Homeಕರ್ನಾಟಕ‘ಕೊರಗಜ್ಜನಿಗೆ ಅವಮಾನ ಮಾಡಲಾಗಿದೆ ಎನ್ನುವ ಸಂಘ ಪರಿವಾರ ಕೊರಗರ ಮೇಲೆ ಲಾಠಿ ಚಾರ್ಜ್ ಆದಾಗ ಎಲ್ಲಿತ್ತು?’

‘ಕೊರಗಜ್ಜನಿಗೆ ಅವಮಾನ ಮಾಡಲಾಗಿದೆ ಎನ್ನುವ ಸಂಘ ಪರಿವಾರ ಕೊರಗರ ಮೇಲೆ ಲಾಠಿ ಚಾರ್ಜ್ ಆದಾಗ ಎಲ್ಲಿತ್ತು?’

ಕೊರಗರ ಮೇಲೆ ಲಾಠಿ ಚಾರ್ಜ್‌ ಆದಾಗ ಮೌನವಾಗಿದ್ದ ಹಿಂದುತ್ವವಾದಿ ಸಂಘಟನೆಗಳನ್ನು ಸಮುದಾಯದ ಮುಖಂಡರು ಪ್ರಶ್ನಿಸಿದ್ದಾರೆ.

- Advertisement -
- Advertisement -

“ಕೊರಗಜ್ಜನಿಗೆ ಅವಮಾನವಾಗಿದೆ ಎಂದು ಸಂಘ ಪರಿವಾರದವರು ವಿವಾದ ಸೃಷ್ಟಿಸುತ್ತಿದ್ದಾರೆ. ಆದರೆ ಕೊರಗರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿ, ಸಂತ್ರಸ್ತರ ಮೇಲೆಯೇ ಪ್ರಕರಣ ದಾಖಲಿಸಿದಾಗ ಇವರು ಎಲ್ಲಿದ್ದರು?” ಎಂಬ ಪ್ರಶ್ನೆಯನ್ನು ಕೊರಗ ಮುಖಂಡರು ಕೇಳುತ್ತಿದ್ದಾರೆ.

ದಕ್ಷಿಣ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಲ್ನಾಡು ಗ್ರಾಮದ ಸಾಲೆತ್ತೂರು ಬಳಿಯ ಯುವತಿಯ ಮದುವೆ ನೆರೆಯ ಕಾಸರಗೋಡು ಜಿಲ್ಲೆಯ ಉಪ್ಪಳದ ಯುವಕನೊಂದಿಗೆ ಬುಧವಾರ ನಡೆದಿತ್ತು. ಮದುವೆಯ ಮುಂದುವರೆದ ಕಾರ್ಯಕ್ರಮವಾಗಿ ಮದುವೆಯಂದೇ ರಾತ್ರಿ ಮದುಮಗನ ಸ್ನೇಹಿತರಿಗೆ ವಧುವಿನ ಕಡೆಯವರು ಔತಣಕೂಟ(ತಾಳ)ವನ್ನು ಏರ್ಪಡಿಸಿದ್ದರು. ಆ ವೇಳೆ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಲಾಗಿದೆ ಎಂದು ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಕೊರಗ ಮುಖಂಡರ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.

ಇದನ್ನೂ ಓದಿ:ಕೊರಗರ ಮೇಲೆ ಪೊಲೀಸ್ ಹಲ್ಲೆ ಪ್ರಕರಣ: ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಏಕೆ ಸುಮ್ಮನಿದ್ದಾರೆ? -ಸಿಪಿಎಂ ಪ್ರಶ್ನೆ

