಜಾಪುರಕ್ಕೆ ಹೋತು. ಹೆಚ್ಚಾಗ್ತಾನ ಹೋತು ಪ್ರತಿಭಟನೆ. ಬಿಜಾಪುರದಿಂದ ಸೀದಾ ಗುಡಿಚಾಪೆ ಕಿತ್ಕಂಡು ಅವು ಬೆಂಗಳೂರಿಗೆ ಹೋಗ್ಬೇಕಾದಂತಹ ಪರಿಸ್ಥಿತಿ ಬಂತು. ಅಷ್ಟರೊಳಗ ಧಾರವಾಡಕ್ಕೆ ಬಂದಾಗ ಗೋಕಾಕರು ಕರೆದು, ಭಾಳಾ ಪ್ರೀತಿಯಿಂದ ಏಕವಚನದಿಂದ “ಏ ಚಂದ್ರಶೇಖರ ಬಾ ಇಲ್ಲಿ, ನಿನ್ನ ಕೂಡ ಒಂಚೂರು ಆಪ್‌ಸಾಥ್ ಮಾತಾಡಾದೈತಿ’ ಅಂತಾ. ನಾನು ಹೋದೆ ಐ.ಬಿಗೆ ಭಾಳಾ ಮಜಾ ಆತದು. “ನೀನು ಇದ್ರ ಬಗ್ಗೆ ಏನೂ ಬ್ಯಾರೆಯಗೆ ಹೇಳಾದಿಲ್ಲ ಅಂದ್ರ, ನಿನಗ ಕೆಲ ವಿಷಯ ಹೇಳೀನಿ’ ಅಂದ್ರು ಅವ್ರು. ‘ಇಲ್ಲ ಸಾರ್ ಹಂಗಾಗಲ್ಲ ಅದು. ನೀವ್ ಏನ್ ಹೇಳ್ತಿರೋ ಅದನ್ನ ತಕ್ಷಣ ಹೊರಾಗೋಗಿ ಎಲ್ಲಾನೂ ಹೇಳವ್ವಾ ನಾನು ಅಂದೆ’ ‘ಹಂಗಾರ ನಾ ಹೇಳಲ್ಲ ಅಂದ್ರು’, ‘ಬಿಡ್ರಿ’ ಅಂದೆ. ‘ಇದನ್ನೂ ಹೇಳೀನಿ ನಾನು’ ಅಂದೆ. ಆಮ್ಯಾಲೆ ನಾನು ಹೇಳೆ. ‘ಆ ಸರ್ಕ್ಯುಲರ್ ತರಿಸೀ” ಅಂದೆ. ಆ ಆದೇಶ ತರಿಸಿ ನೋಡಿದ್ರೆ ಗೋಕಾಕ್ ರಿಗೇ ಶಾಕ್, ಕಮಿಟಿ ಅಧ್ಯಕ್ಷರು ಅವ್ರು. ಪಠ್ಯಕ್ರಮದಲ್ಲಿ ಸಂಸ್ಕೃತದ ಸ್ಥಾನ ನಿರ್ಧಾರ ಮಾಡ್ಲಿಕ್ಕೆ ಈ ಸಮಿತಿ ಅಂತಾ ಹೇಳಿ ಇತ್ತೇ ಹೊರತು ಕನ್ನಡ ಅಂತಾ ಇಲ್ಲ, ಬ್ಯಾರೇ ಇಲ್ಲ.

ಸಮಿತಿಯ ಅಧ್ಯಕ್ಷರಿಗೇ, ಸಮಿತಿ ನೇಮಕವಾದ ಉದ್ದೇಶ ಗೊತ್ತಿದ್ದಿಲ್ಲ ಅಂದ್ರ ಆಶ್ಚರ್ಯ….. ಇದು!

ಹೌದು. ಗೊತ್ತೇ ಇಲ್ಲ. ಆಮ್ಯಾಲೆ ಅವರಿಗೆ ಕನ್‌ವಿನ್ಸ್ ಆಗಿತ್ತು. ನಾವೆಲ್ಲ ಪ್ರತಿಭಟನೆ ಮಾಡಿದ ನಂತರ ಅವ್ರು ಹೋಗಿ ಸಂಪೂರ್ಣ ಕನ್ನಡದ ಪರವಾದ ವರದಿಯನ್ನು ಕೊಟ್ರು. ಗೋಕಾಕ್ ವರದಿ ಅಂತ ಏನ್ ಕರೀತೀವಿ ಅದು. ಅದು ಬಂದ ಕೂಡ ಗುಂಡೂರಾಯನಿಗೆ ಗಂಟಲಿನ್ಯಾಗ ಸಿಕ್ಕೊಂಡಂಗಾತು. ಅದರ ಅನುಷ್ಠಾನಕ್ಕೆ ಹಿಂದೆ ಮುಂದ ನೋಡ್ಲಿಕ್ಕೆ ಶುರುಮಾಡಿದ್ರು ಅವಾಗ.

