Homeಮುಖಪುಟಚಂಡೀಗಢ: ಹೆಚ್ಚು ಸ್ಥಾನ ಗೆದ್ದರೂ ಎಎಪಿಗೆ ಒಲಿಯದ ಮೇಯರ್‌ ಸ್ಥಾನ; ಬಿಜೆಪಿ ಅಭ್ಯರ್ಥಿ ಆಯ್ಕೆ

ಚಂಡೀಗಢ: ಹೆಚ್ಚು ಸ್ಥಾನ ಗೆದ್ದರೂ ಎಎಪಿಗೆ ಒಲಿಯದ ಮೇಯರ್‌ ಸ್ಥಾನ; ಬಿಜೆಪಿ ಅಭ್ಯರ್ಥಿ ಆಯ್ಕೆ

ಎಎಪಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದ್ದ ಬಿಜೆಪಿಯು ನಂತರದಲ್ಲಿ ಉರುಳಿಸಿದ ರಾಜಕೀಯ ದಾಳದಿಂದಾಗಿ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.

- Advertisement -
- Advertisement -

ಶನಿವಾರ (ಜನವರಿ 8) ನಡೆದ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೇಯರ್‌ ಆಗಿ ಹೊರಹೊಮ್ಮಿದ್ದಾರೆ.

ಅತಿ ಹೆಚ್ಚು ಸದಸ್ಯ ಸ್ಥಾನಗಳನ್ನು ಹೊಂದಿದ್ದ ಆಮ್ ಆದ್ಮಿ ಪಾರ್ಟಿಗೆ ಮೇಯರ್‌ ಸ್ಥಾನ ದೊರಕಲಿಲ್ಲ. ಎಎಪಿ ಸದಸ್ಯರೊಬ್ಬರ ಮತವೊಂದನ್ನು ಅಸಿಂಧುಗೊಳಿಸಿದ್ದರಿಂದ ಬಿಜೆಪಿ ಅಭ್ಯರ್ಥಿಗೆ ಗೆಲುವಾಯಿತು. ಇದನ್ನು ಎಎಪಿ “ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಬಣ್ಣಿಸಿದೆ.

ಕಳೆದ ತಿಂಗಳು ನಡೆದ ಚಂಡೀಗಢದ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನದ ಹೊರತಾಗಿಯೂ, ಬಿಜೆಪಿ ಅಭ್ಯರ್ಥಿ ಸರಬ್ಜಿತ್ ಕೌರ್ ಕೇವಲ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿ ಮೇಯರ್‌ ಆಗಿದ್ದಾರೆ.

ಮೊದಲ ಬಾರಿಗೆ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಎಪಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಮೇಯರ್ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ ನಂತರದ ಬೆಳವಣಿಗೆಗಳು ಬಿಜೆಪಿಯನ್ನು ಅಧಿಕಾರಕ್ಕೆ ತಂದಿವೆ.

ಶನಿವಾರ ನಡೆದ ಮೇಯರ್‌ ಚುನಾವಣೆಯಲ್ಲಿ ಏಳು ಕಾಂಗ್ರೆಸ್ ಕೌನ್ಸಿಲರ್‌ಗಳು ಮತ್ತು ಏಕೈಕ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸದಸ್ಯರು ಗೈರುಹಾಜರಾಗಿದ್ದರಿಂದ ಒಟ್ಟು 36 ಮತಗಳಲ್ಲಿ 28 ಮತಗಳು ಮಾತ್ರ ಚಲಾವಣೆಯಾದವು.

ಎಎಪಿ ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ 14 ಮತಗಳನ್ನು ಹೊಂದಿದ್ದರೂ, ನಂತರ ಎಎಪಿ ಪರವಾಗಿದ್ದ ಒಂದು ಮತವನ್ನು ಅಸಿಂಧು ಎಂದು ಘೋಷಿಸಲಾಯಿತು. ಇದು ಸರಬ್ಜಿತ್ ಕೌರ್ ಅವರ ಗೆಲುವಿಗೆ ದಾರಿ ಮಾಡಿಕೊಟ್ಟಿತು.