ಇಷ್ಟಾದ ಮೇಲೆ ಮದುಮಗ ವಿಡಿಯೊ ಮೂಲಕ ಕ್ಷಮೆಯನ್ನೂ ಯಾಚಿಸಿದ್ದಾರೆ. “ಯಾವುದೇ ಜಾತಿ, ಸಮುದಾಯಕ್ಕೆ ಅವಮಾನ ಮಾಡಬೇಕೆಂದು ಈ ರೀತಿ ಮಾಡಿಲ್ಲ. ಈ ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ” ಎಂದು ತಿಳಿಸಿದ್ದಾರೆ. (ಘಟನೆಯ ವರದಿ ಇಲ್ಲಿ ಓದಬಹುದು)

ಈ ಘಟನೆಯನ್ನು ಕೋಮು ಧ್ರುವೀಕರಣಕ್ಕೆ ಬಳಸಲು ಯತ್ನಿಸುತ್ತಿರುವ ಸಂಬಂಧ ಕೊರಗ ಸಮುದಾಯದ ಜನರು ಸಂಘಪರಿವಾರವನ್ನು ಪ್ರಶ್ನಿಸಿದ್ದಾರೆ. ಕೊರಗಜ್ಜನಿಗೆ ಅವಮಾನವಾಗಿದೆ ಎಂದು ಹಿಂದುತ್ವವಾದಿಗಳು ವಿವಾದ ಸೃಷ್ಟಿಸುತ್ತಿರುವುದರ ಹಿಂದಿನ ಉದ್ದೇಶವೇನು ಎಂದು ಕೇಳುತ್ತಿದ್ದಾರೆ. ಕೊರಗರ ಮೇಲೆ ಇತ್ತೀಚೆಗೆ ಲಾಠಿಚಾರ್ಜ್‌ ಆದಾಗ ಇವರು ಮೌನವಾಗಿದ್ದೇಕೆ ಎನ್ನುತ್ತಿದ್ದಾರೆ.

ಇತ್ತೀಚೆಗೆ ಕೋಟಾದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಬಳಸಿದ್ದಕ್ಕೆ ಅಲ್ಲಿನ ಕೊರಗ ಸಮುದಾಯದ ಮೇಲೆ ಪೊಲೀಸರು ಪ್ರಹಾರ ನಡೆಸಿದ್ದರು. ಇಂತಹ ಹೀನ ಕೃತ್ಯ ಎಸಗಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಹೇಳಿದ್ದರು. ಆದರೆ ಅಚ್ಚರಿ ಎಂಬಂತೆ ಯಾವ ಕೊರಗರ ಮೇಲೆ ಹಲ್ಲೆ ನಡೆಸಲಾಗಿತ್ತೋ ಅವರ ಮೇಲೆಯೇ ಪೊಲೀಸರು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು.

ಪೊಲೀಸರು ಹಲ್ಲೆ ನಡೆದ ದಿನವೇ ತಮ್ಮ ಮೇಲಾದ ದಾಳಿಯ ಸುದ್ದಿಯ ಬಗ್ಗೆ ತಿಳಿಸದೇ ವಿಷಯವು ಸ್ವಲ್ಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮೂಲ ವಿಷಯವನ್ನು ತಿರುಚುವಂತೆ ಬಹು ತಡವಾಗಿ ಪ್ರತಿಕ್ರಿಯೆ ನೀಡಿ ಕೇಸು ದಾಖಲಿಸಲಾಗಿದೆ ಎಂಬ ಆರೋಪಗಳು ಬಂದಿವೆ. ಇಷ್ಟೆಲ್ಲ ಆದರೂ ಹಿಂದುತ್ವವಾದಿ ಸಂಘಟನೆಗಳು ಘಟನೆಯನ್ನು ಖಂಡಿಸಲಿಲ್ಲ. ಕೊರಗರ ಆರಾಧ್ಯ ದೈವದ ಹೆಸರಲ್ಲಿ ಈಗ ವಿವಾದ ಸೃಷ್ಟಿಸುತ್ತಿರುವವರು ಕೊರಗರ ಮೇಲೆ ಹಲ್ಲೆಯಾದಾಗ ಎಲ್ಲಿ ಹೋಗಿದ್ದರು ಎಂಬ ಪ್ರಶ್ನೆಯನ್ನು ಕೇಳಬೇಕಾಗುತ್ತದೆ.