ಈ ಗೋಕಾಕ್ ವರದಿ ಜಾರಿಗೆ ಬರಲಿ ಅಂತ ಈ ಚಳುವಳಿ ಶುರು ಆಗಿದ್ದು ೧೯೮೦ ಅಕ್ಟೋಬರ್ ೨೩. ಅದು ಪ್ರತಿಭಟನೆ, ಅವ್ರು ಹೋಗಿ ವರದಿ ಬಂದಮ್ಯಾಗ ಅದರ ಅನುಷ್ಠಾನಕ್ಕ ಚಳುವಳಿ ಶುರು ಆತು. ಮುಂದ ಗೋಕಾಕ್ ಚಳುವಳಿ ಬೆಳೀತು. ರಾಜಕುಮಾರ್ ಎಂಟ್ರಿ ಆದಮ್ಯಾಗ ದೊಡ್ಡ ಜನಾಂದೋಲನ ಆತು. ಮೊದಲ ಹಂತದಾಗ ಕೆಲ ಅಧ್ಯಾಪಕರು, ಬುದ್ಧಿಜೀವಿಗಳಿಂದ ಸಣ್ಣ ಚಳುವಳಿಯಾಗಿ ಶುರು ಆಗಿದ್ದು ಜನಾಂದೋಲನದ ಸ್ವರೂಪ ಬಂದಿದ್ದು ರಾಜಕುಮಾರ್ ಎಂಟ್ರಿ ಆದ್ಮಾಲೆ, ಅದನ್ನ ಯಾರೂ ಅಲ್ಲಗೆಳೀಲಿಕ್ಕೆ ಆಗಲ್ಲ.

ರಾಜಕುಮಾರ ಪ್ರವೇಶಿಸಿದ್ದು ವರದಿಯ ವಿವರ ಹಿನ್ನೆಲೆಗಳ ಅರಿವಿನಿಂದನೋ ಅಥವಾ ಕನ್ನಡಪರ ಅಭಿಮಾನದ ನೆಲೆಯಿಂದಾನೋ?

ಕನ್ನಡಕ್ಕೆ ಏನಾದ್ರೂ ಆದ್ರೆ ನಾನು ಧುಮುಕಬೇಕು ಅಂತಾ ಅಷ್ಟಾ. ಕನ್ನಡದ ನೆಲ, ಕನ್ನಡದ ಭಾಷೆ, ಹೀಗೆ ಅಪ್ಪಟ ಪಾರದರ್ಶಕವಾದ ಕನ್ನಡದ ಪ್ರೀತಿ, ಅವರೇನು ಗೋಕಾಕ್ ವರದಿ ಓದ್ದಿಲ್ಲ, ಗೊತ್ತಿಲ್ಲ. ಯಾರ ಕೇಳಿದ್ರಂತ, ಸುದ್ದಿಗಾರರು. “ನೀವು ಓದಿರೇನು ವರದಿ, ಅಂತಾ. ‘ನಾನು ಓದಿಲ್ಲಪ್ಪಾ’ ಅಂದ್ರಂತ, ಮತ್ಯಾಕ ಮಾಡ್ತೀರಿ ಅಂದ್ರೆ ಕನ್ನಡಕ್ಕೆ ಅನ್ಯಾಯ ಆಗೇದಂತ ತಿಳಿದವ್ರು ಹೇಳ್ತಿದಾರ. ಮತ್ತು ನಾವು ಹೋರಾಟ ಮಾಡ್ಬೇಕು ಅಷ್ಟಾ, ನೇರವಾದ ಉತ್ತರ. ಅದು ಅವರ ಗ್ರೇಟ್‌ನೆಸ್ ಅದು.