ಮತವನ್ನು ಅಸಿಂಧು ಎಂದು ಘೋಷಿಸಲು ಯಾವುದೇ ಕಾನೂನುಬದ್ಧ ಕಾರಣವಿಲ್ಲ ಎಂದು ಎಎಪಿ ಆರೋಪಿಸಿದರೆ, ಮತಪತ್ರದ ಹಿಂಭಾಗದಲ್ಲಿ ‘ಟಿಕ್’ ಚಿಹ್ನೆ ಇದ್ದ ಕಾರಣ ಮತವನ್ನು ಅಸಿಂಧು ಎಂದು ಘೋಷಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿಕೊಂಡಿವೆ. ಎಎಪಿ ಇದನ್ನು ಅಲ್ಲಗಳೆದಿದೆ.

ಬಿಜೆಪಿ ಲಾಭ ಗಳಿಸಿದ್ದು ಹೇಗೆ?

ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಎಎಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನ 35 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಎಎಪಿ ಪಡೆದುಕೊಂಡಿತು. ಆಡಳಿತಾರೂಢ ಬಿಜೆಪಿ ಕೇವಲ 12 ಗೆದ್ದಿತ್ತು. 2016ರ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಮತಪ್ರಮಾಣ ಶೇ. 80ರಷ್ಟಿತ್ತು. ಆದರೆ ಈ ಭಾರಿ ಆ ಸಂಖ್ಯೆ ಕೇವಲ ಶೇ. 34ಕ್ಕೆ ಕುಸಿದಿತ್ತು. ಉಳಿದ ಸ್ಥಾನಗಳಲ್ಲಿ ಎಂಟು ಕಾಂಗ್ರೆಸ್‌ಗೆ ಮತ್ತು ಒಂದು ಎಸ್‌ಎಡಿ ಪಾಲಾಗಿವೆ.

ಫಲಿತಾಂಶಗಳು ಪ್ರಕಟವಾದ ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಸೂದ್ ಅವರು ತಮ್ಮ ಪಕ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದೆ ಎಂದು ದಿ ವೈರ್‌ಗೆ ತಿಳಿಸಿದ್ದರು. ಆದಾಗ್ಯೂ, ನಂತರದ ಬೆಳವಣಿಗೆಯಲ್ಲಿ ಬಿಜೆಪಿಯು ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಅವರು ಘೋಷಿಸಿದ್ದರು.

ಸೂದ್ ಅವರ ಘೋಷಣೆಯ ನಂತರದ ಹಲವು ಊಹಾಪೋಹಗಳು ಹರಿದಾಡಿದ್ದವು. ಕಾಂಗ್ರೆಸ್ ಮತ್ತು ಎಎಪಿ ಎರಡೂ ಪಕ್ಷಗಳ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ತಮ್ಮ ಪಕ್ಷಗಳ ಅಭ್ಯರ್ಥಿಗಳಿಗೆ ಆಮಿಷಗಳನ್ನು ಒಡ್ಡುತ್ತಿದೆ ಎಂದು ಆರೋಪಿಸಿದ್ದರು. ಬಿಜೆಪಿ ನಾಯಕರು ಆರೋಪವನ್ನು ನಿರಾಕರಿಸಿದ್ದಾರೆ.

ಹೊಸದಾಗಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಮುನ್ಸಿಪಲ್‌ ಸದಸ್ಯರಾದ ಹರ್‌ಪ್ರೀತ್ ಕೌರ್ ಬಬ್ಲಾ ಬಿಜೆಪಿಗೆ ಸೇರಿದ್ದು, ಬಿಜೆಪಿ ಅಧಿಕಾರಕ್ಕೆ ಬರುವ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿತು. ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲದಿಂದಾಗಿ ಕೌನ್ಸಿಲ್‌ನಲ್ಲಿ ಬಿಜೆಪಿ ಸಂಖ್ಯೆ 13ಕ್ಕೆ ಏರಿತು. ಚಂಡೀಗಢ ಲೋಕಸಭಾ ಸದಸ್ಯ ಬಿಜೆಪಿ ಅಭ್ಯರ್ಥಿಯಾಗಿದ್ದು ಮುನ್ಸಿಪಲ್‌ನಲ್ಲಿ ಪದನಿಮಿತ್ತ ಮತವನ್ನು ಹೊಂದಿದ್ದಾರೆ. ಹೀಗಾಗಿ ಬಿಜೆಪಿಯು ಎಎಪಿಗೆ ಸಮನಾಗಿ ಮತಗಳನ್ನು ಗಳಿಸಲು ಸಫಲವಾಯಿತು. ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಮೇಯರ್‌ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಕಾಂಗ್ರೆಸ್‌ ಸದಸ್ಯರಾದ ಹರ್‌ಪ್ರೀತ್ ಕೌರ್ ಬಬ್ಲಾ (ಎಡದಿಂದ ಮೂರನೇಯವರು) ಬಿಜೆಪಿ ಸೇರಿರುವುದು (ಚಿತ್ರ ಕೃಪೆ: ದಿ ವೈರ್‌)