ಕೊರಗಜ್ಜನಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕೊರಗ ಅಭಿವೃದ್ದಿ ಸಂಘದ ಮಾಜಿ ಅಧ್ಯಕ್ಷೆಯಾಗಿರುವ ಸುಶೀಲಾ ನಾಡಾ ಅವರು, “ಕೊರಗ ವೇಷವನ್ನು ಹಾಕುವುದು ಮತ್ತು ಈ ವೇಷ ಹಾಕಿ ಸಮುದಾಯವನ್ನು ಕೀಳು ಮಟ್ಟದಲ್ಲಿ ಬಿಂಬಿಸುವುದು ಕಾನೂನಾತ್ಮಕವಾಗಿ ಅಪರಾಧವಾಗಿದೆ. ಆದರೆ, ಈ ರೀತಿಯ ಕಾನೂನು ಇದ್ದು ಕೂಡಾ ಕೊರಗ ವೇಷ ಹಾಕುವುದು ಮುಂದುವರೆಯುತ್ತಲೇ ಇದೆ. ನಿಜವಾಗಿಯೂ ಕೊರಗರ ಬಗ್ಗೆ ಕಾಳಜಿ ಇರುವವರಾದರೆ, ಮೊನ್ನೆ ಕೋಟದಲ್ಲಿ ಕೊರಗರ ಮೇಲೆ ನಡೆದ ದಾಳಿಯ ಬಗ್ಗೆ ಧ್ವನಿ ಎತ್ತುತ್ತಿದ್ದರು. ಆದರೆ ಇಂದು ಕೊರಗಜ್ಜನಿಗೆ ಅವಮಾನ ಆಗಿದೆ ಎಂದು ಗಲಾಟೆ ಮಾಡುತ್ತಿರುವವರು ಯಾರೂ ಅಂದು ಮಾತಾಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಈಗ ವಿವಾದ ಆಗಿರುವ ಘಟನೆಯಲ್ಲಿ ಅವರು ತಮಾಷೆಯಾಗಿ ಮಾಡಿದ್ದಾರೋ ಅಥವಾ ಕೊರಗಜ್ಜನಿಗೆ ಅವಮಾನ ಮಾಡಲು ಮಾಡಿದ್ದಾರೋ ತನಿಖೆ ನಡೆಯಲಿ. ಕೊರಗಜ್ಜನ ವೇಷ ಹಾಕಿ ಮದುಮಗನಿಗೆ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಒಂದು ವೇಳೆ ಅವರು ಉದ್ದೇಶ ಪೂರ್ವಕವಾಗಿ ಕೊರಗಜ್ಜನ ವೇಷ ಹಾಕಿ ಅವಮಾನಿಸಿದ್ದರೆ ಅದು ತಪ್ಪು, ಹಾಗಾಗಿದ್ದರೆ ಅವರಿಗೆ ಶಿಕ್ಷೆ ಆಗಬೇಕು. ಆದರೆ ಈ ಘಟನೆಯನ್ನು ಧರ್ಮಾಧಾರಿತವಾಗಿ ನೋಡಲಾಗುತ್ತಿದೆ. ಕೊರಗಜ್ಜನ ವೇಷವನ್ನು ಹಾಕಿದ್ದಕ್ಕೆ ಬಂಧಿಸುವುದಾದರೆ, ಎಲ್ಲಾ ಕಡೆಯು ಬಂಧಿಸಬೇಕಾಗಿತ್ತಲ್ಲವೆ? ಆದರೆ ಇಲ್ಲಿ ಅದಾಗುತ್ತಿಲ್ಲ, ಇಲ್ಲಿ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ. ಹಾಗಾಗಿಯೆ ಧರ್ಮ ನಿಂದನೆ, ದೈವ ನಿಂದನೆ ಎಂದು ಬಿಂಬಿಸಿ ದೊಡ್ಡ ಸುದ್ದಿ ಮಾಡಲಾಗುತ್ತಿದೆ. ಈಗ ನಡೆಯುತ್ತಿರುವ ಬೆಳವಣಿಗೆಯ ಮುಖ್ಯ ಉದ್ದೇಶ ಒಂದು ಧರ್ಮವನ್ನು ಗುರಿ ಮಾಡುವುದು ಬಿಟ್ಟರೆ ಬೇರೇನೂ ಅಲ್ಲ” ಎನ್ನುತ್ತಾರೆ ಸುಶೀಲಾ.