ಗೋಕಾಕ್ ವರದಿ ಹೋರಾಟಕ್ಕೆ ಬಂಡಾಯ ಸಾಹಿತ್ಯ ಸಂಘಟನೆಯ ಸ್ಪಂದನೆ ಮತ್ತು ತೊಡಗಿಸಿಕೊಳ್ಳುವಿಕೆ ಯಾವ ರೀತಿಯದ್ದಾಗಿತ್ತು? ಆಂತರಿಕ ಚರ್ಚೆಯನ್ನೇನಾದ್ರೂ ಹುಟ್ಟುಹಾಕ್ತಾ?

ಬಂಡಾಯದವ್ರು ಕನ್ನಡದ ಸ್ಥಾನಮಾನದ ಬಗ್ಗೆ ಹೋರಾಟ ಮಾಡಿದ್ರು. ಆಮ್ಯಾಲೆ ಇದು ಜನಾಂದೋಲನ ಆಗ್ತಕ್ಕಂತ ಸಂದರ್ಭದೊಳಗ ಕೋಲಾರದೊಳಗ ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನದಾಗ ಒಂದು ರಾಜ್ಯಮಟ್ಟದ ಸಭೆ. ಅವಾಗ ನಾನಿದ್ರಾಗ ಭಾಳಾ ಲೀಡಿಂಗ್ ಇದ್ನೆಲ್ಲ. ಅವಾಗ ನನ್ನನ್ನ ಭಾಳಾ ಕೌಂಟರ್ ಮಾಡಿದ್ರು. ಮುಖ್ಯವಾಗಿ ಮಾರ್ಕ್ಸಿಸ್ಟು. ಇದು ಭಾಷಿಕ ಸಮಸ್ಯೆ, ಜನಾಂಗ-ಜನಾಂಗಗಳ ನಡುವೆ ಕಿಚ್ಚು ಹಚ್ಚಬಹುದಾದ ಸಮಸ್ಯೆ ಇದು. ಇದ್ರಾಗ ಬಂಧ ಸಂಬಂಧಪಟ್ಟವು ಪಾಲ್ಗೊಳ್ಳದರ ಬಗ್ಗೆ ಚರ್ಚೆ ಮಾಡಬೇಕು ಅಂತ ಶುರು ಹಚ್ಕೊಂಡ್ರು ಮಾರ್ಕ್ಸಿಸ್ಟ್ ಡಾಮಿನೇಷನ್ ಶುರು ಆಗಿತ್ತು ಆಗ್ಲೆ ಬಂಡಾಯದೊಳಗ, ನಾವಿಬ್ರೇ ಸಮಾಜವಾದಿಗಳು ಇದ್ದದ್ದು ಅಲ್ಲಿ, ನಾನು ಕಾಳೇಗೌಡ ಇಬ್ರೆ, ಆಮ್ಯಾಲೆ ದಲಿತರು ಇದ್ರು. ಅವರೂ ಅಷ್ಟೊತ್ತಿಗೆ ಡಿಸ್ಟೆನ್ಸ್‌ನಲ್ಲಿದ್ರು.

ಗೋಕಾಕ್ ವರದಿ ಜಾರಿಯ ಹೋರಾಟ ಸರ್ವಮಾನ್ಯವಾದುದೇನಾಗಿರಲಿಲ್ಲ. ಹೋರಾಟ ಸಂಘಟನೆಯ ಒಳಗೆ ಚರ್ಚೆ ಹುಟ್ಟು ಹಾಕಿತು, ಹೊರಗಡೆಯೂ ಅನೇಕ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಇವುಗಳ ಸ್ವರೂಪವೇನು?