ಪಕ್ಷಾಂತರ ನಿಷೇಧ ಕಾನೂನು ಇಲ್ಲದ ಕಾರಣ ಕಾಂಗ್ರೆಸ್ ಕೌನ್ಸಿಲರ್‌ನ ಪಕ್ಷಾಂತರವು ಬಿಜೆಪಿಗೆ ವರದಾನವಾಯಿತು. ಪಕ್ಷಾಂತರದ ವಿರುದ್ಧ ನಿಬಂಧನೆಗಳನ್ನು ಸೇರಿಸಲು 2018ರಲ್ಲಿ ಕಾನೂನನ್ನು ತಿದ್ದುಪಡಿ ಮಾಡುವ ಪ್ರಯತ್ನಗಳು ನಡೆದಿದ್ದವು. ಆದರೆ ಆ ಸಮಯದಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದ್ದ ಬಿಜೆಪಿಯು ಶಾಸನವನ್ನು ತಿದ್ದುಪಡಿ ಮಾಡಲು ಹೆಚ್ಚಿನ ಉತ್ಸಾಹವನ್ನು ತೋರಿಸಲಿಲ್ಲ.

ಕಾಂಗ್ರೆಸ್ ಕೌನ್ಸಿಲರ್ ನಿಷ್ಠೆ ಬದಲಿಸಿದ ನಂತರದಲ್ಲಿ ಹೈ ಡ್ರಾಮಾ ನಡೆಯಿತು. ಕಾಂಗ್ರೆಸ್ ತನ್ನ ಉಳಿದ ಏಳು ಕೌನ್ಸಿಲರ್‌ಗಳನ್ನು ಜೈಪುರಕ್ಕೆ ಕರೆದೊಯ್ದಿತು. ಎಎಪಿ ತನ್ನ ಕೌನ್ಸಿಲರ್‌ಗಳನ್ನು ತನ್ನ ಅಧಿಕಾರದ ಕೇಂದ್ರವಾದ ದೆಹಲಿಗೆ ಕರೆದೊಯ್ದಿತು. ಬಿಜೆಪಿ ಕೂಡ ಅದನ್ನೇ ಅನುಸರಿಸಿ, ತಮ್ಮ ಕೌನ್ಸಿಲರ್‌ಗಳು ಬಿಜೆಪಿ ಆಡಳಿತವಿರುವ ಶಿಮ್ಲಾದಲ್ಲಿ ಉಳಿಯಲು ವ್ಯವಸ್ಥೆ ಮಾಡಿತು.

ಮೇಯರ್ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಎಸ್‌ಎಡಿ ಬಹಿಷ್ಕರಿಸಲು ನಿರ್ಧರಿಸಿದಾಗ ಚುನಾವಣೆ ಇನ್ನಷ್ಟು ಕುತೂಹಲಕಾರಿಯಾಯಿತು. ಬಿಜೆಪಿ ಮತ್ತು ಎಎಪಿ ಎರಡೂ ಪಕ್ಷಗಳು 14 ಕೌನ್ಸಿಲರ್‌ಗಳ ಬೆಂಬಲವನ್ನು ಹೊಂದಿದ್ದವು. “ಬಿಜೆಪಿ ಮತ್ತು ಎಎಪಿ ಅಭ್ಯರ್ಥಿಗಳು ಸಮಾನ ಮತಗಳನ್ನು ಗಳಿಸಿದ ಸಂದರ್ಭದಲ್ಲಿ ಒಂದು ಪ್ರಮಾಣಿತ ವಿಧಾನದ ಮೂಲಕ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ” ಚಂಡೀಗಢದ ಎಎಪಿ ಸಂಚಾಲಕ ಪ್ರೇಮ್ ಗಾರ್ಗ್ ನಿರೀಕ್ಷಿಸಿದ್ದರು.