“ಇವರಿಗೆ ನಿಜವಾಗಿಯೂ ಕೊರಗಜ್ಜ ಮತ್ತು ಅವರ ಮಕ್ಕಳಾದ ಕೊರಗರ ಮೇಲೆ ಗೌರವ, ಕಾಳಜಿ ಇದ್ದರೆ, ಕೊರಗಜ್ಜನ ವೇಷ ಹಾಕುವಂತಹ ಎಲ್ಲವನ್ನೂ ಖಂಡಿಸಬೇಕು. ತುಳುನಾಡಿನ ಪ್ರತಿಯೊಂದು ಕೋಲದಲ್ಲಿ ಕೊರಗಜ್ಜನನ್ನು ಎಷ್ಟು ಕೆಟ್ಟದಾಗಿ ಬಿಂಬಿಸುತ್ತಾರೆ, ಅದನ್ನು ತಡೆಯಲಿ. ಇತ್ತೀಚೆಗೆ ಕೊಟಾದಲ್ಲಿ ನಡೆದ ಘಟನೆಯಲ್ಲಿ ಕೊರಗರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಅದರ ಬಗ್ಗೆ ಇವರು ಯಾರೂ ಮಾತನಾಡುತ್ತಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಯ ಮುಖ್ಯ ಉದ್ದೇಶ ಒಂದು ಧರ್ಮವನ್ನು ಗುರಿ ಮಾಡುವುದು ಬಿಟ್ಟರೆ ಬೇರೇನೂ ಇಲ್ಲ. ಕೊರಗರ ಮೇಲೆ ಹಲ್ಲೆಯಾದಾಗ ಇವರು ಮಾತನಾಡುವುದಿಲ್ಲ, ಕೊರಗರನ್ನು ಮ್ಯಾನುವಲ್ ಸ್ಕಾವೆಂಜ್‌ಗೆ ಇಳಿಸುವಾಗ ಅದರ ಬಗ್ಗೆ ಇವರು ಧ್ವನಿ ಎತ್ತುವುದಿಲ್ಲ. ಆದರೆ ಈಗ ಘಟನೆಯೊಂದನ್ನು ಬಳಸಿಕೊಂಡಿರುವ ಈ ಕೋಮುವಾದಿ ಶಕ್ತಿಗಳು ಮಾಡುತ್ತಿರುವುದು ಬೂಟಾಟಿಕೆ ಮಾತ್ರ” ಎನ್ನುತ್ತಾರೆ ಕೊರಗ ಮುಖಂಡರು.