ಹರಿಕುಮಾರ್‌, ಡಿ.ಆರ್.ನಾಗರಾಜ್, ಶೂದ್ರ ಶ್ರೀನಿವಾಸ, ಅನಂತಮೂರ್ತಿ ಇವರೆಲ್ಲ ಒಂದು ಗುಂಪಾಗಿ ಈ ಭಾಷಿಕ ಆಂದೋಲನವನ್ನು ಹತ್ತಿಕ್ಕಬೇಕು ಅಂತಾ ಭಾಳಾ ವ್ಯವಸ್ಥಿತವಾಗಿ ಶುರು ಮಾಡಿದ್ರು ನನ್ನ ಮ್ಯಾಲೆ ಅಟ್ಯಾಕು. ಅದೇ ಸಂದರ್ಭದೊಳಗ ಬಂಡಾಯದ ಸಭೆಯೊಳಗ ನೇರವಾಗಿ ಮುಖಾಮುಖಿ ಆಯ್ತದು. ನಾನು ಹೇಳ್ತ ನಾನು ಕನ್ನಡ ಚಳುವಳಿಯಲ್ಲಿ ಸಕ್ರಿಯವಾಗಿ ಇರೋನು. ಯಾಕಂದ್ರ ಲೋಹಿಯಾರವರ ಸಿದ್ಧಾಂತ ಜನ ಭಾಷೆಗಳ ಪರವಾಗಿ ಇರೋದದು. ನನಗೆ ಬಂಡಾಯನೂ ಭಾಳಾ ಮುಖ್ಯ, ಕನ್ನಡ ಚಳುವಳಿ ಬ್ಯಾರೆ, ಬಂಡಾಯ ಚಳುವಳಿ ಬ್ಯಾರೆ ಅಂತಾ ನಾನು ಬಗೆಯೋದಿಲ್ಲ. ಒಂದು ವೇಳೆ ಅಲ್ಟಿಮೇಟ್ಲಿ ನನ್ನೆದುರು ‘ಕನ್ನಡ ಅಥವಾ ಬಂಡಾಯ’ ಅಂತಾ ಆಯ್ಕೆ ಇತ್ತು ಅಂದ್ರ ನನ್ನ ಸ್ಪಷ್ಟವಾದ ಆಯ್ಕೆ ಕನ್ನಡ, ಅಂತ ಹೇಳಿ ಬಂಡಾಯ ಸಾಹಿತ್ಯ ಸಂಘಟನೆಗೆ ರಾಜಿನಾಮೆ ಕೊಟ್ಟು ಬಂದು ಬಿಟ್ಟೆ ನಾನು, ಮುಗೀತು ಅಲ್ಲಿಗೆ ೮೦ ರಲ್ಲೆ.

ಮುಂದೆ ಏನಾತು, ಈ ಚಳುವಳಿಯನ್ನ ಹಾಳು ಮಾಡೋದಿಕ್ಕೆ ಏನೇನ್ ಮಾಡ್ಬೇಕೋ ಅದೆಲ್ಲಾ ಮಾಡಿದ್ರು ಈ ಹರಿಕುಮಾರ್ ಅಂಡ್ ಕಂಪನಿ, ಲೇಟರ್ ಆಗಿ ಅನಂತಮೂರ್ತಿ, ಈ ಅನಂತಮೂರ್ತಿ ಅವಾಗ ಹೇಳಿದ್ದು ಇದೊಂದು ಸಮೂಹ ಸನ್ನಿ ಅಂತ. ಮಾಸ್ ಹಿಸ್ಟೀರಿಯಾ ಅಂತ ದೊಡ್ಡದೊಂದು ಫೇಮಸ್ ಸ್ಟೇಟ್‌ಮೆಂಟ್ ಕೊಟ್ಟುಬಿಟ್ರು, ಅವತ್ತಿಂದ್ಲೇ ನಮ್ಮ ಅವರ ಕನ್ನಡದ ವಿಷಯಕ್ಕೆ ಅದು ‘ಕೊರಳು ಹರ್ದಂಗಾತು’ ಅಂತಾರಲ್ಲ ಹಂಗ ಆಗಿ ಬಿಡ್ತು, ಅದು.

ನಮ್ದು ನಡೀತು ನಡೀತು. ಬಂಡಾಯ ಸಾಹಿತ್ಯ ಸಂಘಟನೆ ಕೂಡ ನನ್ನ ಸಂಪರ್ಕ ಕಡಿಮಿ ಆತು. ಆದ್ರೆ ಹೋಗ್ತಿದ್ದೆ ನಾನು ಭಾಷಣ ಮಾಡ್ಲಿಕ್ಕೆ, ಹಂಗಂತ ಪೂರ್ಣ ಕಳಚಿಕೊಳ್ಳಿಲ್ಲ ನಾನು. ಈಗ ಅಲ್ಲಿ ದಲಿತರೂ ದೂರ ಹೋಗಿಬಿಟ್ರು. ನನ್ನಂತಹ ಒಂದಿಬ್ಬರು ಸೋಷಲಿಸ್ಟು ಹೋಗಿಬಿಟ್ರು. ಉಳಿದವರೆಂದರೆ ಬರೇ ಮಾರ್ಕ್ಸಿಸ್ಸು, ಲೆಡ್ ಬೈ ಬರಗೂರು, ಬರಗೂರು ಆಕ್ಟಿವ್ ಆಗಿದ್ರು ಮೊದಲನೇ ದಿನದೊಳಗ, ಕನ್ನಡದ ಸ್ಥಾನಮಾನದ ಬಗ್ಗೆ. ಆ ಮೇಲೆ ತಣ್ಣಗಾದ್ರು.