ಎಎಪಿ ಮತ ಅಸಿಂಧು

ಉಭಯ ಪಕ್ಷಗಳ ಅಭ್ಯರ್ಥಿಗಳು ತಲಾ 14 ಮತಗಳ ಸಮಬಲ ಸಾಧಿಸಿದರು. ಎಎಪಿ ಕೌನ್ಸಿಲರ್‌ನ ಒಂದು ಮತವನ್ನು ಅಸಿಂಧು ಎಂದು ಘೋಷಿಸಿದಾಗ ಸರಬ್ಜಿತ್ ಗೆದ್ದರು. ಚುನಾವಣೆಯ ಅಧ್ಯಕ್ಷರಾದ ಮಹೇಶ್ ಇಂದರ್ ಸಿಂಗ್ (ಸ್ವತಃ ಬಿಜೆಪಿ ಕೌನ್ಸಿಲರ್, ಮುನ್ಸಿಪಲ್ ಚುನಾವಣೆಯಲ್ಲಿ ಒಂಬತ್ತು ಮತಗಳ ಕಡಿಮೆ ಅಂತರದಿಂದ ಗೆದ್ದವರು) ಮತವನ್ನು ಅಸಿಂಧು ಎಂದು ಘೋಷಿಸಿದರು.

ಎಎಪಿ ಅಭ್ಯರ್ಥಿ ಅಂಜು ಕತ್ಯಾಲ್ ಈಗ ಕೇವಲ 13 ಮತಗಳನ್ನು ಹೊಂದಿದ್ದರು. ಸರಬ್ಜಿತ್ ಕೌರ್ ಅವರು 14 ಮತಗಳನ್ನು ಹೊಂದಿದ್ದರು. ಇದರಿಂದ ಕೆರಳಿದ ಎಎಪಿ ಕೌನ್ಸಿಲರ್‌ಗಳು ನೂತನ ಮೇಯರ್ ಅವರನ್ನು ಕೂರಿಸಿದ ಸ್ಥಳಕ್ಕೆ ನುಗ್ಗಿ ಪ್ರತಿಭಟನೆ ಆರಂಭಿಸಿದರು. ಅಲ್ಲಿದ್ದ ಮಾರ್ಷಲ್‌ಗಳಿಗೂ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಸಾಧ್ಯವಾಗದ ಕಾರಣ ಚಂಡೀಗಢ ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

ಎಎಪಿ ಶಾಸಕ ಮತ್ತು ಪಂಜಾಬ್ ವ್ಯವಹಾರಗಳ ಸಹ-ಪ್ರಭಾರಿ ರಾಘವ್ ಚಡ್ಡಾ ಕೂಡ ಮುನ್ಸಿಪಲ್‌ನಲ್ಲಿ ಧ್ವನಿ ಎತ್ತಿದ್ದಾರೆ. ಮರುಮತದಾನಕ್ಕೆ ಆಗ್ರಹಿಸಿದ ಅವರು, ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮೋಸ ಮಾಡಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಚುನಾವಣೆಯಲ್ಲಿ ಎಸ್‌ಎಡಿ ಮತ್ತು ಕಾಂಗ್ರೆಸ್‌ನ ನಿಜಬಣ್ಣ ಬಯಲಾಗಿವೆ. ಚಂಡೀಗಢದಲ್ಲಿ ಉದ್ದೇಶಪೂರ್ವಕವಾಗಿ ಆಪ್ ಅನ್ನು ದೂರವಿಡಲು ಬಿಜೆಪಿ, ಎಸ್‌ಎಡಿ ಮತ್ತು ಕಾಂಗ್ರೆಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ನಾನು ಪಂಜಾಬ್ ಜನರಿಗೆ ಹೇಳಲು ಬಯಸುತ್ತೇನೆ” ‌ಎಂದಿದ್ದಾರೆ.

(ಕೃಪೆ: ದಿ ವೈರ್‌)


ಇದನ್ನೂ ಓದಿರಿ: ಚಂಡೀಗಢ ಚುನಾವಣೆ: ವಿವಾದಿತ ಕೃಷಿ ಕಾಯ್ದೆಗಳ ರದ್ದುಗೊಳಿಸಿದ ಬಳಿಕ ಬಿಜೆಪಿಗೆ ಮೊದಲ ಮುಖಭಂಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...