ಕೊರಗ ಸಮುದಾಯದ ಮತ್ತೊಬ್ಬ ಮುಖಂಡ ಮತ್ತಾಡಿ ಅವರು ಮಾತನಾಡಿ, “ಘಟನೆಯ ಬಗೆಗಿನ ವಿವಾದಾತ್ಮಕ ವಿಡಿಯೊದಲ್ಲಿ ಮದುಮಗನ ವೇಷವನ್ನು ನೋಡಿದೆ. ಅದು ಕೊರಗಜ್ಜನ ವೇಷ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲಿ ಮದುಮಗನ ತಲೆಗೆ ಮುಟ್ಟಾಳೆ (ಅಡಿಕೆ ಗರಿಯಿಂದ ಮಾಡಿರುವ ತಲೆಗೆ ಧರಿಸುವ ವಸ್ತು) ಹಾಕಿದ್ದರು, ಟೀಶರ್ಟ್ ಧರಿಸಿದ್ದರು ಮತ್ತು ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದರು. ಕಪ್ಪು ಬಣ್ಣ ಹಾಕಿದ ಕೂಡಲೇ ಅದು ಕೊರಗರನ್ನು ಅವಮಾನಿಸಿದ ಹಾಗೆ ಹಾಗಲ್ಲ. ಕಪ್ಪು ಬಣ್ಣದವರು ಕೊರಗರು ಮಾತ್ರ ಅಲ್ಲ, ಎಲ್ಲಾ ಸಮುದಾಯದಲ್ಲೂ ಇದ್ದಾರೆ” ಎಂದು ತಿಳಿಸಿದರು.

“ಅದರಲ್ಲೂ ಮದುಮಗ ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿದ್ದಾನೋ ಎಂದು ನನಗೆ ಗೊತ್ತಿಲ್ಲ. ಅವರು ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ ಎಂದೇ ನಾನು ಭಾವಿಸಿದ್ದೇನೆ. ಯಾಕೆಂದರೆ ಅವರಿಗೆ ಇದರ ಕಲ್ಪನೆ ಇದೆಯೆಂದು ನನಗೆ ಅನಿಸುತ್ತಿಲ್ಲ. ಆದರೆ ಈ ವಿವಾದ ಮಾಡುವುದರ ಹಿಂದೆ ಯಾರು ಇದ್ದಾರೆ ಮತ್ತು ಅವರು ಯಾಕಾಗಿ ಇದ್ದಾರೆ ಎಂಬುವುದನ್ನು ಕೂಡಾ ನೋಡಬೇಕಾಗಿದೆ. ಈ ರೀತಿಯ ಭಾವನಾತ್ಮಕ ವಿಷಯವನ್ನು ಕೊರಗರ ಮುಗ್ಧತೆಯನ್ನು ದುರುಪಯೋಗ ಬಳಸಿಕೊಳ್ಳದೆ ಯಾರ ಭಾವನೆಗೂ ಧಕ್ಕೆ ಬರದಂತೆ ಸಮಸ್ಯೆಯನ್ನು ಬಗೆಹರಿಸಬೇಕು. ಘಟನೆಯನ್ನು ಕೋಮು ಆಧಾರದಲ್ಲಿ ವಿಭಜಿಸಬಾರದು. ವಿಡಿಯೊವನ್ನು ನೋಡುವಾಗ ಅದರಲ್ಲಿರುವ ಭಾಷೆ ಕೊರಗಜ್ಜನನ್ನು ಅವಮಾನಿಸುವ ಹಾಗೆ ಕಾಣುತ್ತಿಲ್ಲ. ಮುಟ್ಟಾಲೆ ಧರಿಸಿದ ಕೂಡಲೇ ಅದು ಕೊರಗಜ್ಜ ಎಂದು ಹೇಳುವುದು ಕೂಡಾ ಸರಿಯಲ್ಲ. ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ದ್ವೇಷ ಹುಟ್ಟದ ಹಾಗೆ, ತಪ್ಪಾಗಿದ್ದರೆ ಮನವರಿಗೆ ಮಾಡಿ, ಅವುಗಳನ್ನು ತಿದ್ದಿ ಸೌಹಾರ್ದಯುತವಾಗಿ ಬಗೆಹರಿಸಬೇಕು” ಎಂದರು.


ಇದನ್ನೂ ಓದಿರಿ: ಕೊರಗರದ್ದು ಇನ್ನೊಂದು ‘ಜೈ ಭೀಮ್‌’ ಕಥೆ ಆಗದಿರಲಿ: ಎಚ್‌.ಸಿ.ಮಹದೇವಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...