 ಮಾರ್ಕ್ಸ್ವಾದಿಗಳ ಧೋರಣೆ ಏನಿತ್ತು?

ಅವರ ಪ್ರಕಾರ ಭಾಷೆ ಅನ್ನಾದು ಸೂಪರ್ ಸ್ಟ್ರಕ್ಚರ್ರು, ಭಾಷೆ ಹೆಸರಿನ್ಯಾಗ ಚಳುವಳಿ ಹೋರಾಟಗಳು ಬ್ಯಾಡ ಅಂತಾ ಅವರು ವಿರುದ್ಧ ಮಾಡಿದ್ರು. ನನ್ನ ವಿರುದ್ಧ ಹೇಳಿಕೆ ಕೊಟ್ರು. ಕನ್ನಡ ಕನ್ನಡ ಅಂತಾರ ತಮ್ಮ ಮಕ್ಕಳನ್ನು ಇಂಗ್ಲೀಷ್ ಕಾನ್ವೆಂಟ್ ಶಾಲಿಗೆ ಕಳಿಸ್ತಾರ ಅಂತಾ. ನಾನವಾಗ ಹರಿಕುಮಾರ್‌ಗೆ ನೋಟೀಸ್ ಕೊಟ್ಟೆ, ಬಂದ್ ನೋಡು ನನ್ನ ಮಕ್ಕು ಎಲ್ಲಿ ಓದ್ತಾರ ಅಂತ. ಆಮ್ಯಾಲೆ ಗಪ್ಪಾದ್ರು.

ಗೋಕಾಕ್ ಹೋರಾಟ ಕುರಿತು ದಲಿತ ಚಳುವಳಿಯ ನಿಲುವು ಏನಾಗಿತ್ತು?

ಅವ್ರು ತಟಸ್ಥವಾಗುಳಿದು ಬಿಟ್ಟು ನಮಗೆ ಅನ್ನಾ ಮುಖ್ಯ, ಉದ್ಯೋಗ ಮುಖ್ಯ, ಸಮಾನತೆ ಮುಖ್ಯ ಅಂತಾ, ಜನಪರವಾಗಿ ಇದ್ರು. ಒಟ್ಟಾರೆ ವ್ಯಾಪಕ ಬೆಂಬಲ ಬಂತು ಇದಕ್ಕ, ದಕ್ಷಿಣ ಕನ್ನಡ ಒಂದ ಬಿಟ್ರೆ, ಇಡೀ ರಾಜ್ಯದ ತುಂಬಾ ಬೆಂಬಲ, ನಮ್ಮ ಸಾಹಿತಿಗಳದ್ದಂತೂ ಬಿಡ್ರಿ ಇವತ್ತಿಗೂ ಸೈತ ನಮ್ಮ ಸಾಹಿತಿಗಳಲ್ಲಿ ಭಾಳಾ ಕಾಂಟ್ರಡಿಕ್ಷನ್ಸ್ ಅದಾವ.

ಭಾಷಾ ಚಳುವಳಿ ಸಮಾಜವಾದಿಗಳ ನಡುವೆಯೂ ಬಿರುಕು ಮೂಡಿಸಿತ್ತು ಅಲ್ಲವಾ? ಇಲ್ಲ, ಲೋಹಿಯಾ ಸಮಾಜವಾದಿಗಳ ನಡುವೆ ಎಂದೂ ಬಿರುಕು ಬಂದಿಲ್ಲ.

ಸಂದರ್ಶಸಿದವರು: ಬಿ.ಪೀರ್ ಭಾಷಾ

(ಕವಿ, ಲೇಖಕ ಮತ್ತು ಹೋರಾಟಗಾರರಾದ ಬಿ. ಪೀರ್ ಭಾಷರವರು ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯವರಾಗಿದ್ದು ಸದ್ಯ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನೆಲೆಸಿದ್ದಾರೆ‌. ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆಯ ಜೊತೆಗೆ ಹಲವಾರು ಜನಪರ ಚಳವಳಿಗಳಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ ಅವರ ಪ್ರಸಿದ್ದ ಕವನ ಸಂಕಲನವಾಗಿದೆ.)


ಇದನ್ನೂ ಓದಿ: ಚಂಪಾ ಸ್ಮರಣೆ: ‘ಸಂಕ್ರಮಣ’ದ ಸಂಕ್ರಮಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...